ಬುಧವಾರ, ನವೆಂಬರ್ 24, 2010

ತಡಿಯಂಡಮೊಳ್ ಶಿಖರ ಚಾರಣ / ೨

25.09.2010 ಶನಿವಾರ & 26.09.2010 ಭಾನುವಾರ

ಎತ್ತರ : ಸಮುದ್ರ ಮಟ್ಟದಿಂದ ಸುಮಾರು ೫೭೨೭ ಅಡಿಗಳು
ಕೊಡಗಿನಲ್ಲೇ ಅತಿ ಎತ್ತರವಾದ ಪರ್ವತ

ಜಿಲ್ಲೆ : ಕೊಡಗು

ಒಟ್ಟು ಕ್ರಮಿಸಿದ ದೂರ : ೧೧ + ೧೧ ಕಿ.ಮೀ

ಮಾರ್ಗ : ಬೆಂಗಳೂರು-ಮೈಸೂರು-ಹುಣಸೂರು-ಗೋಣಿಕೊಪ್ಪ-ವೀರಾಜಪೇಟೆ-ಕೈಕಂಬ

ತಂಡ : ಗಜೇಂದ್ರ ಮತ್ತು ನಾನು ( ಮೋಹನ್ )

*********************************************************************************

ಗಜೇಂದ್ರರವರು ಅಮೇದಿಕಲ್ ಚಾರಣದ ಸಮಯದಲ್ಲಿ ನನ್ನ ಮೊಬೈಲ್ ನಲ್ಲಿದ್ದ ತಡಿಯಂಡಮೊಳ್ ಚಾರಣದ ಪೋಟೋಗಳನ್ನು ನೋಡಿ ನನ್ನನ್ನು ಕರೆದುಕೊಂಡು ಹೋಗಿ ಮೋಹನ್ ಎಂದಿದ್ದರು, ಬಿಡುವು ಸಿಕ್ಕಾಗ ಖಂಡಿತ ಹೋಗೋಣ ಎಂದಿದ್ದೆ.
ಅಕ್ಟೋಬರ್ ತಿಂಗಳಲ್ಲಿ ನಾವಿಬ್ಬರು ಒಂಬತ್ತುಗುಡ್ದಕ್ಕೆ ಚಾರಣ ಹೋಗುವುದು ಮೊದಲೇ ನಿಗಧಿಯಾಗಿತ್ತು,

ಗಜೇಂದ್ರರವರು ಕರೆ ಮಾಡಿ, ಮೋಹನ್ ಒಂಬತ್ತುಗುಡ್ದ ಟ್ರೆಕ್ ಹೋಗೊ ಮುಂಚೆ ತಡಿಯಂಡಮೊಳ್ ಪರ್ವತಕ್ಕೆ ಹೋಗಿ ಬರೋಣ್ವಾ?
ನಾನು: "ಹೋಗೋಣ ಸಾರ್."
ಹೋಗುವ ದಿನ ನಿಗಧಿ ಮಾಡಿಕೊಂಡು ರಾಜಹಂಸ ಬಸ್ ನಲ್ಲಿ ಮುಂಗಡ ಟಿಕೇಟ್ ಮಾಡಿಸಿಯಾಗಿತ್ತು,

ಅಂದು ಶನಿವಾರ ಸಂಜೆ ಆಫೀಸ್ ಬಿಟ್ಟು ಆರ್.ಟಿ. ಸ್ಟ್ರೀಟ್ ಗೆಳೆಯರೊಂದಿಗೆ ಸ್ವಲ್ಪ ಹೊತ್ತು ಸಮಯ ಕಳೆದು ಮೈಸೂರು ರಸ್ತೆಯ ಸ್ಯಾಟ್ಲೈಟ್ ಬಸ್ ನಿಲ್ದಾಣಕ್ಕೆ ಬಂದಾಗ ರಾತ್ರಿ ಒಂಬತ್ತು ಗಂಟೆಯಾಗಿತ್ತು,
ಗಜೇಂದ್ರರವರು ಸ್ಯಾಟ್ಲೈಟ್ ಬಸ್ ನಿಲ್ದಾಣಕ್ಕೆ ಬಂದು ಕರೆ ಮಾಡಲು ತಿಳಿಸಿದ್ದರು, ನಾವು ಹೊರಡುವ ಬಸ್ ರಾತ್ರಿ ೧೨:೦೦ ಗಂಟೆಗೆ ಇದ್ದಿದ್ದರಿಂದ ಮತ್ತು ಅವರ ಮನೆ ಸ್ಯಾಟ್ಲೈಟ್ ಬಸ್ ನಿಲ್ದಾಣಕ್ಕೆ ಬಹಳ ಸನಿಹದಲ್ಲೆ ಇದ್ದುದ್ದರಿಂದ ಈಗಲೇ ಕರೆ ಮಾಡಿ ಬರಹೇಳುವುದು ಬೇಡ ಎಂದು ತೀರ್ಮಾನಿಸಿ ನಾನೊಬ್ಬನೆ ಬಂದು ಕುಳಿತೆ,
ಸುಮಾರು ಒಂದೂವರೆ ತಾಸಿನ ಬಳಿಕ ಗಜೇಂದ್ರರವರಿಗೆ ಕರೆ ಮಾಡಿ ನಾನು ಬಸ್ ನಿಲ್ದಾಣದಲ್ಲಿ ಇರುವುದಾಗಿ ತಿಳಿಸಿದೆ, ಸರಿ ಹಾಗಾದ್ರೆ ನಾನು ಅರ್ಧ ಗಂಟೆಯೊಳಗೆ ಬರ್ತೀನಿ ಅಂದ್ರು, ಒಬ್ಬನೆ ಕಾಯುತ್ತ ಕುಳಿತಿದ್ದೆ ಸ್ವಲ್ಪ ಹೊತ್ತಿನ ಬಳಿಕ ಮಳೆ ಶುರುವಾಯ್ತು ಒಂದರ್ಧ ಗಂಟೆ ಮಳೆ ಬಿಡಲೇ ಇಲ್ಲ ಗಜೇಂದ್ರರವರು ಎಲ್ಲೋ ಮಳೆಯಲ್ಲಿ ಸಿಕ್ಕಿಹಾಕಿಕೊಂಡಿರಬಹುದು ಎಂದು ಯೋಚಿಸುತ್ತ ಕುಳಿತಿದ್ದೆ.

ಅಂತೂ ಗಜೇಂದ್ರರವರು ಬರುವ ಹೊತ್ತಿಗೆ ಸಮಯ ೧೧:೩೦ ಆಗಿತ್ತು,
ಅಲ್ಲಿಯೇ ಸ್ವಲ್ಪ ಚಾಕ್ಲೇಟ್, ಬಿಸ್ಕತ್ತು,ಜ್ಯೂಸ್ ಬಾಟೆಲ್ ಖರೀದಿಸಿ ರಾಜಹಂಸ ಬಸ್ನಲ್ಲಿ ಅಸೀನರಾದೆವು
ರಾತ್ರಿ ಹನ್ನೇರಡು ಗಂಟೆಗೆ ಬಿಟ್ಟ ರಾಜಹಂಸ ಬಸ್ ಮೈಸೂರು-ಹುಣಸೂರು-ಗೋಣಿಕೊಪ್ಪ ಮಾರ್ಗವಾಗಿ ವಿರಾಜಪೇಟೆ ತಲುಪಿದಾಗ ಬೆಳಗಿನ ಜಾವ ೬:೦೦.

ಬಸ್ ನಿಲ್ದಾಣದ ಸಮೀಪದಲ್ಲೇ ಇದ್ದ ಹೋಟೆಲ್ ನಲ್ಲಿ ಚಹಾ ಕುಡಿದು ಖಾಸಗಿ ಬಸ್ ನಿಲ್ದಾಣದ ಕಡೆಗೆ ಹೆಜ್ಜೆ ಹಾಕಿದೆವು,
ಕಳೆದ ಬಾರಿ ಚಾರಣದ ಸಮಯದಲ್ಲಿ ಬೆಳಗಿನ ಉಪಹಾರಕ್ಕಾಗಿ ಪಟ್ಟ ಪಾಡು ಅಷ್ಟಿಷ್ಟಲ್ಲ ಈ ಬಾರಿ ಹಾಗಾಗುವುದು ಬೇಡ ಎಂದು ಯೋಚಿಸಿ ಖಾಸಗಿ ಬಸ್ ನಿಲ್ದಾಣದಲ್ಲೇ ಇದ್ದ ಒಂದು ಹೋಟೆಲೊಂದರಲ್ಲಿ ಇಡ್ಲಿ ಸಾಂಬಾರ್, ವಡೆ ಕಟ್ಟಿಸಿಕೊಂಡು ನಾಪೋಕ್ಲು ಮಾರ್ಗವಾಗಿ ಮಡಿಕೇರಿ ಕಡೆಗೆ ಹೋಗುವ ಅನುರಾಧ ಬಸ್ ಗಾಗಿ ಕಾಯುತ್ತಾ ಕುಳಿತೆವು,
ಅಂತೂ ಅನುರಾಧ ಬಸ್ ಬಂದೇ ಬಿಟ್ಟಿತ್ತು,
೬:೫೦ ರ ಸಮಯಕ್ಕೆ ಹೊರಟ ಬಸ್ ಕೈಕಂಬ ತಲುಪಿದಾಗ ೭:೫೦, ಚಾರಣ ಪ್ರಾರಂಬಿಸಿದ ಸ್ಥಳದಲ್ಲಿ ಕೆಲವು ಛಾಯಚಿತ್ರಗಳನ್ನು ತೆಗೆದು ಸರಸರನೆ ಹೆಜ್ಜೆ ಹಾಕಿದೊ, ಸುಮಾರು ೩ ಕಿ.ಮೀ ಕ್ರಮಿಸಿದ ಮೇಲೆ ನಾಲ್ಕ್ನಾಡು ಅರಮನೆಯ ಹತ್ತಿರ ಬಂದೆವು.

ನಾನು: "ಅರಮನೆ ನೋಡಿಕೊಂಡು ಹೊಗೋಣವಾ? "

ಗಜೇಂದ್ರ: "ಬರೋವಾಗ ನೋಡಿದ್ರಾಯ್ತು ನಡೀರಿ"

ಒಂದು ಪರ್ಲಾಂಗ್ ದೂರ‍ ನಡೆದ ಮೇಲೆ ಹಾದಿಯಲ್ಲೇ ಸಿಕ್ಕ ಒಂದು ಕಿರು ಜಲಪಾತದ ಬಳಿ ಬಂದು ಅಲ್ಲಿಯೇ ನಮ್ಮ ಸ್ನಾನಾದಿ ಕಾರ್ಯಗಳನ್ನು ಮುಗಿಸಿ ವಿರಾಜಪೇಟೆಯಲ್ಲಿ ಕಟ್ಟಿಸಿಕೊಂಡು ಬಂದಿದ್ದ ಇಡ್ಲಿ,ವಡೆ ಸಾಂಬಾರ್ ತಿಂದು ಬೆಳಗಿನ ತಿಂಡಿ ಕಾರ್ಯಕ್ರಮವನ್ನು ಮುಗಿಸಿದೆವು.
ಬಳಿಕ ಸುಮಾರು ದೂರ ಕಾಫಿ ಎಸ್ಟೇಟ್ ನಡುವೆ ಇರುವ ಡಾಂಬರ್ ರಸ್ತೆಯಲ್ಲಿ ನಡೆದು ಒಂದು ಸಣ್ಣ ತೊರೆಯ ಬಳಿ ಬಂದೆವು ಅಲ್ಲಿಗೆ ಡಾಂಬರ್ ರಸ್ತೆ ಕೊನೆಗೊಂಡಿತು ಮುಂದೆ ಇದ್ದ ಮಣ್ಣು ರಸ್ತೆಯಲ್ಲೇ ಚಾರಣ ಮುಂದುವರೆಸಿದೆವು.


ಅರಣ್ಯ ಇಲಾಖೆ ಕಛೇರಿ ಬಳಿ ಬಂದಾಗ ಗಂಟೆ ಹತ್ತಾಗಿತ್ತು, ಆದರೇ ಅಲ್ಲಿ ಯಾರ ಸುಳಿವೇ ಇರಲಿಲ್ಲ, ಹಾಗೆಯೇ ಮುಂದುವರಿಯಿತು ನಮ್ಮ ಚಾರಣ ಬಳಿಕ ನಮ್ಮ ಕಣ್ಣಿಗೆ ಗೋಚರಿಸಿದ್ದು ಮಂಜು ಮುಸುಕಿದ ಪರ್ವತಗಳ ಸಾಲು ಸಾಲು.


ಗಜೇಂದ್ರ : ಮೋಹನ್ ಅದೇನಾ? ತಡಿಯಂಡಮೊಳ್ ಪರ್ವತ!

ನಾನು: "ಇಲ್ಲ ಅದು ಈ ಕಡೆ ಬರೊಲ್ಲಾ, ಇನ್ನು ಮುಂದೆ ಹೋದ್ರೆ ನಮ್ಮ ನೇರಕ್ಕೆ ಕಾಣಿಸುತ್ತೆ"

ನಾವು ಎಷ್ಟು ದೂರ ನಡೆದು ಬಂದರೂ ದಟ್ಟ ಮಂಜಿನ ಪ್ರಭಾವದಿಂದ ತಡಿಯಂಡಮೊಳ್ ಶಿಖರದ ದರ್ಶನವಾಗಲೇ ಇಲ್ಲ ಕೊನೆಗೆ ರಸ್ತೆಯಂತಿದ್ದ ಹಾದಿ ಮುಗಿದು ಕಾಲು ದಾರಿಯಲ್ಲಿ ಚಾರಣ ಮುಂದುವರಿಸಿದೆವು, ಒಂದು ದೊಡ್ದ ಹೆಬ್ಬಂಡೆ ಬಳಿ ಬಂದೆವು ಬಹುತೇಕ ಚಾರಣಿಗರು ರಾತ್ರಿ ವೇಳೆ ಟೆಂಟ್ ಹಾಕಿ ಇಲ್ಲೇ ತಂಗುತ್ತಾರೆ ಪಕ್ಕದಲ್ಲೇ ಎಡಕ್ಕೆ ಒಂದು ಕಾಲು ಹಾದಿ ಶೋಲಾ ಕಾಡಿನೊಳಗೆ ಹೋದಂತಿತ್ತು, ನೀರಿನ ಹರಿವಿನ ಶಬ್ದ ಕೂಡ ಕೇಳಿಸುತಿತ್ತು, ನಾವು ಸ್ವಲ್ಪ ದೂರ ಆ ದಾರಿಯಲ್ಲಿ ಹಾಗೆ ಮುಂದುವರಿದೆವು, ಅಲ್ಲಿ ಕಾಣಿಸಿದ್ದು ನಮಗೆ ಹರಿವ ನೀರಿನ ಒರತೆ ಜೊತೆಗೆ ನಮಗೆ ಸ್ವಾಗತ ಕೋರಲು ಜಿಗಣೆಗಳು ಆಗಲೇ ತಯಾರಿ ನಡೆಸುತ್ತಿದ್ದವು ಮತ್ತೆ ವಾಪಾಸಾಗಿ ಸರಿ ದಾರಿಯಲ್ಲಿ ಚಾರಣ ಮುಂದುವರಿಸಿದೆವು.


ನಮ್ಮ ಮುಂದೆ ಹೋಗುತ್ತಿದ್ದ ಸ್ಥಳೀಯ ಚಾರಣಿಗರ ಗುಂಪು ಜೋರಾಗಿ "ಲಭೋ ಲಭೋ" ಅಂತಾ ಕಿರುಚುತ್ತ ಕೇಕೆ ಹಾಕುತ್ತಾ ಕಾಡಿನ ನಿಶ್ಯಬ್ದಕ್ಕೆ ಭಂಗ ತರುತ್ತಿದ್ದರು, ಮಾಡೋಕೆ ಕೆಲಸವಿಲ್ಲ ಯಾಕಾದ್ರು ಬರ್ತಾರೊ " ಮುಂಡೇವು" ಎಂದು ಗೊಣಗಿಕೊಂಡು ಮುಂದೆ ನಡೆದೆ.
ಬಹಳ ಸುಸ್ತಾಗಿದ್ದ ಕಾರಣ ವಿಶ್ರಾಂತಿಗೋಸ್ಕರ ಸ್ವಲ್ಪ ಹೊತ್ತು ಹಾಗೆ ಕುಳಿತೆವು, ತಂದಿದ್ದ ಸ್ವಲ್ಪ ತಿಂಡಿಗಳನ್ನು ತಿಂದು ನಂತರ ಎದ್ದು ಹೊರಟೆವು ಎದುರಿಗಿದ್ದ ಶೋಲಾ ಕಾಡಿನೊಳಗೆ, ದಟ್ಟ ಕಾಡು ಕಡಿದಾದ ಹಾದಿ ಎರಡು ಇಕ್ಕೆಲಗಳಲ್ಲಿಯೂ ಎದೆಯುದ್ದಕ್ಕೂ ಬೆಳೆದು ನಿಂತಿದ್ದ ಯಾವುದೋ ಬಗೆಯ ಗಿಡಗಳ ನಡುವೆ ಕಾಲುದಾರಿಯಲ್ಲಿ ಸಾಗುತ್ತಿದ್ದಾಗ ಮನಸಿನಲ್ಲಿ ಎನೋ ನೆನಪಾಗಿ ಸ್ವಲ್ಪ ಅಳುಕಿನಿಂದಲೇ ಹೆಜ್ಜೆ ಹಾಕಿದೆವು ಏಕೆಂದರೆ ಹುಲಿಗಳಿರೊ ಜಾಗ ಅದೂ ಅಲ್ಲದೆ ಇತ್ತೀಚಿಗೆ ಎರಡು ಹುಲಿಗಳು ಹಾಡ ಹಗಲೇ ಕಾಣಿಸಿಕೊಂಡಿವೆಯಂತೆ ಹಳ್ಳಿಯಲ್ಲಿನ ಹಲವಾರು ಜಾನುವಾರುಗಳನ್ನು ಕೂಡ ಸ್ವಾಹಾ ಮಾಡಿವೆಯಂತೆ.

"ಪಯಣದ ಹಾದಿಯಲ್ಲಿ ನಾನು"

ಸುಮಾರು ಹತ್ತಿಪತ್ತು ನಿಮಿಷದ ಶೋಲಾ ಕಾಡನ್ನು ದಾಟಿದ ನಂತರ ಸಿಕ್ಕಿದ್ದು ಹುಲ್ಲುಗಾವಲು ಬೆಟ್ಟ ಇಲ್ಲಿಂದ ಸುಮಾರು ಅರ್ಧ ಗಂಟೆ ಚಾರಣದ ಬಳಿಕ ನಾವು ತಡಿಯಂಡಮೊಳ್ ಶಿಖರದ ತುದಿ ತಲುಪಿದೆವು. ಶಿಖರವನ್ನೇರಿದಾಗ ಆಗುವ ತೃಪ್ತಿ ಅಷ್ಟಿಷ್ಟಲ್ಲ. ಹಿತವಾದ ತಂಗಾಳಿ ಮೈ ಸೋಕುತ್ತಲೇ ಎನೋ ಒಂಥರಾ ಫುಳಕ, ಎತ್ತ ಕಣ್ಣಾಯಿಸಿದರೂ ಹಸಿರ ವನರಾಶಿಯ ಭವ್ಯ ನೋಟ ನಿಜಕ್ಕೂ ಅವಿಸ್ಮ್ರರಣೀಯ.



ಆಗ ಸಮಯ ಮದ್ಯಾಹ್ನ ೧೨.:೧೫ ಆಗಿತ್ತು, ಸುಸ್ತಾಗಿದ್ದರಿಂದ ಸ್ವಲ್ಪ ಹೊತ್ತು ಹಾಗೆಯೇ ನೆಲಕ್ಕೊರಗಿದೆ. ನಂತರ ಎದ್ದು ಅತ್ತಿತ್ತ ಕಣ್ಣಾಡಿಸಿದಾಗ ಸುತ್ತಲೂ ಮಂಜು ಕವಿದಿತ್ತು.

ದಟ್ಟ ಮಂಜಿನ ಪ್ರಭಾವದಿಂದ ಅಷ್ಟಾಗಿ ಪ್ರಕೃತಿ ಸೌಂದರ್ಯವನ್ನು ಸವಿಯಲು ಆಗಲಿಲ್ಲ, ಆಗಾಗ ಒಂದೆರಡು ನಿಮಿಷ ಮೋಡಗಳು ದೂರ ಸರಿದೊಡನೆಯೇ ಒಂದಷ್ಟು ಛಾಯಚಿತ್ರಗಳನ್ನು ತೆಗೆದದ್ದು ಉಂಟು.



ಹೊಟ್ಟೆ ಹಸಿವನ್ನು ನೀಗಿಸಲು ಎನಾದ್ರೂ ತಿನ್ನೋಣ ಅಂತ ಸೇಬು ಹಣ್ಣು ಮತ್ತು ಸ್ವಲ್ಪ ತಿಂಡಿ ತಿಂದ ಮೇಲೆ ದಣಿದಿದ್ದ ಮೈಮನಗಳಿಗೆ ಸ್ವಲ್ಪ ವಿದ್ಯುತ್ ಸಂಚಾರವಾದಂತಾಯ್ತು,
ಆಗಲೇ ಸಮಯ ಮದ್ಯಾಹ್ನ ೧:೧೫ ಆದ್ದರಿಂದ ವಾಪಾಸ್ ಹೊರಡಲು ನಿರ್ದರಿಸಿ ಕೆಳಗಿಳಿಯಲು ಶುರು ಮಾಡಿದೆವು ಕೆಲವು ಗಂಟೆಗಳ ಚಾರಣದ ನಂತರ ಹೀಗೆ ಹಾದಿಯಲ್ಲಿ ಬರುವಾಗ ಕಾಫಿ ಎಸ್ಟೇಟ್ ಒಳಗೆ ಎನೋ "ಗುಟುರೆ" ಹಾಕಿದ ಶಬ್ದ ಕೇಳಿಸಿತು.ಕಾಫಿ ತೋಟದ ಬೇಲಿ ಹತ್ತಿರ ಬಂದು ಬಗ್ಗಿ ನೋಡಿದಾಗ ಒಂದು ಬೃಹತ್ ಗಾತ್ರದ ಹಂದಿಯೊಂದು ನಮ್ಮನ್ನೇ ಕೆಕ್ಕರಿಸಿ ನೋಡುತ್ತಿತ್ತು, ಊರಂದಿಯೋ ಅಥವಾ ಕಾಡಂದಿಯೋ ಎನ್ನುವ ಅನುಮಾನ ಬೇರೆ ಕಾಡಿನಲ್ಲಿರುವುದರಿಂದ ಕಾಡಹಂದಿಯೇ ಇರಬೇಕು ಅನ್ನಿಸಿತು, ಅಷ್ಟರಲ್ಲೇ ಅದು ನಮ್ಮತ್ತ ದಾಳಿ ಮಾಡಲು ಮುನ್ನುಗ್ಗಿ ಓಡಿ ಬಂತು, ಅಷ್ಟರಲ್ಲಿ ನಾವಿಬ್ಬರು "ಬದುಕಿದೆಯಾ ಬಡ ಜೀವವೇ" ಎಂದು ಹಿಂತಿರುಗಿ ನೋಡದೆ ಓಡಿದೆವು, ಅಷ್ಟರಲ್ಲಿ ನಾಲ್ಕ್ನಾಡು ಅರಮನೆಯ ಬಳಿ ಬಂದು ಬಿಟ್ಟಿದೆವು ಆಗ ಹಿಂತಿರುಗಿ ನೋಡಿದಾಗ ಸದ್ಯ ಹಂದಿ ಕಾಣಲಿಲ್ಲ, ನಿಟ್ಟುಸಿರು ಬಿಟ್ಟು ಅರಮನೆಯ ಒಳಗೆ ಬಂದೆವು ಈ ಘಟನೆ ಗಣೇಶ್ ಅಭಿನಯದ "ಗಾಳಿಪಟದ" ಚಿತ್ರದ ದೃಶ್ಯವನ್ನು ನೆನಪಿಸುವಂತಿತ್ತು.

ನಾಲ್ಕ್ನಾಡು ಅರಮನೆಗೆ ಹೋಗಿ ಕೆಲವು ರಹಸ್ಯ ತಾಣಗಳನ್ನು ಅಲ್ಲಿದ್ದ ಮಾರ್ಗದರ್ಶಿ ನೆರವಿನಿಂದ ವೀಕ್ಷಿಸಿ "ಚಾಲಾವರ ಜಲಪಾತ" ನೋಡುವ ಹಂಬಲದಿಂದ ಅರಮನೆಯ ಬಳಿ ನಿಂತಿದ್ದ ಸ್ಥಳೀಯರೊಬ್ಬರಿಂದ ಉಪಯುಕ್ತ ಮಾಹಿತಿ ಪಡೆದು ಹೊರಟೆವು,
ಡಾಂಬರ್ ರಸ್ತೆಯಲ್ಲಿ ಸಾಗಿದರೆ ತುಂಬಾ ಸಮಯ ಹಿಡಿಯುತ್ತೆ ಬಸ್ ಸಿಗುವ ಅವಕಾಶ ಕಮ್ಮಿ ಆದ್ದರಿಂದ ಅವರೇ ತಿಳಿಸಿದ ಅಡ್ಡದಾರಿ ಮಾರ್ಗ ಹಿಡಿದು ಹೊರಟೆವು ಸ್ವಲ್ಪ ದೂರ ಡಾಂಬರ್ ರಸ್ತೆಯಲ್ಲಿ ನಡೆದು ಬಲಕ್ಕೆ ಒಂದು ಮಣ್ಣು ರಸ್ತೆ ಹಾದು ಹೋಗಿತ್ತು ಆ ದಾರಿಯಲ್ಲೇ ಮುಂದುವರಿದೆವು ಸನಿಹದಲ್ಲೇ ಒಂದು ಮನೆ ಸಿಕ್ಕಿತ್ತು, ನಾಯಿ ಒಂದು ಸಮನೇ ಬೊಗಳುತ್ತಿತ್ತು, ನಾಯಿ ಬಂದು ಎಲ್ಲಿ ಬಾಯಿ ಹಾಕುತ್ತೊ? ಅಂತ ಭಯ! ನಮಗೆ, ಆ ಮನೆಯ ಮುಂದೆ ನಿಂತಿದ್ದ ಒರ್ವರು ಈಗೆ ಎಡಕ್ಕೆ ಹೋಗಿ ಅಂತ ತಿಳಿಸಿದ್ರು, ಅದರಂತೆ ನಾವು ಎಡಕ್ಕೆ ತಿರುಗಿ ಸ್ವಲ್ಪ ದೂರ ಕ್ರಮಿಸಿದ ನಂತರ ಸಿಕ್ಕಿದ ಮರದ ಗೇಟ್ ದಾಟಿ ಭತ್ತದ ಗದ್ದೆ ನಡುವೆ ಹೆಜ್ಜೆ ಹಾಕಿದೆವು. ಅಲ್ಲೊಂದು ಪುಟ್ಟ ಜಲಪಾತ ಸೃಷ್ಟಿಯಾಗಿತ್ತು ನೋಡಲು ತುಂಬಾ ಮನಮೋಹಕವಾಗಿತ್ತು ಅದನ್ನು ಕೂಡ ನನ್ನ ಕ್ಯಾಮೆರಾದಲ್ಲಿ ಸೆರೆಹಿಡಿದು ಹೊರಟೆವು.


ಬಳಿಕ ಭತ್ತದ ಗದ್ದೆ ದಾಟಿ ಎಡಕ್ಕೆ ತಿರುಗಿ ಇಳಿಜಾರಿನ ಮಣ್ಣುರಸ್ತೆಯಲ್ಲಿ ನಡೆದು ಪುನಃ ಡಾಂಬರ್ ರಸ್ತೆಗೆ ಬಂದು ಸೇರಿದೆವು ಅಲ್ಲಿಂದ ಕೆಲವು ನಿಮಿಷದ ನಡಿಗೆಯ ನಂತರ ಬಸ್ ನಿಲ್ದಾಣದ ಬಳಿ ಬಂದಾಗ ಸಮಯ ೪:೨೦, ಬಸ್ ಬರೋದಿಕ್ಕೆ ಇನ್ನೂ ಹತ್ತು ನಿಮಿಷ ಬಾಕಿ ಇತ್ತು. ನಾವು ತಂಗುದಾಣದಲ್ಲಿ ಬಸ್ ಗಾಗಿ ಕಾಯುತ್ತ ಕುಳಿತೊ, ಸಮಯ ನಾಲ್ಕುವರೆ ಆದರೂ ಬಸ್ ಸುಳಿವೇ ಇರಲಿಲ್ಲ,
ಕೊನೆಗೂ ಹತ್ತು ನಿಮಿಷ ತಡವಾಗಿ ಬಂದ ಬಸ್ ಹತ್ತಿ ಇಪ್ಪತ್ತು ನಿಮಿಷದ ಪ್ರಯಾಣದ ನಂತರ "ಚೇಯ್ಯಂಡಾಣೆ" ಎಂಬ ಊರಲ್ಲಿ ಇಳಿದುಕೊಂಡು ಅಲ್ಲಿಂದ ಸುಮಾರು ೩ ಕಿ,ಮೀ ದೂರದಲ್ಲಿದ್ದ ಚಾಲಾವರ ಜಲಪಾತಕ್ಕೆ ಆಟೋದಲ್ಲಿ ತೆರಳಿದೆವು,
ಅಲ್ಲಿಂದ ಐದು ನಿಮಿಷ ನಡೆದು ಜಲಪಾತದ ಬಳಿ ಬಂದಾಗ
ವಾಹ್! ಅದ್ಬುತ, ನಯನ ಮನೋಹರ ದೃಶ್ಯ
ಜಲಪಾತ ನನ್ನ ಕಣ್ಣಿಗ್ಗೆ ಕಂಡಾಗ ನನಗಾದ ಆನಂದ ಅಷ್ಟಿಷ್ಟಲ್ಲ, ಜಲಪಾತದ ಮುಂದೆ ನಿಂತ ಮೇಲಂತೂ ಮಾತೆ ಹೊರಡಲಿಲ್ಲ, ಜಲಪಾತದ ಭೋರ್ಗರೆತದಿಂದ ಉಂಟಾದ ನೀರಿನ ಸಣ್ಣ ಸಣ್ಣ ಮುತ್ತಿನ ಹನಿಗಳು ನಮ್ಮನ್ನು ಚುಂಬಿಸುತ್ತಿದ್ದವು.

ಬರೀ ಹೇಳೋದಲ್ಲ ಜಲಪಾತದ ಸೌಂದರ್ಯ ಸವಿಬೇಕು ಅಂದ್ರೆ ಹೋಗಿ ನೋಡಬೇಕು, ಮೊದಲೇ ಆಟೋ ಚಾಲಕ ನೀರಿನಲ್ಲಿ ಇಳಿಯಬಾರದು ಅಪಾಯ ಎಂದು ಕೆಲವು ಹಿತನುಡಿಗಳನ್ನು ನಮ್ಮ ತಲೆಯಲ್ಲಿ ತುಂಬಿದ್ದರಿಂದ ನೀರಿನೊಳಗೆ ಇಳಿಯುವ ಮನಸ್ಸಾದರೂ ಅದರ ಗೋಜಿಗೆ ಹೋಗದೇ ಆ ಸುಂದರ ಜಲಪಾತದ ಚೆಲುವನ್ನು ಸವಿಯುವುದರಲ್ಲೇ ಮಗ್ನರಾದೆವು.

"ಚೇಲಾವರ ಜಲಪಾತ"

ತದನಂತರ ಜಲಪಾತದ ಕೆಲವು ಫೋಟೊಗಳನ್ನು ತೆಗೆದು ವಾಪಾಸು ಹೊರಟೆವು ಪುನ: ಅದೇ ಆಟೋದಲ್ಲಿ ಚೇಯ್ಯಂಡಾಣೆ ಬಸ್ ನಿಲ್ದಾಣದ ಬಳಿ ಬಂದಾಗ ಸಮಯ ಸಂಜೆ ಆರಾಗಿತ್ತು, ವಿರಾಜಪೇಟೆ ಕಡೆಗೆ ಹೋಗುವ ಬಸ್ ಬಗ್ಗೆ ಸ್ಥಳೀಯರನ್ನು ವಿಚಾರಿಸಲಾಗಿ, ಈಗ ಬರುವ ಸಮಯ ಇನ್ನು ಸ್ವಲ್ಪ ಹೊತ್ತಿನಲ್ಲೇ ಬಂದು ಬಿಡುತ್ತೆ ಅಂದ್ರು.

ಅಷ್ಟೊತ್ತಿಗಾಗಲೇ ಸಂಪೂರ್ಣ ಕತ್ತಲಾಗಿತ್ತು ಬಸ್ ನಿಲ್ದಾಣದ ತಂಗುದಾಣದಲ್ಲಿ ಗಜೇಂದ್ರರವರು ಸಖತ್ತಾಗಿ ನಿದ್ರೆ ಮಾಡುತ್ತಿದ್ದರು ಪಕ್ಕದಲ್ಲಿ ಕುಳಿತ್ತಿದ್ದ ನನಗೂ ಕೂಡ ತೂಕಡಿಕೆ ಬರುತ್ತಿತ್ತು ಆದರೂ ಕೂಡ ನಾನು ಎಚ್ಚರವಾಗೆ ಕುಳಿತಿದ್ದೆ ಏಕೆಂದರೆ ನಾನು ಕೂಡ ನಿದ್ರೆ ಮಾಡಿದಿದ್ದರೆ ಬಸ್ ಬಂದು ಹೋಗಿರುತ್ತಿತ್ತು ಆ ದಿನ ರಾತ್ರಿ ನಾವು ತಂಗುದಾಣದಲ್ಲೆ ಉಳಿಯಬೇಕಾಗುತ್ತಿತ್ತು.

ವಿರಾಜಪೇಟೆ ಕಡೆಗೆ ಹೋಗುವ ಬಸ್ ಕೊನೆಗೂ ಪ್ರತ್ಯಕ್ಷವಾಯ್ತು ನಾವು ನಮ್ಮ ಲಗ್ಗೇಜನ್ನು ಎತ್ತಿಕೊಂಡು ಬಸ್ ನಲ್ಲಿ ಕುಳಿತೆವು, ಸುಮಾರು ಮುಕ್ಕಾಲು ಗಂಟೆ ಪ್ರಯಾಣದ ನಂತರ ವಿರಾಜಪೇಟೆ ತಲುಪಿದೆವು, ಹೊಟ್ಟೆ ಬಹಳ ಹಸಿವಾಗುತ್ತಿದ್ದರಿಂದ ಎನಾದ್ರೂ ತಿನ್ನೋಣ ಅಂದ್ರೆ ಭಾನುವಾರದ ಪ್ರಯುಕ್ತ ಹೋಟೆಲ್ ಗಳೆಲ್ಲ ಬಾಗಿಲು ಮುಚ್ಚಿದ್ದವು, ಹಾಗೆ ನಡೆದು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಬಂದಾಗ ಅಲ್ಲೊಂದು ಪಾನಿಪುರಿ ಗಾಡಿ ಇತ್ತು ಸದ್ಯ ಇದಾದ್ರು ಸಿಕ್ಕಿತ್ತಲ್ಲ ನಮ್ಮ ಪುಣ್ಯಕ್ಕೆ ಅಂದುಕೊಂಡು ಪಾನಿಪುರಿ ತಿಂದು ರಾತ್ರಿ ಎಂಟು ಗಂಟೆಯ ಕೆ.ಎಸ್.ಆರ್.ಟಿ.ಸಿ ಬಸ್ ಹತ್ತಿ ಎರಡು ತಾಸಿನ ಪ್ರಯಾಣದ ನಂತರ ಮೈಸೂರು ತಲುಪಿದೆವು.

ಅಲ್ಲಿಂದ ಇನ್ನೊಂದು ಕೆ.ಎಸ್.ಆರ್.ಟಿ.ಸಿ ಬಸ್ ಹತ್ತಿ ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಿದವು
ನಂತರ ನಾನು ಕೋರಿಕೆ ಮೇರೆಗೆ ನಮ್ಮೂರಾದ ಬೈರಾಪಟ್ಟಣದ ಬಳಿ ಬಸ್ ಇಳಿದು ಮನೆ ತಲುಪಿದಾಗ ಸಮಯ ರಾತ್ರಿ ಹನ್ನೊಂದಾಗಿತ್ತು.


ಸೂಚನೆ:- ನಾನು ಸಾಹಿತ್ಯ ಕ್ಷೇತ್ರದಲ್ಲಿ ಮಿಂದೆದ್ದು ಬಂದವನಲ್ಲ, ನನ್ನ ಚಾರಣದ ಹಾದಿಯಲ್ಲಿ ನನಗಾದ ಅನುಭವಗಳನ್ನು ಸ್ವಲ್ಪ ಆತುರದಲ್ಲಿ ಗೀಚಿದ್ದೇನೆ, ತಪ್ಪು ಕಂಡು ಬಂದಲ್ಲಿ ದಯವಿಟ್ಟು ತಿಳಿಸಿ ತಿದ್ದಿಕೊಳ್ಳುತ್ತೇನೆ.

**************************************ಶುಭಂ**************************************