ಭಾನುವಾರ, ಡಿಸೆಂಬರ್ 4, 2011

ಪ್ರಕೃತಿಯ ಮಡಿಲಲ್ಲಿ ಮಳೆ ಚಾರಣ / ಟ್ರೆಕ್



ದಿನಾಂಕ:  ೧೧.೦೬.೨೦೧೧ ಮತ್ತು ೧೨.೦೬.೨೦೧೧    

ಸ್ಥಳ :   ಕುದುರೆಮುಖ ಪರ್ವತ                                        

ಎತ್ತರ: ಸಮುದ್ರ ಮಟ್ಟಕ್ಕಿಂತ ಸುಮಾರು ೧೮೯೨ ಮೀಟರ್

ಜಿಲ್ಲೆ: ಚಿಕ್ಕಮಗಳೂರು

ತಂಡ: ಸಂತೋಷ್, ಸಾಯಿಪ್ರಕಾಶ್, ಗಜೇಂದ್ರ, ಶ್ರೀಕಾಂತ್ ಮತ್ತು ನಾನು

ದೂರ: ಒಟ್ಟು ೩೦ ಕಿ.ಮೀ

*********************************************************************************

ಈ ಸಲ ಎಲ್ಲರ ಮಹದಾಶೆಯಂತೆ ಕುದುರೆಮುಖ ಶಿಖರಕ್ಕೆ ಚಾರಣ ಹೋಗುವುದು ಖಾತ್ರಿಯಾಗಿತ್ತು, ಅಂದು ಶುಕ್ರವಾರ ರಾತ್ರಿ ಸಮಯ ೧೦.೪೦ ಕ್ಕೆ ಬೆಂಗಳೂರನ್ನು ಬಿಟ್ಟ ನಾವು ಸಾಯಿಪ್ರಕಾಶ್‌ರವರ ಕಾರಿನಲ್ಲಿ ಪ್ರಯಾಣ ಬೆಳೆಸಿ ಕಳಸ ತಲುಪಿದಾಗ ಬೆಳಿಗ್ಗೆ ಸಮಯ ೬.೨೫, ಅಲ್ಲಿಂದ ಮಾರ್ಗಧರ್ಶಿ ಸತೀಶ್‌ಗೆ ಕರೆ ಮಾಡಿ ಬರುತ್ತಿರುವುದಾಗಿ ತಿಳಿಸಿದೆವು, ಅಷ್ಟೊತ್ತಿಗಾಗಲೇ ಅವರು ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿದ್ದ ಸತೀಶ್‌ ನಮ್ಮನ್ನು ಬರುವಂತೆ ಸೂಚಿಸಿದರು, ಕಳಸದಿಂದ ಕುದುರೆಮುಖ ಮಾರ್ಗದಲ್ಲಿ ಸಿಗುವ ಬಾಳ್‌ಗಲ್ ತಲುಪಿದೆವು ಅಲ್ಲಿಯೇ ಇದ್ದ ಒಂದು ಮನೆಯ ಬಳಿ ಕಾರನ್ನು ನಿಲ್ಲಿಸಿ, ಪಕ್ಕದಲ್ಲೆ ಇದ್ದ ಅಂಗಡಿಯೊಂದರಲ್ಲಿ ಚಹಾ ಕುಡಿದು ನಮ್ಮ ಬೆನ್ನು ಚೀಲಗಳನ್ನು ಹೆಗಲಿಗೇರಿಸಿ ಜೀಪ್ ಹಾದಿಯಲ್ಲಿ ಚಾರಣ ಶುರು ಮಾಡಿದೆವು.


ಹಲಸಿನ ಹಣ್ಣನ್ನು ಕೀಳುತ್ತಿರುವ ಗಜೇಂದ್ರ

ಹಾದಿ ಮಧ್ಯೆ ಹಲಸಿನ ಮರದಿಂದ ಕೈಗೆಟುಕುವ ಅಂತರದಲ್ಲೆ ಇದ್ದ ಹಲಸಿನ ಹಣ್ಣನ್ನು ಗಜೇಂದ್ರರವರು ಕಿತ್ತು ತಂದರು, ಮಾಗಿದ ಹಲಸಿನ ಹಣ್ಣನ್ನು ದಾರಿಯುದ್ದಕ್ಕೂ ತಿನ್ನುತ್ತ ನಡೆದೆವು, ಅಷ್ಟೊತ್ತಿಗಾಗಲೇ ಬಿಡದೇ ಕಾಡುವ ಮಲೆನಾಡ ಜಡಿ ಮಳೆ ಶುರುವಾಯಿತು,ಸುಮಾರು ಆರೇಳು ಕಿ.ಮೀ ದೂರ ಮಳೆಯಲ್ಲಿಯೇ ಚಾರಣದ ಹಾದಿಯನ್ನು ಸವೆಸಿ ಮುಳ್ಳೋಡಿಯ ಸತೀಶ್‌ ಮನೆಯ ಬಳಿ ಬಂದಾಗ ಸಮಯ ಬೆಳಿಗ್ಗೆ ೯.೧೫ ಆಗಿತ್ತು, ಅಷ್ಟೊತ್ತಿಗಾಗಲೇ ಸಿದ್ಧವಾಗಿದ್ದ ತಿಂಡಿ ತಿಂದು ಮುಗಿಸಿ (ಮಲೆನಾಡ ವಿಶೇಷ ಕಡುಬಿಟ್ಟು, ಚಟ್ನಿ) ಒಂದು ದಿನದ ಚಾರಣಕ್ಕೆ ಮಾತ್ರ ಅನುಮತಿ ಸಿಕ್ಕಿದ್ದರಿಂದ ನಮ್ಮ ಬೆನ್ನುಚೀಲಗಳನ್ನು ಸತೀಶ್ ಮನೆಯಲ್ಲಿಯೇ ಇಳಿಸಿ ಚಾರಣ ಶುರುಮಾಡಿದಾಗ ಸಮಯ ಹತ್ತಾಗಿತ್ತು.


ಚಾರಣದ ಹಾದಿಯ ಪಕ್ಕದಲ್ಲಿಯೇ ಕಾಣುವ ಸೋಮಾವತಿ ಜಲಪಾತ

ಸುಮಾರು ಅರ್ಧ ಗಂಟೆ ಚಾರಣದ ನಂತರ ಒಂಟಿ ಮರದ (ನೇರಳೆ ಮರ)  ಬಳಿ ಬಂದೆವು, ಆರಂಭದ ಹಾದಿ ಅಷ್ಟೇನು ಆಯಾಸವಿಲ್ಲದ್ದು, ಅಷ್ಟರಲ್ಲಿ ನಮ್ಮ ಮಾರ್ಗಧರ್ಶಿ ಸತೀಶ್ ನಮ್ಮನ್ನು ಕರೆದು ಪಕ್ಕದ ಶಿಖರವನ್ನೇರುತ್ತಿದ್ದ ಕಾಡೆಮ್ಮೆಯನ್ನು ತೋರಿಸಿದರು, ಕಾಡೆಮ್ಮೆ ಮಿಂಚಿನಂತೆ ಶಿಖರವನ್ನೇರಿ ಮಾಯವಾಯ್ತು, ಇಲ್ಲಿಂದ ಮುಂದಕ್ಕೆ ಸತತ ಒಂದು ಗಂಟೆ ಚಾರಣದ ನಂತರ ಬೆಳ್ತಂಗಡಿ ತಾಲ್ಲೂಕಿನ ನಾವೂರಿನ ಕಡೆಗೆ ಹೋಗುವ ದಾರಿ ಸಿಕ್ಕಿತು, ಕೆಲವು ಚಾರಣಿಗರು ನಾವೂರಿನ ಕಡೆಯಿಂದಲೂ ಕುದುರೆಮುಖ ಪರ್ವತಕ್ಕೆ ಚಾರಣ ಮಾಡುವುದುಂಟು.


ಅಲ್ಲಿಂದ ಸ್ವಲ್ಪ ಮುಂದೆ ಬಂದಾಗ ಬಹಳ ಸನಿಹದಲ್ಲಿ ನನ್ನ ಕಣ್ಣಿಗೆ ಕಂಡಿದ್ದು ಪುಟ್ಟ ಜಿಂಕೆ ಮರಿ,  ನೋಡಿದಾಕ್ಷಣ ಖುಷಿಯಿಂದ ಎಲ್ಲರನ್ನು ಕೂಗಿ ಕರೆದೆ, ಅಷ್ಟರಲ್ಲಿ ಕೂಗಿ ಕರೆದ ಸದ್ದಿನಿಂದ ಅಂಜಿ ಜಿಂಕೆ ಕಾಡಿನೊಳಗೆ ನುಗ್ಗಿ ಮರೆಯಾಯಿತು.

ಚಿಟ ಪಟ ಸದ್ದಿನೊಂದಿಗೆ ಆಕಾಶದಿಂದ ಧರೆಗೆ ಮುತ್ತಿಕ್ಕುತಿದ್ದ ಮಲೆನಾಡ ವರ್ಷಧಾರೆಯ ಸೊಬಗು ನಿಜಕ್ಕೂ ಅವಿಸ್ಮರಣೀಯ, ಯಾವ ಕಡೆ ಕಣ್ಣಾಯಿಸಿದರೂ ತುಂಬಿ ಹರಿಯುತ್ತಿದ್ದ ತೊರೆ ಹಳ್ಳಗಳ ರಮಣೀಯ ಸೌಂದರ್ಯ ನಮ್ಮನ್ನು ಮಂತ್ರ ಮುಗ್ಧರನ್ನಾಗಿಸಿತು.


ಜಡಿ ಮಳೆ ಕೊಂಚವೂ ಕಮ್ಮಿಯಾಗಲಿಲ್ಲ "ಧೋ" ಎಂದು ಒಂದೇ ಸಮನೇ ಬೀಳುತ್ತಲ್ಲೇ ಇತ್ತು ನಾವೆಲ್ಲ ಅದಕ್ಕೆ ತಯಾರಾಗೆ ಬಂದಿದ್ದೆವು, ಮುಂದೆ ಸಾಗುತ್ತಿದ್ದಂತೆ ಕೆಂಪು ನೀರಿನ ಹಳ್ಳ ಎದುರಾಯಿತು ಹಳ್ಳದಲ್ಲೆ ಸ್ವಲ್ಪ ದೂರ ನಡೆದು ಹಳ್ಳ ಬಿಟ್ಟಿ ಮತ್ತೆ ಕಾಡಿನ ಹಾದಿಯಲ್ಲಿ ನಡೆಯತೊಡಗಿದೆವು, ಅಷ್ಟೊತ್ತಿಗೆ ಒಂದನೇ ಲೋಭೊ ಮನೆಯ ಬಳಿ ಬಂದೆವು.


ಸುಂದರ ವನಪುಷ್ಪ


ಹಾದಿಯುದ್ದಕ್ಕೂ ಸಾಯಿಪ್ರಕಾಶ್‌ರವರ ಹಾಸ್ಯಭರಿತ ಚಟಾಕಿಗಳು ಮಲೆನಾಡ ಮಳೆಯಷ್ಟೆ ಮನಸ್ಸಿಗೆ ಮುದನೀಡುತ್ತಿದ್ದವು, ಕೆಲವೇ ನಿಮಿಷದ ಅಂತರದಲ್ಲಿ ಎರಡನೇ ಲೋಭೊ ಮನೆ ಸಿಕ್ಕಿತು ಇಲ್ಲಿಂದ ಸ್ವಲ್ಪ ಮುಂದಕ್ಕೆ ನಡೆದು ಬಯಲಿನಂತ ಜಾಗದಲ್ಲಿ ಬಂದು ನಿಂತೆವು, ರಾಷ್ಟ್ರೀಯ ಉದ್ಯಾನವನ ಆಗುವುದಕ್ಕೂ ಮುಂಚೆ ಲೋಭೊ ವಾಸಿಸುತ್ತಿದ್ದ ಸಮಯದಲ್ಲಿ ವ್ಯವಸಾಯ ಮಾಡುತ್ತಿದ್ದ ಜಾಗ ಅದಾಗಿತ್ತು.  


                                 ವಿವಿಧ ಭಂಗಿಯಲ್ಲಿ ಛಾಯಾಗ್ರಹಣ ಮಾಡುತ್ತಿರುವ ಸಾಯಿಪ್ರಕಾಶ್‌.

ಪಾಳುಬಿದ್ದ ಮೂರನೆಯ ಲೋಭೊ ಮನೆಯ ಬಳಿ ಬಂದಾಗ ಸಮಯ ೧೧:೫೦, ಮನೆಯ ಮುಂಬಾಗದಲ್ಲೆ ಇದ್ದ ಮಾವಿನಮರದಿಂದ ಒಂದೆರಡು ಮಾವಿನಕಾಯಿ ಉದುರಿಸಿ ಚಪ್ಪರಿಸಿದೆ ತುಂಬಾ ಚೆನ್ನಾಗಿತ್ತು, ಇಲ್ಲಿಂದ ಮುಂದಕ್ಕೆ ಏರುದಾರಿ ನಡೆಯುತ್ತ ನಡೆಯುತ್ತ ತುಂಬಾ ಆಯಾಸವಾಗತೊಡಗಿತು.


ಪಾಳುಬಿದ್ದ ಲೋಭೊ ಮನೆ


ಏರುಹಾದಿಯಲ್ಲಿ ಆ ಬೆಟ್ಟವನ್ನು ಏರಿ ಅದರ ಅಂಚಿನಲ್ಲೆ ಚಾರಣ ಮುಂದುವರೆಸಿದೆವು, ಸಂತೋಷ್, ಸಾಯಿ, ಮತ್ತು ಶ್ರೀಕಾಂತ್ ಬಹಳ ಮುಂದೆ ಹೋಗುತ್ತಿದ್ದರು ಗಜೇಂದ್ರರವರು ನನಗಿಂತ ತುಸು ಅಂತರದಲ್ಲಿ ಮುಂದೆ ಸಾಗುತ್ತಿದ್ದರು, ಹಾಗೆ ಸಾಗುತ್ತ ಮುಂದೆ ಬಂದಾಗ ಕಾಡು ಎದುರಾಯಿತು ಎದುರಿಗೆ ಅಲ್ಲೊಂದು ಸುಂದರ ಮನಮೋಹಕ ಜಲಧಾರೆಯ ಧರ್ಶನವಾಯಿತು, ಹರಿದು ಬರುತಿದ್ದ ನೀರು ಮುತ್ತಿನ ಮಣಿಗಳಂತೆ ಕಾಣುತ್ತಿದ್ದ ದೃಶ್ಯ ಸೊಬಗು ನಿಜಕ್ಕೂ ರಮಣೀಯವಾಗಿತ್ತು.


ಸುಂದರ ಮನಮೋಹಕ ಜಲಧಾರೆ

 ಒಂದೆರಡು ದೃಶ್ಯಾವಳಿಗಳನ್ನು ನನ್ನ ಕ್ಯಾಮೆರಾ ದಲ್ಲಿ ಸೆರೆಹಿಡಿದೆ, ಜಿಗಣೆಗಳ ಕಾಟ ಹೆಚ್ಚಾಗುತ್ತಿದ್ದಂತೆ  ಗಜೇಂದ್ರರವರು ಮೋಹನ್ ಓಡಿ... ಓಡಿ... ಎಂದು ಹೇಳಿ ಓಡತೊಡಗಿದರು, ನಾನು ಕೂಡ ಅವರನ್ನೇ ಹಿಂಬಾಲಿಸಿ ಓಡತೊಡಗಿದೆ ಅಷ್ಟೊತ್ತಿಗಾಗಲೇ ಕಾಲಿಗೆ ಹತ್ತಿದ್ದ ಹತ್ತಿಪ್ಪತ್ತು ಜಿಗಣೆಗಳನ್ನು ಕಿತ್ತು ಮುಂದೆ ಓಡುವಷ್ಟರಲ್ಲಿ ಸಾಕಾಗಿ ಹೋಗಿತ್ತು.



ಕುದುರೆಮುಖ ಶಿಖರ ಶ್ರೇಣಿಯ ಸುಂದರ ದೃಶ್ಯ

ಹಾಗೆ ಹಾದಿಯಲ್ಲಿ ನಡೆಯುವಾಗ ಬೆಟ್ಟದಿಂದ ನೀರು ಜಲಪಾತವಾಗಿ ಧುಮುಕುತ್ತಿದ್ದ ದೃಶ್ಯ ಸೊಬಗು ಮನಮೋಹಕವಾಗಿತ್ತು, ಆ ಜಲಪಾತವಿರುವ ಪರ್ವತವನ್ನು ಏರಿ ಜಲಪಾತವನ್ನು ದಾಟಿ ಇನ್ನೊಂದು ಸಣ್ಣ ಗುಡ್ಡವನ್ನು ಏರಿದರೆ ಕುದುರೆಮುಖ ಶಿಖರದ ತುದಿ ತಲುಪಬಹುದು.

ಎಲ್ಲರು ನನಗಿಂತ ಬಹಳ ಅಂತರದಲ್ಲಿ ಮುಂದಿದ್ದರು, ತುಂಬಾ ಆಯಾಸವಾಗಿದ್ದ ಕಾರಣ ಅವರನ್ನು ಸೇರಲು ನನಗೆ ಸಾಧ್ಯವಾಗಲಿಲ್ಲ ನಾನೆ ಕೊನೆಯ ಸರದಿಯವನಾಗಿದ್ದೆ.

ಯಾವ ಚಾರಣದಲ್ಲೂ ನನಗೆ ಈ ರೀತಿ ಬಳಲಿಕೆ ಆಗಿರಲಿಲ್ಲ ಅಂದೇಕೊ ಏನೋ? ಬಳಲಿಕೆ ಎಂಬ ಭೂತ ಬೆಂಬಿಡದೆ ನನ್ನನ್ನು ಕಾಡುತಿತ್ತು, ಹೇಗೊ ಕಷ್ಟಪಟ್ಟು ಕಡಿದಾದ ಹಾದಿಯಲ್ಲಿ ಶಿಖರನ್ನೇರಲು ಮನಸ್ಸು ಮಾಡಿ ಒಂದೊಂದ್ದೆ ಹೆಜ್ಜೆ ಇಡುತ್ತ ಮುಂದೆ ಸಾಗುತ್ತಿದ್ದೆ, ನೀರಿನ ಬಾಟೆಲ್ ನನ್ನ ಸೇಹಿತರ ಬಳಿ ಇದ್ದ ಕಾರಣದಿಂದ ಬಾಯಾರಿಕೆ ನೀಗಿಸುವುದು ಕಷ್ಟದ ಕೆಲಸವಾಗಿತ್ತು, ಬೀಳುತಿದ್ದ ಮಳೆ ಹನಿಗೆ ನಾಲಿಗೆ ಹೊರ ಚಾಚಿ ಗಂಟಲು ತೇವ ಮಾಡಿಕೊಳ್ಳುತ್ತ ಮುಂದೆ ಮುಂದೆ ಸಾಗುತ್ತಿದ್ದೆ.


ಬಹಳ ಕಷ್ಟಪಟ್ಟು ಕೊನೆಗೂ ಆ ಪರ್ವತವನ್ನೇರಿ ಜಲಪಾತದ ತುದಿಗೆ ಬಂದು ನಿಂತೆ, ಆಗಲೇ ಒಂದು ಚಾರಣಿಗರ ಒಂದು ತಂಡ ಶಿಖರದಿಂದ ಇಳಿದು ಜಲಪಾತದ ಬಳಿ ವಿಶ್ರಾಂತಿ ಪಡೆಯುತಿತ್ತು, ನನ್ನ ಪಾಡು ನೋಡಿ ಮರುಗಿದರೋ ಏನೋ?
ಹರಿಯುತ್ತಿದ್ದ ನೀರನ್ನು ಮನಸೋ ಇಚ್ಚೆ ಕುಡಿದ ಮೇಲೆ ಸ್ವಲ್ಪ ಆಯಾಸ ಕಮ್ಮಿಯಾಯಿತು, ಅಲ್ಲೆ ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡು ಪುನಃ ಎದ್ದು ಹೊರಟೆ ಆಗ ನನ್ನ ಎದುರಿಗಿದದ್ದು ಮಂಜು ಮುಸುಕಿದ ಒಂದು ಸಣ್ಣ ಗುಡ್ಡ ಮಾತ್ರ!


ಆಷ್ಟರಲ್ಲಿ ನಮ್ಮ ಚಾರಣ ಮಿತ್ರರು ಶಿಖರದ ತುದಿ ತಲುಪಿಯಾಗಿತ್ತು, ಮತ್ತೆ ಹೆಜ್ಜೆ ಹೆಜ್ಜೆ ಇಡುತ್ತ ತುಸು ಸಮಯದಲ್ಲೇ ನಾನು ಕೂಡ ಶಿಖರದ ತುದಿ ತಲುಪಿದೆ ಆಗ ಗಡಿಯಾರದ ಕಡೆಗೆ ಓಮ್ಮೆ ಕಣ್ಣಾಯಿಸಿದಾಗ ಸಮಯ ಮದ್ಯಾಹ್ನ ಎರಡೂವರೆಯಾಗಿತ್ತು,
ಆಗಲೇ ನಮ್ಮ ಚಾರಣ ಮಿತ್ರರು ಶಿಖರವನ್ನೇರಿದ ಸಂತೋಷದಲ್ಲಿ ಪ್ರಕೃತಿ ಸೊಬಗನ್ನು ಸವಿಯುತ್ತಿದ್ದರು.

ಗಜೇಂದ್ರ: ಯಾಕ್ ಮೋಹನ್ ಏನಾಯ್ತು?  

ನಾನು: ನನ್ನ ಕೈಲಿ ಆಗ್ತಾ ಇಲ್ಲ, ತುಂಬಾ ಸುಸ್ತು.

ಗಜೇಂದ್ರ: ಸ್ವಲ್ಪ ಹೊತ್ತು ಆರಾಮಾಗಿ ಕುತ್ಕೊಳ್ಳಿ ಮೋಹನ್, ಸರಿಹೋಗುತ್ತೆ.

ಅವರು ಕೊಟ್ಟ ಹಸಿ ಖರ್ಜೂರ ತಿಂದು ಸ್ವಲ್ಪ ಹೊತ್ತು ನೆಲಕ್ಕೊರಗಿ ವಿಶ್ರಾಂತಿ ಪಡೆದ ಮೇಲೆ ಸ್ವಲ್ಪ ಆರಾಮೆನಿಸಿತು, ಅಷ್ಟರಲ್ಲೆ ಕಡವೆಯೊಂದು ಕ್ಯಾಟ್ ವಾಕ್ ಮಾದರಿಯಲ್ಲಿ ಬಂದು ಪುಸಕ್ಕನೆ ಮಾಯವಾಯ್ತು, ತದ ನಂತರ ನನ್ನ ಕ್ಯಾಮೆರಾಗೆ ಸ್ವಲ್ಪ ಕೆಲಸ ಕೊಟ್ಟು ಆ ಸ್ವರ್ಗದ ಸೊಬಗಿನ ಸುಂದರ ದೃಶ್ಯಾವಳಿಗಳನ್ನ ಸೆರೆಹಿಡಿದೆ.


ಕುದುರೆಮುಖ ಶಿಖರ ಏರಿದ ಸಂದರ್ಭದಲ್ಲಿ ಜಯದ ನಗೆ


ಎತ್ತಕಡೆ ಕಣ್ಣಾಯಿಸಿದರೂ ಹಸಿರನ್ನೆ ಹೊದ್ದು ಕುಳಿತ ಕುದುರೆಮುಖ ಪರ್ವತ ಶ್ರೇಣಿಯ ಬೆಟ್ಟಗಳು, ಮಳೆಕಾಡ ಕಣಿವೆಗಳ ಅದ್ಬುತ ಹಸಿರು ಸೌಂದರ್ಯ ಮನಸನ್ನು ಸೂರೆಗೊಳ್ಳುವುದರಲ್ಲಿ ಸಂದೇಹವೆ ಇಲ್ಲ.


ಆಷ್ಟರಲ್ಲಿ ದಟ್ಟ ಮಂಜು ನಮ್ಮನ್ನಾವರಿಸಿತು ಏನೂ ಕಾಣುತ್ತಿರಲಿಲ್ಲ, ಸ್ವಲ್ಪ ಸಮಯ ಅಲ್ಲೆ ಕಳೆದು ತದನಂತರ ಎಲ್ಲರೂ ಹೊರಡಲು ತೀರ್ಮಾನಿಸಿ ಅಲ್ಲಿಂದ ಹೊರ‍ಟೆವು.

 ಸಂಜೆಯ ಒಳಗಾಗಿ ಮುಳ್ಳೋಡಿ ತಲುಪಬೇಕಾದ್ದರಿಂದ ಹೆಚ್ಚು ಸಮಯವಿಲ್ಲದೆ ಎಲ್ಲರೂ ಸರಸರನೆ ಇಳಿಯತೊಡಗಿದೆವು ಅದರಲ್ಲಿ ನಾನೆ ಮೊದಲಿಗನಾಗಿದ್ದೆ ಏಕೆಂದರೆ ನಮ್ಮ ಬಳಿ ಇದ್ದ ಅಲ್ಪ ಸ್ವಲ್ಪ ತಿಂಡಿಗಳು ಖಾಲಿಯಾಗಿ ಹೊಟ್ಟೆ ಭಣಗುಡುತ್ತಿತ್ತು, ಹಾಗಾಗಿ ಸುಮಾರು ಐದಾರು ಕಿ,ಮೀ. ದೂರ ಕಡಿದಾದ ಬೆಟ್ಟಗುಡ್ದಗಳನ್ನು ಇಳಿದು ಲೋಭೊ ಮನೆಯ ಬಳಿ ತೆರಳಿ ಅಲ್ಲಿದ್ದ ಮಾವಿನ ಮರದಿಂದ ಮಾವಿನಕಾಯಿ ಬೀಳಿಸಿ ತಿಂದು ಹೊಟ್ಟೆಯ ಹಸಿವೆಯನ್ನು ನೀಗಿಸುವುದು ನನ್ನ ಉದ್ದೇಶವಾಗಿತ್ತು (ನಿಜವಾಗಿಯೂ ಇಂತ ಪರಿಸ್ಥಿತಿಯಲ್ಲಿಯೇ ಅನ್ನದ ಬೆಲೆ ಏನು ಅಂತ ತಿಳಿಯೋದು).


ಸಣ್ಣ ಗುಡ್ಡವನ್ನು ಇಳಿದು ಜಲಪಾತದ ಬಳಿ ಬಂದು ಮತ್ತೆ ನೀರು ಕುಡಿದು ಬಾಯಾರಿಕೆ ನೀಗಿಸಿ ಮತ್ತೊಂದು ದೊಡ್ಡ ಪರ್ವತ ಇಳಿಯಲು ಶುರು ಮಾಡಿದೆ ಎಲ್ಲರೂ ಹಿಂದೆ ಬರುತ್ತಿದ್ದರು, ಆ ಪರ್ವತವನ್ನು ಇಳಿದು ಶಕ್ತಿಯಿಲ್ಲದೇ ನಿತ್ರಾಣಗೊಂಡರೂ ಸಹ ಎಲ್ಲಿಯೂ ವಿಶ್ರಾಂತಿ ತೆಗೆದುಕೊಳ್ಳದೆ ಸಾಗುತ್ತಿದ್ದೆ.

ಸ್ಪಟಿಕದಂತೆ ಬೀಳುತ್ತಿದ್ದ ಮತ್ತೊಂದು ಸುಂದರ ಜಲಪಾತದ ಬಳಿ ಬಂದು ಬಾಯಾರಿಕೆ ನೀಗಿಸಿಕೊಂಡು ಹೊಟ್ಟೆಯಲ್ಲಿರುವ ಅಗ್ನಿದೇವನನ್ನು ಸಂತೃಪ್ತಿಪಡಿಸಲು ಮತ್ತೆ ಲೋಭೊ ಮನೆಯತ್ತ ಭರ ಭರನೆ ಹೆಜ್ಜೆ ಹಾಕತೊಡಗಿದೆ.  


ನಾನು ಸಾಗುತ್ತಿದದ್ದು ಪರ್ವತದ ಅಂಚಿನಲ್ಲಿ, ಪಕ್ಕದ ಗುಡ್ದದಲ್ಲಿ ಹುಲ್ಲು ಮೇಯುತ್ತಿದ್ದ ನಾಲ್ಕೈದು ಜಿಂಕೆಗಳು ಧರ್ಶನ ಕೊಟ್ಟರೂ ಸಹ ಕ್ಯಾಮೆರ ತೆಗೆದು ಚಿತ್ರ ತೆಗೆಯುವ ಆಶಕ್ತಿ ಇಲ್ಲದೆ ಮುನ್ನಡೆದೆ, ಅಷ್ಟರಲ್ಲಿ ಮಳೆ ಕೂಡ ನಿಂತಿತ್ತು  ನನ್ನ ಚಾರಣ ಮಿತ್ರರು ಸ್ವಲ್ಪ ಅಂತರದಲ್ಲೆ ನನ್ನ ಹಿಂದೆ ಬರುತ್ತಿದ್ದರು,  ನಂತರ  ಆ ಪರ್ವತದ ಅಂಚನ್ನು ಬಿಟ್ಟು ಇಳಿಜಾರು ಹಾದಿಯಲ್ಲಿ ಇಳಿದು ಲೋಭೊ ಮನೆ ತಲುಪುವಷ್ಟರಲ್ಲಿ ತುಂಬಾ ಆಯಾಸವಾಗಿತ್ತು, ನನಗೆ ಮೊದಲು ಕಂಡಿದ್ದು ಪಾಳುಮನೆಯ ಮುಂದೆ ಇದ್ದ ಮಾವಿನ ಮರ, ಅಲ್ಲೆ ಬಿದ್ದಿದ್ದ ಕೆಲವು ಹೆಂಚಿನ ಚೂರು ತಗೊಂಡು ಮಾವಿನ ಕಾಯಿ ಗೊಂಚಲಿಗೆ ಗುರಿ ಇಟ್ಟು ಬೀಸಿದೆ ಮೈನಲ್ಲಿ ಶಕ್ತಿ ಇಲ್ಲದೆ ಅವು ಗುರಿ ತಪ್ಪಿ ಎತ್ತಲೋ ಹೋಗುತ್ತಿದ್ದವು ಹೀಗೆ ಹಲವಾರು ಬಾರಿ ಪ್ರಯತ್ನಪಟ್ಟರೂ ಪ್ರಯೋಜನವಾಗಲಿಲ್ಲ, ಕೊನೆಗೆ ನೆಲದ ಮೇಲೆ ಬಿದ್ದಿದ್ದ ಮಾವಿನಕಾಯಿಯನ್ನು ಎತ್ತುಕೊಂಡು ತಿನ್ನಬೇಕಾದ ಪ್ರಸಂಗ ಬಂದಿತ್ತು, ಮಾವಿನಕಾಯಿ ತಿಂದ ನಂತರ ತಕ್ಕಮಟ್ಟಿಗೆ ಹಸಿವು ಶಾಂತವಾಯಿತು.


ಅಷ್ಟೊತ್ತಿಗೆ ಎಲ್ಲ ಸ್ನೇಹಿತರು ಬಂದರು ನಂತರ ಮತ್ತೆ ಚಾರಣ ಮುಂದುವರೆಸಿ ಮುಳ್ಳೋಡಿಯ ಸತೀಶ್ ಮನೆ ತಲುಪಿದಾಗ ಸಮಯ ಸಂಜೆ ಆರೂವರೆಯಾಗಿತ್ತು.

ಬಂದ ತಕ್ಷಣವೆ ಬಿಸಿನೀರಿನ ಸ್ನಾನ ಮುಗಿಸಿದ ಬಳಿಕ ಬಳಲಿ ಬೆಂಡಾಗಿ ಹೋಗಿದ್ದ ನಮ್ಮ ಮೈಮನಗಳು ಯಥಾಸ್ಥಿತಿಗೆ ಮರಳುವುದಕ್ಕೆ ಜಾಸ್ತಿ ಸಮಯ ಬೇಕಾಗಲಿಲ್ಲ, ನಂತರ ರುಚಿಯಾದ ಊಟ (ಚಪಾತಿ,ಪಲ್ಯ, ಅನ್ನ, ಸಾಂಬಾರ್ ಮತ್ತು ಮಜ್ಜಿಗೆ) ತಿಂದು ಮುಗಿಸಿ ನಿದ್ರಾದೇವಿಗೆ ಶರಣಾದೆವು.

ಬೆಳಿಗ್ಗೆ ಎದ್ದಾಗ ಸಮಯ ಏಳಾಗಿತ್ತು ನಂತರ ಹೋದದ್ದು ಸೋಮಾವತಿ ಜಲಪಾತದೆಡೆಗೆ...
ಮಳೆಗಾಲದ ಸಮಯವಾದ್ದರಿಂದ ಜಲಪಾತದಲ್ಲಿ ನೀರು ಸಮೃದ್ದವಾಗಿತ್ತು, ಬಹಳ ಎತ್ತರದಿಂದ ಬೀಳದಿದ್ದರೂ ಸಹ ನೋಡಲು ಸೊಗಸಾಗಿತ್ತು, ಅಲ್ಲೆ ನಮ್ಮ ಸ್ನಾನಾಧಿ ಕಾರ್ಯ ಮುಗಿಸಿ ಮತ್ತೆ ಸತೀಶ್ ಮನೆಗೆ ಬಂದು ತಿಂಡಿ  (ಆಕ್ಕಿ ರೊಟ್ಟಿ, ಚಟ್ನಿ ಮತ್ತು ಸಾಂಬಾರ್) ಮುಗಿಸಿ ಸತೀಶ್ ಮತ್ತು ಅವರ ಕುಟುಂಬದವರಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿ ಬಾಳ್‌ಗಲ್‌ ಕಡೆ ಚಾರಣ ಹೊರಟಾಗ ಸಮಯ ಬೆಳಿಗ್ಗೆ ಹತ್ತಾಗಿತ್ತು.


ಮುಳ್ಳೋಡಿಯ ಸತೀಶ್ ಮನೆ ಮುಂದೆ ಗಜೇಂದ್ರ, ಶ್ರೀಕಾಂತ್, ಸಾಯಿಪ್ರಕಾಶ್ ಮತ್ತು ನಾನು

ಮತ್ತೆ ವರುಣನ ಲೀಲೆಯಿಂದ ಮಳೆಯಲ್ಲಿಯೇ ನೆನೆದು ಚಾರಣ ಮಾಡಬೇಕಾಗಿ ಬಂತು ಸತೀಶ್ ಕೂಡ ನಮ್ಮ ಜೊತೆಯಲ್ಲಿಯೇ ಬಾಳ್‌ಗಲ್‌ ತನಕ ಬಂದರು, ಬಾಳ್‌ಗಲ್‌ ತಲುಪಿದಾಗ ಸಮಯ ಮದ್ಯಾಹ್ನ ಸರಿಯಾಗಿ ಒಂದೂವರೆ ಗಂಟೆಯಾಗಿತ್ತು.

ಅಲ್ಲಿಂದ ಕಾರಿನಲ್ಲಿ ಸಂಸೆ,ಕಳಸ ಮಾರ್ಗವಾಗಿ ಹೊರನಾಡು ತಲುಪಿ ಅನ್ನಪೂರ್ಣೇಶ್ವರಿ ದೇವಿಯ ಧರ್ಶನ  ಪಡೆದು ಭೋಜನ ಶಾಲೆಯಲ್ಲಿ ಪ್ರಸಾಧ ಸ್ವೀಕರಿಸಿ ಅಲ್ಲಿಂದ ನೇರವಾಗಿ ಕಳಸಕ್ಕೆ ಬಂದು ಕಳಸೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ತೆರಳಿ ನಂತರ ಕೆಲವು ಉಪಯುಕ್ತ ವಸ್ತುಗಳನ್ನು ಖರೀದಿಸಿ ನಂತರ ಮಾಗುಂಡಿ ಮಾರ್ಗವಾಗಿ ಚಿಕ್ಕಮಗಳೂರಿನ ಕಡೆಗೆ ಪ್ರಯಾಣ ಬೆಳೆಸಿದೆವು.

ಚಿಕ್ಕಮಗಳೂರಿಗೆ ಬರುವುವಷ್ಟರಲ್ಲಿ ರಾತ್ರಿಯಾದ್ದರಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸಮೀಪ ಇದ್ದ ಹೋಟೆಲೊಂದರಲ್ಲಿ ಊಟ ಮುಗಿಸಿ  ೮:೩೦ ಕ್ಕೆ ಹೊರಟು ಬೇಲೂರು,ಹಾಸನ, ಮಾರ್ಗವಾಗಿ ಬೆಂಗಳೂರಿನ ಸ್ಯಾಟ್ಲೈಟ್ ಬಸ್ ನಿಲ್ದಾಣ ತಲುಪಿದಾಗ ಸಮಯ ರಾತ್ರಿ ಹನ್ನೆರಡು ಮುಕ್ಕಾಲು.

ನಂತರ ನಾನು ಕೆ.ಎಸ್.ಆರ್.ಟಿ.ಸಿ ಬಸ್ ಹತ್ತಿ ಚನ್ನಪಟ್ಟಣದಲ್ಲಿ ಇಳಿದು ರೈಲ್ವೆ ನಿಲ್ದಾಣದ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಬೈಕ್ ಏರಿ ಮನೆ ಸೇರಿದಾಗ ಸಮಯ ಮದ್ಯರಾತ್ರಿ ಎರಡೂವರೆ ಆಗಿತ್ತು.

*** ಶುಭಂ ***