ಸೋಮವಾರ, ಜುಲೈ 19, 2010

ಕೋಟೆ ಬೆಟ್ಟ ಚಾರಣ - ೧

೨೬.೦೨.೧೦, ೨೭.೦೨.೧೦ ಮತ್ತು ೨೮.೦೨.೧೦


ಕೊಡಗಿನಲ್ಲೇ ಮೊರನೇ ಅತೀ ಎತ್ತರವಾದ ಪರ್ವತ.


ಎತ್ತರ: ಸಮುದ್ರ ಮಟ್ಟದಿಂದ ಸುಮಾರು ೫೪೦೦ ಅಡಿ.


ತಂಡ: ಗೋವಿಂದ, ನರೇಂದ್ರ, ವೀರ ಮತ್ತು ನಾನು ( ಮೋಹನ್).


ಚಾರಣದ ಅಂತರ : ೧೪ ಕಿ.ಮೀ + ೧೪ ಕಿ.ಮೀ.


ತುಂಬಾ ದಿನದಿಂದ ನನ್ನ ಮನಸಿನಲ್ಲಿ ಹಾಗೇ ಉಳಿದಿದ್ದ "ಕೋಟೆಬೆಟ್ಟ ಚಾರಣ"ಕ್ಕೆ ಕೊನೆಗೂ ಶುಭಗಳಿಗೆ ಕೂಡಿಬಂದಿತ್ತು, ಚಾರಣ ಮಿತ್ರರಿಂದ ಸಮ್ಮತಿ ಪಡೆದು ಎರಡು ದಿನ ಮುಂಚಿತವಾಗೇ ಐರಾವತ ಬಸ್ ನಲ್ಲಿ ನಾಲ್ಕು ಆಸನಗಳನ್ನು ಕಾಯ್ದಿರಿಸಿ ಬಂದೆ,

ಅವತ್ತು ಶುಕ್ರವಾರ ನಾವು ಹೊರಡಬೇಕಾಗಿದ್ದ ಐರಾವತ ಬಸ್ ರಾತ್ರಿ ೯:೪೫ ಕ್ಕೆ ಇದ್ದುದ್ದರಿಂದ
ತರಾತುರಿಯಲ್ಲಿ ಬಹುಬೇಗನೇ ಊಟ ಮುಗಿಸಿ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಅಡಿಇಟ್ಟೆವು.
ಐರಾವತ ರಾತ್ರಿ ೧೦:೦೦ ಕ್ಕೆ ಹೊರಟಿತು ಹಾಗೇ ಸ್ಯಾಟ್ಲೈಟ್ ಬಸ್ ನಿಲ್ದಾಣದಲ್ಲಿ ನರೇಂದ್ರ ಕೂಡ ಬಂದು ಸೇರಿಕೊಂಡ ಅಲ್ಲಿಂದ ಹೊರಟ ಐರಾವತ ಎಲ್ಲ ವಾಹನಗಳನ್ನು ಹಿಂದೆ ಹಾಕುತ್ತಾ ಮಿಂಚಿನ ವೇಗದಲ್ಲಿ ಮಡಿಕೇರಿಗೆ ತಂದು ಹಾಕಿದಾಗ ಬೆಳಗಿನ ಜಾವ ೩:೧೫,
ಇಲ್ಲೆ ಸ್ವಲ್ಪ ಹೊತ್ತು ಮಲಗೋಣ ಅಂತ ಯೋಚಿಸಿ ಬಸ್ ನಿಲ್ದಾಣದಲೆಲ್ಲ ಸುತ್ತಾಡಿದೆವು ಆದರೆ ಬಸ್ ನಿಲ್ದಾಣದಲ್ಲಿ ಕಾಮಗಾರಿ ನಡೆಯುತ್ತಿದ್ದರಿಂದ ಅಲ್ಲೆಲ್ಲೂ ಸರಿಯಾದ ಜಾಗ ಸಿಗದೆ ಕೊನೆಗೆ ಸಿಕ್ಕ ಒಂಚೂರು ಜಾಗದಲ್ಲಿ ಎಲ್ರೂ ಮಲಗಿಕೊಂಡೊ, ಅಷ್ಟರಲ್ಲೇ ಚುಮು ಚುಮು ಬೆಳಕಾಗತೊಡಗಿತು ನಂತರ ಎದ್ದು ಬಸ್ ನಿಲ್ದಾಣದ ಸನಿಹದಲ್ಲೇ ಇದ್ದ ನರೇಂದ್ರನ ಸ್ನೇಹಿತರ ಮನೆಗೆ ಹೋಗಿ ಅಲ್ಲೇ ತಿಂಡಿ, ಕಾಫಿ, ಮುಗಿಸಿಕೊಂಡು ಖಾಸಗಿ ನಿಲ್ದಾಣದ ಕಡೆಗೆ ನಡೆದು ಬಂದೊ, ಅಷ್ಟರಲ್ಲಿ ಸೋಮವಾರಪೇಟೆ ಕಡೆಗೆ ಹೋಗುವ ಬಸ್ ಹೊರಡಲು ಸಿದ್ದವಾಗಿ ನಿಂತಿತ್ತು, ಎಲ್ರೂ ಹೋಗಿ ಕುಳಿತ ಸ್ವಲ್ಪ ಹೊತ್ತಿನಲ್ಲೇ ಬಸ್ ಹೊರಟಿತು ಬಸ್ ನಲ್ಲಿ ಹಾಕಿದ್ದ ಸೊಗಸಾದ ಕನ್ನಡ ಗೀತೆಗಳನ್ನು ಕೇಳುತ್ತಾ ಮೈ ಮರೆತು ಹಟ್ಟಿಹೊಳೆ ಬಂದದ್ದೆ ಗೊತ್ತಾಗಲಿಲ್ಲ ಬಸ್ ನಿಂದ ನಮ್ಮ ಲಗ್ಗೇಜುಗಳನ್ನು ಕೆಳಗಿಳಿಸಿ ಅಲ್ಲೇ ಇದ್ದ ಹೋಟೆಲ್ ಹಟ್ಟಿಹೊಳೆಯಲ್ಲಿ ಮದ್ಯಾಹ್ನದ ಊಟಕ್ಕೆಂದು ಪರೋಟ, ಕಾಯಿಬಜ್ಜಿ (ಬಹು ಬೇಗನೆ ಮಾಡಬಹುದಾದಂತ
ಸಾಂಬಾರ್ ಇದು ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು ಭಾಗಗಳಲ್ಲಿ ಹೆಚ್ಚು ಪ್ರಚಲಿತ) ಕಟ್ಟಿಸಿಕೊಂಡು ಪಕ್ಕದಲ್ಲೇ
ಪ್ರಶಾಂತವಾಗಿ ಹರಿಯುತಿದ್ದ ಹಟ್ಟಿಹೊಳೆಯಲ್ಲಿ ಸ್ನಾನ ಮುಗಿಸಿ ಚಾರಣವನ್ನು ಶುರು ಮಾಡಿದೆವು,


ಪ್ರಶಾಂತವಾಗಿ ಹರಿಯುತ್ತಿರುವ ಹಟ್ಟಿಹೊಳೆ

ರಸ್ತೆಯ ಎಡ ಬದಿಯಲ್ಲಿ ಪ್ರಶಾಂತವಾಗಿ ಹರಿಯುತಿದ್ದ ಹಟ್ಟಿಹೊಳೆ ಒಂದೆಡೆಯಾದರೆ
ಬಲ ಬದಿಯಲ್ಲಿ ಸುಂದರವಾದ ಕಾಫಿ ಎಸ್ಟೇಟ್, ಅಲ್ಲೊಂದು ಇಲ್ಲೊಂದು ಪುಟ್ಟ ಮನೆ, ಮನೆಯ ಆವರಣದಲ್ಲಿ ಸುಂದರವಾದ ಬಗೆ ಬಗೆಯ ಹೂ ಗಿಡಗಳು ಎಂತವರ ಮನಸನ್ನು ಪುಳಕಗೊಳಿಸುವಂತಿದ್ದವು, ಅಲ್ಲಲ್ಲಿ ಮನೆಗಳ ಮುಂದೆ ಇದ್ದ ಹೂಗಳ ಕೆಲವು ಪೋಟೋಗಳನ್ನು ತೆಗೆದುಕೊಂಡು ಮುಂದೆ ಸಾಗುತ್ತಿದ್ದೆವು,
ಸುಮಾರು ಮೊರು ಕಿ.ಮೀ. ಸಾಗುವಷ್ಟರಲ್ಲಿ ರಸ್ತೆಯ ಎಡಕ್ಕೆ ತೂಗುಸೇತುವೆ ಸಿಕ್ತು ಅಲ್ಲೆಲ್ಲ ಒಡಾಡಿ ಕೆಲವು ಛಾಯಚಿತ್ರ ತೆಗೆದು ಮತ್ತೆ ರಸ್ತೆಗೆ ಬಂದು ಚಾರಣವನ್ನು ಶುರು ಮಾಡಿದೆವು,
ಇನ್ನೊಂದು ಕಿ.ಮೀ. ಸಾಗಿದ ಬಳಿಕ ಮರವೊಂದರಲ್ಲಿ ಫಲಕ ನೇತುಹಾಕಿದ್ದರು ಅದರಲ್ಲಿ ಕೋಟೆಬೆಟ್ಟ ೭ ಕಿ.ಮೀ. ಎಂದು ಹಾಕಿತ್ತು ಅಲ್ಲಿ ನಾವು ಬಲಕ್ಕೆ ತಿರುಗಿ ಕಾಫಿ ಎಸ್ಟೇಟ್ ಗಳ ನಡುವೆ ಸಾಗುತಿತ್ತು ನಮ್ಮ ಚಾರಣ, ಸ್ವಲ್ಪ ದೂರ ಮುಂದೆ ಬಂದಾಗ ಕಾಫಿ
ಎಸ್ಟೇಟ್ ವೊಂದರಲ್ಲಿ ಜುಳು ಜುಳು ಶಬ್ದ ಕೇಳಿಸಿದ್ದರಿಂದ ಮರದ ಗೇಟ್ ಬಳಿ ಬಂದು ನೋಡಿದಾಗ ನೀರು ಕೊಳವೆ ಮೂಲಕ ಸಣ್ಣಗೆ ಹರಿಯುತಿತ್ತು,
ನೀರು ಯಾವಾಗ ಇನ್ನೆಷ್ಟು ದೂರದಲ್ಲಿ ಸಿಗುತ್ತೊ ಏನೋ ? ಅಂದುಕೊಂಡು ಬಾಟೆಲ್ ತೆಗೆದು ನೀರನ್ನು ಮನಸೊ ಇಚ್ಚೆ ಕುಡಿದು ಖಾಲಿ ಮಾಡಿ ಮತ್ತೆ ನೀರನ್ನು ತುಂಬಿಕೊಳ್ಳುವುದಕ್ಕೆ ಮರದ ಗೇಟ್ ತಳ್ಳಿ ಒಳ ನಡೆದೆ,
ಅನುಮತಿ ಇಲ್ಲದೆ ಕಾಫಿ ತೋಟಕ್ಕೆ ದನ ನುಗ್ಗಿದ ಹಾಗೇ ನುಗ್ಗಿದನ್ನು ನೋಡಿ ಯಾರಾದರು ಬೈಯುತ್ತಾರೆನೊ ಅಂದುಕೊಂಡೆ ಸದ್ಯ ಅಲ್ಲಿ ಯಾರು ಇರಲಿಲ್ಲ ವೀರನು ಸಹ ಹಿಂದೆನೇ ಬಂದ
ನೀರನ್ನು ತುಂಬಿಸಿಕೊಂಡು ಮರದ ಗೇಟನ್ನು ಮೊದಲಿದ್ದ ಹಾಗೇ ಮುಚ್ಚಿ ಹೊರ ಬಂದೆ,
ಹಾಗೆ ಸ್ವಲ್ಪ ದೂರ ನಡೆಯುವಷ್ಟರಲ್ಲಿ ಟಾರ್ ರಸ್ತೆ ಮುಕ್ತಾಯಗೊಂಡಿತು, ಅಲ್ಲಿ ಅಸಾಮಿಯೊಬ್ರು ತೋಟದಲ್ಲಿ ಬಾಳೆಗೊನೆ ಕತ್ತರಿಸ್ತಾಯಿದಿದ್ದನ್ನು ನೋಡಿ ಹಾಗೆ ನಿಂತೆವು ನಮ್ಮನ್ನು ನೋಡಿ ಬಾಳೆ ಹಣ್ಣು ಬೇಕಾ ಅಂದ್ರು ಅಷ್ಟರಲ್ಲಿ ನಮ್ಮ ನರ‍ೆಂದ್ರ ಎಷ್ಟು ಹಣ ಅಂದ ಅದಕ್ಕೆ ಅವರು ಹಣ ಗಿಣ ಏನು ಬೇಡ ತಗೊಳ್ಳಿ ಅಂದ್ರು ಅದು ಅವರ ದೊಡ್ಡ ಗುಣ ಬಿಡಿ, ಸುಮಾರು ಅರ್ಧ ಗೊನೆ ಇತ್ತು ಅದರಲ್ಲಿ ಕೆಲವು ಹಣ್ಣಾಗಿದ್ದ ಬಾಳೆಹಣ್ಣನ್ನು ಅಲ್ಲಿಯೆ ತಿಂದು ಮುಗಿಸಿದೆವು ಮಿಕ್ಕಿದ ಬಾಳೆಕಾಯನ್ನು ಕರಿಯ ( ವೀರ) ನಾನು ಮನೆಗೆ ತಗೊಂಡು ಹೋಗಿ ಬಜ್ಜಿ ಮಾಡಿಸ್ತೀನಿ ಅಂತ ಪ್ಲಾಸ್ಟಿಕ್ ಕವರಲ್ಲಿ ಸುತ್ತಿ ಬ್ಯಾಗ್ ನೊಳಗೆ ಹಾಕಲು ಹೋದ,
ಅವಾಗ ನಾನು, ಲೇ ಮಂಗ ಈಗಲೇ ಹೊತ್ಕೊಂಡು ಹೋಗೊಕೆ ಆಗ್ತಾ ಇಲ್ಲ ಅದ್ ಬೇರೆ ಸಿಗಾಕ್ತಾವನೆ ಅಲ್ಲೆಲಾದ್ರು ಪೊದೇಲಿ ಹಾಕ್ಲ ಅಂದೆ,
ವೀರ ಪೊದೇಲಿ ಇಟ್ಟು ಗುರುತು ಮಾಡಿ ಬಂದ ಸ್ವಲ್ಪ ದೂರ ನಡೆಯುವಷ್ಟರಲ್ಲಿ ಎಡಕ್ಕೆ ಒಂದು ಮನೆಯೊಂದು ಕಾಣಿಸಿತು ಮನೆಯ ಗೇಟ್ ಬಳಿ ಬಂದಾಗ ನಾಯಿ ಒಂದೆ ಸಮನೆ ಬೊಗುಳುತಿತ್ತು ಬಹುಶಃ ಅದಕ್ಕೆ ನಾವು ಕಾಫಿ ಬೀಜ ಕದಿಯಲು ಬಂದ ಕಳ್ಳರಂತೆ ಕಾಣಿಸಿರಬೇಕು, ನಾಯಿ ಬೊಗಳುವ ಶಬ್ದ ಕೇಳಿ ಮನೆಯಿಂದ ಒಂದು ಹುಡುಗಿ ಬಂತು ನಮ್ಮ ಬಾಟೆಲ್ ನಲ್ಲಿದ್ದ ಇದ್ದ ಸ್ವಲ್ಪ ನೀರನ್ನು ಕುಡಿದು ಖಾಲಿ ಮಾಡಿ ಅವರ ಕೈಗೆ ಕೊಟ್ಟು ನೀರನ್ನು ತುಂಬಿಕೊಡುವಂತೆ ಹೇಳಿದೊ,
ಅಷ್ಟರಲ್ಲಿ ಹುಡುಗಿಯ ತಾಯಿ ಕೂಡ ಬಂದ್ರು ಎಲ್ಲಿಂದ ಬಂದ್ರಿ? ಅಂತ ಕೇಳಿದ್ರು
ಅದಕ್ಕೆ ನಾವು ಬೆಂಗಳೂರಿನವರು ಕೋಟೆಬೆಟ್ಟಕ್ಕೆ ಹೋಗ್ತಾ ಇದ್ದೀವಿ ರಾತ್ರಿ ಅಲ್ಲೇ ಉಳಿತೀವಿ
ಏನು ತೊಂದ್ರೆ ಇಲ್ವಾ? ಅಂತ ಕೇಳಿದೆವು,
ಪ್ರಾಣಿಗಳಿವೆ ಆದ್ರೆ ತೊಂದ್ರೆ ಏನು ಕೊಡಲ್ಲ ಹೋಗಬಹುದು ನಮ್ಮ ಮಗ ಮಗಳು ಹೋಗಿ ಈಗ ತಾನೆ ಬಂದ್ರು ಅಂತ ಹೇಳಿದ್ರು.
ಓದೋಕೆ ಶಾಲೆ ಎಲ್ಲಿದೆ? ಅಂದದ್ದಕ್ಕೆ ಮಡಿಕೇರಿಗೆ ಹೋಗ್ಬೇಕು ಇವರು ಇಲ್ಲಿಂದ ಹಟ್ಟಿಹೊಳೆಗೆ ನಡ್ಕೊಂಡು ಹೋಗಿ ಅಲ್ಲಿಂದ ಬಸ್ ಹತ್ತಿ ಮಡಿಕೇರಿಗೆ ಹೋಗ್ತಾರೆ ಅಂದ್ರು,
ನಾವು ಒಬ್ಬರ ಮುಖ ಒಬ್ಬರು ನೋಡಿಕೊಂಡು ನೀವು ಪ್ರತಿದಿನ ಮಾಡುವ ಚಾರಣದ ಮುಂದೆ ನಮ್ಮ ಚಾರಣ ಏನಿಲ್ಲ ಬಿಡಿ ಅಂತ ಮನಸಿನಲ್ಲೆ ಅಂದುಕೊಂಡು ನಾವು ಬರ್ತೀವಿ ಅಂತ ಹೇಳಿ ಹೊರಡಲು ಮುಂದಾದೆವು.

ಬಿಸಿಲಿನ ಜಳ ಜಾಸ್ತಿಯಾದರೂ ಕೂಡ ಸಾಕಷ್ಟು ಕಾಡು ಇದ್ದರಿಂದ ಅಷ್ಟೇನು ಅದರ ಪ್ರಭಾವ ಬೀರಲಿಲ್ಲ, ನಡೆದು ನಡೆದು ಬಹಳ ಅಯಾಸವಾಗಿತ್ತು ಎಡಕ್ಕೆ ಪರ್ವತ ಶ್ರೇಣಿಯಲ್ಲಿ ಯಾವುದೊ ಒಂದು ಎತ್ತರವಾದ ಬೆಟ್ಟ ನೋಡಿ ಇದೇ ಕೋಟೆಬೆಟ್ಟ ಇರಬಹುದು ಕಣ್ರೋ ಅಂತ ತೋರಿಸಿದೆ, ಆಗಲೇ ಸಮಯ ಮದ್ಯಾಹ್ನ ಎರಡಾದ್ದರಿಂದ ಹಸಿವಿನಿಂದ ಹೊಟ್ಟೆ ಬೇರೆ ತಾಳ ಹಾಕುತಿತ್ತು ಊಟ ಮಾಡೋಣವಾ? ಅಂದೆ, ಎಲ್ರೂ ಸಮ್ಮತಿ ಸೂಚಿಸಿ ಒಂದು ಮರದ ಕೆಳಗೆ ಪ್ಲಾಸ್ಟಿಕ್ ಟಾರ್ಪಾಲ್ ಹಾಸಿ ಕೈ ತೊಳೆದು ಎಲ್ರೂ ಕುಳಿತೊ, ಮೊದಲೇ ಹಟ್ಟಿಹೊಳೆಯಲ್ಲಿ
ಕಟ್ಟಿಸಿಕೊಂಡು ಬಂದಿದ್ದ ಪರೋಟ, ಸಾಂಬಾರ್,ಜೊತೆಗೆ ಉಪ್ಪಿನಕಾಯಿ ತಿಂದು ಮುಗಿಸಿ ಸ್ವಲ್ಪ ಹೊತ್ತು ಹಾಗೇ ನೆಲಕ್ಕೊರಗಿದೊ.

ತದ ನಂತರ ಶುರುವಾಯ್ತು ನಮ್ಮ ಚಾರಣ ಸುಮಾರು ದೂರ ಕ್ರಮಿಸಿದ ಮೇಲೆ ಕೋಟೆಬೆಟ್ಟ ನಮ್ಮ ಕಣ್ಣಿಗೆ ಗೋಚರಿಸಿತು, ಹಿಂದೆ ಯಾವುದೊ ಬೆಟ್ಟವನ್ನು ನೋಡಿ ಕೋಟೆಬೆಟ್ಟ ಎಂದು ತಪ್ಪು ತಿಳಿದಿದ್ದೊ,

ಪಯಣದ ಹಾದಿಯಲ್ಲಿ ನಾನು.

ಇಲ್ಲಿಂದ ಸುಮಾರು ದೂರ ನಡೆದು ಕೋಟೆಬೆಟ್ಟದ ತಪ್ಪಲಿಗೆ ಬಂದೆಬಿಟ್ಟೆವು ಮುಂದೆ ದಾರಿ ಕವಲಾದಂತಿತ್ತು ಮೇಲಕ್ಕೆ ನೇರ ದಾರಿ ಅಷ್ಟು ಸ್ಪ್ರಷ್ಟವಾಗಿಲ್ಲದರಿಂದ ಬಲಕ್ಕೆ ವಾಲಿದಂತ ದಾರಿಯಲ್ಲಿ ಸ್ವಲ್ಪ ದೂರ ನಡೆದೊ ಆ ದಾರಿ ಮತ್ತೆ ಕಾಡಿನೊಳಕ್ಕೆ ಕರೆದೋಯ್ತು,
ನಾನು ಎಲ್ಲರಿಗೂ ಹೇಳ್ದೆ ನಾವು ಬಂದಿರೋದು ತಪ್ಪು ದಾರಿ ಕಣ್ರೋ ಅಂತ, ಮತ್ತೆ ವಾಪಸು ಬಂದು ಕವಲಾದ ಜಾಗಕ್ಕೆ ವಾಪಸಾಗಿ
ಏರುದಾರಿ ಜಾಡನ್ನಿಡಿದು ಹೊರಟೆವು.



ದೇಗುಲದ ಮುಂದೆ ನಮ್ಮ ತಂಡ

ಅಂತೂ ಕೋಟೆಬೆಟ್ಟ ತಲುಪಿದಾಗ ಸಂಜೆ ಐದುವರೆಯಾಗಿತ್ತು, ಅಲ್ಲಿ ನಮಗೆ ಮೊದಲು ಕಂಡಿದ್ದು ಸ್ವಲ್ಪ ಬಯಲಾದ ಪ್ರದೇಶ,ಎರಡು ಚಿಕ್ಕ ದೇವಳ, ಮೊರ್ನಾಲ್ಕು ಚಿಕ್ಕ ನಂದಿ ಕಲ್ಲುಗಳು,ಮತ್ತೆರಡು ಚಿಕ್ಕ ನೀರಿನ ಹೊಂಡಗಳು,ಬೆಟ್ಟದ ಮೇಲೆ ಬೀಸುತಿದ್ದ ಹಿತವಾದ ತಂಗಾಳಿಗೆ ಮನಸೋತು ಮೈಯೊಡ್ಡಿ ಮೈಮರತ ಆ ಒಂದು ಕ್ಷಣ ಚಿರಕಾಲ ನೆನಪಲ್ಲಿ ಉಳಿಯುವಂತದ್ದು. ಬೆಟ್ಟದ ಮೇಲಿಂದ ಕಣಿವೆಯ ಕಡೆಗೆ ಕಣ್ಣಾಯಿಸಿದಾಗ ವಾಹ್! ಸ್ವರ್ಗ,
ಕಣಿವೆಯ ತುಂಬಾ ಮಂಜಿನ ರಾಶಿ, ಏನೀ ಪ್ರಕೃತಿ ಮಾತೆಯ ಅವತಾರಗಳು ಅವಳ ಮಡಿಲಲ್ಲಿ ಆನಂದ ಪಡುತ್ತಿರುವ ನಾವೆಷ್ಟು ಧನ್ಯರು.
ಒಂದು ಗುಂಪು ನಮಗಿಂತ ಮುಂಚಿತವಾಗಿ ಬಂದು ಶಿಭಿರಾಗ್ನಿ ಮುಂದೆ ಕೂತಿದ್ದರು ನಾವು ನೇರವಾಗಿ ಹೋಗಿ ಮಾತನಾಡಿಸಿದಾಗ ಒಬ್ಬರು ಮಂಗಳೂರಿನಿಂದ, ಇನ್ನೊಬ್ಬರು ಮೈಸೂರಿನಿಂದ, ಮತ್ತಿಬ್ಬರು ಬೆಂಗಳೂರಿನಿಂದ ಬಂದವರಾಗಿದ್ದರು, ಅವರು ನಾವು ಬಂದ ಹಾದಿಯಲ್ಲಿ ಬಂದಿರಲಿಲ್ಲ ಮುಕ್ಕೋಡ್ಲು ಮಾರ್ಗವಾಗಿ ಬಂದಿದ್ರಂತೆ, ನಂತರ ದೇವಸ್ಥಾನದ ಬಳಿ ಹೋಗಿ ದೇವರಿಗೆ ನಮಸ್ಕರಿಸಿ ಬಂದೆವು, ಅಷ್ಟರಲ್ಲಿ ಬಾನಲ್ಲಿ ರವಿ ತನ್ನ ದೈನಂದಿನ ಕೆಲಸ ಮುಗಿಸಿ ತನ್ನ ಲೋಕಕ್ಕೆ ಮರಳುವಾಗ ತನ್ನ ಸೌಂದರ್ಯವನ್ನು ನಮ್ಮ ಕಣ್ತುಂಬಿಸಿ ಹೊರಟ,
ಕತ್ತಲಾಗುತಿತ್ತು ಟೆಂಟ್ ಹಾಕೊ ಕೆಲಸ ಬಾಕಿ ಇತ್ತು, ಜಾಗ ಚೆನ್ನಾಗಿದೆ ಇಲ್ಲೆ ಹಾಕೊಣ ಎಂದೆ ಎಲ್ರೂ ಒಪ್ಪಿದ್ರು ಅಷ್ಟರಲ್ಲೆ ಗೋವಿಂದ ರಾಗ ತೆಗೆದ ಇಲ್ಲಿ ಬೇಡ ಬೆಟ್ಟದ ತುದಿಯಲ್ಲೆ ಟೆಂಟ್ ಹಾಕೊಣ ಅಂದ ಅದಕ್ಕೆ ಯಾರು ಸಮ್ಮತಿ ಸೂಚಿಸಲಿಲ್ಲ ಅದಕ್ಕೆ ಗೋವಿಂದ ಇಂಗು ತಿಂದ ಮಂಗನಂತೆ ಮುಖವನ್ನು ಮಾಡಿಕೊಂಡು ನಿಮ್ಮಿಷ್ಟ ಅಂತ ಹೇಳಿ ಸ್ವಲ್ಪ ದೂರದಲ್ಲಿ ಇದ್ದ ಬಂಡೆಗಲ್ಲಿನ ಮೇಲೆ ಹೋಗಿ ಕುಳಿತ,
ಹೇ ಬರ್ರೊ ಪರವಾಗಿಲ್ಲ ನಾವೆ ಹಾಕೋಣ ಅಂದೆ ನನ್ನ ಜೊತೆ ನರೇಂದ್ರ ಮತ್ತು ವೀರ ಕೈಜೋಡಿಸಿದ್ರು ಸ್ವಲ್ಪ ಹೊತ್ತಲ್ಲೆ ನಮ್ಮ ಟೆಂಟ್ ಸಿದ್ದವಾಯಿತು,
ಸಂಪೂರ್ಣ ಕತ್ತಲಾಗಿತ್ತು ನಾನು ಹೋಗಿ ಮುನಿಸಿಕೊಂಡಿದ್ದ ಗೋವಿಂದನ ಬಳಿ ಹೋಗಿ
ಹೇ ಗೋವಿಂದ ಎಂದೆ ಅವನು ನನ್ನತ್ತ ತಿರುಗಿ ಸಣ್ಣದಾಗಿ ನಕ್ಕ ಥೂ ನಿನ್ನ! ಎದ್ದು ಬಾರೋ ಅಂತ ಹೇಳಿ ಕರ್ಕೊಂಡು ಬಂದೆ.



ನಮ್ಮ ಶಿಭಿರ

ಶಿಭಿರಾಗ್ನಿ ಹಾಕಲು ಸೌದೆಯ ಅವಶ್ಯಕತೆಯಿದ್ದರಿಂದ ಎಲ್ರೂ ದಟ್ಟ ಕಾಡಿನೊಳಕ್ಕೆ ನುಗ್ಗಿದೊ
ಸುಮ್ಮನೆ ಹೋಗಲಿಲ್ಲ ಎಲ್ರೂ ಕೈನಲ್ಲೂ ಟಾರ್ಚ್ ಮತ್ತೆ ಚಾಕು ಇತ್ತು ಕಾಡೊಳಗೆ ಅಡ್ಡಾಡಿ ಓಣಗಿದ ಕೊಂಟು,ಪುಳ್ಳೆಯಂತ ಸೌದೆಗಳನ್ನು ಒಂದಲ್ಲ ಮೂರು ಸಾರಿ ಹೋಗಿ ಹೆಕ್ಕಿ ತಂದು ರಾಶಿ ಮಾಡಿದೊ, ನಂತರ ಎಲ್ರೂ ಶಿಭಿರಾಗ್ನಿ ಮುಂದೆ ಕುಳಿತು ಸ್ವಲ್ಪ ಕಾಲ ಕಾಡು ಹರಟೆ ಕಾರ್ಯಕ್ರಮ ನಡೆಸಿದೆವು.

ಶಿಭಿರಾಗ್ನಿ ಮುಂದೆ ನರೇಂದ್ರ ಮತ್ತು ಗೋವಿಂದ

ಶಿಭಿರಾಗ್ನಿ ಮುಂದೆ ಗೋವಿಂದ ಮತ್ತು ನಾನು

ಹಾಗೆ ಗಡಿಯಾರದ ಕಡೆಗೆ ನೋಡಿದಾಗ ರಾತ್ರಿ ಎಂಟುವರೆಯಾಗಿತ್ತು, ಹೊಟ್ಟೆ ಬೇರೆ ಹಸಿವಾಗುತ್ತ ಇತ್ತು, ಸರತಿಯಂತೆ ನರೇಂದ್ರ, ಗೋವಿಂದ ಇಬ್ಬರು ಮೊರು ಕಲ್ಲನಿಟ್ಟು ಒಲೆ ಸಿದ್ದಪಡಿಸಿಯೇಬಿಟ್ಟರು,ನಂತರ ಒಲೆಯ ಬೆಂಕಿ ಹಾರದಂತೆ ನೋಡಿಕೊಳ್ಳುವ ಕೆಲಸ ವೀರನದು, ಮತ್ತೆ ನನ್ನ ಕೆಲಸ ಮ್ಯಾಗಿ ನೂಡಲ್ಸ್ ಸಿದ್ದಪಡಿಸುವುದು,
ನಂತರ ಒಲೆ ಮೇಲೆ ಪಾತ್ರೆಯನಿಟ್ಟು ನೀರನ್ನು ಬಿಸಿ ಮಾಡಿ ನೂಡಲ್ಸ್ ಪಾಕೆಟ್ ಒಡೆದು ಹಾಕಿದ ಸ್ವಲ್ಪ ಹೊತ್ತಿಗೆ ಬಿಸಿ ಬಿಸಿಯಾದ ನೂಡಲ್ಸ್ ತಯಾರಾಗೆಬಿಟ್ಟಿತ್ತು,


ಒಟ್ಟಾಗಿ ಕುಳಿತು ನೂಡಲ್ಸ್ ಜೊತೆಗೆ ಉಪ್ಪಿನಕಾಯಿ,ನಿಪ್ಪಟ್ಟು,ಚಕ್ಲಿ ತಿಂದು ನೀರನ್ನು ಕುಡಿದ ಮೇಲೆ ದಣಿದು ಸುಸ್ತಾದಿದ್ದ ನಮ್ಮ ದೇಹಗಳಿಗೆ ಆನೆ ಬಲ ಬಂದಂತಾಯ್ತು,
ಅತ್ತ ಕಡೆಯ ಗುಂಪಿನವರು ಆಗಲೇ ಸ್ಲೀಪಿಂಗ್ ಬ್ಯಾಗ್ ನೊಳಗೆ ನುಗ್ಗಿ ಅಲ್ಲೊಬ್ರು,ಇಲ್ಲೊಬ್ರು ಎಂಬಂತೆ ಬಿದ್ದಿದ್ರು, ನರೇಂದ್ರ, ವೀರ ಇಬ್ಬರು ನಮಗೆ ನಿದ್ದೆ ಬರ್ತಾ ಇದೆ ಮಲಗ್ತೀವಿ ಅಂತ ಹೇಳಿ ಟೆಂಟ್ ನೊಳಗೆ ಹೋಗಿ ಮಲಕೊಂಡ್ರು.

ಆಗಲೇ ಗಡಿಯಾರದ ಮುಳ್ಳು ಹನ್ನೊಂದು ದಾಟಿತ್ತು ನನಗ್ಯಾಕೊ ನಿದ್ದೆನೇ ಬರಲಿಲ್ಲ ಜೊತೆಗೆ ಗೋವಿಂದ ಕೂಡ ಇದ್ದ, ಶಿಭಿರಾಗ್ನಿ ಮುಂದೆ ಇಬ್ಬರು ಮಾತನಾಡುತ್ತ ಕುಳಿತಿದ್ದೆವು ನಂತರ ಬಾಯಾರಿಕೆಯಾಗಿ ನೀರು ಕುಡಿಯಲು ಬಾಟೆಲ್ ತೆಗೆದೆ ಬಾಟೆಲ್ ಬೇರೆ ಖಾಲಿಯಾಗಿತ್ತು, ಸರಿ ಅಂತ ನೀರು ತರಲು ಹೊಂಡದ ಬಳಿ ಹೋಗಿ ಅಲ್ಲಿಯೇ ನೀರನ್ನು ಕುಡಿದು ಬಾಟೆಲ್ ನಲ್ಲಿ ನೀರು ತುಂಬಿಸಿಕೊಂಡು ಪುನಃ ಬಂದು ಶಿಭಿರಾಗ್ನಿ ಮುಂದೆ ಕುಳಿತೊ ಸಮಯ ಮದ್ಯರಾತ್ರಿ ೧೨:೩೦ ಆಗಿತ್ತು, ದೂರದಲ್ಲಿ ಏನೊ ಶಬ್ದ ಕೇಳಿಸಿತು ಕೂಡಲೆ ನಾನು ಗೋವಿಂದನ ಕಡೆಗೆ ತಿರುಗಿ ನೋಡಿದೆ ಅವನು ನನ್ನತ್ತ ತಿರುಗಿ ಹೌದು ಎಂಬಂತೆ ತಲೆಯಾಡಿಸಿದ, ತಕ್ಷಣ ನಾವಿಬ್ಬರು ಇನ್ನೊಂದು ಗುಂಪಿನ ಕಡೆಗೆ ಕಣ್ಣಾಯಿಸಿದಾಗ ಅವರೆಲ್ಲ ಮಲಗಿದ್ರು ಅವರು ಹಾಕಿದ್ದ ಬೆಂಕಿ ಕೂಡ ನಂದಿಹೋಗಿತ್ತು ಮತ್ತೊಮ್ಮೆ ಅದೇ ಶಬ್ದ ನಮಗೂ ಕೂಡ ಸ್ವಲ್ಪ ಭಯ ಆಯ್ತು ಅದು ಸನಿಹದಲ್ಲೆ !

ಮುಂದುವರಿದ ಭಾಗ ಸದ್ಯದಲ್ಲೇ...

ಕಾಮೆಂಟ್‌ಗಳಿಲ್ಲ: