ಮಂಗಳವಾರ, ಮೇ 17, 2011

ಬಂಡಾಜೆ ಜಲಪಾತ - ಬಲ್ಲಾಳರಾಯನದುರ್ಗ ಚಾರಣ / ಟ್ರೆಕ್

ದಿನಾಂಕ: ೨೨.೦೧.೨೦೧೧ ಮತ್ತು ೨೩.೦೧.೨೦೧೧

ಎತ್ತರ : ಸಮುದ್ರ ಮಟ್ಟದಿಂದ ಸುಮಾರು ೭೦೦ ಮೀಟರ್

ಜಿಲ್ಲೆ: ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು

ತಂಡ: ಗಜೇಂದ್ರ, ಸಂತೋಷ್, ರಾಖಿ ಗೌಡ, ಅಂಜು ಗೌಡ, ವಿನಯ್, ಪಣೀಶ್, ಪೃಥ್ವಿ, ಭರತ್,
ಶೀಥಲ್ ಪ್ರಸಾದ್,ವಿಕಾಶ್, ಗೌರವ್ ಮತ್ತು ನಾನು.

ಒಟ್ಟು ಕ್ರಮಿಸಿದ ದೂರ: ಸುಮಾರು ೨೪ ಕಿ.ಮೀ

*********************************************************************************

ಬಂಡಾಜೆ ಜಲಪಾತಕ್ಕೆ ಚಾರಣ ಹೊಗಬೇಕೆಂಬ ಮಹಾದಾಶೆ ಸುಮಾರು ಆರು ತಿಂಗಳಿಂದ ನನ್ನನ್ನು ಕಾಡುತ್ತಲ್ಲೇ ಇತ್ತು.
ಸೆಪ್ಟೆಂಬರ್ ತಿಂಗಳಲ್ಲಿ ಹೋಗಬೇಕೆಂದು ನಾನು ಮತ್ತು ನನ್ನ ಸ್ನೇಹಿತರಾದ ಗಜೇಂದ್ರ ಇಬ್ಬರೂ ಸೇರಿ ನಿರ್ಧಾರ ಮಾಡಿದೆವು, ಅದರಂತೆಯೇ ಗೌಡ್ರುಗೆ ಕರೆ ಮಾಡಿ ಬರುವುದಾಗಿ ತಿಳಿಸಿದಕ್ಕೆ ಈಗ ಆಗಲ್ಲ ಮಳೆ ಜಾಸ್ತಿ ಇದೆ ಹೊಳೆ ದಾಟಿ ಹೋಗಲು ಸಾದ್ಯವಿಲ್ಲ ಮಳೆಗಾಲ ಮುಗಿದ ಮೇಲೆ ಬನ್ನಿ ಅಂತ ಹೇಳಿದ್ರು.

ಒಂದು ತಿಂಗಳ ಬಳಿಕ ಕರೆ ಮಾಡಿದಾಗ ಪುನಃ ಅದೇ ಉತ್ತರ.

ಸದ್ಯಕ್ಕೆ ಬಂಡಾಜೆ ಜಲಪಾತದ ಗೋಜಿಗೆ ಹೋಗದೇ "ತಡಿಯಂಡಮೊಳ್ ಪರ್ವತ" ಮತ್ತು
"ಒಂಬತ್ತು ಗುಡ್ದ" ಚಾರಣ ಮುಗಿಸಿ ಬಂದದ್ದು ಆಯ್ತು.

ಬಳಿಕ ಡಿಸೆಂಬರ್ ತಿಂಗಳಲ್ಲಿ ಗೌಡ್ರುಗೆ ಕರೆ ಮಾಡಿದ್ದಕ್ಕೆ "ಬನ್ನಿ" ಅಂತ ಹೇಳಿದ್ರು ಆದರೆ ಕೆಲವು ತುರ್ತು ಕೆಲಸಗಳಿಂದಾಗಿ ನಾವೇ ಬಂಡಾಜೆ ಚಾರಣವನ್ನು ಕೈಬಿಡಬೇಕಾದ ಸಂದರ್ಭ ಒದಗಿ ಬಂತು.

೨೦೧೧ ರ ಜನವರಿ ತಿಂಗಳು ನನ್ನ ಸ್ನೇಹಿತ ಗಜೇಂದ್ರರವರು ಗೌಡ್ರುಗೆ ಮತ್ತೊಮ್ಮೆ ಕರೆ ಮಾಡಿದಕ್ಕೆ ಇಲ್ಲಿ ಆನೆಗಳ ಹಾವಳಿ ಜಾಸ್ತಿ ಇದೆ ಈ ವಾರ ಆಗಲ್ಲ ಮುಂದಿನ ವಾರ ಕರೆ ಮಾಡಿ ಅಂದ್ರಂತ್ತೆ, ಬಂಡಾಜೆ ಜಲಪಾತಕ್ಕೆ ಇವರೇನು ಓಡೆಯರಾ? ಯಾವಾಗ ಕರೆ ಮಾಡಿದ್ರು ಏನಾದರೂ ಒಂದು ಕಾರಣ ಕೊಡುತ್ತಾರಲ್ಲ, ಎಂದು ಮನಸಿನಲ್ಲಿ ಗೊಣಗಿಕೊಂಡೆ.

ಅಂತರ್ಜಾಲದ ಕೆಲವು ಮಾಹಿತಿ ಪ್ರಕಾರ ಗೌಡ್ರ ಮನೆಯ ಹಿಂಬಾಗದಲ್ಲಿ ಚಾರಣ ಶುರು ಮಾಡಬೇಕಿತ್ತು,
ನಾನು ಮತ್ತು ಗಜೇಂದ್ರರವರು ಬಂಡಾಜೆ ಚಾರಣವನ್ನು ಹೇಗಾದರೂ ಮಾಡಿ ಕೊನೆಗೆ ಗೌಡರ ಕಣ್ತಪ್ಪಿಸಿಯಾದ್ರು ಹೊರಡಲೇಬೇಕೆಂಬ ಅಚಲ ನಿರ್ಧಾರದೊಂದಿಗೆ ತಯಾರಾದೆವು.

ಅಕಸ್ಮಾತ್ ಗೌಡರ ಕಣ್ಣಿಗೆ ಬಿದ್ದು ಚಾರಣವೇನಾದ್ರು ಕೈತಪ್ಪಿದ್ರೆ? ಪರ್ಯಾಯವಾಗಿ ಎತ್ತಿನಭುಜ ಅಥವಾ ಕೆ.ಪಿ. ಚಾರಣವನ್ನಾದ್ರು ಮುಗಿಸೋಣ ಅಂತಾ ತಿರ್ಮಾನಿಸಿದೆವು, ಹೊರಡುವ ದಿನ ನಿಗದಿಯಾಗಿತ್ತು ಮತ್ತೊಬ್ಬ ಸ್ನೇಹಿತ ಸಂತೋಷ್ ಕೂಡ ಬರಲು ಒಪ್ಪಿದರು, ನರಸಿಂಹ ಪರ್ವತ ಚಾರಣ ಮುಗಿಸಿ ಧರ್ಮಸ್ಥಳದಲ್ಲಿ ಸಿಗುವುದಾಗಿ ತಿಳಿಸಿ ಗಜೇಂದ್ರರವರು ಗುರುವಾರ ರಾತ್ರಿನೇ ಶೃಂಗೇರಿ ಕಡೆ ಪ್ರಯಾಣ ಬೆಳೆಸಿದರು.

ಶುಕ್ರವಾರ ಬೆಳಿಗ್ಗೇನೆ ಧರ್ಮಸ್ಥಳಕ್ಕೆ ಎರಡು ಮುಂಗಡ ಟಿಕೇಟ್ ಖರೀದಿಸಿ ಬಂದೆ, ಸಂಜೆ ವೇಳೆಗೆ ಆಫೀಶ್ ಕೆಲಸ ಮುಗಿಸಿ ಚಾರಣಕ್ಕೆ ಬೇಕಾದ ಕೆಲವು ತಿಂಡಿ ತಿನಿಸುಗಳನ್ನು ಖರೀದಿಸಿದ ನಂತರ ಊಟ ಮುಗಿಸಿ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಂದಾಗ ವೇಳೆ ರಾತ್ರಿ ೯:೦೦, ಬಸ್ ಹೊರಡಲು ಇನ್ನೂ ೪೫ ನಿಮಿಷ ಬಾಕಿ ಉಳಿದಿತ್ತು ಸಂತೋಷ್‌ಗೆ ಕರೆ ಮಾಡಿದೆ ಮನೆ ಬಿಟ್ಟಿರುವುದಾಗಿ ತಿಳಿಸಿದರು, ಸಮಯ ೯:೩೦, ಆದರೂ ಸಂತೋಷ್‌ನ ಸುಳಿವೇ ಇಲ್ಲ ಪುನಃ ಕರೆ ಮಾಡಿದೆ ಕಾರ್ಪೋರೇಷನ್ ಸರ್ಕಲ್‌ ಹತ್ತಿರ ಬರುತ್ತಿರುವುದಾಗಿ ತಿಳಿಸಿದರು, ನನ್ನ ಮನಸಿನಲ್ಲಿ ಏನೋ ತಳಮಳ ಬಸ್ ಹೊರಡುವುದರಷ್ಟರಲ್ಲಿ ಸಂತೋಷ್ ಬರ್ತಾರಾ?
ಇನೈದು ನಿಮಿಷ ಮಾತ್ರ ಬಾಕಿ ಉಳಿದಿತ್ತು ಅಷ್ಟರಲ್ಲಿ ಸಂತೋಷ್‌ ಆಗಮನ ನನ್ನ ಮನಸಿನ ತಳಮಳವನ್ನು ದೂರ ಮಾಡಿತು.

ರಾತ್ರಿ ೯:೫೦ ಕ್ಕೆ ಹೊರಟ ರಾಜಹಂಸ ಶರವೇಗದ ಸರದಾರನಂತೆ ಹಾಸನ ಸಕಲೇಶಪುರ ದಾಟಿ ಶಿರಾಡಿ ಘಟ್ಟಪ್ರದೇಶಕ್ಕೆ ಬಂದಾಗ ಆಗ ತಾನೆ ಬಂದಿದ್ದ ನಿದ್ದೆ ಕೂಡ ಮಾಯವಾಯ್ತು ಯಾಕೆಂದರೆ ಆ ರಸ್ತೆಯ ಪಾಡು ಹಾಗಿತ್ತು, ಬೆಳಗಿನ ಜಾವ ಸುಮಾರು ೪:೫೦ ರ ವೇಳೆಗೆ ನಮ್ಮನ್ನು ಧರ್ಮಸ್ಥಳದಲ್ಲಿ ಇಳಿಸಿದ ರಾಜಹಂಸ ಕುಂದಾಪುರದ ಕಡೆ ಹೊರಟಿತು.

ನಂತರ ಗಜೇಂದ್ರರವರು ಉಳಿದುಕೊಂಡಿದ್ದ ಸಾಕೇತ ವಸತಿ ಗೃಹಕ್ಕೆ ಬಂದು ಸ್ನಾನಾಧಿ ಕಾರ್ಯ ಮುಗಿಸಿ ದರ್ಶನಕ್ಕಾಗಿ ಶ್ರೀ ಮಂಜುನಾಥ ಸ್ವಾಮಿಯ ದೇವಾಲಯದ ಬಳಿ ಬಂದೆವು, ಆ ದಿನ "ಕರ್ನಾಟಕ ಬಂದ್" ಪ್ರಯುಕ್ತ ಭಕ್ತಾದಿಗಳ ದಟ್ಟಣೆ ಕೂಡ ಕಮ್ಮಿ ಇತ್ತು, ಹಾಗಾಗಿ ಮಂಜುನಾಥ ಸ್ವಾಮಿಯ ಧರ್ಶನ ಕೂಡ ಬಹು ಬೇಗನೆ ಮುಗಿಯಿತು.

ನಂತರ ಜೀಪಿನಲ್ಲಿ ಉಜಿರೆ ತಲುಪಿ ಅಲ್ಲೆ ಹೋಟೆಲೊಂದರಲ್ಲಿ ತಿಂಡಿ ತಿನ್ನುತಿದ್ದ ವೇಳೆಯಲ್ಲಿ ನಮ್ಮ ಬೆನ್ನು ಚೀಲಗಳನ್ನು ನೋಡಿದ ಜೀಪ್ ಚಾಲಕನೊಬ್ಬ ನಮ್ಮ ಬಳಿ ಬಂದು,

ಬಂಡಾಜೆಗಾ?

ನಾವು: ಹೌದು

ಚಾಲಕ; ಜೀಪ್ ಇದೆ ಬನ್ನಿ ಹೋಗೋಣ

ನಾನು: ಅಲ್ಲಿ ಯಾರಾದ್ರು ಗೈಡ್ ಸಿಕ್ತಾರಾ?

ಚಾಲಕ: ನೋಡೋಣ, ಫೋನ್ ಮಾಡಿ ಕೇಳ್ತೀನಿ ಇರಿ, ಸಂಭಾಷಣೆ ಮುಗಿದ ಬಳಿಕ ಹಾಂ...! ಇದ್ದಾರೆ, ಹೇಳಿದ್ದೀನಿ ನಿಮ್ಮನ್ನು ಕರ್ಕೊಂಡು ಹೋಗ್ತಾರೆ

ನಂತರ ನಮ್ಮ ಬೆನ್ನು ಚೀಲಗಳನ್ನು ಜೀಪ್‌ನಲ್ಲಿ ಹಾಕಿ ಆಸೀನರಾದ ಬಳಿಕ ಜೀಪ್ ಹೊರಟಿತು ಬಂಡಾಜೆಯ ನಾರಾಯಣ ಗೌಡ್ರು ಮನೆ ಕಡೆಗೆ...

ಚಾಲಕ ದಾರಿಯ ಮದ್ಯೆ ಜೀಪ್ ನಿಲ್ಲಿಸಿ ಅಗೋ ನೋಡಿ ಸಾರ್! ಅಲ್ಲಿ ಕಾಣುತ್ತಿದ್ದೆಯಲ್ಲಾ ಅದೇ ಜಲಪಾತವೆಂದು ತೋರಿಸಿದ, ಮುಗಿಲೆತ್ತರಕ್ಕೆ ಚಾಚಿ ನಿಂತಿದ್ದ ಗಿರಿಶಿಖರದಿಂದ ಸಣ್ಣ ಎಳೆಯಾಗಿ ನೀರು ಬೀಳುತಿದ್ದ ದೃಶ್ಯವಂತೂ ಮನಮೋಹಕವಾಗಿತ್ತು, ದಾರಿಯ ಮದ್ಯೆ ಸಿಕ್ಕ ನಮ್ಮ ಮಾರ್ಗದರ್ಶಿಯನ್ನು ಜೀಪ್‌ನಲ್ಲಿ ಹತ್ತಿಸಿಕೊಂಡು ಗೌಡ್ರು ಮನೆಯ ಬಳಿ ಬಂದೆವು, ಅಷ್ಟರಲ್ಲಿ ಜೀಪ್ ಚಾಲಕ ಗೌಡರನ್ನು ಒಮ್ಮೆ ಮಾತನಾಡಿಸಿ ಹೋಗಿ ಅವರು ಈ ಊರಿನ ಮುಖಂಡರು ಎಂದು ಹೇಳಿ ಹೊರಟ.

ಅಷ್ಟೊತ್ತಿಗಾಗಲೇ ಒಂದು ಚಾರಣಿಗರ ಗುಂಪು ಗೌಡ್ರು ಮನೆ ಮುಂದೆ ನೆರೆದಿತ್ತು, ರಾಜ ಗಾಂಭೀರ್ಯದಲ್ಲಿ ಕುಳಿತಿದ್ದ ಗೌಡ್ರುಗೆ ನಮಸ್ಕರಿಸಿದೆವು,

ಗೌಡ್ರು:ತಾವು ಎಲ್ಲಿಂದ ಬಂದಿದ್ದು?

ನಾವು: ಬೆಂಗಳೂರಿಂದ...

ಕಳೆದ ವರ್ಷ ಹೀಗೆ ಬೆಂಗಳೂರಿನ ಮೂವರು ಚಾರಣಕ್ಕೆಂದು ಬಂದು ಕಾಡೊಳಗೆ ತಪ್ಪಿಸಿಕೊಂಡ ಘಟನೆಯನ್ನು ಗೌಡ್ರು ವಿವರಿಸುತ್ತಿದ್ದರು, ನಾನು ಕೂಡ ಆ ಸಮಯದಲ್ಲೇ ದಿನಪತ್ರಿಕೆ ಓದಿ ವಿಷಯ ತಿಳಿದುಕೊಂಡಿದ್ದು ನೆನಪಾಯಿತು,
ಗೌಡ್ರು ಮನೆಯ ಕಾಫಿ ಕುಡಿದು ಸಮಯ ೯:೦೦ ಆಗಿದ್ದರಿಂದ ನಾವು ತಡ ಮಾಡದೆ ಗೌಡ್ರುಗೆ ಧನ್ಯವಾದ ಹೇಳಿ ಅವರ ಮನೆಯ ಅಂಚಿನಲ್ಲೇ ಚಾರಣ ಹೊರಟೆವು ಬಂಡಾಜೆಯ ಜಾಡನ್ನಿಡಿದು...


ನಾರಾಯಣಗೌಡ್ರು ಮನೆ ಮುಂದೆ ಗಜೇಂದ್ರ, ನಾನು ಮತ್ತು ಸಂತೋಷ್


ಚಾರಣ ಆರಂಭಿಸಿದ ಕೆಲವೇ ನಿಮಿಷದಲ್ಲೇ ಒಂದು ಮರದ ಗೇಟ್ ದಾಟಿ ಕಾಲು ಹಾದಿ ಹಿಡಿದು ಹೊರಟೆವು, ಇಲ್ಲಿಂದ ಮುಂದೆ ತುಂಬಾ ಎಚ್ಚರದಿಂದಿರಬೇಕು ಸರಿ ಹಾದಿಯ ನಡುವೆ ಹಾದಿ ತಪ್ಪಿಸುವ ಹಲವು ಅಡ್ಡಹಾದಿಗಳು ಎದುರಾಗುತ್ತವೆ ಹಾಗೊಂದು ವೇಳೆ ಹಾದಿ ತಪ್ಪಿದರೆ ದೇವರೇ ಗತಿ! ಮಾರ್ಗದರ್ಶಿ ನೆರವಿನಿಂದ ಯಾವುದೇ ಗೋಜಿಲ್ಲದೆ ಮುಂದೆ ಸಾಗಿದೆವು, ಬಳಿಕ ಒಂದು ಸಣ್ಣ ಕಲ್ಲಿನ ಗೋಡೆ ದಾಟಿದ ಮೇಲೆ ಮುಂದೆ ಬಲಕ್ಕೆ ಒಂದು ಮನೆ ಅಲ್ಲೊಂದು ನಾಯಿ ನಮ್ಮನ್ನು ನೋಡಿ ಒಂದೇ ಸಮನೇ ಬೊಗಳುತಿತ್ತು ಅದೆಲ್ಲದರ ನಡುವೆ ಮೌನವಾಗಿ ಸಾಗುತ್ತಿದ್ದ ನಮ್ಮ ಚಾರಣ ನಿಜಕ್ಕೂ ಖುಷಿ ಕೊಡುತಿತ್ತು, ನಂತರ ಒಂದು ನೀರಿಲ್ಲದ ಸಣ್ಣ ಹಳ್ಳ ದಾಟಿ ಮುನ್ನಡೆದೆವು, ಹಾದಿ ಗೊತ್ತಿಲ್ಲದವರಿಗೆ ಸರಿ ಹಾದಿ ಹುಡುಕುವುದು ಬಹಳ ಕಷ್ಟ, ಹಾದಿ ಉದ್ದಕ್ಕೂ ಹೇರ‍ಳವಾಗಿ ಬಿದ್ದಿದ್ದ ಆನೆಗಳ ಲದ್ದಿ ನೋಡಿದ್ರೆ ಎಂತವರಿಗೂ ನಡುಕ ಶುರುವಾಗುತ್ತೆ, ಇದನ್ನೆಲ್ಲಾ ನೋಡಿದ್ರೆ ಆನೆಗಳ ಬಾರಿ ಹಿಂಡೇ ಇರಬೇಕು ಅನ್ನಿಸ್ತು, ಇಲ್ಲಿಂದ ಮುಂದಕ್ಕೆ ಸ್ವಲ್ಪ ಎಚ್ಚರವಹಿಸಬೇಕಾಗುತ್ತೆ ತಪ್ಪಿದ್ರೆ ಅಪಾಯ ಖಂಡಿತಾ!

ವಿಚಿತ್ರ ಶಬ್ದ ! ಯಾವುದೋ ಪ್ರಾಣಿ ನಮ್ಮನ್ನೇ ಅನುಸರಿಸಿ ಬರ್ತಾ ಇರೋದನ್ನ ತಿಳಿಯೋಕ್ಕೆ ನನಗೆ ಬಹಳ ಹೊತ್ತು ಬೇಕಾಗಲಿಲ್ಲ, ಸಂತೋಷ್ ಬಹಳ ಮುಂದೆ ಹೋಗುತ್ತಿದ್ದರು ತಕ್ಷಣವೇ ನಾನು ನನ್ನ ಮಿತ್ರ ಗಜೇಂದ್ರರವರಿಗೆ ತಿಳಿಸಿದೆ ಅವರೂ ಕೂಡ ಆ ಶಬ್ದವನ್ನ ಆಲಿಸಿದರು ಯಾವ ಪ್ರಾಣಿ ಇರಬಹುದು? ಅಂತೆಲ್ಲಾ ಕುತೂಹಲ! ನಮ್ಮನ್ನಾವರಿಸಿತು, ಬಳಿಕ ನಮ್ಮ ಮಾರ್ಗದರ್ಶಿಯನ್ನ ಕೇಳಲಾಗಿ ಅದು ಕಡವೆಯ ಕೂಗು ಅಂತ ಗೊತ್ತಾದ ಮೇಲೆ ನಿಟ್ಟುಸಿರು ಬಿಟ್ಟು ಚಾರಣ ಮುಂದುವರೆಸಿದೆವು.

ಚಾರಣ ಆರಂಭಿಸಿ ಸುಮಾರು ಒಂದೂಕಾಲು ತಾಸು ಆಗಿತ್ತು ದೂರದಲ್ಲೆಲ್ಲೊ ನೀರು ಹರಿವಿನ ಸದ್ದು ಸಣ್ಣದಾಗಿ ಕೇಳಿಸುತಿತ್ತು, ಕೆಲವು ನಿಮಿಷಗಳ ಬಳಿಕ ಆ ಸದ್ದು ನಮ್ಮ ಕಿವಿಗೆ ಜೋರಾಗಿ ಕೇಳಿಸುತಿತ್ತು, ಹಾದಿಯ ಇಕ್ಕೆಲಗಳಲ್ಲಿ ಸಣ್ಣ ಬಿದಿರು ಮರಗಳು (ಸುಮಾರು ಒಂದೂವರೆ ತಾಸಿನ ಚಾರಣದ ಬಳಿಕ ಬಂಡಾಜೆ ಹೊಳೆಯ ನೀರು ಹರಿವಿನ ಶಬ್ದ ಹಾಗೂ ಹಾದಿಯ ಅಕ್ಕ ಪಕ್ಕ ಸಣ್ಣ ಸಣ್ಣ ಬಿದಿರು ಮೆಳೆಗಳು ಇವಿಷ್ಟು ಸಾಕು ನಾವು ಸರಿಯಾದ ಹಾದಿಯಲ್ಲಿದ್ದೀವಿ ಎಂದು ತಿಳಿಯಲು) ಅಲ್ಲೊಂದು ಅಡ್ಡಲಾಗಿ ಸಿಕ್ಕಿದ ಚಿಕ್ಕ ನೀರಿನ ಹಳ್ಳ ದಾಟಿ ಬಂಡಾಜೆಯ ಹೊಳೆ ಬಳಿ ಬಂದೆವು.

ಬಹುತೇಕ ಚಾರಣಿಗರು ಹಾದಿ ತಪ್ಪೊದೇ ಇಲ್ಲಿ ಹೊಳೆ ದಾಟಿ ಏರುಹಾದಿಯಲ್ಲಿ ಹೋಗದೇ ಹೊಳೆಜಾಡನ್ನಿಡಿದು ಹಾದಿ ತಪ್ಪುತ್ತಾರೆ, ಹೊಳೆ ಜಾಡು ಜಲಪಾತದ ತಳಕ್ಕೆ ಕರೆದೋಯ್ದರೆ, ಹೊಳೆ ದಾಟಿದ ನಂತರ ಸಿಗುವ ಏರುಹಾದಿಯಲ್ಲಿ ಸಾಗಿದರೆ ಜಲಪಾತದ ತುಟ್ಟ ತುದಿಗೆ ತಲುಪಬಹುದು.

ನಮ್ಮ ಮಾರ್ಗದರ್ಶಿ ದೂರದಲ್ಲಿ ನಿಂತು ನಮ್ಮನ್ನು "ಬನ್ನಿ" ಎಂದು ಸನ್ನೆ ಮಾಡಿ ಸಂತೋಷ್ ಜೊತೆ ಕಾಡಿನೊಳಗೆ ಹೊರಟರು, ನಾನು ಮತ್ತು ಗಜೇಂದ್ರ ಅವರನ್ನು ಹಿಂಬಾಲಿಸಲು ಸ್ವಲ್ಪ ತಡವಾದ್ದರಿಂದ ಅವರು ಎತ್ತ ಹೋದರು ಅಂತ ಗೊತ್ತಾಗ್ಲೇ ಇಲ್ಲ, ಜೋರಾಗಿ ಕೂಗಿದರೂ ನಮ್ಮ ಕೂಗು ಅವರಿಗೆ ತಲುಪದೆ ಅವರ ಸುಳಿವು ಸಿಗದಂತ್ತಾಯಿತು, ಕೂಗುತ್ತ.. ಕೋಗುತ್ತ.. ಸ್ವಲ್ಪ ಹಾಗೇ ಮುನ್ನಡೆದೆವು ದೂರದಲ್ಲಿ ಸಂತೋಷ್ ಒಂದು ಮರದ ಕೆಳಗೆ ನಿಂತು ತಮ್ಮ ಕ್ಯಾಮೆರದಲ್ಲಿ ಏನನ್ನೋ ಸೆರೆಹಿಡಿಯುತ್ತಿದ್ದರು, ಹತ್ತಿರ ಹೋಗಿ ನೋಡಿದರೆ ಹಲವಾರು ಕಲ್ಲಿನ ನಾಗರಶಿಲ್ಪಗಳು ಮತ್ತು ಅಲ್ಲೆಲ್ಲಾ ನಿಧಿಗೋಷ್ಕರ ಗುಂಡಿ ತೆಗೆದ ಕುರುಹುಗಳು, ನಮಗೆ ಕುತೂಹಲ! ಈ ದಟ್ಟ ಕಾಡಿನೊಳಗೆ ನಾಗರಶಿಲ್ಪಗಳು ಹೇಗೆ ಬಂದವು? ಅವು ಯಾವ ಕಾಲದವೋ? ಗೊತ್ತಿಲ್ಲ, ಬಳಿಕ ಕೆಲವು ಛಾಯಾಚಿತ್ರಗಳನ್ನು ನನ್ನ ಕ್ಯಾಮೆರಾದಲ್ಲಿ ಸೆರೆಹಿಡಿದು ಪುನಃ ಹೊಳೆಯ ಬಳಿ ಬಂದೆವು, ಆಗಲೇ ತುಂಬಾ ಹೊತ್ತು ಕಳೆದಿದ್ದರಿಂದ ಹೊರಡಲು ನಿರ್ಧರಿಸಿ ಬೆನ್ನುಚೀಲವನ್ನು ಹೆಗಲಿಗೇರಿಸಿ ಹೊಳೆ ದಾಟಿ ಏರು ಹಾದಿ ಹಿಡಿದು ಹೊರಟೆವು.

ಮುಂದಿನ ಹಾದಿಯೆಲ್ಲಾ ಮಳೆಕಾಡು, ದಟ್ಟ ಅಡವಿಯ ದುರ್ಗಮ ಹಾದಿಯಲ್ಲಿ ಬೃಹದಾಕಾರದ ಮರಗಳ ನಡುವೆ ಪಕ್ಷಿಗಳ ಚಿಲಿಪಿಲಿ ಕೂಗಿನ ಇಂಪನ್ನು ಆಲಿಸಿ ಚಾರಣ ಮಾಡುತ್ತಿದ್ದ ನಮಗೆ ನಿಜಕ್ಕೂ ಆ ಘಳಿಗೆ ಸದಾ ಕಾಲ ನಮ್ಮ ನೆನಪಿನಲ್ಲಿ ಉಳಿಯುವಂತ್ತಿತ್ತು, ಸತತ ಒಂದು ಘಂಟೆಯ ಸುಧೀರ್ಘ ಚಾರಣದ ನಂತರ ದಟ್ಟ ಕಾಡನ್ನು ಬಿಟ್ಟು ಬೋಳುಗುಡ್ಡ ಪ್ರದೇಶಕ್ಕೆ ಆಗಮಿಸಿದೆವು.


ಬಂಡಾಜೆಯ ಕಣಿವೆಯಲ್ಲಿ...


ಅಲ್ಲಿಂದ್ದಲೇ ನಮ್ಮ ಎಡಕ್ಕೆ ಬಂಡಾಜೆ ಜಲಪಾತವು ದರ್ಶನ ಕೊಟ್ಟಿತ್ತು, ಆಗ ನಮಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ, ಬಿಸಿಲಿನ ಝಳ ತಾಳಲಾರದೇ ಅಲ್ಲೊಂದು ಚಿಕ್ಕ ಮರವನ್ನು ಆಶ್ರಯಿಸಿ ವಿಶ್ರಾಂತಿಗೋಷ್ಕರ ನೆಲಕ್ಕೊರಗಿ ನಂತರ ಜೊತೆಯಲ್ಲಿ ತಂದಿದ್ದ ಸ್ವಲ್ಪ ಬಿಸ್ಕತ್ತು ತಿಂದು ನೀರು ಕುಡಿದ ಬಳಿಕ ಬಳಲಿ ಬೆಂಡಾಗಿ ಹೋಗಿದ್ದ ನಮ್ಮ ದೇಹಕ್ಕೆ ಮರುಜೀವ ಬಂತು, ಜಲಪಾತದ ಸೌಂದರ್ಯವೇನೋ ನಮಗೆ ಅತ್ಯಂತ ಸನಿಹದಲ್ಲೇ ಕಂಡರೂ ಕೂಡ ಜಲಪಾತದ ತುದಿ ತಲುಪಲು ಅಲ್ಲಿಂದ್ದ ನಾವು ತೆಗೆದುಕೊಂಡ ಸಮಯ ಒಂದು ತಾಸು.


ಬಂಡಾಜೆ ಜಲಪಾತ


ಬಂಡಾಜೆ ಕಣಿವೆಯ ಸೊಬಗನ್ನು ನೋಡುತ್ತ ಒಂದು ಕ್ಷಣ ಮೊಕವಿಸ್ಮಿತನಾದೆ, ಜಲಪಾತದ ಮೇಲಿಂದ ಒಮ್ಮೆ ಕೆಳಕ್ಕೆ ಕಣ್ಣಾಯಿಸಿದಾಗ ಮೇಲಿಂದ ಸುಮಾರು ಇನ್ನೂರು ಅಡಿ ಆಳಕ್ಕೆ ಜಲಪಾತದ ನೀರು ದುಮ್ಮಿಕುತ್ತಿದ್ದ ಪರಿಯಂತೂ ಅದ್ಬುತ, ಸ್ವಲ್ಪ ಬಲಕ್ಕೆ ಕಣ್ಣಾಯಿಸಿದಾಗ ದೂರದಲ್ಲಿ "ಗಡಾಯಿಕಲ್ಲು" ಬೆಟ್ಟ ದರ್ಶನ ಕೊಟ್ಟಿತು, ಅಷ್ಟೊತ್ತಿಗಾಗಲೇ ಇನ್ನೊಂದು ಚಾರಣಿಗರ ಗುಂಪು (ರಾಖಿ ಬಳಗ) ನಾವಿದ್ದ ಸ್ಥಳಕ್ಕೆ ಆಗಮಿಸಿತು, ಬಂಡಾಜೆಯ ನೀರಿನಲ್ಲಿ ಜಲಕ್ರೀಡೆಯಾಡುವ ಮನಸಾಗಿ ಗಜೇಂದ್ರ ಮತ್ತು ಸಂತೋಷ್ ನೀರಿಗೆ ಧುಮುಕಿದರು, ಮಂಜುಗಡ್ಡೆಯಂತೆ ಕೊರೆಯುತ್ತಿದ್ದ ನೀರಿನಲ್ಲಿ ಇಳಿಯಲು ತುಂಬಾ ಸಮಯ ತಗೊಂಡು ಹೇಗೋ ಮನಸು ಮಾಡಿ ನೀರಿಗೆ ಇಳಿದೆ.

ಅಬ್ಬಾ! ಕ್ಷಣಾರ್ಧದಲ್ಲಿ ದೇಹವೆಲ್ಲ ಮರಗಟ್ಟಿದ ಅನುಭವ, ಇನ್ನೂ ಸ್ವಲ್ಪ ಹೊತ್ತು ಹೀಗೆ ಇದ್ದರೆ "ಐಸ್ ಕ್ಯಾಂಡಿ" ಆಗುವುದು ಖಚಿತ ಎಂದುಕೊಂಡು ನೀರಿನಿಂದ ಮೇಲೆದ್ದು ಬಂದರೂ ಅವರು ಮಾತ್ರ ಎಮ್ಮೆ ಥರಾ ನೀರಿನಲ್ಲಿ ಒದ್ದಾಡುತ್ತಿದ್ದರು.


ನಮ್ಮ ಶಿಭಿರ

ಕೊನೆಗೆ ಎಲ್ಲರೂ ಸೇರಿ ಟೆಂಟ್ ಸಿದ್ದಪಡಿಸಿ ತಾಳಹಾಕುತ್ತಿದ್ದ ಹೊಟ್ಟೆಗೆ ಎರಡೆರಡು ಚಪಾತಿ ಇಳಿಸಿ ಹೊರಟೆವು ಸೂರ್ಯಾಸ್ತಮದ ಸೊಬಗು ಸವಿಯಲು...


ಸೂರ್ಯಾಸ್ತಮದ ವಿಹಂಗಮ ನೋಟ



ಸಂಜೆಯಾಗುತ್ತಲೇ ತನ್ನ ಸುಂದರವಾದ ಚೆಲುವನ್ನು ನಮ್ಮ ಕಣ್ತುಂಬಿಸಿ ತನ್ನ ಲೋಕಕ್ಕೆ ಮರಳುತ್ತಿದ್ದ ಸೂರ್ಯನನ್ನು ಬೀಳ್ಕೊಟ್ಟು ಟೆಂಟ್ ಬಳಿ ಬರುವಷ್ಟರಲ್ಲೇ ಬೆಳಕು ಇನ್ನಿಲ್ಲದಂತೆ ಮಾಯವಾಗಿ ಕತ್ತಲು ಆವರಿಸತೊಡಗಿತು, ರಾಖಿ ಅಂಡ್ ಗ್ರೂಪ್ಸ್ ಕೂಡ ನಮ್ಮ ಟೆಂಟ್ ಪಕ್ಕದಲ್ಲಿಯೇ ಮಲಗಲು ವ್ಯವಸ್ಥೆ ಮಾಡುತ್ತಿದ್ದರು, ಸಂಪೂರ್ಣ ಕತ್ತಲಾಯಿತು ನಮ್ಮ ಮಾರ್ಗದರ್ಶಿ "ಕುನ್ಯಾ" ಒಣ ಸೌದೆಯನ್ನು ಒಂದೆಡೆ ರಾಶಿ ಮಾಡಿ ಶಿಭಿರಾಗ್ನಿ ಹಾಕಿಯೇ ಬಿಟ್ಟರು, ನಾನು ಮತ್ತು ಗಜೇಂದ್ರ ಇಬ್ಬರೂ ಸೇರಿ ಒಲೆ ಮುಂದೆ ಕುಳಿತು ಬೇಗನೆ ನೂಡಲ್ಸ್ ತಯಾರಿಸಿದ ನಂತರ ಅದೇ ಒಲೆ ಮೇಲೆ ರಾಖಿ ಗ್ರೂಪ್ ಅಡುಗೆ ಸಿದ್ದಪಡಿಸುತ್ತಿದ್ದರು.

ಹೀಗೆ ನಾನು ಮತ್ತು ಅಂಜುಗೌಡ ಪರಸ್ಪರ ಮಾತನಾಡುತ್ತಿದ್ದ ವೇಳೆ ಸುಮಾರು ಒಂದೂವರೆ ವರ್ಷದ ಹಿಂದೆ ನನ್ನ ಸ್ನೇಹಿತನ ಮದುವೆಗೆಂದು ಹೋದ ಸಂದರ್ಭದಲ್ಲಿ ನನ್ನ ಅಣ್ಣ ಇವರಲ್ಲಿ ಕೆಲವರನ್ನು ಪರಿಚಯಿಸಿದ್ದು ನೆನಪಾಯಿತು, ಆದರೆ ಒಂದೇ ಒಂದು ಬಾರಿ ಮುಖ ಪರಿಚಯವಾದ್ದರಿಂದ ಬಹು ಬೇಗನೆ ಗುರುತು ಸಿಕ್ಕಿರಲಿಲ್ಲ, ಆದರೆ ರಾಖಿಯನ್ನು ಮಾತ್ರ ಎಲ್ಲೋ ನೋಡಿರಬಹುದು ಎಂದು ಮನಸಿನಲ್ಲಿ ಅನ್ನಿಸುತಿತ್ತು, ಏಕೆಂದರೆ ಸ್ನೇಹಿತನ ಅರತಕ್ಷತೆಯಲ್ಲಿ ಆರ್ಕೆಸ್ಟ್ರಾ ಸ್ಟೇಜಿಗೆ ಹೋಗಿ "ಮುಂಗಾರು ಮಳೆ" ಚಿತ್ರದ "ಅನಿಸುತಿದೆ ಯಾಕೊ ಇಂದು" ಗೀತೆಯನ್ನು ಸೊಗಸಾಗಿ ಹಾಡಿದ್ದರು.

ಎರಡು ತಂಡವಾಗಿ ಬಂದ ನಾವು ನಂತರ ಒಂದು ತಂಡವಾಗಿ ಮಾರ್ಪಟ್ಟಿತು, ಬಳಿಕ ಎಲ್ಲರು ಜೊತೆಗೆ ಊಟ ಮುಗಿಸಿ ಹರಟೆ ಹೊಡೆಯುತ್ತಾ ಶಿಭಿರಾಗ್ನಿ ಮುಂದೆ ಕುಳಿತು ತುಂಬಾ ಸಮಯ ಕಳೆದವು, ದೂರದಲ್ಲಿ ಯಾವುದೋ ಊರಿನ ದೀಪಗಳು ಪ್ರಕಾಶಮಾನವಾಗಿ ಹೊಳೆಯುತ್ತಿದ್ದವು ನಮ್ಮ ಮಾರ್ಗದರ್ಶಕರನ್ನು ಕೇಳಲಾಗಿ ಅದು "ಉಜಿರೆ" ಅಂತಾ ಗೊತ್ತಾಯಿತು, ನಂತರ ಮಲಗಲು ನಿರ್ಧರಿಸಿ ಟೆಂಟ್ ಒಳಗೆ ಹೋದಾಗ ಸಮಯ ರಾತ್ರಿ ಹನ್ನೊಂದಾಗಿತ್ತು.

ಸುಮಾರು ರಾತ್ರಿ ೩ ರ ಸಮಯದಲ್ಲಿ ಎಚ್ಚರಗೊಂಡ ನಾನು ನಿದ್ದೆ ಬರದೆ ಟೆಂಟ್‌ನಿಂದ ಹೊರಬಂದು ಶಿಭಿರಾಗ್ನಿ ಮುಂದೆ ಕುಳಿತೆ ಅಷ್ಟೊತ್ತಿಗೆ ನಿದ್ದೆ ಬರದೆ ಅಂಜುಗೌಡ ಕೂಡ ಎದ್ದು ಬಂದ್ರು, ನಾವಿಬ್ಬರೆ ಹೀಗೆ ಸುಮಾರು ಹೊತ್ತಿನ ತನಕ ಮಾತನಾಡುತ್ತ ಸಮಯ ಕಳೆದೆವು, ಬೆಳಗಾಗಲು ಇನ್ನೂ ಸಾಕಷ್ಟು ಸಮಯವಿದ್ದುದ್ದರಿಂದ ಪುನಃ ನಾನು ಟೆಂಟೊಳಗೆ ಹೋಗಿ ಮಲಗಿದೆ.

ಬೆಳಿಗ್ಗೆ ೬:೪೫ ರ ಸಮಯ
ಗಜೇಂದ್ರ: ಮೋಹನ್ ಬೇಗ ಏಳಿ ಹೊತ್ತಾಯ್ತು...ನಾವು ಸೂರ್ಯೋದಯ ನೋಡಲು ಗುಡ್ಡದ ಮೇಲೆ ಹೋಗ್ತಾಯಿದ್ದೀವಿ ಬೇಗ ಬನ್ನಿ ಎಂದು ತಿಳಿಸಿ ಸಂತೋಷ್‌ನನ್ನು ಕರ್ಕೊಂಡು ಸೂರ್ಯೋದಯ ವೀಕ್ಷಣೆಗೆ ಸಣ್ಣ ಗುಡ್ಡ ಹತ್ತಲು ಹೊರ‍ಟರು, ತಕ್ಷಣವೇ ನಾನು ಕೂಡ ಕೈನಲ್ಲಿ ಕ್ಯಾಮೆರ ಹಿಡಿದು ಅವರನ್ನು ಹಿಂಬಾಲಿಸಿ ಹೊರಟೆ, ಸಮಯಕ್ಕೆ ಸರಿಯಾಗಿ ಹೇಗೋ ಗುಡ್ಡದ ಮೇಲೆ ಇದ್ದೆವು ಆದರೆ ಕಾರ್ಮೋಡಗಳ ಕಣ್ಣಾಮುಚ್ಚಾಲೆ ಆಟದಿಂದ ಬಂದ ದಾರಿಗೆ ಸುಂಕವಿಲ್ಲದೆ ಗುಡ್ಡ ಇಳಿದು ವಾಪಾಸು ಟೆಂಟ್ ಹಾಕಿದ್ದ ಜಾಗಕ್ಕೆ ಮರಳಿ ಬಂದೆವು.


ಸೂರ್ಯೋದಯ ನೋಡಲು ಹೊರಟಾಗ ನೀಲಾಕಾಶದಲ್ಲಿ ಚಂದ್ರ ಕಂಡಿದ್ದು ಹೀಗೆ.


ಬಂಡೆಗಳ ಬಳಿ ಸೃಷ್ಟಿಯಾಗಿದ್ದ ಕಿರು ಜಲಪಾತಕ್ಕೆ ಬೆಳ್ಳಂಬೆಳಗೆ ಮೈಯೊಡ್ಡಿ ನಿಂತಿದ್ದ ಕೆಲವು ಸ್ನೇಹಿತರು, ನಾನು ಕೂಡ ಇವರಿಗೇನು ಕಮ್ಮಿಯಿಲ್ಲ ಎಂದು ಮೈಯೊಡ್ಡಿ ನಿಂತ ಆ ಮಧುರ ಕ್ಷಣ ಮರೆಯುವುದುಂಟೆ?


ಅಡುಗೆ ಸಿದ್ದಪಡಿಸುತ್ತಿರುವುದು (ನಾನು ಮತ್ತು ಗಜೇಂದ್ರ)

ಬಳಿಕ ಬೆಳಗಿನ ತಿಂಡಿಗೋಸ್ಕರ ಜೊತೆಗೆ ತಂದಿದ್ದ MTR ನ ಪಲಾವ್ ತಿಂದು ಮುಗಿಸಿ ಟೆಂಟ್ ಬಿಚ್ಚಿ ಬೆನ್ನು ಚೀಲವನ್ನು ಹೆಗಲಿಗೇರಿಸಿ "ಬಲ್ಲಾಳರಾಯನ ದುರ್ಗ"ಕ್ಕೆ ಚಾರಣ ಹೊರ‍ಡಲು ಸಿದ್ದವಾಗಿ ನಿಂತೆವು.


ನಮ್ಮ ತಂಡ

ಬಂಡಾಜೆಯಿಂದ ಬಲ್ಲಾಳರಾಯನದುರ್ಗಕ್ಕೆ ಸುಮಾರು ಎರಡು ಗಂಟೆಯ ಸುಧೀರ್ಘ ಚಾರಣ, ಬಂಡಾಜೆಯ ಉತ್ತರಕ್ಕೆ ಕಾಣುವ ಗುಡ್ಡವನ್ನು ಎಡಬದಿಯಲ್ಲೆ ಹತ್ತಿ ಸಾಗಬೇಕು ನಂತರ ಎಡಕ್ಕೆ ಕಾಣುವ ಶೋಲಾ ಕಾಡಂಚಿನಲ್ಲೆ ಮುಂದೆ ಸಾಗಿದರೆ "V" ಆಕಾರದ ದಿಬ್ಬ ಕಾಣ ಸಿಗುತ್ತದೆ ದಿಬ್ಬ ದಾಟಿ ಬಲಕ್ಕೆ ಚಾರಣ ಮಾಡಿದರೆ ದೂರದಿಂದಲೇ ಬಲ್ಲಾಳರಾಯನಕೋಟೆ ಧರ್ಶನವಾಗುತ್ತದೆ, ಬಂಡಾಜೆಯಿಂದ ಬಲ್ಲಾಳರಾಯನದುರ್ಗಕ್ಕೆ ಮಾರ್ಗದರ್ಶಿಯ ಅವಶ್ಯಕತೆ ಇರುವುದಿಲ್ಲ ಎಂಬುದು ನನ್ನ ಅನಿಸಿಕೆ,


ಬೆಳಿಗ್ಗೆ ೯:೩೦ ಕ್ಕೆ ಹೊರಟ ನಾವು ಉತ್ತರ ದಿಕ್ಕಿಗೆ ಇರುವ ಗುಡ್ಡವನ್ನು ಹತ್ತಲು ಶುರು ಮಾಡಿದೆವು ತುದಿ ತಲುಪುವಷ್ಟರಲ್ಲಿ ಅರ್ಧ ತಾಸು ಬೇಕಾಯ್ತು, ನಮ್ಮ ಹಿಂದೆ ಇನ್ನು ಬರುವವರಿದ್ದರು ಅಲ್ಲಿಯ ತನಕ ವಿಶ್ರಾಂತಿಗೆಂದು ಮರದ ಕೆಳಗೆ ನೆಲಕ್ಕೊರಗಿದೆವು ಅಷ್ಟೊತ್ತಿಗೆ ಹಿಂದೆ ಬರುತ್ತಿದ್ದ ಚಾರಣ ಮಿತ್ರರು ಕೂಡ ಬಂದರು, ನಮ್ಮ ಮಾರ್ಗದರ್ಶಿ "ಕುನ್ಯಾ" ಇನ್ನು ನೀವು ಆರಾಮವಾಗಿ ಹೋಗಬಹುದು ನನ್ನ ಅಗತ್ಯವಿರುವುದಿಲ್ಲ ಎಂದು ತಿಳಿಸಿ ಚಾರಣ ಶುಲ್ಕ ೭೦೦ ರೂಪಾಯಿ ಪಡೆದು ಹೊರಟರು, (ಹವ್ಯಾಸಿ ಚಾರಣಿಗರಿಗೆ ಗೌಡ್ರ ಮನೆಯಿಂದ ಕೇವಲ ಇಪ್ಪತ್ತು ನಿಮಿಷದ ಚಾರಣಕಷ್ಟೆ ಮಾತ್ರ ಮಾರ್ಗಧರ್ಶನದ ಅವಶ್ಯಕತೆ ಇದೆ, ಇನ್ನು ಮುಂದಕ್ಕೆ ಸರಿಯಾದ ಮಾಹಿತಿ ಗೊತ್ತಿದ್ರೆ ನಿಸ್ಸಂದೇಹವಾಗಿ ಬಂಡಾಜೆ ಜಲಪಾತ -ಬಲ್ಲಾಳರಾಯನ ದುರ್ಗ ತಲುಪಬಹುದು)


ಪಯಣದ ಹಾದಿಯಲ್ಲಿ...

ಚಾರಣದ ಹಾದಿಯುದ್ದಕ್ಕೂ ಎತ್ತ ನೋಡಿದರೂ ಕಾಣುವ ಬೋಳು ಬೆಟ್ಟಗಳ ಸುಂದರ ರಮಣೀಯ ದೃಶ್ಯ, ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ಅಡ್ಡಲಾಗಿ ಹಾದು ಹೋಗಿದ್ದ ಒಂದು ಸಣ್ಣ ದಿಬ್ಬ ಅದನ್ನ ಯಾರೋ ಕಡಿದು "v" ಅಕಾರದಲ್ಲಿ ಜಾಗ ಮಾಡಿದಂತಿತ್ತು, ದಾಟಿ ಮುಂದೆ ಬಂದಾಗ ಎದುರಿಗಿದ್ದ ಸುಂದರ ಬೋಳು ಪರ್ವತ ಅಲ್ಲಿಯೂ ಕೂಡ ಒಂದೈದು ನಿಮಿಷ ಸುಂದರ ಪ್ರಕೃತಿಯ ನೋಟವನ್ನು ಕ್ಯಾಮೆರದಲ್ಲಿ ಸೆರೆಹಿಡಿದು ಮತ್ತೆ ಮುಂದುವರಿದೆವು.


ದೂರದಿಂದಲೇ ಬೆಟ್ಟದ ಮೇಲೆ ಕೋಟೆಯ ದರ್ಶನವಾಯಿತು, ಸಹ ಚಾರಣ ಮಿತ್ರರು "ಅಲ್ ನೋಡ್ರೋ..." ಕೋಟೆ ಕಾಣಿಸ್ತಾಯಿದೆ ಅದೇ ಕೋಟೆ ಎಂದು ಬೊಬ್ಬೆಯಿಡುತ್ತಿದ್ದರು.


ದೂರದಲ್ಲಿ ಬಲ್ಲಾಳರಾಯನ ಕೋಟೆಯ ದೃಶ್ಯ

ನಡೆವ ಹಾದಿಯಲ್ಲಿ ಸಣ್ಣ ಪುಟ್ಟ ಮರ ಗಿಡಗಳು ಇಲ್ಲದಿದ್ದರಿಂದ ಬಿಸಿಲ ಬೇಗೆ ತಡೆದುಕೊಳ್ಳುವುದು ಅಸಾಧ್ಯವೆನಿಸುತಿತ್ತು, ಹಾದಿಯ ಎಡಕ್ಕೆ ಕುದ್ರೆಮುಖದ ಸುಂದರ ಪರ್ವತ ಶ್ರೇಣಿಯ ನಡುವೆ ಯಾವುದೋ ಗಿರಿ ಕಂದರದಿಂದ ಸಣ್ಣ ಎಳೆಯಂತೆ ಬೀಳುತಿದ್ದ ಜಲಧಾರೆ ನಮ್ಮ ಮನಸಿಗೆ ಮುದನೀಡುತಿದ್ದರೆ ಎದುರಿಗೆ ಕಾಣಿಸುತ್ತಿದ್ದ ಕೋಟೆ ನಮ್ಮನ್ನು ಅಪ್ಪಿಕೊಳ್ಳುವಂತೆ ಸ್ವಾಗತಿಸುತಿತ್ತು, ಅಂತೂ ಕೋಟೆ ಹೊಕ್ಕಾಗ ಮದ್ಯಾಹ್ನ ಸಮಯ ಹನ್ನೆರಡಾಗಿತ್ತು.


ಬಲ್ಲಾಳರಾಯನ ಕೋಟೆಯ ಮೇಲೆ...



ಜಂಪಿಂಗ್‌ನಲ್ಲಿ ನಿರತರಾಗಿರುವ ವಿನಯ್, ಗಜೇಂದ್ರ ಮತ್ತು ಭರತ್


ಸುತ್ತಲೂ ಆಳೆತ್ತರದ ಗೋಡೆ ಒಳಗೆಲ್ಲ ಪಾಳು ಜಾಗ ಯಾವುದೋ ಒಂದು ಮೂಲೆಯಲ್ಲಿ ಅನಾಥವಾಗಿ ಬಿದ್ದಿದ್ದ ಬೀಸುವ ಕಲ್ಲು, ಹುಲಿಯೋ ಅಥವಾ ಚಿರತೆಯ ದಾಳಿಗೆ ಒಳಗಾದ ಯಾವುದೋ ಪ್ರಾಣಿಯ ತಲೆ ಬುರುಡೆ ಮತ್ತು ಮೂಳೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೃಶ್ಯ ಒಂದೆಡೆಯಾದರೆ, ಎಲ್ಲೋ ದೂರದಲ್ಲಿ ನಮ್ಮ ಕಣ್ಣಿಗೆ ಬಿದ್ದ ಗಡಾಯಿಕಲ್ಲು, ಅಮೇದಿಕಲ್ ಮತ್ತು ಎತ್ತಿನಭುಜ ಪರ್ವತಗಳ ನೋಟವನ್ನಂತೂ ಮರೆಯಲು ಸಾಧ್ಯವಿಲ್ಲ, ಇಂಚಿಂಚ್ಚು ಬಿಡದೆ ಸುತ್ತಾಡಿದ ನಂತರ ಎಲ್ಲರೂ ಒಟ್ಟಾಗಿ ಕುಳಿತು ಊಟ ಮುಗಿಸಿ ಹೊರಡಲು ಸಿದ್ದವಾದೆವು ,ನಮ್ಮ ಗುಂಪಿನ ಸಹ ಚಾರಣಿಗ ವಿನಯ್ ಇದಕ್ಕೂ ಮುಂಚೇನೆ ಒಂದು ಬಾರಿ ಇಲ್ಲಿಗೆ ಬಂದಿದ್ರಂತೆ ಹಾಗಾಗಿ ಇಲ್ಲಿಂದ ಅವರೇ ನಮಗೆ ಮಾರ್ಗದರ್ಶಕರಾಗಿ ಮುನ್ನಡೆದರು ನಾವು ಅವರನ್ನು ಹಿಂಬಾಲಿಸಿ ಹೊರಟಾಗ ಸಮಯ ಮದ್ಯಾಹ್ನ ೧:೧೫ ಆಗಿತ್ತು.


ಬಲ್ಲಾಳರಾಯನ ದುರ್ಗದಿಂದ ತೆಗೆದ ದೃಶ್ಯ

ಬಂಡಾಜೆಯಿಂದ ಬಂದ ದಾರಿಯಲ್ಲೆ ವಾಪಾಸ್ ಬಂದು ಬಲಕ್ಕೆ ಹಾದು ಹೋಗಿದ್ದ ಹಾದಿಯಲ್ಲಿ ಕೆಳಗಿಳಿಯತೊಡಗಿದೆವು, ಚಾರಣ ಶುರುಮಾಡಿದ ನಲವತ್ತೈದು ನಿಮಿಷಗಳ ಬಳಿಕ ನಮಗೆ ಎದುರಾದದ್ದು ಕವಲಾದ ಹಾದಿ ಎಡಹಾದಿಯಲ್ಲಿ ಹೋದರೆ ಮಲ್ಲಿಕಾರ್ಜುನ ದೇವಸ್ಥಾನ ಮಾರ್ಗವಾಗಿ ಸುಂಕಶಾಲೆ ತಲುಪಬಹುದು, ಬಲ ಹಾದಿ ಹಿಡಿದು ಹೊರಟರೆ ಓರಿಕಾನ್ ಎಸ್ಟೇಟ್ ಮಾರ್ಗವಾಗಿ ಸುಂಕಶಾಲೆ ತಲುಪಬಹುದು, ವಿನಯ್‌ ಇಲ್ಲೇ ಸಮೀಪದಲ್ಲಿ "ರಾಣಿ ಬಾಗಿಲು" ಇದೆ ಬನ್ನಿ ತೋರಿಸ್ತೀನಿ ಅಂದ್ರು, ಕೆಲ ಮಂದಿ ಮಾತ್ರ ಅವರನ್ನು ಹಿಂಬಾಲಿಸಿ ಹೊರಟೊ ಸುಸೈಡ್ ಪಾಯಿಂಟ್‌ನಂತಿದ್ದ ಆ ಜಾಗದಿಂದ ಕುದ್ರೆಮುಖದ ಸಾಲು ಸಾಲು ಪರ್ವತಗಳ ಭವ್ಯ ರಮಣೀಯ ದೃಶ್ಯ ಅದ್ಭುತವಾಗಿತ್ತು, ಮತ್ತೆ ವಾಪಸಾಗಿ ಎಸ್ಟೇಟ್ ಹಾದಿ ಹಿಡಿದು ಹೊರಟೆವು ಸ್ವಲ್ಪ ಹೊತ್ತಿನ ಬಳಿಕ ಆ ಹಾದಿಯಲೆಲ್ಲ ಗಿಡಗೆಂಟೆಗಳು ಬೆಳೆದು ಇದು ಹಾದಿನಾ? ಅನ್ನೋ ಸ್ಥಿತಿ ನಿರ್ಮಾಣವಾಗಿತ್ತು, ತುಂಬಾ ವರ್ಷಗಳಿಂದ ಕಾಡುಪ್ರಾಣಿಗಳ ಹೊರತಾಗಿ ಮನುಷ್ಯರಾರೂ ಓಡಾಡಿರದ ಹಾದಿ ಅದು, ಇದೆಲ್ಲದರ ನಡುವೆ ಹೇಗೋ ನಮ್ಮ ಚಾರಣದ ಹಾದಿ ಸಾಗುತ್ತಲ್ಲೇ ಇತ್ತು.

ಹೀಗೆ ಸಾಗುತ್ತಿರುವಾಗ ಮತ್ಯಾವುದೋ ಹಾದಿ ಎಡಕ್ಕೆ ಇಳಿಜಾರಿನಲ್ಲಿ ಹಾದುಹೋಗಿತ್ತು ನಾವೆಲ್ಲ ನೇರ ಹಾದಿ ಬಿಟ್ಟು ಎಡ ಹಾದಿ ತುಳಿದು ವಿನಯ್‌ರವರನ್ನು ಹಿಂಬಾಲಿಸಿ ಸ್ವಲ್ಪ ದೂರ ಹೊರಟೆವು ಕ್ರಮೇಣ ಆ ದಾರಿ ಅಲ್ಲಿಗೆ ಮುಕ್ತಾಯಗೊಂಡಿತು, ಸಣ್ಣ ಬಯಲು ಪ್ರದೇಶದಂತಹ ಆ ಜಾಗ ಸುತ್ತಲೂ ಕಾಡು, ಕಾಡೆಮ್ಮೆಗಳು ಬಿದ್ದು ಒದ್ದಾಡಿದ ಗುರುತು ಬಿಟ್ಟರೆ ಬೇರೇನೂ ಕಾಣಿಸುತ್ತಿರಲಿಲ್ಲ ಕೆಲವು ಆಪ್ತ ಸ್ನೇಹಿತರು ವಿನಯ್‌ ಅವರನ್ನ "ಇವನ್ಯಾವನಲೇ ದಾರಿ ಗೊತ್ತೇನೊ? ದೊಡ್ಡದಾಗಿ ಕರ್ಕೊಂಡು ಬಂದು ಬಿಟ್ಟೆಯೆಲ್ಲಾ" ಅಂತೆಲ್ಲಾ ರೇಗಿಸುತ್ತಿದ್ದರು, ಎತ್ತರದ ಮರವನ್ನೇರಿದ್ರೆ ಯಾವುದಾದ್ರು ದಾರಿ ಕಾಣಿಸಬಹುದೇನೊ? ಅಂತ ನಮ್ಮ ವಿನಯ್ ತಡ ಮಾಡದೆ ಹೀರೊನಂತೆ ಅಲ್ಲೇ ಇದ್ದ ಒಂದು ಮರವನ್ನೇರಿದ್ರು, ಸುತ್ತಲೂ ನೋಡಿದ ವಿನಯ್ ಯಾವುದೇ ಪ್ರಯೋಜನವಿಲ್ಲ ಎಂಬಂತೆ ಸಪ್ಪೆ ಮೋರೆ ಮಾಡಿಕೊಂಡು ಮರದಿಂದ ಕೆಳಗಿಳಿದ್ರು.


ಮರವೇರಿ ದಾರಿ ಹುಡುಕುತ್ತಿರುವ ವಿನಯ್.

ಪುನಃ ವಾಪಾಸ್ ಕವಲಾದ ಹಾದಿಗೆ ಬಂದು ನೇರ ಹಾದಿ ಹಿಡಿದು "ಒಂದು ಕೈ ನೋಡಿಯೇ ಬಿಡೋಣ" ಎನ್ನುವಂತೆ ಗಿಡಗೆಂಟೆಗಳ ನಡುವೆ ಚಾರಣ ಮಾಡಿದೆವು, ಸ್ವಲ್ಪ ಹೊತ್ತಿನ ಬಳಿಕ ಎಲ್ಲರನ್ನು ಇಲ್ಲೆ ನಿಲ್ಲುವಂತೆ ಸೂಚಿಸಿ ದಾರಿ ಹುಡುಕಲು ಮರದ ಒಂದು ದೊಡ್ಡ ಕೊಂಟನ್ನಿಡಿದು ತ್ರಿವಿಕ್ರಮನಂತೆ ತಾವೊಬ್ಬರೆ ಮುನ್ನುಗ್ಗಿ ಹೋದ ವಿನಯ್ ತುಂಬಾ ಹೊತ್ತಾದ್ರು ಬರಲೇ ಇಲ್ಲ, ಇನ್ನೊಂದು ದಿನ ಕಾಡಲ್ಲಿ ಉಳಿಯುವ ಸಂದರ್ಭವೇನಾದ್ರು ಒದಗಿ ಬರಬಹುದಾ? ಅಂತಾ ನಾನು ಲೆಕ್ಕಚಾರಮಾಡಒಡಗಿದೆ.

ಅಷ್ಟರಲ್ಲಿ ವಿನಯ್ ವಾಪಾಸ್ ಬಂದು ದೂರದಲ್ಲಿ ಯಾವುದೋ ಮನೆ ತರಹ ಕಾಣ್ತಾ ಇದೆ ಬನ್ನಿ ಹೋಗೋಣ ಅಂದ್ರು, ಪುನಃ ಅವರನ್ನ ಹಿಂಬಾಲಿಸಿ ಹೊರಟೆವು ಸ್ವಲ್ಪ ಹೊತ್ತು ಸಾಗಿದ ಬಳಿಕ ನಾಯಿ ಬೊಗಳುತ್ತಿರುವ ಶಬ್ದ ನಮ್ಮ ಕಿವಿಗೆ ಬಿದ್ದ ಕೂಡಲೇ ಯಾವುದೋ ಮನೆಯಿರುವುದು ಖಚಿತವಾಯ್ತು, ಆ ಹಾದಿ ಅದ್ಯಾವುದೊ "ಭೂತ ಬಂಗಲೆ" ಥರಾ ಇದ್ದ ಎಸ್ಟೇಟೊಂದಕ್ಕೆ ನಮ್ಮನ್ನ ಕರೆದೋಯ್ತು, ಅಲ್ಲಿ ತೂಗು ಹಾಕಿದ್ದ ನಾಮಫಲಕ ನೋಡಿ ತಿಳಿಯಿತು ಇದೇ "ಓರಿಕಾನ್ ಎಸ್ಟೇಟ್" ಅಂತಾ, ಆ ಎಸ್ಟೇಟ್‌ನಲ್ಲಿ ಯಾರೂ ವಾಸವಿರಲಿಲ್ಲ ಅದನ್ನ ನೋಡಿಕೊಳ್ಳೋಕ್ಕೆ ಅಂತ ಪಕ್ಕದಲ್ಲೆ ಒಂದು ಚಿಕ್ಕ ವಾಸದ ಮನೆಯಿತ್ತು, ನಾಯಿ ಒಂದೇ ಸಮನೇ ಬೊಗಳುತ್ತಿದ್ದರಿಂದ ಆ ಮನೆಯಿಂದ ಹೊರಬಂದ ಚಿಕ್ಕ ಹುಡುಗನನ್ನು ಈ ದಾರಿ ಸುಂಕಶಾಲೆಗೆ ಹೋಗುತ್ತಾ? ಅಂತಾ ಕೇಳಿದಕ್ಕೆ ಹೂ! ನೇರ ದಾರೀಲಿ ಹೋದ್ರೆ ಸ್ವಲ್ಪ ಸಮಯ ಹಿಡಿಯುತ್ತೆ ಹೀಗೆ ಅಲ್ಲಿ ಬಲಗಡೆ ಕಾಣಿಸ್ತಾಯಿರೊ ಇಳಿಜಾರಿನಲ್ಲಿ ಹೋಗಿ ಸ್ವಲ್ಪ ಬೇಗ ಹೋಗಬಹುದು ಅಂತಾ ಸಲಹೆ ಕೊಟ್ಟ ಪುಣ್ಯಾತ್ಮ. ನಮ್ಮ ಬೆನ್ನು ಚೀಲದಲ್ಲಿದ್ದ ಬಿಸ್ಕತ್ ಪೊಟ್ಟಣಗಳನ್ನು ಆ ಹುಡುಗನಿಗೆ ಕೊಟ್ಟು ಇಳಿಜಾರಿನಲ್ಲಿ ಇಳಿದು ಹೊರಟೆವು ಅಲ್ಲೊಂದು ಅಡ್ಡಲಾಗಿ ಹರಿಯುತ್ತಿದ್ದ ನೀರಿನ ಹಳ್ಳ ಸಿಕ್ಕಿದ ಕೂಡಲೆ ಮನಸೋ ಇಚ್ಚೆ ನೀರು ಕುಡಿದು ಮುಖಕ್ಕೆ ನೀರೆರಿಚಿದಾಗ ಆಯಾಸವಾಗಿದ್ದ ನಮ್ಮ ಮೈಮನಗಳು ಹಗುರಾದವು, ತದ ನಂತರ ಡಾಂಬರ್ ರಸ್ತೆ ತಲುಪಿ ಚಾರಣವನ್ನು ಹಾಗೆ ಮುಂದುವರೆಸಿದೆವು.

ಹೊರ‍ನಾಡು - ಕೊಟ್ಟಿಗೆಹಾರ ರಸ್ತೆ ನಮಗೆ ಇನ್ನೇನು ಒಂದೆರಡು ಕಿ.ಮೀ ನ ಅಂತರ ಇದೆ ಅನ್ನುವಾಗ ಕಾಫಿ ತೋಟದ ಕೂಲಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಟೆಂಪೊವೊಂದು ನಮ್ಮನ್ನು ಹತ್ತಿಸಿಕೊಂಡು ಕೊಟ್ಟಿಗೆಹಾರ ತನಕ ಬಿಟ್ಟು ಹೋಯ್ತು, ಆದರೆ ಚಾಲಕ ಮಾತ್ರ ನಮ್ಮಿಂದ ನಯಾ ಪೈಸೆನೂ ಅಪೇಕ್ಷಿಸದೆ ಹೊರಟು ಹೋದ, ಅದೇ ನಮ್ಮ ಬೆಂಗಳೂರಿನ ಮಂದಿ ಆಗಿದ್ರೆ? ಮಲೆನಾಡಿಗರಿಗಿರೋ ಪ್ರೀತಿ ವಿಶ್ವಾಸ ನಮ್ಮ ರಾಜಧಾನಿ ಮಂದಿಗೆ ಇದ್ರೆ ಎಷ್ಟು ಚೆನ್ನ ಅಲ್ವಾ!

ನನಗೆ ಕೊಟ್ಟಿಗೆಹಾರ ಅಂದ್ರೆ ತುಂಬಾ ಇಷ್ಟ ಅಲ್ಲಿನ ನೀರ್‌ದೋಸೆ, ಮೆಣಸಿನಕಾಯಿ ಬಜ್ಜಿ ನೆನೆಸಿಕೊಂಡ್ರಂತೂ ಬಾಯಲ್ಲಿ ನೀರೂರುತ್ತೆ, ಬಂದ ತಕ್ಷಣ ನಾನು ಅದೇ ಕೆಲಸ ಮಾಡಿದ್ದು, ಬಳಿಕ ಊಟ ಮುಗಿಸಿ ಜೀಪ್‌ನಲ್ಲಿ ಮೂಡಿಗೆರೆಗೆ ಪ್ರಯಾಣಿಸಿದೆವು ಅಲ್ಲಿಂದ ರಾಖಿ ಗ್ರೂಪ್ಸ್ ಚಿಕ್ಕಮಗಳೂರಿಗೆ ಪ್ರಯಾಣಿಸಿದರೆ, ಗಜೇಂದ್ರ ಮತ್ತು ಸಂತೋಷ್ ಬೆಂಗಳೂರಿನ ಹಾದಿ ಹಿಡಿದು ಹೊರಟರು, ನಾನು ಮೈಸೂರಿನ ಬಸ್ ಬರೋವರೆಗೂ ಕಾದು ಬಸ್ ಬಂದ ಬಳಿಕ ಮೈಸೂರಿಗೆ ಪ್ರಯಾಣ ಬೆಳೆಸಿದ ನಂತರ ಮತ್ತೊಂದು ಬಸ್ನಲ್ಲಿ ಚೆನ್ನಪಟ್ಟಣ ತಲುಪಿ ಅಲ್ಲಿಂದ ಮನೆ ತಲುಪುವಷ್ಟರಲ್ಲಿ ಸಮಯ ಬೆಳಗಿನ ಜಾವ ೩:೩೦ ಆಗಿತ್ತು.