ಗುರುವಾರ, ಅಕ್ಟೋಬರ್ 14, 2010

ಅಮೇದಿಕಲ್ / ಮುಂಗಾರು ಚಾರಣ

ದಿನಾಂಕ: 03.07.2010, 04.07.2010 ಮತ್ತು 05.07.2010

ಎತ್ತರ: ಸಮುದ್ರ ಮಟ್ಟದಿಂದ ಸುಮಾರು ೧೨೫೦ ಮೀಟರ್.

ತಂಡ: ಗಜೇಂದ್ರ,ಚಂದಪ್ಪ (ಮಾರ್ಗದರ್ಶಿ) ಮತ್ತು ನಾನು ( ಮೋಹನ್).

ಚಾರಣದ ಅಂತರ : ೧೬ ಕಿ.ಮೀ + ೧೬ ಕಿ.ಮೀ.

******************************************************

ಗಜೇಂದ್ರರವರು ಕರೆ ಮಾಡಿ,
ಮೋಹನ್ ಎಲ್ಲಿಗಾದ್ರು ಚಾರಣಕ್ಕೆ ಹೋಗೊಣ್ವಾ?

ನಾನು: ಹೋಗೋಣ ಸಾರ್,

ಗಜೇಂದ್ರ: ಮೋಹನ್ ಎಲ್ಲಿಗೆ ಹೋಗೋಣ?

ನಾನು: ಪ್ಲಾನ್ ಮಾಡಿ ನಿಮಗೆ ಕರೆ ಮಾಡಿ ತಿಳಿಸ್ತೀನಿ ಸಾರ್,

ಗಜೇಂದ್ರ: ಸರಿ ಹಾಗೆ ಮಾಡಿ,

ನಾನು ಎಲ್ಲಿಗೆ ಹೋಗೋದು ಅಂತಾ ಯೋಚಿಸತೊಡಗಿದೆ,ಮುಂಗಾರು ಮಳೆ ಬೇರೆ ಕೊನೆಗೆ ಕರೆ ಮಾಡಿ ಎಡಕುಮರಿ ಚಾರಣದ ಬಗ್ಗೆ ಪ್ರಸ್ತಾಪಿಸಿದೆ, ಇದಕ್ಕೂ ಮೊದಲೂ ನಾನು ಎಡಕುಮರಿ ಚಾರಣ ಹೋಗಿದ್ದೀನಿ, ಸರಿ ಅಲ್ಲಿಗೇ ಹೋಗೋಣ ಅಂತ ಹೇಳಿದ್ರು, ಆಮೇಲೆ ಏಕೋ ಎನೋ ಎಡಕುಮರಿ ಚಾರಣ ಬೇಡ ಮೋಹನ್, ಯಾವುದಾದ್ರು ಹೊಸ ಜಾಗಕ್ಕೆ ಪ್ಲಾನ್ ಮಾಡಿ ಅಂತ ತಿಳಿಸಿದ್ರು.
ಕೊನೆಗೆ ಎತ್ತಿನಭುಜ ಅಥವಾ ಅಮೇದಿಕಲ್ ಗೆ ಹೋಗಲು ನಿರ್ಧರಿಸಿದೆವು, ಕೂಡಲೆ ನಾನು ಮಾರ್ಗದರ್ಶಿ ಚೆನ್ನಪ್ಪರವರಿಗೆ ಕರೆ ಮಾಡಿ ಚಾರಣಕ್ಕೆ ಬರುವ ವಿಷಯ ತಿಳಿಸಿದೆ,
ಅದಕ್ಕೆ ಅವರು ಇಲ್ಲಿ ಮಳೆ ಬರ್ತಾ ಇದೆ ಅಂದ್ರು, ಪರ್ವಾಗಿಲ್ಲ ನಾವು ಮಳೆಯಲ್ಲೇ ಚಾರಣ ಮಾಡುವುದಾಗಿ ತಿಳಿಸಿದೆ, ನೀವು ಯಾವುದಕ್ಕೂ ಹೊರ‍ಡುವ ಮುನ್ನ ದಿನ ಪುನಃ ಕರೆ ಮಾಡಿ ಬನ್ನಿ ಅಂತ ತಿಳಿಸಿದ್ರು.
ಹೊರಡುವ ಮುನ್ನ ದಿನ ಬಂದೇ ಬಿಟ್ಟಿತ್ತು, ಶಿಶಿಲದ ಚೆನ್ನಪ್ಪರವರಿಗೆ ಕರೆ ಮಾಡಿ ವಿಚಾರಿಸಲಾಗಿ ಮಳೆ ಸ್ವಲ್ಪ ಕಡಿಮೆ ಇದೆ "ಬನ್ನಿ" ಅಂತ ಗ್ರೀನ್ ಸಿಗ್ನಲ್ ಕೊಟ್ಟ್ರು.

ಚಾರಣಕ್ಕೆ ಬೇಕಾದ ಟೆಂಟ್,ಸ್ಲೀಪಿಂಗ್ ಮ್ಯಾಟ್ ಎಲ್ಲವನ್ನು ಸಿದ್ದಪಡಿಸಿಕೊಂಡು ಶನಿವಾರ ರಾತ್ರಿ ೯:೦೦ ಗಂಟೆಗೆ ಕೆಂಪೆಗೌಡ ಬಸ್ ನಿಲ್ದಾಣಕ್ಕೆ ಬಂದು ನನ್ನ ಚಾರಣ ಮಿತ್ರರಾದ ಗಜೇಂದ್ರರವರಿಗೆ ಕರೆ ಮಾಡಿ ಬೇಗ ಬರಲು ತಿಳಿಸಿದೆ, ಗಜೇಂದ್ರರವರು ಬರುವಷ್ಟರಲ್ಲಿ ಸಮಯ ೯:೩೦ ಆಗಿತ್ತು ಧರ್ಮಸ್ಥಳಕ್ಕೆ ಹೋಗುವ ಎಲ್ಲ ರಾಜಹಂಸ ಬಸ್ ಗಳು ಆಗಲೇ ಭರ್ತಿಯಾಗಿದ್ದವು, ಅಲ್ಲಿಯೇ ಸಿಕ್ಕ ಪರಿಚಯ ಇರುವ ಹುಡುಗನೊಬ್ಬ ಖಾಸಗಿ ಟ್ರಾವೆಲ್ ಬಸ್ ನಲ್ಲಿ ಸೀಟ್ ಕೊಡಿಸುವುದಾಗಿ ಹೇಳಿ ಮೆಜೆಸ್ಟಿಕ್ ನ ಸುಬ್ರಮಣ್ಯ ಟ್ರಾವಲ್ಸ್ ನಲ್ಲಿ ಎರಡು ಟಿಕೇಟ್ ಬುಕ್ ಮಾಡಿಸಿ ಕೊಟ್ಟು ಹೊರಟುಹೋದ, ಬಸ್ ರಾತ್ರಿ ಸುಮಾರು ೧೦:೩೦ ಕ್ಕೆ ಹೊರಟು ಧರ್ಮಸ್ಥಳ ತಲುಪಿದಾಗ ಬೆಳಗಿನ ಜಾವ ೫:೫೦.

ಶಿಶಿಲಕ್ಕೆ ಹೋಗುವ ಬಸ್ ಬಗ್ಗೆ ವಿಚಾರಿಸಿದಾದ ಭಾನುವಾರ ಶಾಲೆ ರಜೆ ಇರುವ ಕಾರಣ ಬಸ್ಸನ್ನು ರದ್ದುಗೊಳಿಸಲಾಗಿದೆ ಅಂತ ಮಾಹಿತಿ ಸಿಕ್ಕಿತು, ಮತ್ತೇನು ಮಾಡೋದು ಅಂತ ಯೋಚಿಸಿ ಸುಬ್ರಮಣ್ಯಕ್ಕೆ ಹೋಗುವ ಕೆ.ಎಸ್.ಆರ್.ಟಿ.ಸಿ. ಸಾರಿಗೆ ಬಸ್ ಹತ್ತಿ ಕೊಕ್ಕಡದಲ್ಲಿ ಇಳಿದು ಅಲ್ಲಿಂದ ಜೀಪ್ ನಲ್ಲಿ ಶಿಶಿಲಕ್ಕೆ ತೆರಳಿದವು, ಅಷ್ಟೊತ್ತಿಗಾಗಲೇ ಚೆನ್ನಪ್ಪನವರು ನಮಗೋಸ್ಕರ ಬಸ್ ನಿಲ್ದಾಣದಲ್ಲಿ ಕಾಯುತ್ತ ಇದ್ದರು, ಅವರು ಎತ್ತಿನಭುಜಕ್ಕೆ ಬೇರೊಂದು ಚಾರಣಿಗರ ಗುಂಪಿನ ಜೊತೆ ಹೋಗುವ ನಿಮಿತ್ತ ಚಂದಪ್ಪಗೌಡ ಎಂಬುವವರನ್ನು ನಮ್ಮ ಜೊತೆಗೆ ಕಳುಹಿಸಿ, ಅವರು ಬೇರೊಂದು ಗುಂಪಿನ ಎತ್ತಿನಭುಜಕ್ಕೆ ತೆರಳಿದರು.

ಅಲ್ಲೆ ಇದ್ದ ಹೋಟೆಲ್ ವೊಂದರಲ್ಲಿ ಇಡ್ಲಿ ಸಾಂಬಾರ್,ಕಲ್ತಪ್ಪ (ಖಾಲಿ ದೋಸೆ) ತಿಂದು ಕಾಫಿ ಕುಡಿದು ಬೇಡವಾದ ಲಗ್ಗೇಜನ್ನು ಅದೇ ಹೋಟೆಲ್ ನಲ್ಲಿ ಇರಿಸಿ ಅಲ್ಲಿಂದ ಜೀಪ್ ನಲ್ಲಿ ನಾಲ್ಕು ಕಿ.ಮೀ ದೂರದ ನಮ್ಮ ಚಾರಣ ಶುರುವಾಗುವ "ಕೊಂಬಾರು" ಎಂಬ ಸ್ಥಳಕ್ಕೆ ಹೊರಟೆವು.

ಅಲ್ಲಿಯೇ ಸಿಕ್ಕ ಒಂದು ಚಿಕ್ಕ ತೊರೆಯೊಂದರಲ್ಲಿ ಸ್ನಾನ ಮುಗಿಸಿ ಚಾರಣಕ್ಕೆ ಶುರುಮಾಡಿದಾಗ ಬೆಳಿಗ್ಗೆ ೯:೪೫ ಆಗಿತ್ತು, ಇಲ್ಲಿಂದ ಶುರುವಾಯ್ತು ಕಠಿಣ ಏರುದಾರಿ ದಟ್ಟ ಮಳೆಕಾಡು, ಜೊತೆಗೆ ರಕ್ತ ಹೀರುವ ಜಿಗಣೆಗಳ ಕಾಟ, ನಮ್ಮ ಮಾರ್ಗದರ್ಶಿ ಚಂದಪ್ಪನವರು ಕೈನಲ್ಲಿ ಮಚ್ಚು ಹಿಡಿದು ಮುಂದೆ ಹೋಗುತ್ತಿದ್ದರೆ ನಾವು ಅವರನ್ನು ಹಿಂಬಾಲಿಸಿದೆವು,


ಮಳೆಗಾಲ ಆದ್ದರಿಂದ ಮೋಡದ ದಟ್ಟಣೆಯಿಂದ ಸಂಜೆಗತ್ತಲಿನ ಹಾಗೆ ಭಾಸವಾಗುತಿತ್ತು, ಸುಮಾರು ಎರಡೂವರೆ ಗಂಟೆ ಹಾದಿ ಕ್ರಮಿಸಿದ ಮೇಲೆ ಮಳೆಕಾಡಿನಿಂದ ಹೊರ ಬಂದೆವು ಆಗ ನಮ್ಮ ಕಣ್ಣಿಗೆ ಎದುರಾದುದು ಸುಂದರ ಹಸಿರು ಹುಲ್ಲುಗಾವಲು ಪರ್ವತಗಳು, ವಾವ್! ಸ್ವರ್ಗ ಎಂದರೆ ಇದೇ ಅಲ್ವಾ?




ಪಯಣದ ಹಾದಿಯಲ್ಲಿ ನಾನು.

ನಡೆದು ಸಾಕಷ್ಟು ದಣಿವಾಗಿದ್ದರಿಂದ ಸ್ವಲ್ಪ ಹೊತ್ತು ಕುಳಿತು ವಿಶ್ರಾಂತಿ ಪಡೆದು ಹಾಗೆ ಸ್ವಲ್ಪ ಏನಾದರೂ ತಿನ್ನೋಣ ಅಂತ ಗಜೇಂದ್ರರವರು ತಮ್ಮ ಬ್ಯಾಗಿಂದ ಹೋಳಿಗೆ ತೆಗೆದು ತಲಾ ಎರಡೆರಡು ಹೋಳಿಗೆ ಕೊಟ್ಟರು ತುಂಬಾ ಚೆನ್ನಾಗಿದ್ದರಿಂದ ನಾನು ಬೇಗ ತಿಂದು ಮುಗಿಸಿದೆ ಅಷ್ಟರಲ್ಲೇ ಸನಿಹದಲ್ಲಿ ಏನೋ ಶಬ್ದ!
ಯಾವುದೋ ಪ್ರಾಣಿ ಮರದ ರೆಂಬೆಗಳನ್ನು ಮುರಿದು ನಮ್ಮತ್ತ ಬರುತಿತ್ತು ನನಗೆ ಗಾಬರಿಯಾಗಿ ತಿಂದಿದ್ದ ಹೋಳಿಗೆ ಬಾಯಿಗೆ ಬಂದ್ದತ್ತಾಯಿತು ಕೂಡಲೇ ನಮ್ಮ ಗಜೇಂದ್ರರವರು ಅಲೆರ್ಟ್ ಆಗಿ ಎಲ್ಲರಿಗಿಂತ ಮೊದಲು ಎದ್ದು ನಿಂತು "ಪುಟ್ಗೋಸಿ ಊರುಗೋಲು" ಹಿಡಿದು ಯುದ್ದಕ್ಕೆ ನಿಂತ ಸೈನಿಕನಂತೆ ಫೋಸ್ ಕೊಟ್ಟಿದ್ದು ಮಾತ್ರ ಭಯದ ನಡುವೆಯು ನನಗೆ ನಗು ಬರುತಿತ್ತು,



ಗಜೇಂದ್ರ ಮತ್ತು ಮಾರ್ಗದರ್ಶಿ ಚೆಂದಪ್ಪ

ತಕ್ಷಣವೇ ಚಂದಪ್ಪನವರು "ಹೋಯ್" ಅಂತ ಜೋರಾಗಿ ಒಂದು ಕೂಗು ಹಾಕಿದ್ರು ಅವರ ಜೊತೆಗೆ ನಾನು ಕೂಡ ಜೋರಾಗಿ ಕಿರುಚಿದೆ ಶಬ್ದ ಹಾಗೆ ತಟಸ್ಥವಾದೊಡನೆಯೇ ಚಂದಪ್ಪನವರನ್ನು ಏನದು ಅಂತ ಕೇಳಿದಕ್ಕೆ ಅವರು "ಕಾಡೆಮ್ಮೆ" ಇರಬೇಕು ಅಂದ್ರು, ತಕ್ಷಣವೇ ನಾವು ಅಲ್ಲಿಂದ ಜಾಗ ಖಾಲಿ ಮಾಡಿ ಚಾರಣದ ಹಾದಿ ಹಿಡಿದು ಹೊರಟೆವು ಸ್ವಲ್ಪ ಹೊತ್ತಿನಲ್ಲೇ ಮಳೆ ಶುರುವಾಯ್ತು, ಆದರೇನಂತೆ ಮಳೆಯಲ್ಲಿಯೇ ಚಾರಣ ಮುಂದುವರಿಸಿದೆವು ಚಂದಪ್ಪ ಮಳೆಯ ರಕ್ಷಣೆಗೆ ತಂದಿದ್ದ ಪ್ಲಾಸ್ಟಿಕ್ ಹೊದಿಕೆ ಹೊದ್ದು ಮುಂದೆ ಹೋಗುತ್ತಿದ್ದರು ಮಂಡಿ ಉದ್ದಕ್ಕೆ ಬೆಳೆದ ಹಸಿರು ಹುಲ್ಲಿನ ನಡುವೆ ಹಾದಿ ಮಾಡಿಕೊಂಡು ನಾವು ಅವರನ್ನು ಹಿಂಬಾಲಿಸಿ ಹೊರಟೆವು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ತಪ್ಪಿದಲ್ಲ,


ಯಮಭಾರದ ಲಗ್ಗೇಜನ್ನು ಹೊತ್ತು ಮಳೆಯಲ್ಲಿ ಚಾರಣ ಮಾಡುವುದು ಅಷ್ಟು ಸುಲಭವಲ್ಲ, ಹಾದಿ ನೋಡಿದರೆ ಗೊತ್ತಾಗುತಿತ್ತು ಚಾರಣಿಗರು ಚಾರಣ ಮಾಡಿರುವುದು ಬಹಳ ವಿರಳ ಅಂತಾ, ಮಳೆಯಲ್ಲಿಯೂ ಕೂಡ ಬೆವರು ಕಿತ್ತು ಬರುತಿತ್ತು.




ಪಯಣದ ಹಾದಿಯಲ್ಲಿ ನಾನು ಒಮ್ಮೆ ಹಿಂತಿರುಗಿ ನೋಡಿದಾಗ ಕಂಡ ದೃಶ್ಯ

ಅಬ್ಬಾ! ಎತ್ತಾ ನೋಡಿದರೂ ಬಾನೆತ್ತರಕ್ಕೆ ನಿಂತ ಹಸಿರ ಮುಗಿಲಗಿರಿಗಳು
ಆ ಮುಗಿಲಗಿರಿಗಳನ್ನು ಚುಂಬಿಸುವ ಮೋಡದ ರಾಶಿ ಆ ವಿಷ್ಮಯ ನೋಟ ನನ್ನ ಕಣ್ಣಿಗೆ ಕಟ್ಟಿದಂತಿತ್ತು,
ನಾನು, ಗಜೇಂದ್ರ ಸಾರ್ ಕುಮಾರ ಪರ್ವತ ಚಾರಣಕ್ಕಿಂತ ತುಂಬಾ ಕಷ್ಟ ಅಲ್ವಾ?
ಅದಕ್ಕೆ ಅವರು ಹೌದು ನಾವು ಇಲ್ಲಿಯವರೆಗೂ ಸವೆಸಿದ ಹಾದಿ ಬಹಳ ದುರ್ಗಮ ಇನ್ನು ಮುಂದೆ ಹೇಗಿದೆಯೋ? ಗೊತ್ತಿಲ್ಲ ಅಂದ್ರು,ಚಂದಪ್ಪನವರು ಯಾವುದೇ ಲಗ್ಗೇಜ್ ಇಲ್ಲದ ಕಾರಣ ಬಹು ಬೇಗನೇ ನಡೆದು ಮುಂದೆ ಹೋಗಿ ನಮಗಾಗಿ ಕಾಯುತ್ತಾ ನಿಂತಿರುತ್ತಿದ್ದರು, ಹಾದಿ ಕಾಣದೇ ಇರುವ ಜಾಗದಲ್ಲೆಲ್ಲ ಅಲ್ಲಿಯೇ ಕಾದು ನಿಂತು ನಾವು ಹೇಗೆ ಬರಬೇಕೆಂದು ಸನ್ನೆ ಮಾಡಿ ಸೂಚಿಸುತ್ತಿದ್ದರು,


ಆಗಲೇ ಅದೆಷ್ಟೊ ಗಿರಿ ಕಣಿವೆಗಳಲ್ಲಿ ಸಾಗಿ ಬಂದಿದ್ದೆವು, ಬಹಳ ಪ್ರಯಾಸವಾಗಿ ಯಮ ಭಾರದ ಟೆಂಟನ್ನು ಸರತಿಯಂತೆ ನಾನು ಮತ್ತು ಗಜೇಂದ್ರರವರು ಹೊತ್ತುಕೊಂಡು ಚಾರಣದ ಹಾದಿಯನ್ನು ಸವೆಸುತ್ತಿದ್ದವು.
ನನ್ನ ಚಾರಣದ ಬದುಕಿನಲ್ಲಿ ಇದೇ ಮೊದಲು ಮಳೆಯಲ್ಲಿ ಚಾರಣ ಮಾಡಿದ್ದು, ಮಳೆ ಬಿಡುವು ಕೊಟ್ಟಾಗಲೆಲ್ಲ ಬ್ಯಾಗಿನಿಂದ ಕ್ಯಾಮೆರಾ ತೆಗೆದು ಪ್ರಕೃತಿ ಸೌಂದರ್ಯವನ್ನು ಸೆರೆಹಿಡಿಯುತ್ತಿದ್ದೆವು, ನಾವು ಚಂದಪ್ಪನವರನ್ನು ಇನ್ನು ಎಷ್ಟು ದೂರ ಇದೆ ಅಂತ ಯಾವಾಗ ಕೇಳಿದರೂ ಇಲ್ಲೇ ಸ್ವಲ್ಪ ದೂರ ಅಂತ ಶಾಂತ ಸ್ವಭಾವದಿಂದಲ್ಲೇ ಉತ್ತರಿಸುತ್ತಿದ್ದರು,ಆಗಲೇ ಮದ್ಯಾಹ್ನ ಒಂದೂವರೆ ಗಂಟೆ ಆಗಿತ್ತು, ಕಡಿದಾದ ಹಾದಿಯಲ್ಲಿ ಚಾರಣ ಮಾಡಿ ಬಳಲಿದ್ದ ಕಾರಣ ಹೊಟ್ಟೆ ತುಂಬಾ ಹಸಿವಾಗುತ್ತಿತ್ತು,ಕೊನೆಗೆ ದೊಡ್ಡ ಹೆಬ್ಬಂಡೆ ಬಳಿ ಬಂದೆವು, ಮಳೆಗಾಲವಾದ್ದರಿಂದ ಬೆಟ್ಟದ ಮೇಲೆ ಟೆಂಟ್ ಹಾಕಲು ಸಾದ್ಯವಿಲ್ಲ ಆದ್ದರಿಂದ ಇಲ್ಲಿಯೇ ಟೆಂಟ್ ಹಾಕಲು ಸೂಕ್ತ ಜಾಗ ಎಂದು ಚಂದಪ್ಪನವರು ತಿಳಿಸಿದ್ರು,
ಚಂದಪ್ಪನವರ ಸೂಚನೆ ಮೇರೆಗೆ ಮೊದಲು ಟೆಂಟನ್ನು ಸಿದ್ದಪಡಿಸಿ ನಂತರ ಊಟ ( ಜೋಳದ ರೊಟ್ಟಿ, ಕಡ್ಲೆಕಾಯಿ ಚಟ್ನಿ) ಮುಗಿಸಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಬಳಿಕ ನಮ್ಮ ಲಗ್ಗೇಜನ್ನು ಟೆಂಟ್ ನೊಳಗೆ ಇಟ್ಟು ಮತ್ತೆ ಚಾರಣ ಶುರು ಮಾಡಿದೆವು, ಮುಂದಿನ ಹಾದಿ ಬಹಳ ಕಡಿದಾಗಿತ್ತು ದಟ್ಟ ಮಳೆಕಾಡು ಬೇರೆ ಕೆಲವು ಕಡೆ ಬಗ್ಗಿ ನಡೆಯಬೇಕಿತ್ತು,ಜೀರುಂಡೆಯ ಸದ್ದಿನಲ್ಲಿ ಮರ ಗಿಡಗಳ ರೆಂಬೆ ಕೊಂಬೆಗಳನ್ನು ಆಸರೆಯಾಗಿ ಹಿಡಿದು ಮೇಲೇರುತ್ತಿದ್ದೆವು, ಮುಂಗಾರು ಮಳೆ ಒಂದೇ ಸಮನೆ "ದೋ..." ಅಂತ ಬೀಳುತಲಿತ್ತು ಬೆಳಕಿನ ಅಭಾವದಿಂದ ಕತ್ತಲಾದಂತಿತ್ತು, ಯಾವುದಾದರೂ ಕಾಡು ಪ್ರಾಣಿ ಎದುರಾದರೇ? ಎಂಬ ಭಯ



ಮಳೆಕಾಡು

ಕೊನೆಗಳಿಗೆ ಹತ್ತು ನಿಮಿಷದ ಮಳೆ ಚಾರಣವಂತೂ ತುಂಬಾ ಸಾಹಸಮಯವಾಗಿತ್ತು,
ಮಳೆ ಬೀಳುತ್ತಿದ್ದರಿಂದ ತುಸು ಎಚ್ಚರ ತಪ್ಪಿದರೂ ಅಪಾಯ ಖಂಡಿತ.


ನಮ್ಮ ಮಾರ್ಗದರ್ಶಿ ಚಂದಪ್ಪರವರ ಉಪಯುಕ್ತ ಮಾರ್ಗದರ್ಶನದಿಂದ ಯಾವುದೇ ತೊಂದರೆ ಇಲ್ಲದೇ ಸಂಜೆ ೫ ರ ಹೊತ್ತಿಗೆ ಅಮೇದಿಕಲ್ ಶಿಖರದ ತುಟ್ಟ ತುದಿ ತಲುಪಿಯೇಬಿಟ್ಟೆವು. ಎತ್ತ ನೋಡಿದರೂ ಮೋಡದ ರಾಶಿ ಎತ್ತಿನ ಭುಜ ಕಾಣುವುದಿರಲಿ ಸುತ್ತ ಮುತ್ತಲಿನ ಯಾವುದೇ ಪರ್ವತಗಳ ದರ್ಶನವಾಗಲಿಲ್ಲ,ಚಂದಪ್ಪನವರು ಪಕ್ಕದ ಘಟ್ಟ ಪ್ರದೇಶದ ಕಡೆ ಕೈ ತೋರಿಸಿ ಅದೇ ಚಾರ್ಮಾಡಿ ಘಾಟ್, ಅಗೋ ಅದೇ ಕೊಟ್ಟಿಗೆಹಾರ ಅಂತ ತೋರಿಸುತ್ತಿದ್ದರು ಮೋಡಗಳು ಮುಚ್ಚಿಕೊಂಡಿದ್ದರಿಂದ ಏನೂ ಕಾಣಿಸುತ್ತಿರಲಿಲ್ಲ ಕೊಟ್ಟಿಗೆಹಾರ ಅಮೇದಿಕಲ್ ಗೆ ಬಹಳ ಹತ್ತಿರವಿದ್ದರೂ ಹೋಗಲೂ ಯಾವುದೇ ಹಾದಿಯಿಲ್ಲ,ಸುತ್ತಲೂ ಹಸಿರು ಹೊದ್ದ ಸಾಲು ಸಾಲು ಪರ್ವತಗಳ ರಮಣೀಯ ದೃಶ್ಯ, ರಾಶಿ ರಾಶಿ ಮೋಡಗಳು, ದಟ್ಟ ಮಂಜು, ಏನೀ ಪ್ರಕೃತಿ ವಿಸ್ಮಯ! ಎಂಬ ಭಾವನೆ ನನ್ನ ಮನದಲ್ಲಿ ಹಾಸುಹೊಕ್ಕಾಗಿತ್ತು.
ಸೂರ್ಯಾಸ್ತಮ ನೋಡುವ ಅವಕಾಶವಂತೂ ಖಂಡಿತಾ ಇರಲಿಲ್ಲ ಬಿಡಿ,
ಆಗಲೇ ತುಂಬಾ ಸಮಯವಾದ್ದರಿಂದ ಕತ್ತಲಾಗುವುದೊರಳಗೆ ಟೆಂಟ್ ಬಳಿ ಹೋಗಬೇಕೆಂದು ಚಂದಪ್ಪನವರ ಸೂಚನೆ ಮೇರೆಗೆ ವಾಪಾಸು ಹೊರಟೆವು.
ಕಡಿದಾದ ಇಳಿಜಾರು ಬಹಳ ಎಚ್ಚರಿಕೆಯಿಂದ ಒಂದೊಂದೆ ಹೆಜ್ಜೆ ಹಾಕುತ್ತಿದ್ದೆವು ಈ ಮದ್ಯೆ ಗಜೇಂದ್ರರವರು,ಮೋಹನ್ ಈಗ ನಮ್ಮ ಬ್ಯಾಗ್ ನಲ್ಲಿರುವ ತಿಂಡಿ ವಾಸನೆ ಹಿಡಿದು ಕರಡಿ ಏನಾದರೂ ಟೆಂಟ್ ನೊಳಗೆ ನುಗ್ಗಿ ಕುಳಿತಿದ್ದರೆ ಏನ್ ಗತಿ! ಎಂದು ನಗೆ ಚಟಾಕಿ ಹಾರಿಸಿದ್ರು ನನಗಂತು ನಗು ತಡೆಯೋಕ್ಕೆ ಆಗಲಿಲ್ಲ, ಕೊನೆಗೂ ಕತ್ತಲಾಗುವುದಷ್ಟರಲ್ಲಿ ನಮ್ಮ ಟೆಂಟ್ ಬಳಿ ಬಂದು ಸೇರಿದೆವು, ರಕ್ತ ಹೀರುವ ಜಿಗಣೆಗಳ ಕಾಟ ಜಾಸ್ತಿ ಕಿತ್ತು ಹಾಕುವುದೇ ಒಂದು ದೊಡ್ಡ ಸವಾಲು,
ಚಂದಪ್ಪನವರು ನೀರು ತರಲು ಬಾಟೆಲ್ ಹಿಡಿದು ಕಾಡಿನೊಳಕ್ಕೆ ನುಗ್ಗಿದರು ನಾನು ಕೂಡ ಅವರನ್ನು ಹಿಂಬಾಲಿಸಿದೆ ಹಾದಿ ತುಂಬಾ ಇಳಿಜಾರಾದ್ದರಿಂದ ಮುಂದೆ ಹೋಗಲು ಆಗಲಿಲ್ಲ ಪುನಃ ವಾಪಾಸು ಬಂದೆ, ಅಷ್ಟರಲ್ಲೇ ಚಂದಪ್ಪನವರು ನೀರಿನ ಬಾಟೆಲ್ ಹಿಡಿದು ವಾಪಾಸಾದರು ನಂತರ ಸೌದೆಗಳನ್ನು ಹುಡುಕಿ ತಂದು ಮಳೆ ನೀರು
ಬೀಳದೆ ಇರೋ ಜಾಗದಲ್ಲಿ ರಾಶಿ ಮಾಡಿ ಶಿಭಿರಾಗ್ನಿಗೆ ಸಿದ್ದಪಡಿಸುತ್ತಿದ್ದರು.



ನಮ್ಮ ಶಿಭಿರದ ಮುಂದೆ ಕ್ಷೀರಸಾಗರದಂತೆ ಕಾಣಿಸುತ್ತಿದ್ದ ದೃಶ್ಯ

ನಮ್ಮ ಶಿಭಿರದ ಮುಂದೆ ಕಾಣುತಿದ್ದ ರಾಶಿ ರಾಶಿ ಮೋಡಗಳ ಸೌಂದರ್ಯವನ್ನು ಮರೆಯೋಕ್ಕೆ ಸಾದ್ಯನೇ ಇಲ್ಲ, ಅಷ್ಟರಲ್ಲಿ ಕತ್ತಲು ಆವರಿಸಿತು ಇತ್ತ ಚಂದಪ್ಪನವರು ನಾವು ತಂದಿದ್ದ ದೀಸೆಲ್ ಸಹಾಯದಿಂದ ಹೊತ್ತಿಸಿದ ಶಿಭಿರಾಗ್ನಿ ಮುಂದೆ ಕುಳಿತು ಚಳಿ ಮಳೆಯಿಂದ ಮರಗಟ್ಟಿ ಹೋಗಿದ್ದ ದೇಹವನ್ನು ಬಿಸಿ ಮಾಡಿದೊಡನೆಯೇ ತುಸು ಸಮಾಧಾನ,



ಶಿಭಿರಾಗ್ನಿ

ಬೆಳಿಗ್ಗೆಯಿಂದ ಒಂದೇ ಸಮನೆ ನಡೆದು ಆಯಾಸವಾಗಿದ್ದರಿಂದ ಬೇಗನೆ ಊಟ ಮುಗಿಸಿ ಮಲಗುವುದು ಒಳ್ಳೇದು ಅಂತ ನಿರ್ದಾರ ಮಾಡಿ ಜೊತೆಗೆ ತಂದಿದ್ದ ಚಪಾತಿ, MTR ನ Ready to eat ಬಿಂಧಿ ಮಸಾಲ ಮತ್ತು ಅನ್ನ ಸಾಂಬಾರ್ ಪಾಕೆಟ್ ತೆಗೆದು ಪಾತ್ರೆಯೊಳಗೆ ಹಾಕಿ ಬಳಿಯಿದ್ದ ಚಾಕನ್ನೆ ಸೌಟ್ ರೂಪದಲ್ಲಿ ಬಳಸಿ ಅಡುಗೆ ಸಿದ್ದಪಡಿಸಿದೆವು, ಗಜೇಂದ್ರರವರು ತಮ್ಮ ಟಾರ್ಚ್ ಅನ್ನು ಟೆಂಟ್ ಬಾಗಿಲಿಗೆ ಕಟ್ಟಿ ಬೆಳಕಿನ ಅಭಾವವನ್ನು ನೀಗಿಸಿದರು,


ಕೊನೆಗೆ ಎಲ್ಲರೂ ಕುಳಿತು ಊಟ ಮುಗಿಸಿದೆವು,ಗಜೇಂದ್ರರವರು ಟೆಂಟ್ ನೊಳಗೆ ಹೋಗಿ ಮಲಗಿದರು, ನನಗೆ ಏಕೋ ನಿದ್ರೆ ಬರಲಿಲ್ಲ ಪುನಃ ನಾನು ಶಿಭಿರಾಗ್ನಿ ಮುಂದೆ ಹೋಗಿ ಕುಳಿತೆ ನನ್ನ ಜೊತೆ ಚಂದಪ್ಪ ಕೂಡ ಇದ್ದರು ಆಗಿನ್ನು ಮಳೆ ಬೀಳುತ್ತಲೇ ಇತ್ತು ಶಿಭಿರಾಗ್ನಿಯ ಬಳಿ ನಾವಿಬ್ಬರೆ ತುಂಬಾ ಸಮಯ ಮಾತನಾಡುತ್ತ ಕುಳಿತಿದ್ದೆವು, ನಂತರ ಮಲಗುವ ನಿರ್ದಾರ ಮಾಡಿ ತುಂಬಾ ಹೊತ್ತು ಉರಿಯಲಿ ಅಂತ ಶಿಭಿರಾಗ್ನಿಗೆ ಸಾಕಷ್ಟು ಸೌದೆ ಜೋಡಿಸಿ ಟೆಂಟ್ ನೊಳಗೆ ಬಂದು ಮಲಗಿಕೊಂಡೆ. ಹಿಂದೇನೆ ಚಂದಪ್ಪ ಕೂಡ ಬಂದು ಮಲಗಿದರು.

ಪುನಃ ಬೆಳಿಗ್ಗೆ ಎಚ್ಚರವಾದಾಗ ೬:೪೫, ಚಂದಪ್ಪನವರು ಆಗಲೇ ಎದ್ದು ಶಿಭಿರಾಗ್ನಿ ಮುಂದೆ ಬೆಂಕಿ ಕಾಯುತ್ತ ಕುಳಿತಿದ್ದರು, ಟೆಂಟ್ ನಿಂದ ಆಚೆ ಬಂದು ನೋಡಿದರೆ ಸುತ್ತಲೂ ಮಂಜು ಕವಿದಿದೆ, ರಾತ್ರಿ ಶುರುವಾದ ಮಳೆ ಬಿಡುವಿಲ್ಲದೆ ಒಂದೇ ಸಮನೆ ಬೀಳುತಲಿತ್ತು ಏನೂ ಕಾಣುತಿಲ್ಲ ದಟ್ಟ ಮಂಜು, ನಾನು ಕೂಡ ಶಿಭಿರಾಗ್ನಿ ಮುಂದೆ ಕುಳಿತು ಮೈ ಬೆಚ್ಚಗೆ ಮಾಡಿಕೊಂಡೆ, ಗಜೇಂದ್ರರವರನ್ನು ಕೂಗಿ ಕರೆದು ಸಾರ್ ಬನ್ನಿ ಬೆಂಕಿ ಕಾಯೋಣ ಅಂದೆ, ಅವರು ಇಲ್ಲೇ ಬೆಚ್ಚಗಿದೆ ಇನ್ನು ಸ್ವಲ್ಪ ಹೊತ್ತು ಇಲ್ಲೇ ಇರ್ತೀನಿ ಅಂತ ಟೆಂಟ್ ನೊಳಗೆ ಮಲಗಿದ್ದರು,
ಚಂದಪ್ಪನವರು, ಈಗ ಮಂಜು ಕವಿದಿಲ್ಲದಿದ್ದರೆ ಇದೇ ಜಾಗದಿಂದ ಸೂರ್ಯೋದಯ ವೀಕ್ಷಿಸಬಹುದಿತ್ತು ಅಂದ್ರು, ನಾವು ಬಂದಿರೋದೆ ಮಳೆಯಲ್ಲಿ ನೆನೆಯೋಕ್ಕೆ ಸೂರ್ಯೋದಯ ಇಲ್ಲದಿದ್ದರೇನಂತೆ ಬಿಡಿ ಇನ್ನೊಂದು ಸಾರಿ ಬಂದು ನೋಡೋಣ ಅಂದೆ,
ಎಷ್ಟು ಹೊತ್ತಾದ್ರು ಗಜೇಂದ್ರರವರು ಟೆಂಟ್ ನಿಂದ ಹೊರಗೆ ಬರಲಿಲ್ಲ ಮತ್ತೆ ಕೂಗಿ ಕರೆದೆ ಮತ್ತದೇ ಡೈಲಾಗ್ ಹೊಡೆದ್ರು, ನಂತರ ಅಕ್ಕ ಪಕ್ಕದಲ್ಲಿ ಯಾರೋ ಬಿಸಾಡಿದ್ದ ಪ್ಲಾಸ್ಟಿಕ್ ಕವರ್,ನೀರಿನ ಬಾಟೆಲ್ ಗಳನ್ನು ಒಂದು ಕಡೆ ರಾಶಿ ಮಾಡಿ ಹೊರಡುವ ವೇಳೆಯಲ್ಲಿ ಬೆಂಕಿ ಹೊತ್ತಿಸಿ ಹೊರಟರಾಯಿತು ಅಂತಾ ಯೋಚಿಸಿ ಹಾಗೆ ಬಿಟ್ಟು ಮತ್ತೆ ಗಜೇಂದ್ರರವರನ್ನು ಎಬ್ಬಿಸೋಣ ಅಂತ ಕೂಗಿ ಕರೆದೆ ಕೊನೆಗೂ ಎದ್ದು ಹೊರಗೆ ಬಂದ್ರು ಆಗಲೇ ಬಹಳ ಹೊತ್ತಾಗಿದೆ ಮಳೆಯಂತು ನಿಲ್ಲುವ ಸೂಚನೆ ಕಂಡು ಬರ್ತಾ ಇಲ್ಲ ತಿಂಡಿ ತಿಂದು ಹೊರಡೋಣ ಅಂತ ಯೋಚಿಸಿ ನಾವು ಕಾಡಿನಲ್ಲಿರುದರಿಂದ ಬ್ರಷ್ ನಿಂದ ಹಲ್ಲು ಉಜ್ಜೋದು ಪ್ರಕೃತಿಗೆ ವಿರುದ್ದ ಅಂತ ಹೇಳಿ ಹಾಗೇ ನೀರನ್ನು ಬಾಯಲ್ಲಿ ಮುಕ್ಕಳಿಸಿ ತಿಂಡಿ ತಿನ್ನಲು ಎಲ್ಲರೂ ಟೆಂಟ್ ನೊಳಗೆ ಕುಳಿತು ಬೆಳಗಿನ ಉಪಹಾರಕ್ಕಾಗಿ ತಂದಿದ್ದ ಬನ್ ಮತ್ತು ಗುಲ್ಕನ್ ಅನ್ನು ತಿಂದು ಹೊರಡಲು ಸಿದ್ದವಾದೆವು, ಆಗಲೇ ರಾಶಿ ಮಾಡಿದ್ದ ಪ್ಲಾಸ್ಟಿಕ್ ಕವರ್,ನೀರಿನ ಬಾಟೆಲ್ ಮೇಲೆ
ಸ್ವಲ್ಪ ಡೀಸೆಲ್ ಸುರಿದು ಬೆಂಕಿ ಹಚ್ಚಿದ ನಂತರ ನಮ್ಮ ಲಗ್ಗೇಜು ಸಿದ್ದಪಡಿಸಿಕೊಂಡು ಹೊರಟಾಗ ಹನ್ನೊಂದಾಗಿತ್ತು ಹಾದಿಯುದ್ದಕ್ಕೂ ಮಳೆಯಲ್ಲಿ ನೆನೆದೆ ಚಾರಣ ಮಾಡಿದೆವು, ಹಲವು ಬಾರಿ ಗಜೇಂದ್ರರವರು ಆಯ ತಪ್ಪಿ ಜಾರಿ ಬಿದ್ದುದುಂಟು.


ನಮ್ಮ ಚಾರಣದ ಹಾದಿಗೆ ಅಡ್ಡಲಾಗಿ ಕಟ್ಟಿದ ಜೇಡರಬಲೆ



ನಾನು ಮತ್ತು ನನ್ನ ಸ್ನೇಹಿತರಾದ ಗಜೇಂದ್ರ

ಜಟಿಲ ಕಾನದದ ಪ್ರಕೃತಿ ಸೊಬಗನ್ನು ಸವಿಯುತ್ತ ಚಾರಣದ ಮುಕ್ತಾಯ ಹಂತಕ್ಕೆ ತಲುಪಿದೆವು, ಅಲ್ಲಿಯೇ ಚಿಕ್ಕ ತೊರೆಯೊಂದರಲ್ಲಿ ಮಿಂದೆದ್ದ ನಂತರ ಆಟೋದಲ್ಲಿ ಶಿಶಿಲ ತಲುಪಿದಾಗ ಗಂಟೆ ನಾಲ್ಕಾಗಿತ್ತು, ನನಗಂತೂ ಹೊಟ್ಟೆ ತುಂಬಾ ಹಸಿವಾಗುತಿತ್ತು ಆ ದಿನ ಸೋಮವಾರ "ಭಾರತ್ ಬಂದ್" ಬಿಸಿ ಶಿಶಿಲದ ಸಣ್ಣ ಪುಟ್ಟ ಅಂಗಡಿಗಳಿಗೂ ಬಿಸಿ ತಟ್ಟಿದಂತೆ ಕಾಣಿಸುತಿತ್ತು,ಮನಸ್ಸಿನಲ್ಲಿ ಉಪವಾಸ ಗ್ಯಾರಂಟಿ ಅಂದುಕೊಂಡಿದ್ದು ಉಂಟು, ಅಲ್ಲದೇ ಯಾವುದೇ ವಾಹನಗಳು ಒಡಾಡದಂತೆ ರಸ್ತೆಗೆ ಅಡ್ಡಲಾಗಿ ಮರಗಳನ್ನೂ ಕಡಿದು ಉರುಳಿಸಿದ್ದರು, ಅಷ್ಟರಲ್ಲಿ ಧರ್ಮಸ್ಥಳಕ್ಕೆ ಹೋಗುವ ಬಸ್ ಶಿಶಿಲದ ಬಸ್ ನಿಲ್ದಾಣದಲ್ಲಿ ನಿಂತಿತ್ತು ಹೋಗಿ ವಿಚಾರಿಸಿದಾಗ ಸಂಜೆ ವೇಳೆಗೆ ಬಸ್ ಸಂಚಾರ ಶುರುವಾಗುತ್ತೆ ಎಂದು ಯಾರೋ ಮಹಾಶಯರೊಬ್ಬರು ತಿಳಿಸಿದಾಗ ಮನಸ್ಸಿಗೆ ಕೊಂಚ ದೈರ್ಯ ಬಂತು,
ತದನಂತರ ಚಂದಪ್ಪನವರು ನಮ್ಮನ್ನು ಗೋಖಲೆ ಮನೆಗೆ ಕರೆದೋಯ್ದರು,
ನಂತರ ಗೋಖಲೆ ಮನೆಯವರು ಮಾಡಿಕೊಟ್ಟ "ಚಹಾ"ದಿಂದ ಬಳಲಿ ಬೆಂಡಾಗಿದ್ದ ನಮ್ಮ ಶರೀರಕ್ಕೆ ವಿದ್ಯುತ್ ಸಂಚಲನ ಉಂಟಾಗಿ ಸ್ವಲ್ಪ ಸುಧಾರಿಸಿದೆವು, ಒಂದರ್ದ ಗಂಟೆ ನಮ್ಮ ತೋಟದಲ್ಲಿ ಸುತ್ತಾಡಿ ಬನ್ನಿ ಅಷ್ಟರಲ್ಲಿ ಅಡುಗೆ ಸಿದ್ದವಾಗಿರುತ್ತದೆ ಅಂದ್ರು,
ನಾವಿಬ್ಬರು ಅವರ ಅಡಿಕೆ ತೋಟದಲ್ಲಿ ಸುತ್ತಾಡಿ ಮನಸೂರೆಗೊಂಡ ಕೆಲವು ಮರ,ಗಿಡ ಮತ್ತು ಹೂವುಗಳ ಪೋಟೋಗಳನ್ನು ತೆಗೆದು ತೋಟದ ಬದಿಯಲ್ಲೇ ಹರಿಯುತಿದ್ದ ಕಪಿಲಾ ನದಿಯ ದಡದಲ್ಲಿ ಒಂದಷ್ಟು ಸಮಯ ಕಳೆದೆವು.


ಗೋಖಲೆಯವರ ಜೊತೆ ನಾನು

ನಂತರ ಗೋಖಲೆ ಮನೆಗೆ ಬಂದು ಬಿಸಿ ಬಿಸಿಯಾದ ಊಟ (ಅನ್ನ, ಸಾಂಬಾರ್,ಮಜ್ಜಿಗೆ ಜೊತೆಗೆ ಉಪ್ಪಿನಕಾಯಿ) ಮುಗಿಸಿ ಅವರ ಮನೆಯ ಹೊರಾಂಡದ ಜಗುಲಿ ಮೇಲೆ ಕುಳಿತೊ, ನಿಜಕ್ಕೂ ಗೋಖಲೆ ಮನೆಯವರ ಸತ್ಕಾರ ಮೆಚ್ಚಲೇಬೇಕು, ಅಷ್ಟರಲ್ಲಿ ಬಸ್ಸಿನ ಶಬ್ದ ಕೇಳಿಸಿತು ತಕ್ಷಣವೇ ನಮ್ಮ ಲಗ್ಗೇಜನ್ನು ಬೆನ್ನಿಗೆ ಹೇರಿಸಿಕೊಂಡು ಒಡತೊಡಗಿದೊ ನಮಗೂ ಮುಂಚೆ ಗೋಖಲೆಯವರು ಓಡಿ ಹೋಗಿ ಬಸ್ಸನ್ನು ನಿಲ್ಲಿಸಿದ್ರು, ಗೋಖಲೆಯವರಿಗೆ ನಮ್ಮ ಪ್ರೀತಿಯ ವಂದನೆಗಳನ್ನರ್ಪಿಸಿ ಬಸ್ನಲ್ಲಿ ಆಸೀನರಾಗಿ ದರ್ಮಸ್ಥಳಕ್ಕೆ ಬಂದಾಗ ರಾತ್ರಿ ಏಳಾಗಿತ್ತು.
ನಂತರ ಶ್ರೀ ಮಂಜುನಾಥಸ್ವಾಮಿಯ ದರ್ಶನ ಮುಗಿಸಿ ಭೋಜನ ಗೃಹಕ್ಕೆ ತೆರಳಿ ಊಟ (ಪ್ರಸಾದ) ಮುಗಿಸಿಕೊಂಡು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದೆವು,
ನಾನು ಮೈಸೂರಿಗೆ ಪ್ರಯಾಣ ಬೆಳೆಸಿವ ಉದ್ದೇಶದಿಂದ ಮುಂಗಡ ಟಿಕೇಟ್ ಮಾಡಿಸದೇ ಬಹಳ ತೊಂದರೆ ಅನುಭವಿಸಬೇಕಾಗಿ ಬಂತು, ಕಾರಣ ಮೈಸೂರಿಗೆ ಹೊರಡುವ ಎರಡು ಸಾರಿಗೆ ಬಸ್ ಆಗಲೇ ಭರ್ತಿಯಾಗಿದ್ದವು,ಗಜೇಂದ್ರರವರು ಬೆಂಗಳೂರಿಗೆ ಹೊರಡುವ ರಾತ್ರಿ ಹತ್ತರ ರಾಜಹಂಸ ಬಸ್ಸಿನಲ್ಲಿ ಮುಂಗಡ ಟಿಕೇಟ್ ಖರೀದಿಸಿಯಾಗಿತ್ತು, ಕೊನೆಗೆ ೯:೩೦ ರ ರಾಜಹಂಸ ಹೊರಡುತಿತ್ತು ಕಂಡಕ್ಟರ್ ಬಳಿ ಹೋಗಿ ವಿಚಾರಿಸಲಾಗಿ ಎರಡು ಸೀಟ್ ಖಾಲಿ ಇದೆ ಅಂದ್ರು,
ತಕ್ಷಣವೇ ಗಜೇಂದ್ರರವರಿಗೆ ಹೊರಡುವುದಾಗಿ ತಿಳಿಸಿ ಟಿಕೇಟ್ ಪಡೆದು ಬಸ್ನಲ್ಲಿ ಬಂದು ಕುಳಿತೆ
೯:೩೫ ಕ್ಕೆ ಹೊರಟ ಬಸ್ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಂದಾಗ ಬೆಳಗಿನ ಜಾವ ೫:೩೦.
ಇನ್ನೊಂದು ಕೆ.ಎಸ್.ಆರ್.ಟಿ.ಸಿ ಬಸ್ ಹಿಡಿದು ಚನ್ನಪಟ್ಟಣ ತಲುಪಿ ಅಲ್ಲಿಂದ ನಮ್ಮ ಮನೆಗೆ ಹೋಗಿ ಲಗ್ಗೇಜ್ ಇಳಿಸಿ ಸ್ನಾನ,ತಿಂಡಿ ಮುಗಿಸಿಕೊಂಡು ಕೆಲಸದ ನಿಮಿತ್ತ ಚಾಮುಂಡಿ Express ರೈಲಿನಲ್ಲಿ ಪುನಃ ರಾಜಧಾನಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದೆ.