ಸೋಮವಾರ, ಮೇ 3, 2010

ತಡಿಯಂಡಮೊಳ್ ಚಾರಣ

೧೮.೧೦.೨೦೦೯, ಶನಿವಾರ

ಎತ್ತರ : ಸಮುದ್ರ ಮಟ್ಟದಿಂದ ಸುಮಾರು ೫೭೨೭ ಅಡಿಗಳು
ಕೊಡಗಿನಲ್ಲೇ ಅತಿ ಎತ್ತರವಾದ ಪರ್ವತ


ಜಿಲ್ಲೆ : ಕೊಡಗು


ಒಟ್ಟು ಕ್ರಮಿಸಿದ ದೂರ : ೧೧ + ೧೧ ಕಿ.ಮೀ


ಮಾರ್ಗ : ಬೆಂಗಳೂರು-ಮೈಸೂರು-ಹುಣಸೂರು-ಗೋಣಿಕೊಪ್ಪ-ವೀರಾಜಪೇಟೆ-ಕೈಕಂಬ


ತಂಡ : ವೀರಭದ್ರ , ನರೇಂದ್ರ , ಮತ್ತು ನಾನು ( ಮೋಹನ್ )


ಶುಕ್ರವಾರ ರಾತ್ರಿ ದೀಪಾವಳಿ ಪೂಜೆ ಮುಗಿಸಿಕೊಂಡು ಆಫೀಸಿನಿಂದ ಹೊರಟಾಗ ಸಮಯ ರಾತ್ರಿ ೯:೩೦, ನಾನು, ನರೇಂದ್ರ , ಮತ್ತು ವೀರ ಮೊವರು ಮೆಜೆಸ್ಟಿಕ್ ನ ಹೋಟೆಲೊಂದರಲ್ಲಿ ಊಟ ಮುಗಿಸಿ ಆಟೋದಲ್ಲಿ ಸಾಟಲೈಟ್ ಬಸ್ ನಿಲ್ದಾಣಕ್ಕೆ ಬಸ್ ಹೊರಡುವುದಕ್ಕಿಂತ ೧೦ ನಿಮಿಷ ಮುಂಚಿತವಾಗಿ ಬಂದು ಬಸ್ ನಲ್ಲಿ ಕುಳಿತುಕೊಂಡೊ, ರಾಜಹಂಸ ಸರಿಯಾಗಿ ರಾತ್ರಿ ೧೨:೦೦ ಗಂಟೆಗೆ ಬಿಟ್ಟು ಶರವೇಗದಲ್ಲಿ ಮೈಸೂರು ಮಾರ್ಗವಾಗಿ ವಿರಾಜಪೇಟೆ ತಲುಪಿದಾಗ ಬೆಳಗಿನ ಜಾವ ೫:೪೫.

ವಿರಾಜಪೇಟೆ ಕೆ.ಎಸ್.ಅರ್.ಟಿ.ಸಿ ಬಸ್ ನಿಲ್ದಾಣದಿಂದ ಖಾಸಗಿ ಬಸ್ ನಿಲ್ದಾಣಕ್ಕೆ ಹೋಗಿ ಚಹಾ ಕುಡಿದು ನಾಪೋಕ್ಲು ಮಾರ್ಗವಾಗಿ ಮಡಿಕೇರಿ ಕಡೆಗೆ ಹೋಗುವ ಅನುರಾಧ ಬಸ್ ಗಾಗಿ ಕಾಯುತ್ತಾ ಕುಳಿತೊ, ಅಂತು ಇಂತು ೬:೪೫ ಕ್ಕೆ ಪ್ರತ್ಯಕ್ಷವಾದಳು ಅನುರಾಧ ದಡದಡನೆ ಹತ್ತಿ ಆಸೀನರಾದೆವು, ಸುಮಾರು ಮುಕ್ಕಾಲು ಗಂಟೆಯ ಬಳಿಕ ಕೈಕಂಬದಲ್ಲಿ ಕೆಡವಿ ಕುಲುಕುತ್ತಾ ಬಳುಕುತ್ತಾ ಕೊಡಗಿನ ಕಾಫಿ ತೋಟಗಳ ನಡುವೆ ಅನುರಾಧ ಮಿಂಚಿ ಮರೆಯಾದಳು, ಬಸ್ ನಿಲ್ದಾಣದಲ್ಲಿ ಕೆಲವು ಛಾಯಚಿತ್ರಗಳನ್ನು ನನ್ನ ಸೋನಿ D765 ನಲ್ಲಿ ತುಂಬಿಕೊಂಡು ೭:೪೫ ಕ್ಕೆ ಚಾರಣವನ್ನು ಶುರು ಮಾಡಿದೊ.


ಚಾರಣ ಆರಂಬಿಸಿದ ಸ್ಥಳದಲ್ಲಿ ನಾನು ಮತ್ತು ನರೇಂದ್ರ


ದಾರಿಮದ್ಯದಲ್ಲಿ ಸಿಕ್ಕ ಕೆಲವು ಹೋಂಸ್ಟೇಯಲ್ಲಿ ಬೆಳಗಿನ ಉಪಹಾರಕ್ಕಾಗಿ ಏನಾದರು ಸಿಗುತ್ತೇನೊ ಅಂತ ಹೋಗಿ ಕೇಳಿ ತಲೆ ಮೇಲೆ ಕರ್ಚೀಪ್ ಇಟ್ಕೊಂಡು ವಾಪಾಸ್ ಬಂದ್ದದ್ದಾಯಿತು, ಮುಖ್ಯರಸ್ತೆಯಿಂದ ೩ ಕಿ.ಮೀ ದೂರ ಇರುವ ನಾಲ್ಕ್ನಾಡ್ ಅರಮನೆಯನ್ನು ಮಾರ್ಗದರ್ಶಿ ನೆರವಿನಿಂದ ಸಂಪೂರ್ಣವಾಗಿ ವೀಕ್ಷಿಸಿ ಹೊರಟಿದೆವು ಇಲ್ಲಿಂದ ಸುಮಾರು ೮ ಕಿ.ಮೀ.ಇರುವ ತಡಿಯಂಡಮೊಳ್ ಪರ್ವತ್ತಕ್ಕೆ...

ನಾಲ್ಕ್ನಾಡು ಅರಮನೆ

ಕೊಡಗಿನ ಮಹಾರಾಜ ಚಿಕ್ಕವೀರರಾಜೇಂದ್ರರು ಶತ್ರುಗಳಿಂದ ತಪ್ಪಿಸಿಕೊಳ್ಳಲು ೧೭೯೨ ನೇ ಇಸವಿಯಲ್ಲಿ ಕಟ್ಟಿಸಿದ್ದರಂತೆ ಅಂದರೆ ಸುಮಾರು ೨೧೬ ವರ್ಷ ಹಳೇಯದು, ಅರಮನೆಯ ಮುಂದೆ ತನ್ನ ತಂಗಿಯ ಮದುವೆಗೋಸ್ಕರ ಒಂದು ಮಂಟಪವನ್ನು ಕೂಡ ನಿರ್ಮಿಸಿದ್ದಾರೆ, ಅರಮನೆಯಲ್ಲಿ ಕೆಲವು ರಹಸ್ಯ ಮಾರ್ಗಗಳಿವೆ, ಒಳಗಡೆ ಒಂದು ಕಿಟಗಿ ಇದ್ದು ಒಳಗಿನಿಂದ ಕಿಟಕಿಯ ಮುಖಾಂತರ ಹೊರಗಿನಿಂದ ಯಾರು ಬರುತ್ತಾರೆ ಹೋಗುತ್ತಾರೆ ಅಂತ ತಿಳಿಯಬಹುದು ಆದ್ರೆ ಹೊರಗಿನಿಂದ ಆ ಕಿಟಕಿ ಎಲ್ಲಿದೆ ಅಂತ ಅಷ್ಟು ಸುಲಭವಾಗಿ ಗೊತ್ತಾಗಲ್ಲ, ಮತ್ತೊಂದು ವಿಶೇಷ ಅಂದರೆ ಕತ್ತಲೆ ಕೋಣೆಗಳಿದ್ದು ಕೋಣೆಯ ಹೊರಗಿನಿಂದ ನಿಂತು ಒಳಗೆ ಕಣ್ಣಾಯಿಸಿದಾಗ ಏನು ಕಾಣಲ್ಲ ಆದರೆ ಒಳಗೆ ನಿಂತು ನೋಡಿದರೆ ಹೊರಗಿನದನ್ನು ಸಂಪೂರ್ಣವಾಗಿ ವೀಕ್ಷಿಸಬಹುದು, ವೈರಿಗಳು ಆಕ್ರಮಣ ಮಾಡಿದಾಗ ಮಹಾರಾಜರು ಒಳಗೆ ನಿಂತು ವೈರಿ ಹೊಳ ಹೊಕ್ಕ ತಕ್ಷಣ ವೈರಿ ಕಡೆಗೆ ಖಡ್ಗ ಬೀಸುತ್ತಿದ್ದರಂತೆ.ಇನ್ನೂ ಹಲವಾರು ರಹಸ್ಯ ವಿಷಯಗಳಿವೆಯಂತೆ.


ನಾಲ್ಕ್ನಾಡು ಅರಮನೆ

ಅರಮನೆಯ ಒಳಾಂಗಣ ನೋಟ

ಸ್ವಲ್ಪ ದೂರ ನಡೆಯುವಷ್ಟರಲ್ಲಿ ಹಾದಿಯ ಪಕ್ಕದಲ್ಲೆ ಸಣ್ಣ ಜಲಪಾತವೊಂದು ಸಿಕ್ತು ಅಲ್ಲಿಯೇ ನಮ್ಮ ನಿತ್ಯಕರ್ಮಗಳನ್ನು ಮುಗಿಸಿ ಜೊತೆಗೆ ತಂದಿದ ನಾಷ್ಟ (ತಲಾ ಒಂದು ಬಾಳೆಹಣ್ಣು ಮತ್ತು ನಿಪ್ಪಟ್ಟು, ಚಕ್ಲಿ ) ತಿಂದು ಹೊರಟಾಗ ೯:೩೦,ಸ್ವಲ್ಪ ದೂರ ಚಾರಣ ಸವೆಸಿದ ಮೇಲೆ ಕವಲು ದಾರಿ ಎದುರಾಯ್ತು ಬಲಕ್ಕೆ ಹೋಗುವ ಹಾದಿ ವೀಕ್ಷಣ ಸ್ಠಳಕ್ಕೆ ಹೋಗುತ್ತಂತೆ, ಅರಮನೆ ಮಾರ್ಗದರ್ಶಿ ಮೊದಲೆ ತಿಳಿಸಿದ್ದರಿಂದ ಎಡಕ್ಕೆ ಹೋಗುವ ಹಾದಿಯನ್ನು ಆಯ್ಕೆಮಾಡಿಕೊಂಡು ದಾರಿಯಲ್ಲಿ ಸಿಕ್ಕ ಕೆಲವು ಝರಿಗಳಲ್ಲಿ ಬಾಯಾರಿಕೆ ನೀಗಿಸಿಕೊಂಡು ಚಾರಣವನ್ನು ಮುಂದುವರಿಸುತ್ತಿದ್ದೆವು, ತಂಗಾಳಿಯಲ್ಲಿ ತೇಲಿಬರುತಿದ್ದ ಜೀರುಂಡೆ ಸದ್ದು, ಪಕ್ಷಿಗಳ ಚಿಲಿಪಿಲಿ ಕೂಗು ದಾರಿಯುದ್ದಕ್ಕೂ ನಮಗೆ ಖುಷಿ ನೀಡುತಿತ್ತು, ಹೀಗೆ ಅರ್ದ ದಾರಿ ಸವೆಸಿದ ಮೇಲೆ ಅರಣ್ಯ ಇಲಾಖೆ ತಪಾಸಣ ಕೇಂದ್ರ ಎದುರಾಯ್ತು, ಆದರೆ ಅಲ್ಲಿ ಯಾರೂ ಕಂಡು ಬರಲಿಲ್ಲ, ಅಲ್ಲಿ ಸ್ವಲ್ಪ ವಿಶ್ರಾಂತಿ ತಗೊಂಡು ಸಂಜೆಯಷ್ಟರಲ್ಲಿ ವಾಪಾಸು ಬಂದು ಮಡಿಕೇರಿಯಲ್ಲಿ ಉಳಿದುಕೊಳ್ಳುವ ಇರಾದೆ ಇದ್ದುದ್ದರಿಂದ ಚಾರಣದ ವೇಗವನ್ನು ಹೆಚ್ಹಿಸಿ ಹೆಜ್ಜೆಹಾಕತೊಡಗಿದೊ.


ಪಯಣದ ಹಾದಿಯಲ್ಲಿ ನಾನು.


ಅಲ್ಲೆಲ್ಲೊ ಮಂಜು ಮುಸುಕಿದ ಗಿರಿಶ್ರೇಣಿಗಳ ನಡುವೆ ದೊಡ್ಡಣ್ಣನಂತೆ ಇಣುಕುತಿದ್ದ ತಡಿಯಂಡಮೊಳ್ ಬೆಟ್ಟದ ದರ್ಶನವಾಯ್ತು ಸುಮಾರು ಹೊತ್ತು ನಡೆದ ಮೇಲೆ ಹಾದಿಯ ಎಡಕ್ಕೆ ದೊಡ್ಡ ಬಂಡೆ ಪಕ್ಕದಲ್ಲೆ ಎಡಕ್ಕೆ ಕವಲಾದ ಹಾದಿ ದಟ್ಟಕಾಡಿನೊಳಕ್ಕೆ ನುಗ್ಗಿ ಮರೆಯಾದಂತಿತ್ತು, ನೀರಿನ ಜುಳುಜುಳು ಸದ್ದು ಕೇಳಿಸಿದ್ದರಿಂದ ಚಾರಣಿಗರಿಗೆ ನೀರು ಸಿಗುವ ಜಾಗ ಇದೇ ಕೊನೆ ಇರಬಹುದು ಅನ್ನಿಸ್ತು, ಎದುರಿಗೆ ಕಾಣುತಿದ್ದ ದೊಡ್ಡ ಬೆಟ್ಟ ಜೊತೆಗೆ ಕಡಿದಾದ ಹಾದಿ ಏರತ್ತಾ ಏರುತ್ತಾ ಮತ್ತೆ ಎಡಕ್ಕೆ ತಿರುಗಿ ಸಣ್ಣ ಗುಡ್ಡ ಹತ್ತಿ ಸ್ವಲ್ಪ ದೂರ ನಡೆದ ಮೇಲೆ ನರೇಂದ್ರ ನನ್ನ ಕೈಲಿ ಆಗಲ್ಲ ನಾನು ಬರೊಲ್ಲ ನೀವು ಹೋಗಿಬನ್ನಿ ಅಂತ ಕುಳಿತುಬಿಟ್ಟ, ಸರಿಯಾದ ಅಸಾಮಿ ಕೊಟ್ನಲಪ್ಪ ಕೈಯ ಅಂದುಕೊಂಡು ಮಗುವಿಗೆ ಚಂದಮಾಮ ತೋರಿಸಿ ಸಮಾಧಾನ ಮಾಡುವ ಹಾಗೆ ಮುಂದೆ ಕಾಣುತಿದ್ದ ಸಣ್ಣ ಬೆಟ್ಟವನ್ನು ತೋರಿಸಿ ಅದೇ ತಡಿತಂಡಮೊಳ್ ಬೆಟ್ಟದ ತುದಿ ಕಣೋ ಬಾರೊ ಅಂತ ಹೇಳಿ ಅವನ ಬ್ಯಾಗನ್ನು ನಾನೇ ಎತ್ತುಕೊಂಡು ಹೆಜ್ಜೆಹಾಕಿದೆ, ಮುಂದೆ ಸಾಗುತ್ತ ಸಾಗುತ್ತ ಆ ದಾರಿ ನಮ್ಮನ್ನು ದಟ್ಟಕಾಡಿನೊಳಕ್ಕೆ ಕರೆದೋಯ್ದ ಕೂಡಲೇ ಭಯ ಆವರಿಸಿತು ಎಕೆಂದರೆ ಯಾವುದೇ ಪ್ರಾಣಿ ಬಂದ್ರು ತಪ್ಪಿಸಿಕೂಳ್ಳೊಕ್ಕೆ ಅವಕಾಶನೇ ಇರಲಿಲ್ಲ ಅಷ್ಟು ಇಕ್ಕಟ್ಟಾದ ಹಾದಿ ಅದೂ ಅಲ್ಲದೇ ನರೇಂದ್ರನ ಮಡಿಕೇರಿಯ ಸ್ನೇಹಿತರೊಬ್ಬರು ಅಲ್ಲಿ ಹುಲಿಗಳಿವೆ ಎಂದು ಮೊದಲೇ ಒಂದು ಡೋಸ್ ಕೊಟ್ಟಿದ್ರು,



ನಡೆದು ನಡೆದು ತುಂಬಾ ಆಯಾಸವಾದ್ದರಿಂದ ಅಲ್ಲಲ್ಲಿ ಕುಳಿತು ವಿಶ್ರಾಂತಿ ಪಡೆದು ಮುಂದೆ ಸಾಗುತ್ತ ದಟ್ಟ ಕಾಡಿನಿಂದ ಹೊರಗೆ ಬಂದೊ ಮತ್ತೆ ಏರು ದಾರಿ ಇತ್ತ ನೀರು ಬೇರೆ ಖಾಲಿಯಾಗುತ್ತಾ ಬಂತು, ಇನ್ನೇನು ನಾವು ತುದಿ ತಲುಪಿದವೇನೊ ಅನ್ನುವಷ್ಟರಲ್ಲಿ ಮತ್ತೆ ಏರು ದಾರಿ, ನರೇಂದ್ರ ಒಂದೆ ಸಮನೆ ಕಿರುಚಾಡುತಿದ್ದ ಎಲ್ಲಿಗ್ರೋ ಇಲ್ಲೇ ಇದೆ ಅಂತಾ ಅವಾಗಿನಿಂದ ಕರ್ಕೊಂಡು ಹೋಗ್ತಾನೇ ಇದ್ದಿರಲ್ಲ, ಅದೇ ಕಣೋ ಅಂತಾ ಸಮಾದಾನಪಡಿಸಿ ಹೇಗೋ ತೆವಳುತ್ತಾ ತುದಿ ತಲುಪಿಬಿಟ್ಟೆವು, ಆಗಲೇ ಮದ್ಯಾಹ್ನ ಒಂದಾಗಿತ್ತು.


ತುಂಬಾ ಹೊತ್ತು ನಡೆದು ಆಯಾಸವಾಗಿದ್ದರೂ ಕೂಡ ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ ಸುತ್ತ ಮುತ್ತಲೂ ಹಸಿರು ಸೀರೆ ಹೊದ್ದಿಕೊಂಡತಹ ಸುಂದರ ಪರ್ವತಗಳ ಸಾಲುಗಳು, ಅಬ್ಬಾ ನೋಡಲು ಎರಡು ಕಣ್ಣು ಸಾಲದು, ಅಕಾಶವನ್ನೇ ದಿಟ್ಟಿಸುತ್ತ ಒಂದರ್ಧ ಗಂಟೆ ಹಾಗೇ ನೆಲಕ್ಕೊರಗಿ ವಿಶ್ರಾಂತಿ ಪಡೆದು ನಂತರ ೧ ಬಾಳೆಹಣ್ಣು, ಕೋಡ್ ಬಳೆ ತಿಂದು ಜೂಸ್ ಕುಡಿದ ಮೇಲೆ ಆನೆ ಬಲ ಬಂದತಾಯ್ತು, ಅಷ್ಟೊತ್ತಿಗೆ ಯಾವುದೊ ಒಂದು ಚಾರಣಿಗರ ಗುಂಪು ಬಂತು ಅವರೊಲೊಬ್ಬ ಬಾಯಾರಿಕೆ ತಡೆಯಲಾಗದೇ ವಾಟರ್ ಪ್ಲೀಸ್ ಎಂದಾಗ ನಾವು ಒಬ್ಬರ ಮುಖ ಒಬ್ಬರು ನೋಡಿಕೊಂಡೊ ಏಕೆಂದರೆ ನಮ್ಮ ಬಳಿ ನೀರು ಯಾವಾಗಲೋ ಖಾಲಿಯಗಿತ್ತು, ಆಗ ನಮ್ಮ ಬಳಿಯಿದ್ದ ೧ ಬಾಳೆಹಣ್ಣು, ಸ್ವಲ್ಪ್ಪ ಜೂಸ್ ಕೊಟ್ಟಾಗ ಅವನ ಮುಖದಲ್ಲಿ ನಗು ಅರಳಿತು ಜೊತೆಗೇ ಪ್ಲಾಸ್ಟಿಕ್ ಬಿಸಾಡಬಾರದು ಅಂತಾ ಸಲಹೆ ಕೂಡ ಕೊಟ್ಟು, ಅಲ್ಲಲ್ಲಿ ಸುತ್ತಾಡಿ ನಿಸರ್ಗ ಸೌಂದರ್ಯವನ್ನ ನನ್ನ ಸೋನಿ ಡಿ ೭೬೫ ದಾಖಲು ಮಾಡಿ ಗಡಿಯಾರದ ಕಡೆಗೆ ಕಣ್ಣಾಯಿಸಿದಾಗ ಗಂಟೆ ಎರಡಾಗಿತ್ತು,


ಸರಿ ಅಂತಾ ಹೊರಡಲು ನಿರ್ದಾರ ಮಾಡಿ ಮತ್ತೆ ಅದೇ ಬೆಟ್ಟ ಅದೇ ಅಡವಿ ನುಸುಳಿ ಇಳಿಯೊಕ್ಕೆ ಶುರುಮಾಡಿದೊ, ನನ್ನ ಕಾಲು ಮೊದಲೆ ಉಳುಕಿದ್ದರಿಂದ ನೋವು ಜಾಸ್ತಿಯಾಗತೊಡಗಿತು ಒಂದೊಂದು ಹೆಜ್ಜೆಯನ್ನು ಬಹಳ ಪ್ರಯಾಸಪಟ್ಟು ಇಳಿಯತೊಡಗಿದೆ, ನರೇಂದ್ರ ಮಾತ್ರ ದೊಡ್ಡ ಹೀರೋನಂತೆ ಪೋಸ್ ಕೊಟ್ಕೊಂಡು ಎಲ್ಲರಿಗಿಂತ ಮೊದಲಿದ್ದ,
ಅವನ ಹಿಂದೆ ವೀರ, ವೀರನ ಹಿಂದೆ ನಾನು ಹೀಗೆ ನಮ್ಮ ಚಾರಣ ಮುಂದುವರಿಯುತಿತ್ತು,


ಅಲ್ಲಲ್ಲಿ ಸಿಕ್ಕ ಝರಿಗಳಲ್ಲಿ ನಮ್ಮ ಬಾಯಾರಿಕೆ ನೀಗಿಸಿಕೊಂಡು ಕೈಕಂಬ ಬಸ್ ನಿಲ್ದಾಣಕ್ಕೆ ಬಂದಾಗ ಸಂಜೆ ೫:೨೦,


ಸುಮಾರು ಅರ್ದ ಗಂಟೆ ಕಾಯುತ್ತ ಕುಳಿತೊ ಅಂತೂ ಸುಮಾರು ೫:೫೦ ಕ್ಕೆ ಬಂದ ಶ್ಯಾಮ್ express ನಲ್ಲಿ ಕುಳಿತು ನಾಪೋಕ್ಲು ಮಾರ್ಗವಾಗಿ ರಾತ್ರಿ ೭:೩೦ ಕ್ಕೆ ಮಡಿಕೇರಿಗೆ ಬಂದು ನರೇಂದ್ರನ ಸ್ನೇಹಿತರಾದ ಶಿವರಾಂ ( ಪ್ರಜಾವಾಣಿ ಪತ್ರಿಕೆಯ ವರದಿಗಾರರು ) ಮನೆಗೆ ಹೋಗಿ ಊಟ ಮುಗಿಸಿ ಅವರ ಸಹಾಯದಿಂದ ಪುಕ್ಕಟೆಯಾಗಿ ಐ.ಬಿ. ಯಲ್ಲಿ ರೂಮೊಂದನ್ನು ಪಡೆದು ಬಿತ್ಕೊಂಡೊ, ಬೆಳಿಗ್ಗೆ ಐ.ಬಿ ಯಲ್ಲೇ ಸ್ನಾನ ಮುಗಿಸಿ ಪುನ: ಶಿವರಾಂ ರವರ ಮನೆಗೆ ಹೋಗಿ ಬೆಳಗಿನ ಉಪಹಾರ ಮುಗಿಸಿಕೊಂಡು ಅವರ ಪ್ರೀತಿಯ ಸತ್ಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳನ್ನರ್ಪಿಸಿ ಹೊರಟೆವು, ಮಡಿಕೇರಿಯ ಕೆ,ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಬಂದು ಮದ್ಯಾಹ್ನ ೧೨:೪೫ ರ ರಾಜಹಂಸ ಬಸ್ನಲ್ಲಿ ಪ್ರಯಾಣ ಬೆಳೆಸಿ ಚನ್ನಪಟ್ಟಣ್ಣ ತಲುಪಿದಾಗ ಸಂಜೆ ಆರಾಗಿತ್ತು, ನಾನು ಮತ್ತು ವೀರ ಬಸ್ಸಿಳಿದು ರೈಲ್ವೆ ಸ್ಟೇಷನಲ್ಲಿ ಪಾರ್ಕ್ ಮಾಡಿದ ಬೈಕ್ ಹತ್ತಿ ಊರು ಸೇರಿಕೊಂಡೆವು, ನರೇಂದ್ರ ಹಾಗೇ ಬೆಂಗಳೂರಿಗೆ ಪ್ರಯಾಣ ಮುಂದುವರಿಸಿದ.

*ಶುಭಂ*

2 ಕಾಮೆಂಟ್‌ಗಳು:

ಶ್ವೇತಾ ಹೇಳಿದರು...

ನನ್ನ ಹಾಗೆ ನೀವು ಚಾರಣ ಪ್ರಿಯರೆಂದು ತಿಳಿದು ತುಂಬಾ ಸಂತೋಷವಾಯಿತು. ನಿಮ್ಮ ಲೇಖನಗಳನ್ನೆಲ್ಲ ಓದಿದೆ. ಛಾಯಾಚಿತ್ರಗಳು ಸುಂದರವಾಗಿವೆ ಬರವಣಿಗೆಯೂ ಮನೋಜ್ಞವಾಗಿದೆ.

Mohan B.S ಹೇಳಿದರು...

ತುಂಬಾ ಧನ್ಯವಾದಗಳು ಶ್ವೇತಾ.