ಶನಿವಾರ, ಜನವರಿ 1, 2011

ಜಟಿಲ ಕಾನನದ ಒಂಬತ್ತು ಗುಡ್ಡ ಚಾರಣ / ಟ್ರೆಕ್



ದಿನಾಂಕ : ೨೨.೧೦.೨೦೧೦, ೨೩.೧೦.೨೦೧೦ ಮತ್ತು ೨೪.೧೦.೨೦೧೦


ಎತ್ತರ: ಸಮುದ್ರ ಮಟ್ಟದಿಂದ ಸುಮಾರು ೯೭೧ ಮೀ.


ಜಿಲ್ಲೆ: ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು


ಮಾರ್ಗ: ಬೆಂಗಳೂರು - ಹಾಸನ - ಸಕಲೇಶಪುರ - ಗುಂಡ್ಯ ಚೆಕ್‌ಪೋಸ್ಟ್ -ಕಬ್ಬಿನಾಲೆ ಮೀಸಲು ಅರಣ್ಯ - ಒಂಬತ್ತು ಗುಡ್ದ - ಲಕ್ಷ್ಮಿ ಸರಸ್ವತಿ ಎಸ್ಟೇಟ್ -ಹೊಸಕೆರೆ - ಮೂಡಿಗೆರೆ - ಚಿಕ್ಕಮಗಳೂರು


ತಂಡ: ಗಜೇಂದ್ರ, ಸಂತೋಷ್, ಮತ್ತು ನಾನು ( ಮೋಹನ್) ಹಾಗೂ ಬೆಂಗಳೂರು ಅಸೆಂಡರ್ಸ್ ಸ್ನೇಹಿತರು.


*********************************************************************************


ಬಹು ದಿನಗಳಿಂದ ಕನಸಾಗೆ ಉಳಿದಿದ್ದ ಒಂಬತ್ತು ಗುಡ್ದ ಚಾರಣಕ್ಕೆ ಅಂತೂ ಜೀವಕಳೆ ಬಂತು,
ದಿನಾಂಕ:೧೫.೧೦.೧೦ ಕ್ಕೆ ಹೊರಡುವುದು ಖಾತ್ರಿಯಾಗಿತ್ತು, ಶಿರಾಡಿ ಘಟ್ಟ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆ ಬೀಳುತ್ತಿದ್ದರಿಂದ ಒಂಬತ್ತು ಗುಡ್ಡ ಚಾರಣವನ್ನು ಒಂದು ವಾರ ಮುಂದೂಡಲಾಗಿತ್ತು.

ಅಂದು ಶುಕ್ರವಾರ ಸಂಜೆ ಗಜೇಂದ್ರರವರು ಕರೆ ಮಾಡಿ ನಾನಿರುವ ಸ್ಥಳಕ್ಕೆ ಬೇಗನೆ ಬರುವುದಾಗಿ ತಿಳಿಸಿದರು, ಸಂಜೆ ಆರರ ಸಮಯ ನಾನು ಆಫೀಸ್ ಬಿಟ್ಟು ಸನಿಹದಲ್ಲೇ ಕಾಯುತ್ತಿದ್ದ ಗಜೇಂದ್ರರವರನ್ನು ಭೇಟಿ ಮಾಡಿದ ನಂತರ ಚಾರಣಕ್ಕೆ ಅಗತ್ಯವಿದ್ದ ಕೆಲವು ಉಪಯುಕ್ತ ವಸ್ತುಗಳನ್ನು ಹಾಗೂ ಸ್ವಲ್ಪ ತಿಂಡಿ ತಿನಿಸುಗಳನ್ನು ಖರೀದಿಸಿದೆವು.

ಚಾರಣಕ್ಕೆ ಅಗತ್ಯವಿದ್ದ ಹೆಡ್‌ಲ್ಯಾಂಪ್ ಖರೀದಿಗೋಸ್ಕರ ಗಾಂಧಿನಗರದ ನ್ಯಾಷನಲ್ ಮಾರ್ಕೆಟ್‌ಗೆ ಹೋಗಿ ವಿಚಾರಿಸಿದಾಗ ಅಲ್ಲಿದ್ದ ಹೆಡ್‌ಲ್ಯಾಂಪ್ ನಮಗ್ಯಾಕೊ ಇಷ್ಟವಾಗಲಿಲ್ಲ, ವಾಪಾಸ್ ಬಂದು ಪಕ್ಕದಲ್ಲೆ ಇದ್ದ ಕಾಮತ್ ಯಾತ್ರಿನಿವಾಸ್ ಹೋಟೆಲ್‌ನಲ್ಲಿ ಊಟ ಮುಗಿಸಿಕೊಂಡು ರಾತ್ರಿ ೯:೧೫ ರ ಹೊತ್ತಿಗೆ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಆಗಮಿಸಿದೆವು.

ಆಗಲೇ ಸಹ ಚಾರಣಿಗರು ಚಾರಣ ಅಯೋಜಕರಾದ ಮುದಾಸರ್‌ವರಿಗೋಸ್ಕರ ಕಾಯುತ್ತ ನಿಂತ್ತಿದ್ದರು ನಾವು ಕೂಡ ಅವರನ್ನು ಸೇರಿಕೊಂಡೆವು, ಅಷ್ಟೊತ್ತಿಗೆ ಮುದಾಸರ‍್ರವರು (ಪೂರ್ತಿ ನಾಮಧೇಯ ಮುದಾಸರ್ ಖಾನ್) ನಾವು ಹೊರಡುವ ರಾಜಹಂಸ ಬಸ್‌ನಲ್ಲೆ ಕುಳಿತು ಎಲ್ಲರನ್ನು ಕೂಗಿ ಕರೆದರು, ಕೂಡಲೇ ಹೋಗಿ ಕಾಯ್ದಿರಿಸಿದ ಆಸನಗಳಲ್ಲಿ ಆಸೀನರಾದೆವು ಬಸ್ ಇನ್ನೇನು ಹೊರಡುವುದರಲ್ಲಿತ್ತು ಅಷ್ಟರಲ್ಲಿ ಮುದಾಸರ್‌ರವರು ಒಬ್ಬೊಬ್ಬರ ಹೆಸರನ್ನು ಕೂಗಿ ಕರೆದು ಬಂದಿರುವುದನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದರು.

ರಾತ್ರಿ ೧೦:೧೫ ಕ್ಕೆ ಹೊರಟ ರಾಜಹಂಸ ಹಾಸನ, ಸಕಲೇಶಪುರ ದಾಟಿ ಶಿರಾಡಿ ಘಟ್ಟ ಪ್ರದೇಶದ ಹದಗೆಟ್ಟ ರಸ್ತೆಯಲ್ಲಿ ಉಯ್ಯಾಲೆ ಆಟದೊಂದಿಗೆ ಗುಂಡ್ಯ ಚೆಕ್‌ಪೋಸ್ಟ್ ತಲುಪಿದಾಗ ಬೆಳಗಿನ ಜಾವ ೫:೩೦, ಆಗಿನ್ನೂ ಕತ್ತಲೆಯಾಗಿತ್ತು.

ಅಲ್ಲೇ ಇದ್ದ ಗೂಡಂಗಡಿಯಲ್ಲಿ ಬಿಸಿ ಬಿಸಿ ಚಹಾ ಕುಡಿದು ಕತ್ತಲೆಯಲ್ಲೇ ಟಾರ್ಚ್ ಬೆಳಕಿನ ಸಹಾಯದಿಂದ ನಮ್ಮ ಚಾರಣವನ್ನು ಶುರು ಮಾಡಿದೆವು, ಮಂಗಳೂರು ಕಡೆ ಹೋಗುವ ರಾಷ್ಟೀಯ ಹೆದ್ದಾರಿಯಲ್ಲಿ ಸುಮಾರು ಎರಡು ಕಿ.ಮೀ. ದೂರ ಕ್ರಮಿಸಿ ಅಡ್ಡಹೊಳೆ ಹೊಳೆ ಸೇತುವೆ ಬಳಿ ಬಂದು ಅಲ್ಲಿಂದ ಬಲಕ್ಕೆ ತಿರುಗಿ ಒಂದು ಮನೆಯ ಬಳಿ ಬಂದೆವು, ಆಗ ತಾನೆ ಚುಮು ಚುಮು ಬೆಳಕಾಗತೊಡಗಿತು ವಾಡಿಕೆಯಂತೆ ಎಲ್ಲರೂ ವೃತ್ತಾಕಾರದಲ್ಲಿ ನಿಂತು ತಮ್ಮ ತಮ್ಮ ಪರಿಚಯ ಹೇಳಿಕೊಂಡೆವು.

ಒಂಬತ್ತು ಗುಡ್ಡಕ್ಕೆ ಎರಡು ಚಾರಣ ಹಾದಿಗಳಿವೆ ಒಂದು "ಹೊಳೆ ಅಂಚಿನ" ಜಾಡು ಇನ್ನೊಂದು "ಕಣಿವೆ ಹಾದಿ" ನಾವು ಆಯ್ದುಕೊಂಡಿದ್ದು ಹೊಳೆ ಅಂಚಿನ ಜಾಡು.

ತದ ನಂತರ ಚಾರಣ ಪ್ರಾರಂಭಿಸಿದಾಗ ಬೆಳಿಗ್ಗೆ ಸಮಯ ೬:೪೦, ಕೆಲವೇ ನಿಮಿಷಗಳಲ್ಲೇ ನಾಗರೀಕ ಪ್ರಪಂಚ ಬಿಟ್ಟು ದಟ್ಟ ಅಡವಿಯೊಳಗೆ ಸಾಗಿದೆವು, ಸುಮಾರು ಒಂದೂವರೆ ಘಂಟೆ ಚಾರಣದ ನಂತರ ನಮ್ಮ ಎದುರಿಗೆ ಸಿಕ್ಕ ಒಂದು ಚಿಕ್ಕ ತೊರೆಯನ್ನು ದಾಟಿದ ಐದು ನಿಮಿಷದಲ್ಲೇ ದಾರಿ ಕವಲಾಯಿತು (೮:೧೫) ಅಲ್ಲಿ ಎಡಕ್ಕೆ ತಿರುಗಿದ ಹಾದಿಯಲ್ಲೇ ಮುಂದುವರಿದೆವು, ಆ ಹಾದಿಯಲ್ಲಿ ಕೆಲವು ನಿಮಿಷ ನಡೆದ ಮೇಲೆ ಒಂದು ವೃತ್ತಾಕಾರದ ಜಾಗದ ಬಳಿ ಬಂದೆವು, ಅಲ್ಲಿಂದ ಮುಂದೆ ಹೋಗುವ ಯಾವುದೇ ಹಾದಿ ನಮ್ಮ ಕಣ್ಣಿಗೆ ಗೋಚರಿಸಲಿಲ್ಲ ಎಲ್ಲರೂ ಅಲ್ಲೇ ನಿಂತೆವು ಇನ್ನೂ ಬರುವವರಿದ್ದರು ಮುದಾಸರ್‌ರವರು "ವಾಕಿ ಟಾಕಿ" ಮುಖಾಂತರ ಮತ್ತೊಂದು "ವಾಕಿ ಟಾಕಿ" ಇಟ್ಟುಕೊಂಡಿದ್ದ ರಫೀಕ್‌ನನ್ನು ಸಂಪರ್ಕಿಸಿ ಬೇಗ ಬರುವಂತೆ ತಿಳಿಸಿದರು, ಸ್ವಲ್ಪ ಸಮಯದಲ್ಲಿ ಎಲ್ಲರೂ ಬಂದು ಸೇರಿದರು.

ಇದಕ್ಕೂ ಮೊದಲು ಹಲವಾರು ಬಾರಿ ಬಂದಿದ್ದ ಮುದಾಸರ್‌ರವರಿಗೂ ಕೂಡ ಹಾದಿ ಕನ್ಫ್ಯೂಸ್, ಬಳಿಕ ಸಂದೀಪ್‌ ತಮ್ಮ ಬಳಿಯಿದ್ದ "GPS" ಸಾಧನವನ್ನು ಆನ್ ಮಾಡಿ ಕೊಆರ್ಡಿನೇಟ್ ಅಧಾರದ ಮೇಲೆ ಸರ್ವೆ ಭೂಪಟದಲ್ಲಿ ತಾಳೆ ಮಾಡಿ ತಾವಿರುವ ಜಾಗ ಖಾತ್ರಿಪಡಿಸಿಕೊಂಡರು, ತಪ್ಪು ಹಾದಿ ತುಳಿದಿದ್ದ ಕಾರಣ ಪುನಃ ಅದೇ ಹಾದಿಯಲ್ಲಿ ವಾಪಾಸಾಗಿ ಮತ್ತೇ ಹಾದಿ ಕವಲಾಗಿದ್ದ ಜಾಗಕ್ಕೆ ಬಂದು ನೇರ ಹಾದಿ ಹಿಡಿದು ಹೊರಟೆವು.


"ಹಾದಿಯಲ್ಲಿ ಸಿಕ್ಕ ಸುಂದರ ಅಣಬೆಗಳ ದೃಶ್ಯಾವಳಿ "

ಆರಂಭದಲ್ಲಿ ಜಿಗಣೆ ಕಾಟ ಅಷ್ಟೇನೂ ಇರಲಿಲ್ಲ, ಇಲ್ಲಿಂದ ಸುಮಾರು ಒಂದು ಗಂಟೆ ಚಾರಣದ ನಂತರ ಮತ್ತೊಂದು ಕವಲಾದ ಹಾದಿ, ಮುದಾಸರ್‌ರವರ ಸೂಚನೆ ಮೇರೆಗೆ ಬಲ ಹಾದಿಯಲ್ಲಿ ಅವರನ್ನು ಹಿಂಬಾಲಿಸಿ ಹೊರಟೆವು ಇಲ್ಲಿಂದ ಹದಿನೈದು ನಿಮಿಷದ ನಡಿಗೆಯ ನಂತರ ಕಬ್ಬಿನಾಲೆ ಹೊಳೆಯು ಅಡ್ಡ ಹೊಳೆಯನ್ನು ಸೇರುವ ಸ್ಥಳದ ಬಳಿ ಬಂದಾಗ ಸಮಯ ೧೦:೧೫, ಎಲ್ಲರೂ ಅಲ್ಲಿಯೇ ಸ್ನಾನಾದಿ ಕಾರ್ಯ ಮುಗಿಸಿ ಮತ್ತು ತಿಂಡಿ ತಿಂದು ಅನಂತರ ಚಾರಣ ಹೊರಡಲು ತೀರ್ಮಾನಿಸಿದೆವು.



ನನ್ನ ಗೆಳೆಯ ಗಜೇಂದ್ರ ಮತ್ತು ನಾನು

ದಟ್ಟ ಕಾಡಿನ ಅದೆಷ್ಟೊ ಕೊರಕಲು ಕಣಿವೆಗಳಲ್ಲಿ ಹರಿದು ಔಷದಿಯ ಗುಣ ಹೊಂದಿರುವ ಈ ಹೊಳೆ ನೀರಿನಲ್ಲಿ ಈಜಾಡಿದ ಕ್ಷಣದಲ್ಲೇ ನಮ್ಮ ಆಯಾಸವೆಲ್ಲ ಮಾಯವಾಗಿ ಮೈ ಹಗುರ ಎನಿಸಿತು, ನಂತರ ನಾನು ಮತ್ತು ಸ್ನೇಹಿತರಾದ ಗಜೇಂದ್ರ ಇಬ್ಬರೂ ಸೇರಿ ತಲಾ ಎರಡೆರಡು ಹೋಳಿಗೆ ತಿಂದು ಹಾಗೆ ಬಂಡೆಗಲ್ಲಿನ ಮೇಲೆ ಕುಳಿತೆವು, ಕೆಲವರು ನೀರನ್ನು ಬಿಸಿ ಮಾಡಿ ನೂಡಲ್ಸ್ ತಯಾರಿಸುತ್ತಿದ್ದರೆ ಕೆಲವರು MTR ನ Ready to eat ಬಿಸಿ ಮಾಡದೆ ಹಾಗೆ ಸ್ವಾಹ ಮಾಡುತ್ತಿದ್ದರು,ಅಷ್ಟೊತ್ತಿಗೆ ಎಲ್ಲರು ತಿಂಡಿ ತಿಂದು ಮುಗಿಸಿ ಹೊಳೆ ದಾಟಲು ಸನ್ನದ್ದರಾದರು ಆಗಲೇ ಸಮಯ ೧೧:೪೫ ಆಗಿತ್ತು.

ಒಬ್ಬರ ಹಿಂದೆ ಒಬ್ಬರಂತೆ ಕಬ್ಬಿನಾಲೆ ಹೊಳೆ ದಾಟಿ ಅನಂತರ "ಅಡ್ದಹೊಳೆ" ಹೊಳೆ ಅಂಚಿನಲ್ಲೇ ಚಾರಣ ಹೊರಟೆವು ಸುಮಾರು ಹದಿನೈದು ನಿಮಿಷಗಳ ಬಳಿಕ ಹಾದಿ ಕವಲಾಯ್ತು ನಾವು ಎಡಹಾದಿಯಲ್ಲೇ ಮುಂದುವರಿದೆವು ನನ್ನ ಪ್ರಕಾರ ಬಲ ಹಾದಿ ಹೊಳೆಗೆ ಸೇರುತ್ತಿತ್ತೇನೊ?.

ಮದ್ಯಾಹ್ನ ೧೨:೩೫ ರ ಹೊತ್ತಿಗೆ ಅಲ್ಲೊಂದು ಸಣ್ಣ ತೊರೆ ಎದುರಾಯ್ತು ಅದನ್ನು ದಾಟಿ ನಡೆದೆವು ಮತ್ತೆ ಹದಿನೈದು ನಿಮಿಷಗಳ ಬಳಿಕ ಅಡ್ಡಹೊಳೆಗೆ ಸೇರುತ್ತಿದ್ದ ಮತ್ತೊಂದು ತೊರೆ ದಾಟಿ ಹೊಳೆ ಅಂಚಿನಲ್ಲೇ ಸುಮಾರು ಒಂದೂವರೆ ತಾಸು ಚಾರಣ ಮಾಡಿದೆವು ಆಗಲೇ ನನ್ನ ಗಡಿಯಾರದ ಮುಳ್ಳು ಮದ್ಯಾಹ್ನ ೨:೧೫ ತೋರಿಸುತ್ತಿತ್ತು.


"ಬಸವನ ಹುಳು"



ತುಂಬ ದೂರ ನಡೆದು ಸಾಕಷ್ಟು ಆಯಾಸವಾಗಿದ್ದರಿಂದ ಹೊಟ್ಟೆ ಬೇರೆ ಹಸಿವಾಗುತಿತ್ತು,
ಅಲ್ಲೆ ಹೊಳೆ ದಂಡೆಯ ಬಳಿ ಕುಳಿತು ಊಟ ಮುಗಿಸಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದೆವು, ಬಳಿಕ ಚಾರಣ ಪ್ರಾರಂಭಿಸಿದೆವು ಎಲ್ಲೆಂದರಲ್ಲಿ ಜಿಗಣೆಗಳು ಕಾಲನ್ನು ಮುತ್ತಿಕೊಂಡು ರಕ್ತ ಹೀರತೊಡಗಿದವು ಅಲ್ಲಲ್ಲೇ ಉಪ್ಪು ಸವರಿಕೊಂಡು ಜಿಗಣೆಗಳು ಸ್ವಲ್ಪ ಸಮಯ ಹತ್ತಿರ ಬರದಂತೆ ನೋಡಿಕೊಳ್ಳುತಿದ್ದೆವು, ಇಲ್ಲಿಂದ ಸರಿ ಸುಮಾರು ಎರಡು ತಾಸು ಹೊಳೆ ಅಂಚಿನಲ್ಲೇ ಚಾರಣ ಸವೆಸಿ ಎದುರಿಗೆ ಸಿಕ್ಕ ಒಂದು ದೊಡ್ಡ ಹಳ್ಳದಲ್ಲಿ ತುಂಬಾ ಜಾಗರೂಕತೆಯಿಂದ ಇಳಿದೆವು ಆ ಹಳ್ಳದ ನೀರು ಹೊಳೆಗೆ ಸೇರುತ್ತಿತ್ತು, ಆ ಹಳ್ಳದ ಮುಖೇನ ಹೊಳೆಯಲ್ಲಿನ ಸಮತಟ್ಟಾದ ಒಂದು ಬಂಡೆಗಲ್ಲಿನ ಮೇಲೆ ಎಲ್ಲರು ಬಂದು ಕುಳಿತೆವು.


ಸಂಜೆ ೫:೧೫ ಆದ್ದರಿಂದ ಮುದಾಸರ್‌ರವರು ಇವತ್ತಿನ ಚಾರಣವನ್ನು ಮುಕ್ತಾಯಗೊಳಿಸಿ ಇಲ್ಲೇ ವಾಸ್ತವ್ಯ ಹೂಡೋದು ಅಂತ ತಿಳಿಸಿದರು, ಆ ಜಾಗ ಎಲ್ಲರಿಗೂ ಇಕ್ಕಟ್ಟಾಗಿತ್ತು ಟೆಂಟ್ ಹಾಕುವುದಕ್ಕೂ ಸ್ವಲ್ಪ ತೊಂದರೆ ಅಂತಾ ಯೋಚಿಸುವಷ್ಟರಲ್ಲಿ ನಮ್ಮ ಗುಂಪಿನ ಕೆಲವು ಸಹ ಚಾರಣಿಗರು ಸನಿಹದಲ್ಲೇ ಕಂಡ ಬೇರೊಂದು ಸಮತಟ್ಟಾದ ಬಂಡೆಗಲ್ಲಿನ ಮೇಲೆ ಹೋಗಿ ನಮಗೂ ಕೂಡ "ಬನ್ನಿ ಎನ್ನುವಂತೆ" ಸನ್ನೆ ಮಾಡಿ ಕರೆದರು, ಅಲ್ಲಿಗೆ ಹೋಗಬೇಕೆಂದರೆ ಹೊಳೆ ಅಂಚಿನ ದಿಬ್ಬ ದಾಟಿ ಹೋಗಬೇಕು, ಕೊನೆಗೂ ಅಲ್ಲಿಗೆ ಹೋಗೋದೆ ವಾಸಿ ಎಂದುಕೊಂಡು ನಾನು, ಗಜೇಂದ್ರ ಮತ್ತು ಸಂತೋಷ್ ನಮ್ಮೆಲ್ಲ ಲಗ್ಗೇಜುಗಳನ್ನು ಹೊತ್ತುಕೊಂಡು ದಿಬ್ಬ ಹತ್ತಲು ಹೊರಟೆವು ಪೊದೆಯಂತ ಜಾಗದಲ್ಲಿ ಕುಳಿತು ಬೇರು ಬಿಳಲುಗಳ ಸಹಾಯದಿಂದ ಹರಸಾಹಸಪಟ್ಟು ಕೊನೆಗೂ ಆ ಜಾಗ ತಲುಪಿದೆವು.

ಮುಂದೇನು ಮಾಡೋದು...?

ಬಾಕಿ ಉಳಿದಿರುವ ಕೆಲಸ ಅಂದರೆ ಕತ್ತಲಾಗುವ ಮುಂಚೆ ಟೆಂಟ್ ಹಾಕಿ ಮ್ಯಾಗಿ ನೂಡಲ್ಸ್ ಸಿದ್ದಪಡಿಸಿ ತಿಂದು ಮಲಗೋದು, ನಾವಿದ್ದ ಜಾಗ ಹೊಳೆಯ ಮದ್ಯಭಾಗದಲ್ಲಿ ಇದ್ದುದರಿಂದ ಇನ್ನೂ ಸ್ವಲ್ಪ ಬೆಳಕಿತ್ತು, ಸಂಪೂರ್ಣ ಕತ್ತಲಾಗುವುದರೊಳಗೆ ಟೆಂಟ್ ನಿಲ್ಲಿಸುವ ಕಾತುರದಿಂದ ನಾನು ಮತ್ತು ಗಜೇಂದ್ರರವರು ಸೇರಿ ಸುಮಾರು ಹದಿನೈದು ನಿಮಿಷದೊಳಗೆ ಟೆಂಟ್ ನಿಲ್ಲಿಸುವ ಕೆಲಸ ಪೂರ್ತಿಗೊಳಿಸಿದೆವು ಬಳಿಕ ಸಂಪೂರ್ಣ ಕತ್ತಲಾಯಿತು.



"ನಮ್ಮ ಶಿಭಿರ"


ತದನಂತರ ನಮ್ಮ ಬೆನ್ನುಚೀಲದಲ್ಲಿದ್ದ ಅಲ್ಯುಮಿನಿಯಂ ಲೋಹದ ಒಲೆಯನ್ನು ತೆಗೆದು ಅದರ ಒಳಗೆ ಕರ್ಪೂರದಂತ ಉರಿಯುವ ಮಾತ್ರೆ ಇಟ್ಟು ಬೆಂಕಿ ಹಚ್ಚಿ ಪಾತ್ರೆ ಇಟ್ಟು ಕೇವಲ ಹತ್ತು ನಿಮಿಷದಲ್ಲೇ ಬಿಸಿ ಬಿಸಿ ಮ್ಯಾಗಿ ನೂಡಲ್ಸ್ ಸಿದ್ದಪಡಿಸಿದೆವು, ಬಳಿಕ ಗಜೇಂದ್ರ ಸಂತೋಷ್ ಮತ್ತು ನಾನು ಒಟ್ಟಿಗೆ ಕುಳಿತು ನೂಡಲ್ಸ್ ತಿಂದು ಮುಗಿಸಿದೆವು,
ಶಿಭಿರಾಗ್ನಿ ಹೊತ್ತಿಸಿ ಸ್ವಲ್ಪ ಹೊತ್ತು ಅದರ ಮುಂದೆ ಕುಳಿತು ಮೈ ಬೆಚ್ಚಗೆ ಮಾಡಿಕೊಳ್ಳೊಣ ಅಂದ್ರೆ
ಆ ನಿತ್ಯಹರಿದ್ವರ್ಣ ಕಾಡಿನಲ್ಲಿ ಅದೂ ಆ ಹೊತ್ತಿನಲ್ಲಿ ಒಣಗಿದ ಸೌದೆ ಎಲ್ಲಿಂದ ಬರಬೇಕು?
ಆಗಲೇ ಸಮಯ ರಾತ್ರಿ ೭:೩೦ ಆದ್ದರಿಂದ ಮಲಗಲು ನಿರ್ಧರಿಸಿ ನಾವು ಟೆಂಟ್‌ನೊಳಗೆ ನುಸುಳಿ ನಿದ್ರೆಗೆ ಶರಣಾದೆವು.

ಗಜೇಂದ್ರರವರು ಮಲಗಿದ ಹತ್ತು ನಿಮಿಷದಲ್ಲೇ ಗೊರಕೆ ಹೊಡೆಯಲು ಶುರುಮಾಡಿದರು ನನಗೆ ಏಕೋ ನಿದ್ರೆ ಹತ್ತಲಿಲ್ಲ, ಇನ್ನೊಂದೆಡೆ ಭೋರ್ಗರೆಯುತ್ತಿದ್ದ ನದಿ ನೀರಿನ ಶಬ್ದ, ಸ್ವಲ್ಪ ಯಾಮಾರಿದ್ರೂ ಕೂಡ ಟೆಂಟ್ ಸಮೇತ ನಾವು ಮೂವರು ನದಿಯೊಳಗೆ ಬೀಳುವ ಅವಕಾಶ ಕೂಡ ಹೆಚ್ಚಾಗಿತ್ತು, ನಮ್ಮ ಟೆಂಟ್ ಹೊರಗಿದ್ದ ಆ ಮೂವರು ಸಹಚಾರಣಿಗರಿಗೂ ಕೂಡ ಅದೇ ಭಯ ಇತ್ತೊ ಏನೋ? ಅವರು ಕೂಡ ತುಂಬಾ ಹೊತ್ತಿನ ತನಕ ಮಾತನಾಡುತ್ತಲ್ಲೇ ಇದ್ದರು, ಕ್ರಮೇಣ ನನಗೆ ಸ್ವಲ್ಪ ನಿದ್ರೆ ಬರತೊಡಗಿತು.

ಪುನಃ ಮದ್ಯರಾತ್ರಿಯಲ್ಲಿ ನನಗೆ ಎಚ್ಚರವಾಯಿತು ಭೋರ್ಗರೆಯುತ್ತಿದ್ದ ನದಿ ನೀರಿನ ಶಬ್ದ ಬಿಟ್ಟರೆ ಮಿಕ್ಕೆಲ್ಲ ಕಾಡಿನ ನೀರವ ಮೌನ ನನ್ನ ಮನದಲ್ಲಿ ಕೆಲವು ಅಲೋಚನೆಗಳು ಯಾವ ಪ್ರಾಣಿ ಪ್ರಾಣ ಭಯದಿಂದ ಎಲ್ಲಿ ಅಡಗಿ ಕುಳಿತಿದೆಯೋ?

ಹುಲಿ,ಚಿರತೆಗಳು ಈ ಸರಿ ರಾತ್ರಿಯಲ್ಲಿ ಬೇಟೆಗಾಗಿ ಎಲ್ಲಿ ಹೊಂಚು ಹಾಕಿ ಕುಳಿತಿವೆಯೊ?

ಅಕಸ್ಮಾತ್ ಯಾವುದಾದರು ಪ್ರಾಣಿ ನಮ್ಮ ಟೆಂಟ್ ಬಳಿ ಬಂದರೆ?

ನನ್ನ ಮನಸ್ಸಿನಲ್ಲಿ ಇಣುಕಾಡುತ್ತಿದ್ದ ಬರಿ ಯೋಚನೆಗಳಷ್ಟೇ ಹೊರತು, ಭಯವಂತೂ ಇರಲಿಲ್ಲ ಆಲ್ಲದೇ ಅಂತದಕ್ಕೆಲ್ಲ ಧೃತಿಗೆಡುವ ಮನಸ್ಸು ನನ್ನದಲ್ಲ.

ಮತ್ತೆ ನಿದ್ರೆಗೆ ಜಾರಿದ್ದು ಗೊತ್ತಾಗಲಿಲ್ಲ ನಂತರ ಎಚ್ಚರವಾದಾಗ ಬೆಳಿಗ್ಗೆ ೬:೦೦ ಗಂಟೆ ಆಗಲೇ ಅತ್ತ ಗುಂಪಿನವರು ಎದ್ದು ಹೊರಡಲು ಸಿದ್ದವಾಗುತ್ತಿದ್ದರು, ನಾವು ಟೆಂಟ್‌ನಿಂದ ಹೊರಬಂದು ಟೆಂಟ್ ಬಿಚ್ಚಿಡುವುದು ಮೊದಲ ಕೆಲಸವಾಗಿತ್ತು ಆ ಕೆಲಸವನ್ನು ನಾವು ಒಂದರ್ಧ ಘಂಟೆಯಲ್ಲಿ ಮುಗಿಸಿ ಬೆನ್ನುಚೀಲವನ್ನು ಹೆಗಲಿಗೇರಿಸಿ ಚಾರಣ ಹೊರಟಾಗ ಸಮಯ ಬೆಳಿಗ್ಗೆ ಏಳಾಗಿತ್ತು.



"ಹೊಳೆ ಅಂಚಿನ ಜಾಡಿನಲ್ಲಿ..."

ಹೊಳೆ ದಂಡೆಯಲ್ಲಿ ಜಾರುತ್ತಿದ್ದ ಕಲ್ಲು ಬಂಡೆಯ ಮೇಲೆ ಹರ ಸಾಹಸ ಮಾಡಿ ಸ್ವಲ್ಪ ದೂರ ಚಾರಣ ಸವೆಸಿವೆವು ನಡುವೆ ಹಲವು ಬಾರಿ ಪಾಚಿಗಟ್ಟಿದ ಬಂಡೆಯ ಕಾಲಿಟ್ಟು ಜಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದುಂಟು, ಹೊಳೆಅಂಚಿನಲ್ಲಿ ಸ್ವಲ್ಪ ದೂರ ಸಿಕ್ಕ ಕಾಲುಹಾದಿಯಲ್ಲಿ ನಡೆದು ನಂತರ ಹೊಳೆ ದಾಟಲು ಎಲ್ಲರಿಗೂ ಮುದಾಸರ್ ಸೂಚಿಸಿದರು ಅದಕ್ಕೂ ಮುಂಚೆ ಎಲ್ಲರಿಗೂ ತಿಂಡಿ ತಿನ್ನಲು ಹೇಳಿದ್ರು, ನಮ್ಮ ಬಳಿ ಇದ್ದದ್ದು ಕೇವಲ ಒಂದು ಮ್ಯಾಗಿ ಪೊಟ್ಟಣ ಬಿಟ್ಟರೆ ಸ್ವಲ್ಪ ಕುರುಕಲು ತಿಂಡಿ ಅಷ್ಟೆ, ಮ್ಯಾಗಿ ಮಾಡಲು ಸಮಯವಿಲ್ಲದಿದ್ದರಿಂದ ಕುರುಕಲು ತಿಂಡಿ ತಿಂದು ಹಸಿವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಂಡೆವು.

ಬಳಿಕ ಹೊಳೆದಾಟುವ ಜಾಗ ಗೊತ್ತು ಮಾಡಿಕೊಂಡು ಒಬ್ಬನ ನಡುವಿಗೆ ಹಗ್ಗ ಕಟ್ಟಿ ನೀರಿನ ಆಳ ಪರೀಕ್ಷೆ ಮಾಡಲು ಕೈಗೆ ಒಂದು ಕೋಲು ಕೊಟ್ಟು ನೀರಿಗೆ ಇಳಿಸಿದರು ಆತ ಆಳ ಮತ್ತು ಸೆಳೆತವನ್ನು ಪರೀಕ್ಷೆ ಮಾಡಿಕೊಂಡು ಮುಂದೆ ಹೋಗುತ್ತಿದ್ದರೆ ಮುದಾಸರ್‌ರವರು ಕೊಚ್ಚಿಹೋಗದಂತೆ ಹಗ್ಗವನ್ನು ಬಿಗಿಯಾಗಿ ಹಿಡಿದು ನಿಂತಿದ್ದರು, ನಂತರ ನಮ್ಮ ಕೆಲವು ಚಾರಣಿಗರು ಅದೇ ಹಗ್ಗದ ಸಹಾಯದಿಂದ ಒಬ್ಬೊಬ್ಬರಾಗಿ ಸುರಕ್ಷತಾ ದೃಷ್ಟಿಯಿಂದ ಅಂತರ ಕಾಯ್ದುಕೊಂಡು ಎಲ್ಲರ ರಕ್ಷಣೆಗೆ ನೀರಿನ ಸೆಳೆತದ ನಡುವೆಯೂ ನಿಂತರು, ನಂತರ ನಮ್ಮ ಬೆನ್ನುಚೀಲಗಳನ್ನು (Backpack) ಒಬ್ಬರಿಂದ ಒಬ್ಬರ ಕೈಗೆ ಕೊಟ್ಟು ಆ ದಡಕ್ಕೆ ಸಾಗಿಸಿ ನಂತರ ಮಾನವ ಸರಪಳಿ ಮಾದರಿಯಲ್ಲಿ ಎಲ್ಲರೂ ಸುರಕ್ಷಿತವಾಗಿ ಆ ದಡ ತಲುಪಿದೆವು.

ಮತ್ತೇ ಬಲದಂಡೆಯಲ್ಲಿ ಸುಮಾರು ಹದಿನೈದು ನಿಮಿಷಗಳ ಕಾಲ ನಡೆದ ಮೇಲೆ ಮುದಾಸರ್‌ರವರು ಎಲ್ಲರನ್ನು ಅಲ್ಲೇ ನಿಲ್ಲುವಂತೆ ಹೇಳಿ ದಾರಿ ಹುಡುಕಲು ಕೈನಲ್ಲಿ ಮಚ್ಚು ಹಿಡಿದು ಕಾಡೊಳಗೆ ಹೊರಟರು ಒಂದಿಬ್ಬರು ಅವರನ್ನು ಹಿಂಬಾಲಿಸಿ ಹೊರಟರು.

ಒಂದರ್ಧ ಘಂಟೆ ನಂತರ ವಾಪಾಸ್ ಬಂದು ಪುನಃ ಹೊಳೆ ದಾಟಿ ಆ ದಡ ಸೇರುವಂತೆ ಸೂಚಿಸಿದರು,ಸುಲಭವಾಗಿ ದಾಟಬಹುದಾದಂತ ಮತೊಂದು ಜಾಗ ಗೊತ್ತು ಮಾಡಿಕೊಂಡು ಈ ಹಿಂದೆ ದಾಟಿದ ಮಾದರಿಯಲ್ಲೇ ಪುನಃ ಹೊಳೆ ದಾಟಿ ದಡ ಸೇರಿದೆವು, "ಇದೇ ನೀರು ಸಿಗುವ ಕೊನೆ ಜಾಗ" ಎಂದು ಮುದಾಸರ್ ಹೇಳಿದ್ರು ತಕ್ಷಣವೇ ಖಾಲಿಯಾಗಿದ್ದ ಬಾಟೆಲ್‌ನಲ್ಲಿ ನೀರು ತುಂಬಿಸಿಕೊಂಡು ಮುನ್ನಡೆದವು.



"ಪಯಣದ ಹಾದಿಯಲ್ಲಿ ನಾನು."

ನಂತರ ಹೊಳೆ ಅಂಚನ್ನು ಬಿಟ್ಟು ದುರ್ಗಮ ಕಾಡಿನಲ್ಲಿ ಸುಮಾರು ೮೦ ಡಿಗ್ರಿ ಕೋನದಲ್ಲಿದ್ದ ಕಡಿದಾದ ಬೆಟ್ಟ ಹತ್ತಲು ಶುರುಮಾಡಿದೆವು ಸೂರ್ಯನ ಕಿರಣಗಳೇ ತಾಕದ ಈ ಜಟಿಲ ಕಾನನದ ತಂಪಾದ ವಾತಾವರಣದಲ್ಲಿಯೂ ಕೂಡ ಬೆವರು ಕಿತ್ತು ಬರುತಿತ್ತು, ಬೆಳಗಿನ ಉಪಹಾರ ಬರೀ ಕುರುಕಲು ತಿಂಡಿ ತಿಂದಿದ್ದ ಕಾರಣ ಮೈನಲ್ಲಿದ್ದ ಶಕ್ತಿ ಹುದುಗಿಹೋಗಿ ಮುನ್ನಡೆಯುವುದು ಅಸಾದ್ಯವೆನಿಸುತಿತ್ತು ಆದರೂ ಧೃತಿಗೆಡದೆ ಛಲದಂಕಮಲ್ಲನಂತೆ ಹೂಂಕರಿಸಿ ಹೆಜ್ಜೆ ಹಾಕಿದೆ, ನನ್ನ ಪಾಡು ಇದಾದರೆ ನನ್ನ ಸ್ನೇಹಿತ ಗಜೇಂದ್ರರವರು ಟೆಂಟ್ ಸಮೇತ ಇದ್ದ ಆ ಯಮಗಾತ್ರದ ಬೆನ್ನು ಚೀಲ ಹೊತ್ತುಕೊಂಡು ಹಾದಿನೇ ಇಲ್ಲದ ಆ ಕಡಿದಾದ ಬೆಟ್ಟವನ್ನು ಅರೋಹಣ ಮಾಡುತ್ತಿದದ್ದು ನೆನೆಸಿಕೊಂಡರೆ ಅವರೂ ನನಗಿಂತ ವಿಭಿನ್ನ.

ಬಹಳ ತೇವದಿಂದ ಕೂಡಿದ್ದ ಮಣ್ಣು, ಕಾಲಿಟ್ಟ ಕಡೆಯೆಲ್ಲಾ ಜಾರುತಿತ್ತು ಅಂತಹ ಸಮಯದಲ್ಲಿ ಆಪತ್ಬಾಂದವರಂತೆ ನಮ್ಮನ್ನು ರಕ್ಷಿಸಿದ್ದು ಮರದ ಕಾಂಡಗಳು ಮತ್ತು ಸಣ್ಣ ಪುಟ್ಟ ಗಿಡಗಳು ಸ್ವಲ್ಪ ಎಚ್ಚರ ತಪ್ಪಿದರೂ ಚೆಂಡಿನಂತೆ ಉರುಳುತ್ತಿದದ್ದು ಖಂಡಿತ, ಹರಸಾಹಸದಿಂದ ಹತ್ತುತಿದ್ದ ನಮ್ಮ ಮುಂದಿದ್ದ ಚಾರಣಿಗರು ಒಮ್ಮೊಮ್ಮೆ ಕಲ್ಲಿನ ಮೇಲೆ ಕಾಲಿಡುವ ಸಂದರ್ಭದಲ್ಲಿ ಕಲ್ಲುಗಳು ಜರುಗಿ ಉರುಳಿಕೊಂಡು ನಮ್ಮತ್ತ ಬರುವಾಗ ತಪ್ಪಿಸಿಕೊಳ್ಳುವುದೇ ಒಂದು ದೊಡ್ಡ ಸಾಹಸವಾಗಿತ್ತು , ನಮ್ಮ ಮನೆಯವರೇನಾದರೂ "ಈ ದೃಶ್ಯವನ್ನ ನೋಡಿದಿದ್ದರೆ ನಮಗೆ ಅರ್ಚನೆ ಮಹಾಮಂಗಳಾರತಿ ಒಟ್ಟಿಗೆ ಆಗುತಿದ್ದವೇನೊ?"

ಕೊನೆಗೂ ಕಷ್ಟಪಟ್ಟು ಹೇಗೊ ಆ ಬೆಟ್ಟದ ಅಂಚನ್ನು ತಲುಪಿದಾಗ ನಮ್ಮ ಎದುರಿಗೆ ಕಂಡಿದ್ದು ಅಲ್ಲೊಂದು ಅಡ್ಡಲಾಗಿ ಹಾದುಹೋಗಿದ್ದ ಕಾಲು ಹಾದಿ, ಬಳಿಕ ನಮ್ಮ ಬಲದಿಕ್ಕಿಗೆ ತಿರುಗೆ ಆ ಕಾಲುಹಾದಿಯಲ್ಲೇ ಸ್ವಲ್ಪ ಹೊತ್ತು ಚಾರಣ ಮುಂದುವರಿಸಿ ಕಾಡನ್ನು ಬಿಟ್ಟು ಬೋಳುಗುಡ್ಡಕ್ಕೆ ಬಂದಾಗ ಸಮಯ ಮದ್ಯಾಹ್ನ ೧೨:೦೦ ಆಗಿತ್ತು, "ಒಂಬತ್ತು ಗುಡ್ಡ ಅಂದರೆ ಒಂಬತ್ತು ಉಬ್ಬುಗಳಿರುವ ಬೆಟ್ಟಗಳು"


ಮೊದಲ ಹಂತದ ಬೋಳುಗುಡ್ಡದಲ್ಲಿ ಸ್ವಲ್ಪ ಹೊತ್ತು ಕುಳಿತು ದಣಿವಾರಿಸಿಕೊಂಡು ಮತ್ತೇ ಚಾರಣಕ್ಕೆ ಚಾಲನೆ ಕೊಟ್ಟೆವು, ಮೊದಲ ಹಂತದ ಗುಡ್ಡದಿಂದ ನೋಡಿದಾಗ ಎರಡನೇ ಹಂತದ ಹೆಚ್ಚೆಂದರೆ ಮೂರನೇ ಹಂತದ ಗುಡ್ಡದ ದರ್ಶನವಾಗುತ್ತದೆ. ಪೂರ್ತಿ ಶಿಖರದ ತುದಿ ಕಾಣಬೇಕೆಂದರೆ ಎಂಟನೆ ಹಂತದ ಗುಡ್ಡದ ತುದಿ ತಲುಪಿದಾಗ ಮಾತ್ರ ಸಾದ್ಯ, ಗಂಟಲು ಒಣಗತೊಡಗಿತು ಬಾಟೆಲ್‌ನಲ್ಲಿದ್ದ ನೀರು ಕೂಡ ಖಾಲಿಯಾಗಿ ನಡೆಯುವ ಉತ್ಸಾಹ ಕುಂದತೊಡಗಿತು.





"ಸುಂದರ ಮನಮೋಹಕ ದೃಶ್ಯ"


ಸತತ ಎರಡು ತಾಸಿನ ಚಾರಣದ ಬಳಿಕ ಎಂಟನೆಯ ಹಂತದ ಗುಡ್ದವನ್ನು ತಲುಪಿದೆವು ಅಲ್ಲಿಂದಲೇ ಒಂಬತ್ತು ಗುಡ್ದದ ತುದಿ ಕಾಣುತಿತ್ತು ನಂತರ ಕೆಲವೇ ನಿಮಿಷಗಳಲ್ಲಿ ಒಂಬತ್ತು ಗುಡ್ಡದ ತುದಿ ತಲುಪಿದೆವು ಆಗ ಸಮಯ ಮದ್ಯಾಹ್ನ ಎರಡೂವರೆ ಗಂಟೆ ಆಗಿತ್ತು.

ಸುತ್ತಲೂ ಕಣ್ಣು ಹಾಯಿಸಿದಷ್ಟು ಮುಗಿಲು ಮುಟ್ಟುವ ಗಿರಿಶೃಂಗಗಳು, ಕಣಿವೆ ಕೊತ್ತಲುಗಳು, ಜಟಿಲ ಕಾನನದ ಕುಟಿಲ ಪಥಗಳಲಿ ಹರಿದು ಜಲಪಾತಗಳಾಗಿ ಬೀಳುವ ಅದೆಷ್ಟೋ ಸುಂದರ ದೃಶ್ಯ ನೋಟಗಳು ನನ್ನ ಮನದಲ್ಲಿ ಅಚ್ಚಳಿಯದೇ ಕುಳಿತುಬಿಟ್ಟಿವೆ, ಹಿತವಾಗಿ ಬೀಸುತಿದ್ದ ತಂಗಾಳಿಯಲ್ಲಿ ಸುತ್ತಮುತ್ತಲಿನ ವನಸಿರಿಯ ಸೌಂದರ್ಯ ಸವಿಯುತ್ತ ಸ್ವಲ್ಪ ಹೊತ್ತು ವಿಶ್ರಾಂತಿಗೋಸ್ಕರ ಕುಳಿತೆವು, ನಮ್ಮ ಬೆನ್ನುಚೀಲದಲ್ಲಿದ್ದ ತಿಂಡಿಗಳು ಆಗಲೇ ಖಾಲಿಯಾಗಿ ಹೊಟ್ಟೆ ತುಂಬಾ ಹಸಿವಾಗುತಿತ್ತು ಕುಡಿಯಲು ನೀರು ಸಹ ಸಿಗದೇ ಇರುವಂತ ಪರಿಸ್ಥಿತಿ ನಮ್ಮೆದುರಿಗೆ, ಇದೆಲ್ಲರ ನಡುವೆಯೂ ಮನಸಿನಲ್ಲಿ ಏನೋ ಸಾಧಿಸಿದ ತೃಪ್ತಿ ಒಂದು ಕಡೆ.



"ಶಿಖರದ ತುದಿಯಿಂದ ಕಾಣಿಸಿದ ಶಿರಾಡಿ ಘಟ್ಟದ ಗಿರಿಶೃಂಗಗಳು"

ಸಹ ಚಾರಣಿಗರಲ್ಲಿ ಕೆಲವರು mTR ನ Raedy to eat ಪಾಕೆಟ್ ತೆಗೆದು ತಿನ್ನುತ್ತಿದ್ದರೆ ಇನ್ನೂ ಕೆಲವರು ಬಿಸ್ಕತ್ತುಗಳನ್ನು ತಿನ್ನುತ್ತಿದ್ದರು,

ನಾನೇನು ತಿನ್ನೋದು?

ಅಕಾಶವನ್ನೇ ದಿಟ್ಟಿಸಿ ನೋಡುತ್ತ ಹಾಗೆ ಹುಲ್ಲಿನ ಮೇಲೆ ಒರಗಿದ್ದೆ ಅಷ್ಟರಲ್ಲಿ ಗಜೇಂದ್ರರವರು,

ಮೋಹನ್‌ ಬಿಸ್ಕತ್‌ ತಿಂತೀರಾ? ಅಂದ್ರು ತಕ್ಷಣ ಎದ್ದು ಕುಳಿತೆ,

ಸುಮ್ಮನೆ ಕುಳಿತಿದ್ದ ಅವರಿಗೆ ಸಹ ಚಾರಣಿಗರು ಕೊಟ್ಟ ಬಿಸ್ಕತ್ತನ್ನು ನನಗೂ ಸ್ವಲ್ಪ ಕೊಟ್ಟರು ತಿನ್ನುತ್ತ ಕುಳಿತೆ,

ಅಷ್ಟರಲ್ಲಿ ಸಂತೋಷ್‌, ನನ್ನ ಬಳಿ ಒಂದು MTR ಬಿಸಿಬೇಳೆ ಬಾತ್‌ ಪಾಕೆಟ್ ಉಳಿದಿದೆ ತಗೊಳ್ಳಿ ಅಂತ ಕೊಟ್ಟರು,

ಕೊಟ್ಟಿದ್ದೆ ತಡ ನಾನು ಮತ್ತು ಗಜೇಂದ್ರ ಇಬ್ಬರು ಸೇರಿ ಕ್ಷಣಾರ್ದದಲ್ಲಿ ಮುಗಿಸಿದ ಮೇಲೆ ಹಸಿವು ಕೊಂಚಮಟ್ಟಿಗೆ ಕಡಿಮೆಯಾಯಿತು ಬಳಿಕ ಸಂತೋಷ್‌ಗೆ ಪ್ರೀತಿಪೂರ್ವಕ ವಂದನೆ ತಿಳಿಸಿ, ನಿಸರ್ಗದ ಮಡಿಲಿನ ಭವ್ಯ ವಿಹಂಗಮ ನೋಟವನ್ನು ನನ್ನ ಕ್ಯಾಮೆರ ಕಣ್ಣಲ್ಲಿ ಸೆರೆಹಿಡಿದು ಹೊರಡಲು ಸಿದ್ದವಾದೆವು.


ಸುಮಾರು ಸಮಯ ೩:೪೦ ಕ್ಕೆ ಹೊರಟ ನಾವು ಸ್ವಲ್ಪ ಹೊತ್ತಿನಲ್ಲೇ ಜೀಪ್ ಹಾದಿ ತುಳಿದಿದ್ದೆವು ಅಷ್ಟೊತ್ತಿಗಾಗಲೇ ಮಳೆರಾಯ ಬಾನಿಂದ ಇಳಿದು ಭುವಿಯನ್ನು ಸ್ಪರ್ಶಿಸತೊಡಗಿದ, ಆ ಸಮಯದಲ್ಲಿ ಮಳೆಯಲ್ಲೇ ನೆನೆದು ಚಾರಣ ಹೊರಟೆವು ಹಾದಿಯುದ್ದಕ್ಕೂ ಆನೆ ಲದ್ದಿ ಮತ್ತು ಕಾಡೆಮ್ಮೆಗಳ ಗೊರಸಿನ ಗುರುತು ಬಿಟ್ಟರೆ ಇನ್ಯಾವ ನರಪಿಳ್ಳೆಯ ಸುಳಿವು ಕೂಡ ಇರಲಿಲ್ಲ.

"ಹುಲಿ ಹೆಜ್ಜೆ"

ಒಂದು ಕಡೆ ಮಾತ್ರ ಹುಲಿಯ ಹೆಜ್ಜೆಯ (ಪಗ್ ಮಾರ್ಕ್) ಗುರುತು ನನ್ನ ಕಣ್ಣಿಗೆ ಬಿದ್ದಿದ್ದು ಸ್ವಲ್ಪ ಸಮಾದಾನದ ಸಂಗತಿ ಏಕೆಂದರೆ ಹುಲಿಯಂತೂ ಕಣ್ಣಿಗೆ ಬೀಳಲಿಲ್ಲ ಅದರ ಹೆಜ್ಜೆಯ ಗುರುತಾದರೂ ಕಣ್ಣಿಗೆ ಬಿತ್ತಲ್ಲ ಅಂತಾ... ಕೆಲವು ಸಹ ಚಾರಣಿಗರಿಗೂ ಕೂಗಿ ಕರೆದು ತೋರಿಸಿದೆ.

ಕ್ರಮೇಣ ಸ್ವಲ್ಪ ಕತ್ತಲಾಯಿತು ಲಕ್ಷ್ಮಿ ಎಸ್ಟೇಟ್ ಸೇರಬೇಕೆಂದರೆ ನಾವು ಇನ್ನೂ ಸುಮಾರು ೩ ಕಿ.ಮೀ. ಹಾದಿ ಸವೆಸಬೇಕಿತ್ತು ಬಳಿಕ ಟಾರ್ಚ್ ಬೆಳಕಿನ ಸಹಾಯದಿಂದ ಹಾದಿ ಸವೆಸುತಿದ್ದೆವು, ಈ ಹಾದಿಯುದ್ದಕ್ಕೂ ವಿಪರೀತ ಜಿಗಣೆ ಕಾಟ ಕಿತ್ತು ಹಾಕಿ ಮುನ್ನಡೆಯುವುದೇ ಒಂದು ಸಾಹಸವಾಗಿತ್ತು.

ಕೊನೆಗೆ ಸಂಜೆ ೬:೩೦ ರ ಹೊತ್ತಿಗೆ ಲಕ್ಷ್ಮಿ ಎಸ್ಟೇಟ್ ತಲುಪಿದೆವು ಅಷ್ಟೊತ್ತಿಗಾಗಲೇ ಚಿಕ್ಕ ಬಸ್ಸೊಂದು ಬಂದು ನಮಗಾಗಿ ಕಾಯುತಿತ್ತು, ಎಸ್ಟೇಟ್‌ನ ಕೊಳಾಯಿಯಲ್ಲಿ ಬರುತಿದ್ದ ನೀರನ್ನು ಮನಸ್ಸೋ ಇಚ್ಚೆ ಕುಡಿದ
( ಸುಮಾರು ಏಳು ಗಂಟೆಯ ಬಳಿಕ ) ನಂತರ ಹೋದ ಜೀವ ಮತ್ತೆ ಬಂದಂತ್ತಾಯಿತು, ಮೊದಲೇ ಜಿಗಣೆಯಿಂದ ಕಚ್ಚಿಸಿಕೊಂಡು ರಕ್ತಸಿಕ್ತವಾಗಿದ್ದ ಕಾಲುಗಳನ್ನು ಕೊಳಾಯಿ ನೀರಿನಲ್ಲಿ ತೊಳೆದು ಬಟ್ಟೆ ಬದಲಾಹಿಸಿಕೊಂಡು ರಥವೇರಿ (ಬಸ್‌ನಲ್ಲಿ) ಕುಳಿತಾಗ ಕೊಂಚ ನೆಮ್ಮದಿಯೆನಿಸಿತು.

ಎಸ್ಟೇಟ್‌ನಿಂದ ಹೊರಟ ಬಸ್ಸು ಹೊಸಕೆರೆ - ಮೂಡಿಗೆರೆ ಮಾರ್ಗವಾಗಿ ಚಿಕ್ಕಮಗಳೂರು ತಲುಪಿದಾಗ ಸಮಯ ರಾತ್ರಿ ೧೦:೦೦ ಘಂಟೆ, ಅಲ್ಲಿಯೇ ಬಸ್ ನಿಲ್ದಾಣದ ಮುಂದೆ ಇದ್ದ ಹೋಟೆಲ್‌ನಲ್ಲಿ ಊಟ ಮುಗಿಸಿ ರಾಜಹಂಸ ಬಸ್‌ನಲ್ಲಿ ನಮಗಾಗಿ ಮುಂಚೇನೆ ಕಾಯ್ದಿರಿಸಿದ ಆಸನದಲ್ಲಿ ಆಸೀನರಾದೆವು, ರಾತ್ರಿ ೧೧:೦೦ ಕ್ಕೆ ಹೊರಟ ರಾಜಹಂಸ ಬೆಂಗಳೂರು ತಲುಪಿದಾಗ ಬೆಳಗಿನ ಜಾವ ೫:೧೫.

ನಂತರ ೫:೨೫ ರ ಮೈಸೂರು ಪ್ಯಾಸೆಂಜರ್ ರೈಲಿನಲ್ಲಿ ಚನ್ನಪಟ್ಟಣ ತನಕ ಪ್ರಯಾಣ ಬೆಳೆಸಿ ಬಳಿಕ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿದ್ದ ನನ್ನ ಬೈಕಿನಲ್ಲಿ ಐದು ಕಿ.ಮೀ. ದೂರದಲ್ಲಿರುವ ನಮ್ಮ ಮನೆ ತಲುಪಿದ ನಂತರ ಸ್ನಾನ,ತಿಂಡಿ ಮುಗಿಸಿ ಕೆಲಸದ ನಿಮಿತ್ತ "ಚಾಮುಂಡಿ ಎಕ್ಸ್‌ಪ್ರೆಸ್" ರೈಲಿನಲ್ಲಿ ಪುನಃ ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಿದೆ,ಇದು ನನ್ನ ಜೀವನದ ಅತ್ಯಂತ ಕಷ್ಟಕರವಾದ ಚಾರಣ ಕೂಡ ಹೌದು.

ಸೂಚನೆ:
೧) ಇದಕ್ಕಿಂತ ಮೊದಲು ಎಷ್ಟೇ ಚಾರಣ ಮಾಡಿದ್ದರೂ ಕೂಡ ಹೊಸದಾಗಿ "ಒಂಬತ್ತು ಗುಡ್ಡ" ಚಾರಣ ಹೋಗುವವರು "GPS ಉಪಕರಣ & ಸರ್ವೆ ಭೂಪಟ" ಹಾಗೂ ಉಪಯುಕ್ತ ಮಾಹಿತಿಯಿಲ್ಲದೆ ಇಲ್ಲದೇ ಚಾರಣ ಮಾಡುವುದು ಅಸಾದ್ಯ.

೨) ಅಥವಾ ಇದಕ್ಕೂ ಮೊದಲೂ ಆ ಹಾದಿಯಲ್ಲಿ ಹಲವಾರು ಬಾರಿ ಚಾರಣ ಮಾಡಿರುವವರ ಜೊತೆಯಲ್ಲಿ ಚಾರಣಕ್ಕೆ ಹೋಗುವುದು ಸೂಕ್ತ.

೩) ಮೊದಲನೇ ದಿನದ ಚಾರಣದ ಸಮಯದಲ್ಲಿ ನೀರಿನ ಸಮಸ್ಯೆ ಇರುವುದಿಲ್ಲ, ಆದರೆ ಎರಡನೇ ದಿನದ ಚಾರಣದ ಸಮಯದಲ್ಲಿ ನೀರಿನ ಸಮಸ್ಯೆ ಖಂಡಿತ ಎದುರಾಗುತ್ತದೆ ಎಚ್ಚರ!


***** "ಶುಭಂ" *****