ಗುರುವಾರ, ಸೆಪ್ಟೆಂಬರ್ 15, 2011

ನರಸಿಂಹ ಪರ್ವತ ಚಾರಣ / ಟ್ರೆಕ್

ದಿನಾಂಕ : ೦೫.೦೩.೨೦೧೧ ಮತ್ತು ೦೬.೦೩.೨೦೧೧


ಎತ್ತರ: ಸಮುದ್ರ ಮಟ್ಟದಿಂದ ಸುಮಾರು ೩೭೮೦ ಅಡಿಗಳು


ಮಾರ್ಗ: ಬೆಂಗಳೂರು-ಶಿವಮೊಗ್ಗ-ತೀರ್ಥಹಳ್ಳಿ-ಆಗುಂಬೆ-ಬರ್ಕಣ ಜಲಪಾತ-ನರಸಿಂಹ ಪರ್ವತ-ಕಿಗ್ಗ-ಶೃಂಗೇರಿ


ಜಿಲ್ಲೆ: ಶಿವಮೊಗ್ಗ ಮತ್ತು ಚಿಕ್ಕಮಗಳೂರು


ತಂಡ: ಸಂತೋಷ್, ಸಾಯಿಪ್ರಕಾಶ್, ಗಜೇಂದ್ರ ಮತ್ತು ನಾನು


ಒಟ್ಟು ಕ್ರಮಿಸಿದ ದೂರ: ಸುಮಾರು ೨೨ ಕಿ.ಮೀ.


*********************************************************************************

ದಕ್ಷಿಣ ಭಾರತದ ಚಿರಾಪುಂಜಿ ಎಂದೇ ಪ್ರಸಿದ್ದವಾಗಿರುವ ಆಗುಂಬೆಯ ದಟ್ಟ ಕಾನನದಲ್ಲಿರುವ ಬರ್ಕಣ ಜಲಪಾತಕ್ಕೆ ಚಾರಣ ಮಾಡುವ ಶುಭ ಘಳಿಗೆ ಕೊನೆಗೂ ಕೂಡಿ ಬಂತು, ಶುಕ್ರವಾರ ರಾತ್ರಿ ಎಂದಿನಂತೆ ಸಕಲ ಸಿದ್ದತೆಯೊಂದಿಗೆ ಎಲ್ಲರಿಗಿಂತ ಮೊದಲೇ ನಾನು ಮತ್ತು ಗಜೇಂದ್ರ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಂದೆವು,ನಂತರ ಬಂದ ಸಾಯಿಪ್ರಕಾಶ್ ನಮ್ಮನ್ನು ಕೂಡಿಕೊಂಡರು, ಸಂತೋಷ್ ಮಾತ್ರ ಬರಬೇಕಿತ್ತಷ್ಟೆ ಆಗುಂಬೆಗೆ ಹೊರಡುವ ರಾಜಹಂಸ ಬಸ್ ಆಗಲೇ ಸಿದ್ದವಾಗಿ ನಿಂತ್ತಿತ್ತು, ನಾವು ಮೂವರು ಬಸ್‌ನೊಳಗೆ ಮೊದಲೇ ನಿಗಧಿಯಾಗಿದ್ದ ನಮ್ಮ ಆಸನದಲ್ಲಿ ಕುಳಿತುಕೊಂಡೆವು ಅಷ್ಟರಲ್ಲೇ ಸಂತೋಷ್ ಕೂಡ ಬಂದ್ರು.ರಾತ್ರಿ ೧೦:೧೦ ಕ್ಕೆ ಹೊರಟ ರಾಜಹಂಸ ಶಿವಮೊಗ್ಗ, ತೀರ್ಥಹಳ್ಳಿ ಮಾರ್ಗವಾಗಿ ಆಗುಂಬೆ ತಲುಪಿದಾಗ ಬೆಳಿಗ್ಗೆ ಏಳಾಗಿತ್ತು.

ಬಸ್ ನಿಲ್ದಾಣದ ಹೋಟೆಲ್‌ನಲ್ಲಿ ತಿಂಡಿಯನ್ನು ತಿಂದು ನಕ್ಷಲ್ ಪೀಡಿತ ಪ್ರದೇಶವಾದ್ದರಿಂದ ಚಾರಣಕ್ಕೆ ಅನುಮತಿ ಕೇಳಲು ಸಮೀಪದಲ್ಲೆ ಇದ್ದ ಪೊಲೀಸ್ ಠಾಣೆಗೆ  ಗಜೇಂದ್ರ ಮತ್ತು ಸಾಯಿ ಪ್ರಕಾಶ್ ಹೊರಟರು.

ಸ್ವಲ್ಪ ಸಮಯದ ನಂತರ ಬಂದ ಅವರಿಬ್ಬರು  "ಆ ಪ್ರದೇಶದಲ್ಲಿ ಗಸ್ತು ಪಡೆಯ ಕಾರ್ಯಾಚರಣೆ ಇರುವುದರಿಂದ ಇವತ್ತು ಹೋಗುವುದು ಬೇಡ ನಾಳೆ ಬೇಕಾದ್ರೆ ಹೋಗಿ" ಅಂದ್ರಂತ್ತೆ, ಬಳಿಕ ಸ್ವಲ್ಪ ಹೊತ್ತು ಯೋಚನೆ ಮಾಡಿ ಮೊದಲು ಕೃಷ್ಣಪ್ಪನವರನ್ನು ಭೇಟಿ ಮಾಡುವ ನಿರ್ಧಾರಕ್ಕೆ ಬಂದು ಅಲ್ಲಿಂದ ಆಟೋದಲ್ಲಿ ಹೊರಟೆವು ಮಲಂದೂರಿನ ಕಡೆಗೆ...

ಹಾಗೆಯೇ ಮಾರ್ಗ ಮದ್ಯೆ ಆಟೋ ನಿಲ್ಲಿಸಿ ನಮ್ಮ ಲಗ್ಗೇಜನ್ನು ಆಟೋದಲ್ಲಿ ಬಿಟ್ಟು, ಚಾಲಕನಿಗೆ ಒಂದರ್ಧ ಗಂಟೆಯಲ್ಲಿ ಮರ‍ಳಿ ಬರ್ತೀವಿ ಎಂದು ತಿಳಿಸಿ ಜೋಗಿಗುಂಡಿ ಜಲಪಾತದ ಕಡೆಗೆ ಹೆಜ್ಜೆ ಹಾಕಿದೆವು, ಏಳೆಂಟು ನಿಮಿಷದ ನಡಿಗೆಯ ನಂತರ ಜೋಗಿಗುಂಡಿ ಜಲಧಾರೆಯ ಧರ್ಶನವಾಯ್ತು,
ಈ ಹೊಂಡದಲ್ಲಿ ಸಣ್ಣದಾಗಿ ಧುಮುಕುವ ಮಲಪಹರಿ ನದಿಯು ಹರಿಯುತ್ತ ಮುಂದೆ ತುಂಗಾ ನದಿಯಲ್ಲಿ ಲೀನವಾಗುತ್ತದೆ, ಈ ಸ್ಥಳದಲ್ಲಿ ಜೋಗಿ ಎಂಬ ಋಷಿಮುನಿ ತಪಸ್ಸು ಮಾಡಿದ್ದರಿಂದ ಈ ಜಲಪಾತಕ್ಕೆ "ಜೋಗಿಗುಂಡಿ" ಅನ್ನುವ ಹೆಸರು ಬಂದಿದೆಯಂತೆ.

ನಮ್ಮ ಸ್ನಾನಾಧಿ ಕಾರ್ಯಗಳನ್ನು ಅಲ್ಲಿಯೇ  ಮುಗಿಸಿ ಕೆಲವು ಛಾಯಚಿತ್ರಗಳನ್ನು ತೆಗೆಯುವ ಹೊತ್ತಿಗೆ ಆಟೋ ಚಾಲಕ ಬಂದೆ ಬಿಟ್ಟ,

ಚಾಲಕ: ಬನ್ನಿ ಸಾರ್ ತುಂಬಾ ಹೊತ್ತಾಯ್ತು,

ನಾವು: ಹಾ! ಎರಡೇ ನಿಮಿಷ ಬರ್ತೀವಿ


ಜೋಗಿಗುಂಡಿಯಲ್ಲಿ ನಮ್ಮ ತಂಡ (ಸಾಯಿಪ್ರಕಾಶ್,ನಾನು, ಸಂತೋಷ್ ಮತ್ತು ಗಜೇಂದ್ರ)

ಬಳಿಕ ತಡಮಾಡದೆ ಅಲ್ಲಿಂದ ಹೊರಟು ಮಲಂದೂರಿನ ಕೃಷ್ಣಪ್ಪನವರ ಮನೆಯ ಬಳಿ ಬಂದೆವು,
ಅಷ್ಟೊತ್ತಿಗೆ ಇನ್ನಿಬ್ಬರು ಚಾರಣಿಗರು ಬಂದ್ರು, ಹಿಂದೇನೆ ಪೊಲೀಸ್ ಗಸ್ತು ಪಡೆ ವಾಹನ ಮನೆ ಮುಂದೆ ಹಾದು ಹೋಯಿತು.

ಬಳಿಕ ಸಮಯ ೯:೨೫ ರ ಹೊತ್ತಿಗೆ ಕೃಷ್ಣಪ್ಪನವರನ್ನು ಹಿಂಬಾಲಿಸಿ ಅವರ ಮನೆ ಪಕ್ಕದ ಕಾಡು ಹಾದಿಯಲ್ಲಿ ಚಾರಣ ಶುರು ಮಾಡಿದೆವು, ಕೃಷ್ಣಪ್ಪ ಮತ್ತು ಇನ್ನಿಬ್ಬರು ಚಾರಣಿಗರು ಮುಂದೆ ಹೋಗುತಿದ್ದರೆ ನಾವು ನಾಲ್ವರು ಕಾಡಿನ ಸೌಂಧರ್ಯ ಸವಿಯುತ್ತ ಅಲ್ಲಲ್ಲಿ ಸಿಕ್ಕ ಸುಂದರ ನೋಟವನ್ನ ಕ್ಯಾಮೆರದಲ್ಲಿ ಸೆರೆಹಿಡಿದು ಮುಂದೆ ಸಾಗುತ್ತಿದ್ದೆವು, ಕೆಲವೇ ನಿಮಿಷದಲ್ಲಿ ಸಾಯಿ ಪ್ರಕಾಶ್ ನಮ್ಮನ್ನು ಹಾದಿ ತಪ್ಪಿಸಿದರು ಒಂದು ಸಣ್ಣ ನೀರಿಲ್ಲದ ಹಳ್ಳದೊಳಗೆ ನಡೆಯುತ್ತಿದ್ದೆವು, ಸುತ್ತಲೂ ಮೌನ ಕೃಷ್ಣಪ್ಪನವರ ಸುಳಿವೇ ಇಲ್ಲ ಜೋರಾಗಿ ಕೂಗಿ ಕರೆದೆವು ನಮ್ಮ ಕೂಗು ಅವರಿಗೆ ಕೇಳಿಸಿದ ಮೇಲೆ ದೂರದಲ್ಲೆ ನಿಂತು ನಮ್ಮನ್ನು ಕೂಗಿ ಹಳ್ಳ ಬಿಟ್ಟು ಮೇಲೆ ಬರಲು ತಿಳಿಸಿದರು, ಹಾದಿನೇ ಇಲ್ಲದ ಪೊದೆಯಲ್ಲಿ ಹೇಗೋ ನುಸುಳಿ ಮತ್ತೆ ಅವರನ್ನ ಸೇರಿಕೊಂಡೆವು.


ಮಾರ್ಗಧರ್ಶಿ ನೆರವಿಲ್ಲದೆ ಬಂದರೆ ಕಾಡಿನಲ್ಲಿ ಕಳೆದು ಹೋಗುವುದು ಖಚಿತ, ಚಾರಣದ ಹಾದಿ ಸವೆಸುತ್ತ ಸವೆಸುತ್ತ ಹಾದಿ ಕಿರಿದಾಗತೊಡಗಿತು ಕಾಳಿಂಗಸರ್ಪಗಳ ತವರೂರಾಗಿರುವ ಈ ದಟ್ಟ ಕಾನನದಲ್ಲಿ ನಾವು ಸ್ವಲ್ಪ ಎಚ್ಚರವಹಿಸಿ ಚಾರಣ ಮಾಡುತ್ತಿದ್ದೆವು, ಏರು ಹಾದಿ ಇರದ ಕಾರಣ ಅಷ್ಟೇನು ಶ್ರಮ ಅನ್ನಿಸುತ್ತಿರಲಿಲ್ಲ, ಮರಗಳ ಬೇರು ಬಿಳಲುಗಳೇ ನಮಗೆ ಕಾಳಿಂಗಗಳ ಹಾಗೆ ಗೋಚರಿಸುತ್ತಿದ್ದವು, ಆದರೂ ಒಂದಾದರೂ ಕಾಳಿಂಗ ಸರ್ಪದ ಧರ್ಶನ ಕೂಡ ಆಗಲಿಲ್ಲ, ಕೃಷ್ಣಪ್ಪನವರನ್ನು ಕೇಳಲಾಗಿ ಅವು ಪೊದೆ,ಪೊಟರೆ ಕೆಲವೊಮ್ಮೆ ಮರದ ಮೇಲೂ ಇರುತ್ತವೆಂದು ಹೇಳಿ ಮುಂದೆ ಸಾಗುತ್ತಿದ್ದರು, ಅಷ್ಟೊತ್ತಿಗೆ ನೀರಿನ ಹಳ್ಳವೊಂದು ಸಿಕ್ಕಿತು ಬಾಯಾರಿಕೆ ನೀಗಿಸಿಕೊಂಡು ಚಾರಣ ಮುಂದುವರಿಸಿದೆವು,ಸೂರ್ಯನ ಬಿಸಿಲೆ ಕಾಣದ ಈ  ದುರ್ಗಮ ಕಾಡಿನಲ್ಲಿ ಹಕ್ಕಿಗಳ ಕಲರವ ಬಿಟ್ಟರೆ ಮಿಕ್ಕೆಲ್ಲ ನೀರವ ಮೌನ.

ಆಗಾಗ ನಾನು  ಕೃಷ್ಣಪ್ಪನವರನ್ನು ಮಾತನಾಡಿಸುತ್ತ ನೀವು ಇಲ್ಲಿ ಯಾವಾವ ಪ್ರಾಣಿ ನೋಡಿದ್ದೀರಾ?

ಕೃಷ್ಣಪ್ಪ: ನಾನು ಹಲವಾರು ಸಾರಿ ಹುಲಿ ನೋಡಿದ್ದೀನಿ

ನಾನು: ತೊಂದರೆ ಗಿಂದರೆ ಏನಾದ್ರು...?

ಕೃಷ್ಣಪ್ಪ: ಇಲ್ಲ, ಏನೂ ತೊಂದರೆ ಮಾಡಲ್ಲ, ನಾವು ಅದಕ್ಕೆ ತೊಂದರೆ ಕೊಡಬಾರದು ಅಷ್ಟೆ!
           
ನಮಗೂ ನೋಡುವ ಆಸೆ ಇದ್ದರೂ ಆ ದೃಶ್ಯವನ್ನು ನೆನೆಸಿಕೊಂಡ್ರೆ ಸಾಕು ಈ ತಂಪಾದ ಕಾಡಿನಲ್ಲಿ ಯಾರಿಗೆ ತಾನೆ ಬೆವರು ಬರುವುದಿಲ್ಲ?

ಹೀಗೆ ಮುಂದೆ ಸಾಗುತ್ತ ಇರುವಾಗ ಒಂದು ಚಿಕ್ಕ ಹೊಳೆ ಅಡ್ಡಲಾಗಿ ಸಿಕ್ಕಿತು ಹೊಳೆ ದಾಟಿ ಮುನ್ನಡೆದ ನಾವು ತುಸು ಹೊತ್ತಿನಲ್ಲೆ ಬರ್ಕಣ ಜಲಪಾತದ ತುದಿ ತಲುಪಿದೆವು ೧೧:೩೦,

ಬಳಿಕ ಬೆನ್ನು ಚೀಲಗಳನ್ನಿಳಿಸಿ ಕ್ಯಾಮೆರ ಹಿಡಿದು ಬಂಡೆಗಲ್ಲಿನ ಮೇಲೆ ಒಬ್ಬೊಬ್ಬರೆ ಬೋರಲಾಗಿ ಮಲಗಿ ಕಣಿವೆಯ ಸುಂದರ ದೃಶ್ಯವನ್ನ ಸವಿದು ಸೆರೆಹಿಡಿಯುತ್ತಿದ್ದರು, ಬಂಡೆಯ ಮೇಲೆ ನಾನು ಕೂಡ ಸ್ವಲ್ಪ ಹುಷಾರಾಗಿ ಹೆಜ್ಜೆ ಹಿಡುತ್ತ  ಬೋರಲಾಗಿ ಮಲಗಿ ಮೇಲಿಂದ ಕಣಿವೆಯ ಕಡೆಗೆ ಕಣ್ಣಾಯಿಸಿದೆ.


ಬರ್ಕಣ ಜಲಪಾತದ ಮೇಲಿನ ದೃಶ್ಯ


ಅಬ್ಬಾ! ಜೋಗದ ಗುಂಡಿಯಂತೆ ಕಾಣುವ ಆಳವಾದ ಕಣಿವೆ,

ಸುಮಾರು ೮೫೦ ಅಡಿ ಎತ್ತರದಿಂದ ಈ ಸ್ಥಳದಲ್ಲಿ ಧುಮುಕುವ ಸೀತಾ ನದಿ
"ಬರ್ಕಣ ಜಲಪಾತ"ವೆಂದು ಪ್ರಸಿದ್ಧಿ ಪಡೆದಿದೆ.


ಬರ್ಕಣ ಜಲಪಾತದ ಮೇಲಿಂದ ತೆಗೆದ ದೃಶ್ಯ  

ಜಲಪಾತದ ಎದುರಿಗೆ ಇರುವ "ವಿಹಂಗಮ ನೋಟದ" ಸ್ಥಳದಿಂದ ನಿಂತು ನೋಡಿದರೆ "v" ಆಕಾರದಂತೆ ಕಾಣುವ ಈ ಸುಂದರ ಕಣಿವೆಯ ಸುತ್ತಲೂ ಹಸಿರ ಸೀರೆಯುಟ್ಟ ಹೊನ್ನ ವನರಾಶಿಯ ನಯನ ಮನೋಹರ ದೃಶ್ಯ ಕಾಣಸಿಗುತ್ತದೆ.


ಬರ್ಕಣ ಜಲಪಾತದ ಮೇಲಿಂದ ಕಣಿವೆಯತ್ತ ಒಂದು ನೋಟ...

ಸಿಕ್ಕ ಅವಕಾಶ ಬಿಡದೇ ನನ್ನ ಕ್ಯಾಮೆರಕ್ಕೆ ಬಿಡುವು ಕೊಡದೆ ಸುಂದರ ದೃಶ್ಯಗಳನ್ನ ಸೆರೆಹಿಡಿಯತೊಡಗಿದೆ, ಅಷ್ಟೊತ್ತಿಗಾಗಲೆ ನಮ್ಮ ಹೊಟ್ಟೆಗಳು ಚುರ್‌ಗುಟ್ಟಲು ಶುರುಮಾಡಿದೆವು, ತಡ ಮಾಡದೆ ಚಪಾತಿ ಮತ್ತು MTR ನ ಬಿಸಿಬೇಳೆಬಾತ್ ತಿಂದು ಹಸಿವನ್ನು ಸ್ವಲ್ಪ ಮಟ್ಟಿಗೆ ನೀಗಿಸಿಕೊಂಡೆವು.



ಬಳಿಕ ಜಲಕ್ರೀಡೆಯಾಡುವ ಹಂಬಲದಿಂದ ಮೊದಲು ಗಜೇಂದ್ರ ನೀರಿಗೆ ಇಳಿದೇಬಿಟ್ಟರು ನಂತರ ನಾವು ಒಬ್ಬೊಬ್ಬರಾಗೆ ನೀರಿಗೆ ಇಳಿದೆವು, ಹರಿಯುವ ನೀರಿನಲ್ಲಿ ಸೃಷ್ಟಿಯಾಗಿದ್ದ ಕಿರು ಜಲಪಾತದಿಂದ ಬೀಳುತಿದ್ದ ಜಲಧಾರೆಗೆ ಮೈಯೊಡ್ಡಿದ ಅಧ್ಭುತ ಅನುಭವ ಎಂದಿಗೂ ಮರೆಯಲಾಗದು.


ಗಜೇಂದ್ರ ಮತ್ತು ಸಾಯಿ ಇಬ್ಬರು ಹೊಳೆಯಲ್ಲಿ ಕಿರು ಜಲಪಾತಗಳ ಅನ್ವೇಷಣೆ ಮಾಡುತ್ತ ಮುಂದೆ ಮುಂದೆ ಹೋಗುತಿದ್ದರು,ಬಳಿಕ ನಮ್ಮನ್ನು ಕೂಗಿ ಕರೆದು ಬರಲು ಹೇಳಿದರು, ನಾನು ಮತ್ತು ಸಂತೋಷ್ ಕ್ಯಾಮೆರ ಹಿಡಿದು ಹೊರಟೆವು, ಜಾರಿ ಬೀಳುವ ಅವಕಾಶಗಳೇ ಹೆಚ್ಚಾಗಿದ್ದರಿಂದ ಬಂಡೆಗಲ್ಲಿನ ಮೇಲೆ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಿದ್ದೆವು ನನ್ನ ಕ್ಯಾಮೆರವನ್ನು ಸಂತೋಷ್ ಕೈಗೆ ಕೊಟ್ಟು  ನೀವು ನನ್ನನ್ನು ಹಿಂಬಾಲಿಸಿ ಎಂದು ಹೊಂಡದಂತಿದ್ದ ಜಾಗಕ್ಕೆ ಹುಷಾರಾಗಿ ಇಳಿದೆ ನಡು ಮಟ್ಟದ ನೀರಿತ್ತು ಹಿಂದೇನೆ ಸಂತೋಷ್ ಕೂಡ ಇಳಿಯುವ ಭರದಲ್ಲಿ  ಆಯತಪ್ಪಿ ಕ್ಯಾಮೆರ ಸಹಿತ ನೀರಿಗೆ ಮಗುಚಿಕೊಂಡ್ರು,
ನನ್ನ ಕ್ಯಾಮೆರಕ್ಕೆ ಲಕ್ವ ಹೊಡೆದು ಮಠ ಸೇರಿತು, ತಕ್ಷಣವೇ ಕ್ಯಾಮೆರದ ಬ್ಯಾಟರಿ ತೆಗೆದು ಬಿಸಿಲಿನಲ್ಲಿ ಒಣಗಲು ಬಿಟ್ಟು ಗಜೇಂದ್ರ ಮತ್ತು ಸಾಯಿ ಇದ್ದ ಸ್ಥಳಕ್ಕೆ ಬಂದೆವು, ಗಜೇಂದ್ರರವರು ಒಂದು ಉದ್ದದ ಕೋಲೊಂದನ್ನು ಹವಣಿಸಿ ತಂದು ನೀರು ಬೀಳುತಿದ್ದ ಸ್ಥಳದಲ್ಲಿ ಕೋಲನ್ನು ಬಿಟ್ಟು ಆಳವನ್ನು ಪರೀಕ್ಷೆ ಮಾಡತೊಡಗಿದರು.

ಅರೇ! ಕೋಲು ಸಂಪೂರ್ಣ ಮುಳುಗಿತು ಮತ್ತೆ ಕೋಲನ್ನು ಹೊರ ತೆಗೆದು ಅಳತೆ ಮಾಡಿದಾಗ ಕೇವಲ ಹನ್ನೆರಡು ಅಡಿ ಇತ್ತು, ಇನ್ನೆಲಲ್ಲಿ ಎಷ್ಟು ಆಳ ಇದೆಯೋ? ಅಂದುಕೊಂಡು ಬೇಗನೇ ಜಲಕ್ರೀಡೆ ಮುಗಿಸಿ ಕ್ಯಾಮೆರ ಇಟ್ಟಿದ್ದ ಸ್ಥಳಕ್ಕೆ ಬಂದೆ ಆದರೆ ಸಂಪೂರ್ಣ ಉಸಿರೆ ನಿಂತುಹೋಗಿತ್ತು.

ಅಷ್ಟೊತ್ತಿಗೆ ಕೃಷ್ಣಪ್ಪನವರು ಬಹಳ ಹೊತ್ತಾಯ್ತು ಹೊರಡೋಣ್ವ? ಅಂದ್ರು

ನಾನು ಅದೇ ಆತುರದಲ್ಲಿ ಕ್ಯಾಮೆರದ ಮೆಮೋರಿ ಕಾರ್ಡು ಬೀಳಿಸಿಬಿಟ್ಟೆ ,ಏನ್ ಗ್ರಹಚಾರವೊ?  ಎಲ್ಲರೂ ಹುಡುಕಲು ಶುರುಮಾಡಿದೆವು ಎಷ್ಟು ಹುಡುಕಿದರೂ ಸಿಗಲಿಲ್ಲ ನಿರಾಶೆಯಾಗಿ ಹೊರಡುವ ಹೊತ್ತಿಗೆ ಎಲ್ಲಿತ್ತೊ ಏನೋ ಯಾರ್ ಕಣ್ಣಿಗೆ ಬೀಳದ್ದು ಸಂತೋಷ್ ಕಣ್ಣಿಗೆ ಬಿದ್ದಿತ್ತು.

ಬಳಿಕ ತಡಮಾಡದೆ ಬರ್ಕಣ ಕಣಿವೆಗೆ ಧನ್ಯವಾದ ಹೇಳಿ ಹೊರಟಾಗ ಸಮಯ ಮದ್ಯಾಹ್ನ ೦೧:೫೦
ಮುಂದೆ ನಡೆಯುತ್ತ ನಡೆಯುತ್ತ ಏರು ಹಾದಿ ಶುರುವಾಯ್ತು ಆ ತಂಪಾದ ಕಾಡಿನಲ್ಲೂ ನಮಗೆ ಬೆವರಿಳಿಯುತಿತ್ತು, ಸೂರ್ಯನ ಕಿರಣಗಳೇ ಬೀಳದ ನಿತ್ಯಹರಿದ್ವರ್ಣದ ದಟ್ಟ ಮಳೆಕಾಡಿನಲ್ಲಿ ಜೀರುಂಡೆ, ಪಕ್ಷಿಗಳ ಇಂಚರ ಬಿಟ್ರೆ ಸುತ್ತೆಲ್ಲಾ ನಿಶ್ಯಬ್ದ ವಾತವರಣ.


ದಟ್ಟ ಕಾನನದಲ್ಲಿ...

ಸುಮಾರು ಎರಡು ಕಿ.ಮೀ ನಡೆದು ಬೆಟ್ಟವನ್ನೇರಿ ದಟ್ಟಕಾಡನ್ನು ಬಿಟ್ಟು ಬಯಲಿನಂತ ಜಾಗಕ್ಕೆ ಬಂದೆವು, ಹಾದಿ ಕವಲಾಗಿತ್ತು ನಾವು ನೇರ ಹಾದಿ ಹಿಡಿದು ಹೊರಟೆವು, ಮಾರ್ಗದರ್ಶಿ ಕೃಷ್ಣಪ್ಪನವರು ನಮ್ಮನ್ನು ನರಸಿಂಹ ಪರ್ವತಕ್ಕೆ ಬಿಟ್ಟು ಬಹುಬೇಗ ಹೊರಡುವ ಆತುರದಲ್ಲಿದ್ದುದರಿಂದ ನಾವೆಲ್ಲರೂ ಅವರನ್ನು ಮುಂದೆ ಹೋಗಲು ಹೇಳಿದೆವು ಅವರು ನಮ್ಮಿಂದ ಚಾರಣ ಶುಲ್ಕ ೧೧೦೦ ರೂಪಾಯಿ ಪಡೆದು ಇನ್ನಿಬ್ಬರು ಚಾರಣಿಗರೊಂದಿಗೆ ಹೊರಟರು, ವಿಶ್ರಮಿಸಿಕೊಳ್ಳಲು ನಾವು ಅಲ್ಲೆ ಸ್ವಲ್ಪ ಹೊತ್ತು ಕುಳಿತೆವು.



ಸುಮಾರು ಅರ್ಧ ತಾಸಿನ ಬಳಿಕ ಬೆನ್ನುಚೀಲಗಳನ್ನೇರಿಸಿ ಹೊರಡಲು ಸನ್ನದ್ದರಾದೆವು, ಮುಂದೆ ನೋಡಿದರೆ ಹಾದಿನೇ ಕಾಣುತಿಲ್ಲ ಎಲ್ಲರೂ ಒಂದೊಂದ್ದು ಕಡೆ ಹಾದಿ ಹುಡುಕಲು ಹೊರಟೆವು ಹಾದಿ ಕಾಣದೆ ನಿರಾಶೆಗೊಂಡು ವಾಪಾಸ್ ಬಂದೆವು ಹೀಗೆ ಸುಮಾರು ಹೊತ್ತಿನ ತನಕ ಹುಡುಕಾಟ ನೆಡೆಯುತ್ತಿದ್ದ ಹೊತ್ತಿನಲ್ಲಿ ಸಂತೋಷ್ ನಮ್ಮನ್ನು ಕೂಗಿ ಕರೆದು ಬನ್ನಿ ಎನ್ನುವಂತೆ "ಗ್ರೀನ್ ಸಿಗ್ನಲ್" ಕೊಟ್ರು, ಅಸ್ಪಸ್ಟವಾಗಿ ಕಾಣುತಿದ್ದ ಜಾಡನ್ನಿಡಿದು ಕಾಡಿನೊಳಗೆ ಕೆಲವು ನಿಮಿಷಗಳ ಚಾರಣ ಸವೆಸಿ ಕಾಡನ್ನು ಬಿಟ್ಟು ಬಯಲಿನಂತಹ ಜಾಗಕ್ಕೆ ಬಂದೆವು.

ಅಲ್ಲಲ್ಲಿ ಬಿದ್ದಿದ್ದ ಕಪ್ಪು ಕಲ್ಲುಗಳ ನಡುವೆ ಸ್ವಲ್ಪ ದೂರ  ನೇರವಾಗಿ ನಡೆದು ಎದುರಿಗೆ ಸಿಕ್ಕ ಸಣ್ಣ ಗುಡ್ಡೆಯ ಅಂಚಿನಲ್ಲಿ ಬಲಕ್ಕೆ ವಾಲಿದಂತಹ ಹಾದಿಯಲ್ಲಿ ಸ್ವಲ್ಪ ದೂರ ನಡೆದು ಅನಂತರ ಮುಖ ನೇರಕ್ಕೆ ಕಾಣುತಿದ್ದ ಸ್ವಲ್ಪ ಎತ್ತರದ ಬೋಳುಗುಡ್ಡ ಏರಿದೆವು ಸಾಲದೆಂಬಂತೆ ಬಿಸಿಲಿನ ಝಳಕ್ಕೆ ಬೆವರು ಕಿತ್ತು ಬರುತಿತ್ತು.


ಅಲ್ಲಲ್ಲಿ ಜಿಲ್ಲಾ ಗಡಿ ಗುರುತಿಗೆ ಹಾಕಿದ್ದ ರಾಶಿ ರಾಶಿ ಕಲ್ಲು ಗುಡ್ಡೆಗಳು ನಮ್ಮ ಕಣ್ಣಿಗೆ ಬಿದ್ದವು,ಇನ್ನೇನು ಬೋಳುಗುಡ್ಡದ ಹಾದಿ ಮುಗಿಯುತ್ತಿದ್ದಂತೆ ಮತ್ತೆ ಕಾಡೊಳಕ್ಕೆ ನುಗ್ಗಿದ ನಾವು ಕೆಲವು ನಿಮಿಷಗಳ ಬಳಿಕ ಕಾಡನ್ನು ಬಿಟ್ಟು ಎತ್ತರದಲ್ಲಿದ್ದ ಬಯಲು ಪ್ರದೇಶದಲ್ಲಿ ಬಂದು ನಿಂತೆವು, ಗಜೇಂದ್ರರವರು ಇದೇ ನರಸಿಂಹ ಪರ್ವತ ಎಂದು ಹೇಳುತ್ತಿದ್ದರೂ ಕೂಡ ಸಾಕ್ಷಿಗೆ ಯಾವ ಕುರುಹು ಕಾಣುತಿರಲಿಲ್ಲ, ಕಾಣುತ್ತಿದ್ದುದ್ದು ಬರೀ ಕಪ್ಪು ಬಂಡೆಗಲ್ಲುಗಳು ಮಾತ್ರ  ಇನ್ನು ಸ್ವಲ್ಪ ದೂರ ನಮ್ಮ ನೇರಕ್ಕೆ ನಡೆದ ಮೇಲೆ ನಮ್ಮ ಕಣ್ಣಿಗೆ ಕಂಡಿದ್ದು ಮಾನವ ನಿರ್ಮಿತ ಕಟ್ಟಡ ಇದೇ ನರಸಿಂಹ ಪರ್ವತವೆಂದು ಖಾತ್ರಿಯಾಯ್ತು, ಪುನಃ ಇಳಿಜಾರಿನಲ್ಲಿ ಇಳಿದು ಆ ಕಟ್ಟಡದ ಬಳಿ ಬಂದೆವು.


ಬೆಳಿಗ್ಗೆಯಿಂದ ನಮ್ಮ ಜೊತೆ ಚಾರಣ ಮಾಡಿದ್ದ ಆ ಇಬ್ಬರು ಚಾರಣಿಗರು ಆಗಲೇ ಟೆಂಟ್ ನಿರ್ಮಿಸಿ ವಿಶ್ರಾಂತಿ ಪಡೆಯುತ್ತಿದ್ದರು, ಬಿಸಿಲಿನ ಬೇಗೆಗೆ ನಮ್ಮ ನೀರಿನ ಬಾಟೆಲ್‌ಗಳು ಖಾಲಿಯಾಗಿ ಭಣಗುಡುತ್ತಿದ್ದವು ಆಗಲೇ ಸಮಯ ಸಂಜೆ ೫:೩೦.

ಬೆನ್ನುಚೀಲಗಳನ್ನಿಳಿಸಿ ಸನಿಹದಲ್ಲೇ ಇದ್ದ ನೀರಿನ ಹೊಂಡದ ಬಳಿ ತೆರಳಿ ಪಾತ್ರೆ ಮತ್ತು ಬಾಟೆಲ್‌ಗಳಲ್ಲಿ ನೀರು ತುಂಬಿಸಿಕೊಂಡು ಪಾಳು ಮನೆಯಲಿದ್ದ ಒಲೆಯ ಮೇಲೆ ಪಾತ್ರೆ ಇಟ್ಟು ಬಿಸಿ ಬಿಸಿ ಚಹಾ ಮಾಡಿ ಕುಡಿದಾಗ ಬಸವಳಿದಿದ್ದ ನಮಗೆ ಸ್ವಲ್ಪ ನೆಮ್ಮದಿ ಸಿಕ್ಕಂತಾಯ್ತು.


ತದನಂತರ ನಾವು ಟೆಂಟ್ ಹಾಕಿ ಸುಂದರ ಸಂಜೆಯ ಸೂರ್ಯಸ್ತಮದ ನೋಟ ಸವಿಯಲು ಪಶ್ಚಿಮ ದಿಕ್ಕಿನಲ್ಲಿದ್ದ ಸಣ್ಣ ಗುಡ್ಡ ಏರಿದೆವು, ಸಾಯಿಪ್ರಕಾಶ್ ಮಾತ್ರ ಗುಡ್ಡ ಏರದೇ ಅಲ್ಲಿಯೇ ಇದ್ದ ಒಂದು ಬಂಡೆಯ ಮೇಲೆ ಕುಳಿತರು, ಅಷ್ಟೊತ್ತಿಗಾಗಲೇ ಸೂರ್ಯನು ತನ್ನ ಲೋಕಕ್ಕೆ ಮರಳುತಿದ್ದ ಸೊಬಗಂತೂ ವರ್ಣಿಸಲಸಾದ್ಯವಾಗಿತ್ತು.

ನನ್ನ ಕ್ಯಾಮೆರ ಕೈಕೊಟ್ಟಿದ್ದರಿಂದ ಆ ಸುಂದರ ಸಂಜೆಯ ನೋಟವನ್ನು ಕ್ಯಾಮೆರದಲ್ಲಿ ಸೆರೆಹಿಡಿಯದೆ ಬರಿಗಣ್ಣಿನಲ್ಲಿ ಸವಿಯುತ್ತ ಬಂಡೆಯ ಮೇಲೆ ಕುಳಿತುಬಿಟ್ಟಿದ್ದೆ, ಗಜೇಂದ್ರ ಮತ್ತು ಸಂತೋಷ್ ಇಬ್ಬರು ಛಾಯ ಚಿತ್ರ ತೆಗೆಯುವುದರಲ್ಲೇ ಮಗ್ನರಾಗಿದ್ದರು.



ಸೂರ್ಯಾಸ್ತಮದ ವಿಹಂಗಮ ದೃಶ್ಯ

ಅಷ್ಟೊತ್ತಿಗಾಗಲೇ ಸುತ್ತಲೂ ಕತ್ತಲು ಆವರಿಸಿತು ಮತ್ತೆ ನಮ್ಮ ಜಾಗಕ್ಕೆ ವಾಪಸಾಗಿ ಆಗಲೇ ಆ ಇಬ್ಬರು ಸಹ ಚಾರಣಿಗರು ಶಿಭಿರಾಗ್ನಿ ಹೊತ್ತಿಸಿಬಿಟ್ಟಿದ್ದರು, ರಾತ್ರಿಯಿಡಿ ಉರಿಯಲು ಮತ್ತಷ್ಟು ಸೌದೆಗಳನ್ನು ಕಲೆಹಾಕಿದೆವು, ಬಳಿಕ ನಾವು  ಒಲೆ ಮೇಲೆ ಪಾತ್ರೆ ಇಟ್ಟು ನೀರು ಬಿಸಿ ಮಾಡಿ ನ್ಯೂಡಲ್ಸ್ ಸಿದ್ದಪಡಿಸುತ್ತಿದ್ದರೆ, ಸಾಯಿಪ್ರಕಾಶ್ ಅಲೂಗೆಡ್ಡೆ ಪುಡಿಗೆ ಬಿಸಿ ನೀರು ಸೇರಿಸಿ ಆಲೂಮ್ಯಾಶ್ ತಯಾರಿಸುತ್ತಿದ್ದರು ಬಳಿಕ ಎಲ್ಲರೂ ಊಟ ಮುಗಿಸಿ ಸ್ವಲ್ಪ ಹೊತ್ತು  ಶಿಭಿರಾಗ್ನಿ ಬಳಿ ಕುಳಿತೆವು ನಂತರ ಗಜೇಂದ್ರ ಮತ್ತು ಸಾಯಿ ಪ್ರಕಾಶ್ ಟೆಂಟ್‌ನೊಳಗೆ ಹೋಗಿ ನಿದ್ರೆಗೆ ಶರಣಾದರು, ನಾನು ಮತ್ತು ಸಂತೋಷ್ ಸುಮಾರು ಹೊತ್ತಿನ ತನಕ ಶಿಭಿರಾಗ್ನಿ ಮುಂದೆ ಮಾತನಾಡುತ್ತ ಕುಳಿತಿದ್ದೆವು, ಬಳಿಕ ನಿದ್ರೆ ಮಾಡುವ ಸಲುವಾಗಿ ಶಿಭಿರಾಗ್ನಿ ಪಕ್ಕದಲ್ಲಿಯೇ ಸ್ಲೀಪಿಂಗ್ ಮ್ಯಾಟ್ ಹಾಸಿ ಮಲಗಿದೆವು ತಕ್ಷಣಕ್ಕೆ ನಿದ್ದೆಯೂ ಬರಲಿಲ್ಲ.

ನನ್ನ ಮನಸಿನಲ್ಲಿ ಏನೋ ತಳಮಳ!

ಏಕೆಂದರೆ ನಾವಿದಿದ್ದು ನಕ್ಷಲೈಟ್ ಪೀಡಿತ ಶಿಖರದ ತುದಿಯಲ್ಲಿನ ಕಾಡೊಂದರ ಕಗ್ಗತ್ತಲಿನಲ್ಲಿ, ಒಂದು ವೇಳೆ ನಕ್ಷಲೈಟ್ ಎಂದು ಪೊಲೀಸರು, ಪೊಲೀಸರೆಂದು ನಕ್ಷಲೈಟ್‌ಗಳು ಅಂತಾ ತಿಳಿದು ಏನಾದರೂ ಅವಘಡ ಸಂಭವಿಸಿದ್ರೆ?

ಸಂತೋಷ್‌ನನ್ನು ಎಬ್ಬಿಸಿ ಮನವರಿಕೆ ಮಾಡಿ ನಂತರ ಪಾಳುಮನೆಯಲ್ಲಿ ಹೋಗಿ ಮಲಗಿದೆವು, ಜೋರಾಗಿ ಬೀಸುತಿದ್ದ ಗಾಳಿಯ ಸದ್ದಿಗೆ ನನಗೆ ನಿದ್ರೆಯಿಂದ ಅನೇಕ ಬಾರಿ ಎಚ್ಚರವಾಗುತಿತ್ತು, ಬಳಿಕ ಕಣ್ಮುಚ್ಚಿದ್ದು ಗೊತ್ತಾಗಲಿಲ್ಲ.

ಗಜೇಂದ್ರ: ಮೋಹನ್ ಬೇಗ ಏಳಿ ಸೂರ್ಯೋದಯ ನೋಡಲು ನಾವು ಹೋಗ್ತಾಯಿದ್ದೀವಿ ಎಂದು ಹೇಳಿ ಹೊರಟರು,

ತಕ್ಷಣವೆ ಎದ್ದು ಗಡಿಯಾರದ ಕಡೆ ಕಣ್ಣಾಯಿಸಿದಾಗ ಸಮಯ ೦೬:೪೫.

ತಡಮಾಡದೆ ಸೂರ್ಯೋದಯ ನೋಡುವ ಹಂಬಲದಿಂದ ಮುಂಜಾನೆಯ ತಂಗಾಳಿಯಲ್ಲಿ ಪರ್ವತದ ಅಂಚಿನತ್ತ ಹೊರಟೆ...

ಬೆಳಗಿನ ಹೊತ್ನಾಗೆ ಆಗಷ್ಟೆ ತಾನೆ ಬಾನಿನಲ್ಲಿ ಕೆಂಪು ಬಣ್ಣದೋಕುಳಿಯನ್ನು ಚೆಲ್ಲಿ ವರ್ಣಚಿತ್ತಾರದ ನಡುವೆ ಕೆಂಡದಂತೆ ಪುಟಿದೇಳುತ್ತಿದ್ದ ಅರುಣೋದಯದ ನೋಟ ಒಂದೆಡೆಯಾದರೆ ಆಗ ತಾನೆ ಮಲಗೆದ್ದ ಹಕ್ಕಿಗಳ ಚಿಲಿಪಿಲಿ ನಾದ ವರ್ಣನಾತೀತವಾಗಿತ್ತು.


ಸೂರ್ಯೋದಯದ ವೀಕ್ಷಣೆಯಲ್ಲಿ...

ಅಷ್ಟೊತ್ತಿಗಾಗಲೇ ಆ ಇಬ್ಬರೂ ಚಾರಣಿಗರು "ಹಾಯ್" ಹೇಳಿ ಹೊರಟರು, ಮತ್ತೆ ನಾವು ಟೆಂಟ್ ಬಳಿ ಬಂದು ಹಾಲು ಕಾಯಿಸಿ ಹಾಲಿನ ಜೊತೆ ಬಿಸ್ಕತ್ ತಿಂದು ಬೆಳಗಿನ ಉಪಹಾರ ಮುಗಿಸಿ ಟೆಂಟ್ ಬಿಚ್ಚಿಟ್ಟು ಬೆನ್ನು ಚೀಲ ಹೆಗಲಿಗೇರಿಸಿ ಹೊರಟಾಗ ಸಮಯ ೦೯:೨೫.

ಹಾದಿಯಲ್ಲಿ ನಿಂತು ನಾವಿದ್ದ ಸ್ಥಳದತ್ತ ಒಮ್ಮೆ ಹಿಂತಿರುಗಿ ನೋಡಿದಾಗ ಧನ್ಯತಾಭಾವ ನನ್ನ ಮನದಲ್ಲಿ ಮನೆ ಮಾಡಿತ್ತು.


ಪರ್ವತದ ತಪ್ಪಲಿನಲ್ಲಿರುವ ಕಿಗ್ಗ ಕೇವಲ ಒಂದೂವರೆ ಗಂಟೆಯ ಚಾರಣದ ಹಾದಿ ಆಗಲೇ ಬಿಸಿಲಿನ ಕಾವು ತಾರಕಕ್ಕೇರಿತು, ಹಾದಿಯುದ್ದಕ್ಕೂ ಮರಗಳಿದ್ದ ಕಾರಣ ಅಷ್ಟೇನು ಆಯಾಸಪಡದೆ ಪರ್ವತವನ್ನಿಳಿದು ಕೆಳಗೆ ಬಂದ ನಮಗೆ ಅಲ್ಲೊಂದು ಮನೆ  ಕಣ್ಣಿಗೆ ಬಿತ್ತು ಜೊತೆಗೆ ಬಾಯಾರಿಕೆಯ ದಾಹ ಬೇರೆ, ನೀರಿನ ದಾಹ ನೀಗಿಸಲು ಮನೆಯ ಬಳಿ ಬರುತ್ತಿದ್ದ ನಮ್ಮನ್ನು ದೂರದಿಂದಲೇ ನೋಡಿದ ವ್ಯಕ್ತಿಯೊಬ್ಬರು ಮನೆಯ ಒಳಗೆ ಹೊರಟು ಹೋದರು, ನಾವು ಮರದ ಗೇಟ್ ಪಕ್ಕಕ್ಕೆ ಸರಿಸಿ ಒಳ ಹೊಕ್ಕುವಷ್ಟರಲ್ಲಿ ನೀರು ತುಂಬಿದ ತಂಬಿಗೆ ಹಿಡಿದು ಬಂದ ಆ ಪುಣ್ಯಾತ್ಮರು ನಮ್ಮ ಬಾಯಾರಿಕೆ ನೀಗಿಸಿದರು, ಒಂದೇ ಸಮನೆ ಬೊಗಳುತಿದ್ದ ನಾಯಿ ಹೆದರಿ ನಡುಗುತಿತ್ತು, ಬಳಿಕ ಅವರನ್ನು ಮಾತನಾಡಿಸಿದಾಗ ನಕ್ಷಲ್ ನಿಗ್ರಹ ಪಡೆಯ ಪೊಲೀಸರು ವಿಚಾರಣೆಗೆಂದು ಆಗಾಗ ಬರುತ್ತಾರೆಂಬ ವಿಷಯ ತಿಳಿಯಿತು.

ಹೀಗೆ ಒಂದು ದಿನ ವಿಚಾರಣೆಗೆಂದು ಬಂದ ಸಂದರ್ಭದಲ್ಲಿ ಅತಿಯಾಗಿ ನಾಯಿ ಬೊಗಳುವುದನ್ನು ಕಂಡ ಪೊಲೀಸ್ ಪೇದೆಯೊಬ್ಬ ಬಂದೂಕಿನ ಹಿಡಿಯಿಂದ ಹೊಡೆದನಂತೆ, ಅದಕ್ಕೆ ಈಗಲೂ ಪೊಲೀಸರನ್ನು ಕಂಡರೆ ಭಯದಿಂದ ನಡುಗುವುದಂತೆ, ಹೆದರಿ ನಡುಗುದನ್ನು ಕಂಡ ನಾವು ಕನಿಕರದಿಂದ ಸ್ವಲ್ಪ ಬಿಸ್ಕತ್‌ಗಳನ್ನು ಹಾಕಿದಾಗ ಹೆದರಿಕೆಯಿಂದ ತಿನ್ನದೇ ಭಯದಿಂದ ನಮ್ಮತ್ತ ನೋಡುತ್ತಲ್ಲೇ ಇತ್ತು.

ಬಳಿಕ ಅವರಿಗೆ ನಾವು ತುಂಬು ಹೃದಯದ ಧನ್ಯವಾದಗಳನ್ನರ್ಪಿಸಿ ಹೊರಟು ಕಿಗ್ಗ ದೇವಸ್ಥಾನದ ಬಳಿ ಬಂದೆವು, ಪಕ್ಕದಲ್ಲೆ ಇದ್ದ ಅಂಗಡಿಯೊಂದರಲ್ಲಿ ಬೆನ್ನು ಚೀಲಗಳನ್ನು ಇಟ್ಟು ಕಿಗ್ಗದ ಪ್ರಸಿದ್ಧ ಋಷ್ಯ ಶೃಂಗೇಶ್ವರ ದೇವಸ್ಥಾನಕ್ಕೆ ತೆರಳಿ ಧರ್ಶನ ಮಾಡಿ ಅಲ್ಲಿಂದ ಅಟೋ ಹತ್ತಿ ಸಿರಿಮನೆ ಜಲಪಾತದತ್ತ ಹೊರಟೆವು.


ಸಿರಿಮನೆ ಜಲಪಾತ

ಸಿರಿಮನೆ ಜಲಪಾತಕ್ಕೆ ನನ್ನ ಎರಡನೇ ಭೇಟಿ ಅದಾಗಿತ್ತು, ಸುಮಾರು ಇಪ್ಪತ್ತು ಅಡಿ ಎತ್ತರದಿಂದ ರಭಸವಾಗಿ ಬೀಳುತಿದ್ದ ಮುತ್ತಿನ ಹನಿಗಳಿಗೆ ಮೈಯೊಡ್ಡಿ ಅನುಭವಿಸಿದ ಆ ಸುಂದರ ಕ್ಷಣಗಳು ನಮ್ಮ ಆಯಾಸವನ್ನ ದೂರ ಮಾಡಿತು.


ಸಿರಿಮನೆಯಲ್ಲಿ ಸಂತೋಷ್, ಗಜೇಂದ್ರ, ಸಾಯಿಪ್ರಕಾಶ್ ಮತ್ತು ನಾನು

ಹೀಗೆ ಸುಮಾರು ಹೊತ್ತು ಜಲಪಾತದಲ್ಲಿ ಆಟವಾಡಿ ನಂತರ ಅದೇ ಆಟೋ ಹತ್ತಿ ಮತ್ತೆ ಕಿಗ್ಗಕ್ಕೆ ಬಂದು ಅಂಗಡಿಯೊಂದರಲ್ಲಿ ಇಟ್ಟಿದ್ದ ಬೆನ್ನು ಚೀಲಗಳನ್ನು ಆಟೋದಲ್ಲಿ ತುಂಬಿಕೊಂಡು ನಾವು ನೇರವಾಗಿ ಶೃಂಗೇರಿ ಕಡೆ ಪ್ರಯಾಣ ಬೆಳೆಸಿದೆವು.

ಮದ್ಯಾಹ್ನದ ಸಮಯ ೦೧:೩೦ ರ ಹೊತ್ತಿಗೆ ಶೃಂಗೇರಿಯಲ್ಲಿ ನಮ್ಮನ್ನು ಇಳಿಸಿದ ಆಟೋ ಚಾಲಕ "ಹಾಯ್" ಹೇಳಿ ಹೊರ‍ಟ, ನಂತರ ದೇವಸ್ಥಾನಕ್ಕೆ ತೆರಳಿದ ನಾವು ಶಾರದಾಂಭೆ ಮಾತೆಯ ಧರ್ಶನ ಮುಗಿಸಿ ಅಲ್ಲೆ ಭೋಜನ ಶಾಲೆಯಲ್ಲಿ ಪ್ರಸಾದ ಸ್ವೀಕರಿಸಿ ಅಲ್ಲಿಂದ ಹೊರಟು ಬಸ್ ನಿಲ್ದಾಣಕ್ಕೆ ಬಂದೆವು.

ಸಾಯಿಪ್ರಕಾಶ್, ಗಜೇಂದ್ರ ಮತ್ತು ಸಂತೋಷ್ ಕರ್ನಾಟಕ ಸಾರಿಗೆ ಬಸ್‌ನಲ್ಲಿ ಬೆಂಗಳೂರಿನ ಹಾದಿ ಹಿಡಿದರೆ ನಾನು ಮೈಸೂರಿಗೆ ಹೊರಡುವ ಬಸ್ ಬರುವ ತನಕ ಕಾದು ಕುಳಿತಿದ್ದೆ, ಕೊನೆಗೂ ಬಂದ ಸಾರಿಗೆ ಬಸ್ ಸಂಜೆ ೦೪:೩೦ ಕ್ಕೆ ಹೊರಟು ಬಾಳೆಹೊನ್ನೂರು,ಆಲ್ದೂರು,ಚಿಕ್ಕಮಗಳೂರು,ಹಾಸನ, ಹೊಳೆನರಸೀಪುರ ಮಾರ್ಗವಾಗಿ ಮೈಸೂರಿಗೆ ಬಂದಾಗ ಸಮಯ ರಾತ್ರಿ ೧೨:೦೦.

ಮೈಸೂರಿನಿಂದ ಬೆಂಗಳೂರಿಗೆ ಹೊರಡುವ ಮತ್ತೊಂದು ಬಸ್ ಹತ್ತಿ ಕೋರಿಕೆಯ ಮೇರೆಗೆ ನನ್ನೂರಾದ ಬೈರಾಪಟ್ಟಣದಲ್ಲಿ ಇಳಿದು ಮನೆ ಸೇರಿದಾಗ ರಾತ್ರಿ ಸಮಯ ಎರಡಾಗಿತ್ತು.


*** ಶುಭಂ ***