ಸೋಮವಾರ, ಆಗಸ್ಟ್ 23, 2010

ಕೋಟೆ ಬೆಟ್ಟ ಚಾರಣ - ೨

ಮುಂದುವರಿದ ಭಾಗ...

ಮರವನ್ನು ಮುರಿಯುತಿದ್ದ ಶಬ್ದ ಈಗಂತು ಸ್ಪಷ್ಟವಾಗೆ ಕೇಳಿಸಿತು ಗೋವಿಂದ ಕೂಡ ಅಲೆರ್ಟ್ ಆದ, ನಮಗೆ ಅನುಮಾನ ಅದು ಆನೆಗಳದ್ದೆ ಇರಬಹುದು ಅಂತ ಒಮ್ಮೆ ಹೂಂಕರಿಸಿತು ನೋಡಿ! ಅದು ಆ ನಾಲ್ವರು ಮಲಗಿದ್ದ ಗುಂಪಿನ ಸನಿಹದಲ್ಲೆ,
ಅದೂ ಅಲ್ಲದೇ ಅವರಿಗೆ ಎಚ್ಚರವಾಗಲೇ ಇಲ್ಲ.

ಹೊಯ್ ಗೋವಿಂದ ಆನೆಗಳು ಕಣೋ... ಎಂದೆ
ತಕ್ಷಣ ಗೋವಿಂದ ಮತ್ತಷ್ಟು ಸೌದೆ ಹಾಕಿ ಬೆಂಕಿಯನ್ನು ಜೋರಾಗಿ ಉರಿಸತೊಡಗಿದ,
ನಾನು, ಗೋವಿಂದ ಬೇಗ ಬಾರೊ ಅವರನ್ನ ಎಬ್ಬಿಸೋಣ ಅಂತ ಹೇಳಿ ನಾನು ಗೋವಿಂದನನ್ನ ಕರ್ಕೊಂಡು ಅವರು ಮಲಗಿದ್ದ ಕಡೆಗೆ ಓಡಿ ಹೋಗಿ ಎಲ್ಲರನ್ನು ಎಬ್ಬಿಸಿ ವಿಷಯ ತಿಳಿಸಿದೊ, ಅವರು ಹಾಕಿದ್ದ ಬೆಂಕಿ ಕೂಡ ಆರಿಹೋಗಿತ್ತು.

ಹಾಗೆ ಇರಿ ನನ್ನ ಹತ್ರ ಡೀಸೆಲ್ ಇದೆ ತಗೊಂಡು ಬರ್ತೀನಿ ಅಂತ ಪುನಃ ನಮ್ಮ ಟೆಂಟ್ ಬಳಿ ಬಂದು ಡೀಸೆಲ್ ಇದ್ದ ಬಾಟೆಲ್ ತಗೊಂಡು ಮತ್ತೆ ಅಲ್ಲಿಗೆ ಓಡಿ ಹೋಗಿ ಕೆಂಡದ ಮೇಲೆ ಸುರಿದೆ
ಬಗ್ ಅಂತ ಬೆಂಕಿ ಹೊತ್ತಿಕೊಂಡಿತು, ತಕ್ಷಣ ಎಲ್ರೂ ಅದರ ಮೇಲೆ ಸ್ವಲ್ಪ ಸೌದೆ ಹಾಕಿದೊ,
ಬೆಂಕಿ ದಗದಗನೆ ಹೊತ್ತಿ ಉರಿಯಿತು.
ಆ ಗುಂಪಿನವರು, ಸಾರ್ ನಾವು ನೀವಿರೊ ಜಾಗಕ್ಕೆ ಬಂದುಬಿಡ್ತೀವಿ ಅಂದ್ರು,
ತಕ್ಷಣವೇ ಆ ಜಾಗ ಖಾಲಿ ಮಾಡಿ ಎಲ್ರೂ ನಮ್ಮ ಟೆಂಟ್ ಬಳಿ ಬಂದು ನಮ್ಮ ಶಿಭಿರಾಗ್ನಿಗೆ ಇನ್ನಷ್ಟು ಸೌದೆ ಜೋರಾಗಿ ಬೆಂಕಿ ಹೊತ್ತಿಸಿದೊ, ಅಷ್ಟೊತ್ತಿಗೆ ಟೆಂಟ್ನಲ್ಲಿ ಮಲಗಿದ್ದ ವೀರನನ್ನ ಎಬ್ಬಿಸಿ ಆಚೆ ಕಳುಹಿಸಿ ಕುಂಭಕರ್ಣನ ಹಾಗೆ ಮಲಗಿದ್ದ ನರೇಂದ್ರನನ್ನ ಎಬ್ಬಿಸಲು ಮಾಡಿದ ಪ್ರಯತ್ನವೆಲ್ಲ ವ್ಯರ್ಥವಾಯ್ತು,
ಕೊನೆಗೆ ಇದಕೆಲ್ಲ ಬಗ್ಗೊ ಮಗ ಆಲ್ಲ ಇವನು ಅಂತ ಯೋಚಿಸಿ ಟೆಂಟ್ ನಿಂದ ಹೊರಬಂದು
ಬಾಟೆಲ್ನಲ್ಲಿದ್ದ ನೀರನ್ನು ತೆಗೆದು ಕುಂಭಕರ್ಣನ ಮೈಮೇಲೆ ಸುರಿದೆ,
ತಕ್ಷಣವೇ ದಡಾರನೆ ಎದ್ದ ಅವನು ಕಣ್ಣುಜ್ಜಿಕೊಳ್ಳುತ್ತ, ಥೂ... ಯಾಕೊ! ಅಂದ,
ನರೇಂದ್ರ ಆನೆಗಳು ಬಂದಿವೆ ಕಣೋ,ಎಂದಾಕ್ಷಣ ಎದ್ದೆನೋ ಬಿದ್ದೆನೋ ಅಂತ ಟೆಂಟ್ ನಿಂದ ಆಚೆ ಓಡಿದ ಭೂಪ.
ಆನೆಗಳು ಆಗ ಚಿಕ್ಕ ಗುಡಿಯ ಹತ್ರ ಬಂದು ನಿಂತೊ,ಕತ್ತಲಾದ್ದರಿಂದ ಅವು ನಮಗೆ ಅಸ್ಪ್ರಷ್ಟವಾಗಿ ಕಾಣಿಸುತಿದ್ದವು,
ಯಾವುದಕ್ಕೂ ಇರಲಿ ಅಂತ ತಕ್ಷಣ ಬ್ಯಾಗ್ ನಿಂದ ಪಟಾಕಿ ಹೊರತೆಗೆದು ಎಲ್ರು ಕೈಗೂ ಒಂದೊಂದು ಕೊಟ್ಟು ನಾ ಹೇಳೊವರೆಗೂ ಯಾರೂ ಹೊತ್ತಿಸಬೇಡಿ ಅಂತಲೂ ಹೇಳಿದೆ,
ಅಕಸ್ಮಾತ್ ನಮ್ಮತ್ತ ದಾಳಿ ಏನಾದ್ರು ಮಾಡಿದ್ರೆ ತಪ್ಪಿಸಿಕೊಳ್ಳೊಕ್ಕೆ ಅಂತ ಇಳಿಜಾರಿನಂತಿದ್ದ ಜಾಗದ ಬಳಿಯೇ ಎಲ್ರೂ ನಿಂತಿದ್ದೆವು,
ಯಾವುದಕ್ಕೂ ಆನೆಗಳಿಗೆ ಭಯ ಇರಲಿ ಅಂತ ಒಂದು ಪಟಾಕಿ ತೆಗೆದು ನಾವು ಹಾಕಿದ್ದ ಶಿಭಿರಾಗ್ನಿಯ ಮೇಲೆ ಪಟಾಕಿ ಎಸೆದು ಎಲ್ರೂ ದೂರ ಓಡಿದೆವು ಅಷ್ಟೆ ಅದು "ಡಂ" ಅಂತ ಸಿಡಿಯಿತು, ಅಷ್ಟೆ ಕಿಡಿ ಬಿದ್ದು ನನ್ನ ಪ್ಯಾಂಟ್ ಮತ್ತು ಅವರ ಸ್ಲೀಪಿಂಗ್ ಬ್ಯಾಗ್ ಸಹಃ ತೂತಾಯಿತು, ಏನೊ ಮಾಡಲು ಹೋಗಿ ಇನ್ನೇನೊ ಆಯ್ತು ಅನ್ನೊತರಹ ನಮ್ಮ ಪಾಡು,.ಆನೆಗಳಿಗೆ ಗಾಬರಿ ಆಗಿ ಅವು ನಮ್ಮತ್ತ ಬರದೆ ಹಾಗೆ ಮರೆಯಲ್ಲೆ ನಿಂತಿದ್ದವು ಅಂತ ಕಾಣುತ್ತೆ,ಏಕೆಂದರೆ ಕತ್ತಲಾದ್ದರಿಂದ ಅವು ನಮ್ಮಕಣ್ಣಿಗೆ ಕಾಣದೆ ಅವುಗಳ ಶಬ್ದ ಮಾತ್ರ ಕೇಳಿಸ್ತಾ ಇತ್ತು, ನಮ್ಮ ಅದೃಷ್ಟ ಚೆನ್ನಾಗಿತ್ತು ಅವು ನಮ್ಮತ್ತ ಬರಲಿಲ್ಲ, ಬಂದಿದ್ದರೆ ಏನಾಗುತಿತ್ತೊ! ಯಾರಿಗೆ ಗೊತ್ತು.
ನಾನು ಎಚ್ಚರವಾಗೆ ಕಾಯುತ್ತ ಇರ್ತೀನಿ, ಬೇಕಾದರೆ ನೀವು ಮಲಗಿಕೊಳ್ಳಿ ಅಂದಾಕ್ಷಣ
ನನ್ನ ಜೊತೆ ಆ ಗುಂಪಿನಲೊಬ್ಬರನ್ನು ಬಿಟ್ಟರೆ ಎಲ್ರೂ ಸ್ಲೀಪಿಂಗ್ ಬ್ಯಾಗ್ ನೊಳಗೆ ನುಸುಳಿ ನಿದ್ರೆಗೆ ಶರಣಾದರು, ನಮ್ಮ ತಂಡದ ನರೇಂದ್ರ,ಗೋವಿಂದ ಟೆಂಟ್ ನೊಳಗೆ ಹೋಗಿ ಮಲಗಿದರು.ನಾವಿಬ್ಬರೆ ಸುಮಾರು ಹೊತ್ತಿನ ತನಕ ಮಾತನಾಡುತ್ತ ಬೆಂಕಿ ಮುಂದೆ ಕುಳಿತಿದ್ದೆವು.
ಕ್ರಮೇಣ ಆನೆಗಳ ಕೂಗು ದೂರದಲ್ಲೆಲ್ಲೊ ಕೇಳಿಸಿತು ಬಹುಶಃ ಅವು ಬೆಟ್ಟ ಇಳಿದು ಕೆಳಗೆ ಹೋಗುತಿದ್ದವೇನೊ ಆಗ ಬೆಳಗಿನ ಜಾವ ಸುಮಾರು ೫:೩೦ ಆಗಿತ್ತು, ನನಗೆ ಆಗ ಸ್ವಲ್ಪ ದೈರ್ಯ ಬಂತು,ರಾತ್ರಿಯಿಡಿ ನಿದ್ದೆಗೆಟ್ಟಿದ್ದರಿಂದ ನನಗೂ ಕೂಡ ತೂಕಡಿಕೆ ಬರುತ್ತಿತ್ತು
ನಾನು ಸಹ ಟೆಂಟ್ ನೊಳಗೆ ಹೋಗಿ ಮಲಗಿಕೊಂಡೆ ಪುನಃ ಎಚ್ಚರವಾಗಿದ್ದು ಬೆಳಿಗ್ಗೆ ೭ ಕ್ಕೆ,
ಎದ್ದು ಬೆಟ್ಟದ ಮೇಲಿಂದ ಕಣಿವೆ ಕಡೆಗೆ ಕಣ್ಣಾಯಿಸಿದಾಗ ವಾವ್! ಸುತ್ತಲೂ ಮಂಜಿನ ರಾಶಿ ನೋಡಿದರೆ ನೋಡಲು ಕಣ್ಣೆರಡು ಸಾಲದು ಎಂಬಂತ್ತೆ ಕಾಣಿಸುತಿತ್ತು.

ಮುಂಜಾನೆ ಕಂಡ ನೋಟ

ನರೇಂದ್ರ. ಗೋವಿಂದ, ಮತ್ತು ವೀರಭದ್ರ ಆಗಲೇ ಎದ್ದು ಶಿಭಿರಾಗ್ನಿ ಮುಂದೆ ಕುಳಿತಿದ್ದರು ನಾನು ಕೂಡ ಅವರ ಜೊತೆ ಸೇರಿಕೊಂಡೆ ಬಳಿಕ ಒಲೆ ಹಚ್ಚಿ ಪಾತ್ರೆ ಇಟ್ಟು ಚಹಾ ಕಾಯಿಸಿ ಕುಡಿದು ಜೊತೆಗೆ ತಂದಿದ್ದ ಬನ್ ಜಾಮ್ ತಿಂದು ಬೆಳಗಿನ ಉಪಹಾರ ಮುಗಿಸಿ




ನಂತರ ನೀರಿನ ಹೊಂಡದ ಬಳಿ ಹೋಗಿ ಗಮನಿಸಿದಾಗ ಅನೆಗಳು ಒಡಾಡಿದ ಹೆಜ್ಜೆ ಗುರುತು ಸ್ಪ್ರಷ್ಟವಾಗಿ ಕಾಣಿಸುತಿತ್ತು, ಬಹುಶಃ ಬೇಸಿಗೆ ಶುರುವಾಗಿದ್ದ ಕಾರಣ ಆನೆಗಳು ನೀರನ್ನು ಹುಡುಕಿಕೊಂಡು ಬೆಟ್ಟದ ಮೇಲೆ ಇರುವ ಹೊಂಡದ ಬಳಿ ಬಂದಿರಬೇಕು,
ಅದೇನೆ ಇರಲಿ ಪ್ರಕೃತಿ ಮಡಿಲಲ್ಲಿ ನಾವು ಆ ರಾತ್ರಿ ಕಳೆದದ್ದು ಮಾತ್ರ ಸ್ವಲ್ಪ ಭಯದ ಜೊತೆಗೆ ಒಂಥರಾ ಥ್ರಿಲ್ ಕೂಡ ಇತ್ತು, ಎದೆಯಾಳದಲ್ಲಿ ಉಳಿದುಕೊಂಡು ಬಿಟ್ಟಿತ್ತು ಯಾವತ್ತು ಮರೆಯೋಹಾಗಿಲ್ಲ.
ಸ್ವಲ್ಪ ಹೊತ್ತು ಅಲ್ಲೆಲ್ಲಾ ಸುತ್ತಾಡಿ ಹೊರಡಲು ತಿರ್ಮಾನಿಸಿ ನಮ್ಮ ಟೆಂಟ್ ಬಿಚ್ಚಿ ಗಂಟು ಮೊಟೆ ಕಟ್ಟಿ ಸಹ ಗುಂಪಿನ ಚಾರಣ ಮಿತ್ರರಿಗೆ ವಂದನೆಗಳನ್ನರ್ಪಿಸಿ ಹೊರಟೆವು ಹಟ್ಟಿಹೊಳೆಯ ಜಾಡನ್ನಿಡಿದು...

ಮರಳಿ ಗೂಡಿಗೆ...


ವಾಪಾಸ್ ಹೊರಡುವಾಗ ಹಾದಿಯಲ್ಲಿ ಆನೆಗಳ ಲದ್ದಿ ಕಂಡುಬಂದಿತು, ಲದ್ದಿ ನೋಡಿ ವೀರಭದ್ರ ಬೆದರಿದ ಕಾಗೆ ಹಾಗೆ ಮುಖ ಮಾಡಿಕೊಂಡು ಬರುತಿದ್ದ,


ಒಮ್ಮೆ ಹಿಂತಿರುಗಿ ನೋಡಿದಾಗ ಕಾಣುತ್ತಿರುವ ಕೋಟೆಬೆಟ್ಟದ ದೃಶ್ಯ


ಪುನಃ ಅದೇ ಹಾದಿಯಲ್ಲಿ ಕಾಡು ಹರಟೆ ಹೊಡೆಯುತ್ತ ಸಾಗಿತ್ತು ನಮ್ಮ ಪಯಣ.
ಆ ಒಂಟಿ ಮನೆಯ ಹತ್ತಿರ ಬಂದಾಗ ಮದ್ಯಾಹ್ನ ೧೨.೧೫, ನಾವು ಬರುವ ಹೊತ್ತಿಗೆ ನಾಯಿ ಬೊಗಳುತಿದ್ದರಿಂದ ಮನೆಯವರೆಲ್ಲೆರು ಹೊರಗೆ ಬಂದ್ರು
ಹಾಗೆ ಕುಡಿಯಲು ನೀರು ತರಲು ಹೇಳಿದೆವು, ಪಯಣ ಎಲ್ಲ ಚೆನ್ನಾಗಿತ್ತ? ಅಂದ್ರು ರಾತ್ರಿ ನಡೆದ ವಿಷಯವನ್ನು ಹೇಳಿದಾಗ ಹೌದಾ! ಎಂದು ಬೆರಗಾದರು ಸದ್ಯ ಏನು ತೊಂದ್ರೆಯಾಗಿಲ್ಲವಲ್ಲ ಬಿಡಿ ಅಂದುಕೊಂಡು ಅಷ್ಟರಲ್ಲಿ ಕುಡಿಯಲು ನೀರು ಕೊಟ್ಟ್ರು,ನೀರು ಕುಡಿದು ಅವರಿಗೆ ಧನ್ಯವಾದಗಳನ್ನ ಹೇಳಿ ಚಾರಣಕ್ಕೆ ಚಾಲನೆ ಕೊಟ್ಟೆವು.


ಕಾಫಿ ಹಣ್ಣಿನ ಗೊನೆ


ಕೊನೆಗೆ ಹಟ್ಟಿಹೊಳೆ ತಲುಪಿದಾಗ ೨:೦೦ ರ ಗಡಿ ದಾಟಿತ್ತು, ಅಲ್ಲೆ ಹಟ್ಟಿಹೊಳೆಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಹು ಕಾಲ ನೀರಿನಲ್ಲಿ ಮಿಂದಿದ್ದು,ದಣಿದಿದ್ದ ನಮ್ಮ ದೇಹಗಳಿಗೆ ಕೊಂಚ ಅರಾಮನೆನಿಸಿತು.

ಹಟ್ಟಿಹೊಳೆಯಲ್ಲಿ ಸ್ನಾನ

ನಂತರ ನಾವು ಹಟ್ಟಿಹೊಳೆಯ ಬಸ್ ನಿಲ್ದಾಣಕ್ಕೆ ಬಂದೆವು, ಅಷ್ಟರಲ್ಲಿ ಮಡಿಕೇರಿ ಕಡೆಗೆ ಹೊಗುವ ಬಸ್ ಬರುವುದಕ್ಕೂ ಒಂದೇ ಆಯ್ತು, ಬಸ್ನಲ್ಲಿ ಪ್ರಯಾಣ ಮಾಡಿ ಮಡಿಕೇರಿಗೆ ಬಂದಾಗ ಸಂಜೆ ಆಗಿತ್ತು, ಹೊಟ್ಟೆ ಬಹಳ ಹಸಿದಿದ್ದರಿಂದ ಮೊದಲು ಹೋಟೆಲ್ ನಲ್ಲಿ ಊಟ ಮುಗಿಸಿ ಕೆ.ಎಸ್.ಅರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದೊ,ಮಡಿಕೇರಿಯ ಸ್ನೇಹಿತರಾದ ಶಿವರಾಮ್ ರವರ ಮನೆಗೆ ನಿನ್ನೆ ತಂದಿದ್ದ ಪಾತ್ರೆ ಹಿಂತಿರುಗಿಸಿ ಬರಲು ಹೋಗಿದ್ದ ನರೇದ್ರ ಮತ್ತು ವೀರ ತನ್ನ ಒಂದು ಗಂಟೆಯಾದ್ರು ಸುಳಿವೇ ಇಲ್ಲ, ಗೋವಿಂದ ಮತ್ತು ನಾನು ಕೆ.ಎಸ್.ಅರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಇಬ್ಬರೇ ಕಾಯುತ್ತ ಕುಳಿತಿದ್ದೊ, ಕೊನೆಗೂ ಅಸಾಮಿಗಳು ಎಂಟ್ರಿ ಕೊಟ್ಟ್ರು,
ಅಲ್ಲೆ ಇದ್ದ ಮಾರುತಿ ವ್ಯಾನ್ ನಲ್ಲಿ ಮೈಸೂರಿಗೆ ಪ್ರಯಾಣಿಸಿ ಅಲ್ಲಿಂದ ನರೇಂದ್ರ ಮತ್ತು ಗೋವಿಂದ ಐರಾವತದಲ್ಲಿ ಬೆಂಗಳೂರಿಗೆ ಹೊರಟರು, ನಾನು ಮತ್ತು ವೀರ ಕೆ.ಎಸ್.ಅರ್.ಟಿ.ಸಿ ಬಸ್ ನಲ್ಲಿ ಚನ್ನಪಟ್ಟಣ್ಣ ತಲುಪಿದಾಗ ರಾತ್ರಿ ೧೦:೩೦ ಆಗಿತ್ತು, ಅಲ್ಲಿಂದ ರೈಲ್ವೆ ಸ್ಟೇಷನ್ ಗೆ ನಡೆದು ಹೋಗಿ ಅಲ್ಲಿ ಪಾರ್ಕ್ ಮಾಡಿದ್ದ ಬೈಕ್ ತಗೊಂಡು ಮನೆ ಸೇರಿಕೊಂಡೆ, ಊಟ ಮುಗಿಸಿ ಮಲಗಿಕೊಂಡ್ರು ಆ ಹಟ್ಟಿಹೊಳೆ, ಕೋಟೆಬೆಟ್ಟದ ಮೇಲೆ ರಾತ್ರಿ ಕಳೆದ ಅನುಭವ ಎಲ್ಲವೂ ಕಣ್ಮುಂದೆಯೇ ಬಂದತ್ತಾಗಿ ನಿದ್ದೆ ಬರದೇ ಹೊರಳಾಡಿದ್ದು ನಿಜಕ್ಕೂ ಕೋಟೆಬೆಟ್ಟ ಚಾರಣ ನನ್ನ ಮನಸಿನಲ್ಲಿ ಅವಿಸ್ಮರಣೀಯ ಚಾರಣವಾಗಿ ಉಳಿಯಿತು.

ಕಾಮೆಂಟ್‌ಗಳಿಲ್ಲ: