ಸೋಮವಾರ, ಮೇ 31, 2010

ಕುಮಾರ ಪರ್ವತ / ಪುಷ್ಫಗಿರಿ ಚಾರಣ

೨೭.೧೧.೨೦೦೯,೨೮.೧೧.೨೦೦೯, ಮತ್ತು ೨೯.೧೧.೨೦೦೯
ಸಮುದ್ರ ಮಟ್ಟದಿಂದ ಸುಮಾರು ೫೬೨೫ ಅಡಿ ಎತ್ತರ ಕೊಡಗಿನಲ್ಲೇ ಎರಡನೇ ಅತಿ ಎತ್ತರವಾದ ಪರ್ವತ ತಂಡ : ನರೇಂದ್ರ,ಗೋವಿಂದ,ವೀರ ಮತ್ತು ನಾನು ( ಮೋಹನ್) ಶುಕ್ರವಾರ ರಾತ್ರಿ ಸಕಲ ಸಿದ್ದತೆಗಳೊಂದಿಗೆ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಂದಾಗ ರಾತ್ರಿ ೯:೦೦ ಗಂಟೆ ಆಗಿತ್ತು, ಆ ದಿನ ಕುಕ್ಕೆ ಕಡೆಗೆ ಹೋಗುವ ರಾಜಹಂಸ ಬಸ್ ಗಳನೆಲ್ಲ ವಿಚಾರಿಸಿದಾಗ ಸೀಟ್ ಖಾಲಿಯಿಲ್ಲ ಎನ್ನುವ ಉತ್ತರ ಬಂತು, ಮುಂದೆ ಏನು ಮಾಡಬೇಕೆಂದು ಯೋಚಿಸುವಷ್ಟರಲ್ಲಿ ನನಗೆ ಪರಿಚಯ ಇರುವ ಹುಡುಗನೊಬ್ಬ(ರಘು) ಬಂದು ಕುಕ್ಕೆಗೆ ನಾನು ಸೀಟ್ ಕೊಡಿಸ್ತೀನಿ ಬನ್ನಿ ಎಂದ, ಹೇಗೂ ಅವನು ಟ್ರಾವೆಲ್ಸ್ ನಲ್ಲಿ ಕೆಲಸ ಮಾಡುತ್ತಿದ್ದರಿಂದ ಸರಿ ಅಂತ ನಾವೆಲ್ಲ ಅವನನ್ನ ಹಿಂಬಾಲಿಸಿದೊ, ಮೆಜೆಸ್ಟಿಕ್ ನ ಸುಬ್ರಮಣ್ಯ ಟ್ರಾವೆಲ್ಸ್ ನಲ್ಲಿ ನಾಲ್ಕು ಟಿಕೇಟ್ ಕೊಡ್ಸಿ ರಘು ಟಾಟ ಮಾಡಿ ಹೊರಟ, ಅಂತೂ ೯:೩೦ ಕ್ಕೆ ಬಸ್ ಅಗಮನವಾಯಿತು, ಬಸ್ ೯:೪೫ ಕ್ಕೆ ಹೊರಟು ಸುಬ್ರಮಣ್ಯ ತಲುಪಿದಾಗ ಬೆಳಗಿನ ಜಾವ ೫: ೪೫, ಆಗ ಇನ್ನು ಬೆಳಕಾಗಿರಲಿಲ್ಲ ೨ ಕಿ.ಮೀ ದೂರದಲ್ಲಿರುವ ಕುಮಾರಧಾರ ನದಿಯಲ್ಲಿ ಸ್ನಾನ ಮುಗಿಸಿ ಹೊರಡುವ ವೇಳೆಯಲ್ಲಿ ನಮ್ಮ ಬೆನ್ನಿಗೇರಿದ್ದ ಲಗ್ಗೇಜು ನೋಡಿ ಮೈಸೂರಿನ ಯುವಕರ ಗುಂಪೊಂದು ಎಲ್ಲಿಗೆ ಹೊಗ್ತಾಯಿದ್ದೀರಾ ಅಂತಾ ಪ್ರಶ್ನಿಸಿತು, ಆಗ ತಾನೇ ಕುಮಾರಪರ್ವತ ಬೆಟ್ಟದ ಶ್ರೇಣಿಯ ಬೆನ್ನಿನ ಹಿಂದೆ ಉದಯವಾಗತೊಡಗಿದ ಸೂರ್ಯನನ್ನ ತೋರಿಸಿ ನಾವು ಆ ಪರ್ವತಕ್ಕೆ ಚಾರಣ ಮಾಡುತ್ತಿರುವುದಾಗಿ ತಿಳಿಸಿದೆ, ಅದಕ್ಕೆ ಅವರು ಅಲ್ಲಿ ತನಕ ಹೋಗ್ತೀರಾ? ಅಂದ್ರು, ಹೌದು ನಾವು ಈ ದಿನ ರಾತ್ರಿ ಆ ಬೆಟ್ಟದ ಮೇಲೆ ಉಳಿತೀವಿ ಅಂದದಕ್ಕೆ ಅವರು ನಮ್ಮನ್ನ ಕುತೂಹಲದಿಂದ ದಿಟ್ಟಿಸಿ ನೋಡುತ್ತ ಇದ್ದರು,
ನಾವು ನಮ್ಮ ಲಗ್ಗೇಜುಗಳನ್ನು ಬೆನ್ನಿಗೇರಿಸಿ ದೇವಸ್ಥಾನ ಕಡೆಗೆ ಹೆಜ್ಜೆ ಹಾಕತೊಡಗಿದೊ, ಅಲ್ಲೆ ದಾರಿಯಲ್ಲಿ ಸಿಕ್ಕ ಪೆಟ್ರೋಲ್ ಬಂಕ್ ನಲ್ಲಿ ಅರ್ಧ ಲೀಟರ್ ಡೀಸಲ್ ತಗೊಂಡು ಬ್ಯಾಗಿನಲ್ಲಿ ಭದ್ರವಾಗಿರಿಸಿಕೊಂಡು ಸ್ವಲ್ಪ ದೂರ ನಡೆಯುವಷ್ಟರಲ್ಲಿ ವ್ಯಕ್ತಿಯೊಬ್ಬರು ತಟ್ಟನೆ ಎದುರಾಗಿ ಕುಮಾರಪರ್ವತಕ್ಕ ಅಂತ ಕೇಳಿದ್ರು ಅದಕ್ಕೆ ನಾವು ಹೌದು ಅಂತಲೂ, ಅದಕ್ಕೆ ಅವರು ನಾನು ಬರ್ತೀನಿ ಅಂತ ಹೇಳಿದ್ರು ಅದಕ್ಕೆ ನಾವು ದೇವರ ದರ್ಶನ ಮಾಡಿ ನಂತರ ನಾಷ್ಟ ಮಾಡಿ ಹೊರಡುತ್ತೇವೆ ಅಂತ ತಿಳಿಸಿದ ನಂತರ ಅವರು ನಾನು ದೇವರ ದರ್ಶನ ಮಾಡಾಯ್ತು, ಸರಿ ಹಾಗಾದರೆ ನಾನು ನಿಮಗೆ ಭಟ್ಟರ ಮನೆಯಲ್ಲೇ ಸಿಗುತ್ತೇನೆ ಅಂತ ಹೇಳಿ ಹೊರಟರು,
ಶ್ರೀ ಕ್ಷೇತ್ರ ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದಲ್ಲಿರುವ ಕುಮಾರಪರ್ವತ ಆ ದಿನ ದೇವಸ್ಥಾನದಲ್ಲಿ ಭಕ್ತಾದಿಗಳು ಜಾಸ್ತಿ ಇದ್ದಿದ್ದರಿಂದ ಧರ್ಶನ ತಡವಾಗಿ ಆಯ್ತು , ಹೊಟ್ಟೆಯ ಜಠರಾಗ್ನಿ ಶಮನಗೊಳಿಸಲು ಅಲ್ಲಿಯೇ ಇದ್ದ ಹೋಟೆಲ್ ನೊಳಗೆ ನುಗ್ಗಿ ಪರೋಟ, ನೀರ್ ದೋಸೆ, ಶಾವಿಗೆ ತಿಂದು ಹೊರಬಂದು ಸ್ವಲ್ಪ ಹಣ್ಣು ಮತ್ತು ಮಜ್ಜಿಗೆ ಪೊಟ್ಟಣ ಖರೀದಿಸಿ ಬಾಟೆಲ್ ಗಳಲ್ಲಿ ನೀರನ್ನು ತುಂಬಿಸಿಕೊಂಡು ದೇವಸ್ತಾನದ ಬಲಗಡೆ ಇರುವ ರಸ್ತೆಯಲ್ಲಿ ನಮ್ಮ ಚಾರಣ ಶುರುಮಾಡಿದೆವು, ಸುಮಾರು ಪರ್ಲಾಂಗು ದೂರ ನಡೆಯುವಷ್ಟರಲ್ಲಿ ಕುಮಾರಪರ್ವತ ಚಾರಣಿಗರಿಗೆ ಸ್ವಾಗತ ಎಂಬ ಫಲಕ ಎದುರಾಯ್ತು ಅದರಲ್ಲಿ ಪ್ರಥಮವಾಗಿ ನೀರು ಸಿಗುವ ಸ್ಥಳ, ಮತ್ತು ದೂರ ಹಾಗೂ ಇನ್ನಿತರ ಕೆಲವು ಮಾಹಿತಿಯನ್ನು ಅದರಲ್ಲಿ ಬರೆದಿತ್ತು,
ನಾನು ನಮ್ಮ ಮನೆ ದೇವರನ್ನ ನೆನೆದು ಹೆಜ್ಜೆ ಹಾಕತೊಡಗಿದೆ ಅಲ್ಲಿಂದ ಶುರುವಾಯ್ತು ದಟ್ಟ ಕಾಡಿನೊಳಗೆ ನಮ್ಮ ಚಾರಣ, ನಡೆಯುತ್ತ ನಡೆಯುತ್ತ ಏರು ದಾರಿ ಜಾಸ್ತಿಯಾಗತೊಡಗಿತು ಮೈಯೆಲ್ಲ ಬೆವರಲು ಶುರುವಾಯ್ತು, ಗೋವಿಂದ ರೇಸ್ ಕುದುರೆ ಥರಾ ಮುಂದೆ ನಡೆಯತೊಡಗಿದರೆ ವೀರ ನಾನೇನು ಕಮ್ಮಿಯಿಲ್ಲ ಎನ್ನುವಂತೆ ಅವನನ್ನು ಹಿಂಬಾಲಿಸತೊಡಗಿದ ಈಕಡೆ ನರೇಂದ್ರ ಈಗ ತಾನೆ ಹುಟ್ಟಿದ ಎಮ್ಮೆಕರು ಥರಾ ಕಾಲೆಳೆದುಕೊಂಡು ಬರುತ್ತಿದ್ದ, ಸುಮಾರು ೨ ಕಿ.ಮೀ. ಕ್ರಮಿಸಿದ ಮೇಲೆ ಅಯಾಸವಾಗಿ ಎಲ್ಲರೂ ಮರದ ಕೆಳಗೆ ಕುಳಿತು ವಿಶ್ರಾಂತಿ ಪಡೆದು ಬ್ಯಾಗಿನಿಂದ್ದ ಸ್ವಲ್ಪ ತಿಂಡಿಗಳನ್ನು ತೆಗೆದು ( ಚಕ್ಲಿ, ಕೋಡ್ ಬಳೆ, ಕಡಲೆಪುರಿ) ತಿಂದು ನೀರು ಕುಡಿದು ಸ್ವಲ್ಪ ಹೊತ್ತು ದಣಿವಾರಿಸಿಕೊಂಡು ಹೊರಟೆವು,ಹೊರಡುವಾಗ ಒಬ್ಬ ಅಸಾಮಿಯೊಬ್ಬರು ಎದುರಾದ್ರು ಅವರು ನಿಲ್ಲದೆ ಹಾಗೆ ಒಡುತ್ತಾ ಇದ್ರು ಜೊತೆಗೆ ಅವರ ಕೈನಲ್ಲಿ ಹಿಡಿದಿದ್ದ ಪ್ಲಾಸ್ಟಿಕ್ ಕ್ಯಾನ್ ನಲ್ಲಿ ಎನೋ ದ್ರವ ರೂಪದ ಬಿಳಿ ವಸ್ತು ಇತ್ತು, ನಾನು ನೀರಾ ಇರಬಹುದು ಅಂದುಕೊಂಡು ಅವರನ್ನ ಕೂಗಿ ಕರೆದು ಏನದು ಅಂತ ಕೇಳಿದಾಗ ಇದು ಹಾಲು ಭಟ್ಟರ ಮನೆಯಿಂದ ಸುಬ್ರಮಣ್ಯಕ್ಕೆ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿ ಹೊರಟರು, ಭಟ್ಟರ ಮನೆ ಎಷ್ಟು ದೂರ ಅಂತ ಕೇಳಿದ್ದಕ್ಕೆ ಸ್ವಲ್ಪ ದೂರ ಅಷ್ಟೆ , ೩ ಬೆಟ್ಟ ಹತ್ತಿ ಇಳಿದರೆ ಸಿಗುತ್ತೆ ಅಂತ ಸಲೀಸಾಗಿ ಹೇಳಿ ಹೊರಟರು, ಇವರಿಗೆ ೩ ಬೆಟ್ಟ ಕೇವಲ, ಒಳ್ಳೆ ಅಸಾಮಿ ಅಂತ ಮನಸಿನಲ್ಲೇ ಗೊಣಗಿಕ್ಕೊಂಡು ಹೊರಟೆ,
ಆಗೋ ಈಗೋ ೧ ಕಿ.ಮೀ. ಕ್ರಮಿಸಿ ಮುಂದೆ ಹೋದಾಗ ಒಂದು ದೊಡ್ಡ ಹೆಬ್ಬಂಡೆ ಎದುರಾಯಿತು ಇದೇ ಬೀಮನಕಲ್ಲು ಇರಬಹುದು ಎಂದುಕೊಂಡೆ ನನ್ನ ಊಹೆ ನಿಜವಾಯಿತು, ಬಂಡೆಯ ಮೇಲೆ ಸ್ವಲ್ಪ ಹೊತ್ತು ವಿಶ್ರಮಿಸಿ ಕೆಲವು ಛಾಯಚಿತ್ರ ತಗೊಂಡು ಪ್ರಥಮವಾಗಿ ನೀರು ಸಿಕ್ಕುವ ಸ್ಥಳ ಎಂದು ಫಲಕದಲ್ಲಿ ಹಾಕಿದಿದ್ದರಿಂದ ಎಷ್ಟೆ ಹುಡುಕಾಡಿದರೂ ನೀರಿನ ಒರತೆ ಕಂಡು ಬರಲಿಲ್ಲ, ಸರಿ ಎಂದು ಅದರ ಪಾಡಿಗೆ ಅದನ್ನು ಬಿಟ್ಟು ಚಾರಣದ ಹಾದಿಯಲ್ಲಿ ಸಾಗಿತ್ತು ನಮ್ಮ ಪಯಣ,
ಭೀಮನ ಕಲ್ಲು
ಬಹುಪಾಲು ದಟ್ಟಕಾಡು ಇಲ್ಲಿಗೆ ಕೊನೆಯಾದಂತಿತ್ತು. ಮುಂದೆಲ್ಲಾ ಕುರುಚಲು ಹುಲ್ಲುಗಾವಲು ಅರಣ್ಯ ಪ್ರದೇಶ. ಅಂತೂ ಭಟ್ಟರ ಮನೆ ತಲುಪಿದಾಗ ಮದ್ಯಾಹ್ನ ೨ ಗಂಟೆ,ಹೊಟ್ಟೆ ಬೇರೆ ತಾಳ ಹಾಕುತಿತ್ತು, ಭಟ್ರುಗೆ ಮೊದಲೇ ಕರೆ ಮಾಡಿ ಬರುವ ವಿಷಯ ತಿಳಿಸಿದ್ದರಿಂದ ಭೋಜನ ನಮಗಾಗಿ ಸಿದ್ದವಾಗಿತ್ತು,
ಗಿರಿಗದ್ದೆ ಭಟ್ಟರ ಮನೆ ಕುಕ್ಕೆಯಲ್ಲಿ ಸಿಕ್ಕಿದ್ದ ಗಜೇಂದ್ರರವರು ಆಗಲೇ ಊಟ ಮಾಡಿ ಮೊವರಿದ್ದ ಒಂದು ಗುಂಪಿನೊಡನೆ ಸೇರಿ ಹೊರಟರು, ನಂತರ ಭಟ್ಟರ ದರ್ಶನವಾಯಿತು ಭಟ್ಟರು ನೀವೆನಾ ಫೋನ್ ಮಾಡಿದ್ದು ಅಂತ ಕೇಳಿದ್ರು ನಾವು ಹೌದು ಅಂತ ತಲೆಯಾಡಿಸಿದೊ, ಸರಿ ನೀವೆ ಬಡಿಸಿಕ್ಕೊಂಡು ಊಟ ಮಾಡಿ ಅಂತ ಹೇಳಿ ಮನೆಯೊಳಗೆ ಹೋದ್ರು, ನಾವು ತಡ ಮಾಡದೆ ತಟ್ಟೆ ತಗೊಂಡು ನಾವೇ ಬಡಿಸಿಕ್ಕೊಂಡು ಊಟ ( ಅನ್ನ, ಸಾಂಬಾರ್, ಮಜ್ಜಿಗೆ, ಜೊತೆಗೆ ಉಪ್ಪಿನಕಾಯಿ) ಮಾಡಿದೆವು, ಊಟ ಬಹಳ ಚೆನ್ನಾಗಿದ್ದರಿಂದ ಕುತ್ತಿಗೆಗೆ ಬರೋ ತನಕ ತಿಂದು ಭಟ್ಟರಿಗೆ ೨೦೦ ರೂ ಕೊಟ್ಟು ಅವರದ್ದೆ ಆದ ಅಡಿಕೆ ತೋಟದಲ್ಲಿ ಸ್ವಲ್ಪ ಹೊತ್ತು ಮಲಗಿ ಎದ್ದೊ. ಗಂಟೆ ನಾಲ್ಕಾದರಿಂದ ಹೊರಡಲು ತೀರ್ಮಾನಿಸಿ ಇಲ್ಲಿಂದ ಸ್ವಲ್ಪ ದೂರದಲ್ಲೆ ಇರುವ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಕಡೆಗೆ ಹೊರಟೆವು, ಸನಿಹದಲ್ಲೆ ಅರಣ್ಯ ಇಲಾಖೆಯವರು ಎರಡು ಕಡೆ ವ್ಯೂ ಪಾಯಿಂಟ್ ನಿರ್ಮಿಸಿದ್ದಾರೆ ಇಲ್ಲಿಂದ ಪ್ರಕೃತಿ ರಮಣೀಯ ಸೊಬಗನ್ನು ಸವಿಯಬಹುದು, ಚೆಕ್ ಪೋಸ್ಟ್ ನಲ್ಲಿ ತಲಾ ಒಬ್ಬರಿಗೆ ೧೧೫.೦೦ ಮತ್ತು ಕ್ಯಾಮರಕ್ಕೆ ೧೦೦.೦೦ ರೂ ಪಾವತಿಸಿ ರಸೀದಿ ಪಡೆದು ಅವರಿಂದ ಕೆಲವು ಉಪಯುಕ್ತ ಸಲಹೆಗಳನ್ನು ಪಡೆದು ಸೂರ್ಯಾಸ್ತಮದ ದೃಶ್ಯವನ್ನು ವೀಕ್ಸಿಸಲು ಮಂಟಪದ ಕಡೆಗೆ ಬಹು ಬೇಗವಾಗಿ ಹೆಜ್ಜೆಹಾಕತೊಡಗಿದೊ, ಸೂರ್ಯಾಸ್ತಮ ಆಗುವುದೊಳಗಾಗಿ ಮಂಟಪ ಸೇರಿದೆವು ( ಸಂಜೆ ೫:೫೫) ಆದ್ರೆ ಮೋಡದ ಅವಕೃಪೆಯಿಂದ ಸೂರ್ಯಾಸ್ತಮವನ್ನು ಸರಿಯಾಗಿ ವೀಕ್ಷಿಸಲು ಆಗಲಿಲ್ಲ, ನಡೆದು ಬಹಳ ಸುಸ್ತಾಗಿದ್ದರಿಂದ ಮಜ್ಜಿಗೆ ಕುಡಿದು ಸ್ವಲ್ಪ ಹೊತ್ತು ವಿಶ್ರಾಂತಿ ತಗೊಂಡೊ, ಮಂಟಪದ ಸನಿಹದಲ್ಲೆ ನೀರು ಸಿಗುವುದರಿಂದ ನೀರಿನ ದಾಹವನ್ನು ಮನ ತಣಿಯುವಷ್ಟು
ನೀಗಿಸಿಕೊಳ್ಳಬಹುದು,
ಕಲ್ಲಿನ ಮಂಟಪ
ಅಷ್ಟೊತ್ತಿಗಾಗಲೇ ಸೂರ್ಯ ತನ್ನ ದೈನಂದಿನ ಕಾರ್ಯ ಮುಗಿಸಿ ತನ್ನ ಲೋಕಕ್ಕೆ ಮರಳಿದ್ದರಿಂದ ಕತ್ತಲೆ ಆವರಿಸಿತು, ಆಗಲೆ ನನ್ನ ಮನಸ್ಸಿನಲ್ಲಿ ಹಲವಾರು ಯೋಚನೆ ಮೊಡತೊಡಗಿದೊ ಬೀದಳ್ಳಿ ಮಾರ್ಗ ಆಯ್ಕೆ ಮಾಡಿಕ್ಕೊಂಡರೆ ಸೋಮವಾರಪೇಟೆಗೆ ಹೋಗುವ ಬಸ್ ಬೀದಳ್ಳಿಯಿಂದ ಮದ್ಯಾಹ್ನ ೩:೩೦ ಕ್ಕೆ ಹೊರಡುತ್ತದೆ,ಆದ್ದರಿಂದ ಕನಿಷ್ಟ ಪಕ್ಷ ಮದ್ಯಾಹ್ನ ೧:೩೦ ಕ್ಕೆ ಪುಷ್ಪಗಿರಿ ಅರಣ್ಯ ಇಲಾಖೆ ಕಚೇರಿ ತಲುಪಲೇಬೇಕು, ಅದು ತಪ್ಪಿದರೆ ಮತ್ತೊಂದು ರಾತ್ರಿ ಅಲ್ಲೇ ಉಳಿದು ಮರುದಿನ ಬೆಳಿಗ್ಗೆಯ ಬಸ್ ನಲ್ಲಿ ಸೋಮವಾರಪೇಟೆ ಸೇರಬೇಕಾಗುತ್ತದೆ ಆದ್ದರಿಂದ ಭತ್ತದ ರಾಶಿ ( ಪರ್ವತದ ಹೆಸರು) ದಾಟಿ ಶೇಷಪರ್ವತ ತಲುಪುವ ಅನಿವಾರ್ಯ ಇದ್ದುದರಿಂದ ರಾತ್ರಿ ಚಾರಣ ಮಾಡಲು ಮಿತ್ರರಿಂದ ಸಮ್ಮತಿ ದೊರೆಯಿತು,ಕತ್ತಲು ಆವರಿಸಿದ್ದರಿಂದ ನಾನು ಬ್ಯಾಗ್ ನಿಂದ ಮಚ್ಚು,ಎಲ್.ಸಿ.ಡಿ. ಟಾರ್ಚ್, ಮತ್ತು ಚಾಕನ್ನು ತೆಗೆದುಕ್ಕೊಂಡು ದೇವರನ್ನು ನೆನೆಯುತ್ತ ಹೆಜ್ಜೆ ಹಾಕಿದೆ, ಈಗ ನಮ್ಮ ಮುಂದಿದ್ದ ದಾರಿಯೆಲ್ಲ ಏರು ದಾರಿಯಾಗಿತ್ತು ಹೆಜ್ಜೆ ಹೆಜ್ಜೆಗೂ ಬಹಳ ಕಷ್ಟಪಟ್ಟು ನಡೆಯಬೇಕಾಗುತ್ತಿತ್ತು, ಹೀಗೆ ನಮ್ಮ ಚಾರಣದ ಹಾದಿ ಸಾಗುತ್ತಿರಬೇಕಾದರೆ ಬೀದಳ್ಳಿ ಕಡೆ ಹೋಗುವ ಬೈಪಾಸ್ ದಾರಿ ಸಿಕ್ಕಿತ್ತು ಈ ದಾರಿಯಲ್ಲಿ ಹೋದರೆ ಕುಮಾರಪರ್ವತಕ್ಕೆ ಹೋಗದೆ ಬೀದಳ್ಳಿ ತಲುಪಬಹುದು ಕುಮಾರಪರ್ವತದಿಂದ ಬೀದಳ್ಳಿ ಮಾರ್ಗದಲ್ಲಿ ಸುಮಾರು ೨.೭೫ ಕಿ.ಮೀ ದೂರದಲ್ಲಿ ಬಂದು ಸೇರುತ್ತದೆ.
ರಾತ್ರಿ ಚಾರಣದ ಸಮಯದಲ್ಲಿ ನಾನು ಮತ್ತು ಗೋವಿಂದ
ಯಾವುದಾದರೂ ವಿಷಜಂತುಗಳು ಅಡಗಿರಬಹುದೇನೊ ಅಂತ ಕೈನಲ್ಲಿ ಹಿಡಿದಿದ್ದ ದೊಣ್ಣೆಯಿಂದ ದಾರಿಯ ಎರಡು ಇಕ್ಕೆಲಗಳಲ್ಲಿ ಬೆಳೆದು ನಿಂತ ಹುಲ್ಲನ್ನು ಬಡಿಯುತ್ತ ನಡೆದೆ, ಮತ್ತಿನ್ಯಾವುದಾದರೂ ಪ್ರಾಣಿ ಅಡಗಿ ನಮ್ಮತ್ತ ನೋಡುತ್ತಿರಬಹುದೇನೊ ಅಂತಾ ಊಹಿಸಿ ಟಾರ್ಚ್ ಬೆಳಕನ್ನು ಆ ಕಡೆ ಈ ಕಡೆ ಬಿಟ್ಟು ನೋಡುತ್ತ ಮುಂದೆ ಸಾಗುತ್ತಿದ್ದೊ, ಮೊದಲ ಪಂಕ್ತಿಯಲ್ಲಿದ್ದ ವೀರ ಯಾಕೊ ಏನೋ ತಟ್ಟನೆ ನಿಂತು ನನ್ನ ಕೈನಲ್ಲಿ ಬರಿ ದೊಣ್ಣೆ ಇದೆ ನಿನ್ ಕೈನಲ್ಲಿ ಮಚ್ಚು ಇದೆ ನೀನೆ ಮೊದಲು ಹೋಗು ಎಂದು ನನ್ನನ್ನು ಮುಂದೆ ಬಿಟ್ಟು ಹಿಂದೆ ಬರತೊಡಗಿದ ಹೇಳಬೇಕೆಂದರೆ ವೀರ ಸ್ವಲ್ಪ ಪುಕ್ಕಲು ಸ್ವಭಾವದವನು, ಅವನ ಹಿಂದೆ ಗೋವಿಂದ ಕೊನೆಯಲ್ಲಿ ನರೇಂದ್ರ ಹೀಗೆ ಒಬ್ಬರ ಹಿಂದೆ ಒಬ್ಬರು ಬೆಟ್ಟವೇರುತಿದ್ದೆವು, ನಾವೇನಾದ್ರು ಸ್ವಲ್ಪ ನಡಿಗೆಯ ವೇಗ ಹೆಚ್ಚಿಸಿದ್ರಂತು ಕೂಡಲೇ ನರೇಂದ್ರ ಲೇ ಇರ್ರೋ ನನ್ ಬಿಟ್ಟು ಹೋಗ್ಬೇಡಿ ಭಯ ಆಗುತ್ತೆ ಅಂತ ಕಿರುಚಿಕೊಳ್ಳುತ್ತಿದ್ದ, ಅವನಿಗೆ ಭಯವಾಗುವುದಿರಲಿ ಅವನು ಕಿರುಚಿಕೊಳ್ಳುವ ಶಬ್ದಕ್ಕೆ ಪ್ರಾಣಿಗಳೇ ಹೆದರಿ ಒಡಿ ಹೋಗುತ್ತಿದ್ದವೇನೊ? ಎದುರಿಗಿದ್ದ ಬೆಟ್ಟವನ್ನು ಬಳಸಿಕ್ಕೊಂಡು ದಾಟಿದೊಡನೆಯೆ ನಮ್ಮ ಬಲಕ್ಕೆ ಕಾಣಿಸಿತು ಶೇಷಪರ್ವತ, ನಮ್ಮ ಮನಸ್ಸಿನಲ್ಲಿ ಏನೇನೋ ಯೋಚನೆಗಳು ಅದೇನೆಂದರೆ ಶೇಷಪರ್ವತದಲ್ಲಿ ರಾತ್ರಿ ಕಳೆಯುವುದೊ ಅಥವಾ ಪುಷ್ಪಗಿರಿಗೆ ಚಾರಣ ಬೆಳೆಸುವುದೊ ಅಂತ,ಅಷ್ಟರಲ್ಲಿ ಗೋವಿಂದ ನಡಿರ್ರೊ ಆಗಿದ್ದಾಗ್ಲಿ ಹೋಗೆಬಿಡೋಣ ಅಂದ ನರೇಂದ್ರ ಮಾತ್ರ ಇಷ್ಟೊತ್ನಲ್ಲಿ ಹೋಗೋದ್ ಬೇಡ ಇಲ್ಲೆ ಎಲ್ಲಾದ್ರು ಕ್ಯಾಂಪ್ ಹಾಕೋಣ ಬೆಳಿಗ್ಗೆ ಎದ್ದು ಹೋದ್ರಾಯ್ತು ಅಂದ ನನಗೂ ಸಹ ಸರಿ ಅನ್ನಿಸಿತು ಏಕೆಂದರೆ ಕುಮಾರಪರ್ವತದಲ್ಲಿ ಟ್ರೆಕ್ ಮಾಡ್ತಾ ಇರೋದು ಇದೇ ಮೊದಲು ಬಾರಿ, ದಾರಿ ಮುಂದೆ ಹೇಗಿದೆಯೋ ಎನೋ ಅಂತ ಹಲವು ವಿಚಾರಗಳು ನನ್ನ ಮನಸನ್ನು ಕೊರೆಯುತ್ತಿತ್ತು. ಅಷ್ಟರಲ್ಲಿ ಶೇಷಪರ್ವತದ ಕಡೆಯಿಂದ ಯಾರೋ ಮಾತನಾಡುತಿದ್ದ ಶಬ್ದ ಕೇಳಿಬಂತು, ನಾವು ಒಂದು ನಿಮಿಷ ಹಾಗೆ ಮೌನವಾಗಿ ನಿಂತು ಕಿವಿಗೊಟ್ಟು ಆಲಿಸಿದೊ, ಕೊನೆಗೂ ನಮ್ಮ ಊಹೆ ನಿಜವಾಯಿತು ನಮ್ಮ ಟಾರ್ಚ್ ಬೆಳಕನ್ನು ಬೆಟ್ಟದ ಕಡೆಗೆ ಸಿಗ್ನಲ್ ಎಂಬಂತೆ ತೋರಿಸಿದೊ ಅತ್ತ ಕಡೆಯಿಂದಲೂ ಟಾರ್ಚ್ ಬೆಳಕನ್ನು ನಮ್ಮತ್ತ ಹಾಯಿಸಿದರು, ಆಗ ನಾನು ಜೋರಾಗಿ ಯಾರಾದ್ರು ಇದ್ದೀರ ಅಂತ ಕೂಗಿದೆ, ಅದಕ್ಕೆ ಉತ್ತರವಾಗಿ ಅತ್ತ ಕಡೆಯಿಂದ ಹಾ... ಇದ್ದೀವಿ ಅಂತ ಯಾರೋ ಕೂಗಿ ಹೇಳಿದಾಗ ಮನಸಿಗೆ ಸ್ವಲ್ಪ ಸಮಾದಾನ ಆಯ್ತು, ಹತ್ತಿರ ಹೋಗಿ ನೋಡಿದರೆ ಕುಕ್ಕೆಯಲ್ಲಿ ಪರಿಚಯವಾಗಿದ್ದ ಗಜೇಂದ್ರರವರು ಅವರಾಗಲೇ ಟೆಂಟ್ ಹಾಕಿ ಊಟ ಮುಗಿಸಿ ಶಿಭಿರಾಗ್ನಿ ಹಾಕಲು ತಯಾರಾಗುತ್ತಿದ್ರು, ನಾವು ನಮ್ಮ ಟಾರ್ಪಾಲ್ ಶೀಟನ್ನು ಕೆಳಗೆ ಹಾಸಿ ಟಾರ್ಚ್ ಬೆಳಕಿನಿಂದ ಊಟ ಮುಗಿಸಿದೊ( ಚಪಾತಿ, ಉಪ್ಪಿನಕಾಯಿ,ಚಟ್ನಿ,ಅವಲಕ್ಕಿ,ಕೋಡ್ಬಳೆ ) . ವಿಪರೀತ ಗಾಳಿ ಬೀಸುತ್ತಿದ್ದರಿಂದ ಗಜೇಂದ್ರ ಮತ್ತು ಸ್ನೇಹಿತರು ಬೆಂಕಿ ಹಚ್ಚಲು ಬಹಳ ಪರದಾಡುತ್ತಿದ್ದರು, ನಮ್ಮ ಬತ್ತಳಿಕೆಯಲ್ಲಿದ್ದ ಡೀಸಲ್ ಸಹಾಯದಿಂದ ಹೇಗೋ ಬೆಂಕಿ ಹೊತ್ತಿಸಿದರು, ಶಿಭಿರಾಗ್ನಿ ಮುಂದೆ ಕುಳಿತು ಚಳಿಯಿಂದ ಮರಗಟ್ಟಿದ ದೇಹವನ್ನು ಬಿಸಿ ಮಾಡುವಾಗ ಏನೋ ಒಂಥರ ಅನುಭವ,
ರಾತ್ರಿ ಶೇಷಪರ್ವತದಲ್ಲಿ ಶಿಭಿರಾಗ್ನಿ ಮುಂದೆ
ಕೋಟಿ ಕೋಟಿ ಹಣ ಇದ್ದರೇನಂತೆ ಈ ತರಹದ ಅನುಭವ ಸಿಗುತ್ತಾ? ಅದನ್ನು ಅನುಭವಿಸಿದವರಿಗೇ ಗೊತ್ತು ಅದರ ಗಮ್ಮತ್ತು. ನಡೆದು ಬಹಳ ಸುಸ್ತಾಗಿದ್ದ ಕಾರಣ ನಾನು ಮತ್ತು ವೀರ ಹೊರತುಪಡಿಸಿ ಮಿಕ್ಕವರೆಲ್ಲರು ಮಲಕೊಂಡ್ರು, ನಾವು ಸುಮಾರು ಹೊತ್ತಿನ ತನಕ ಬೆಂಕಿ ಕಾಯುತ್ತಾ ಕುಳಿತಿದ್ದೊ ಗಾಳಿ ಜೋರಾಗಿ ಬೀಸುತ್ತಿದ್ದ ಕಾರಣ ಬೆಂಕಿಯ ಕಿಡಿ ಟೆಂಟ್ ಮೇಲೆ ಬೀಳುತ್ತಾ ಇತ್ತು ನಂತರ ನಾವೇ ನೀರನ್ನು ಹಾಕಿ ಬೆಂಕಿ ಕೆಡಿಸಿ ಮಲಗಿಕೊಂಡೊ,ಅಬ್ಬಾ ಎಂಥಾ ಗಾಳಿ! ನನ್ನ ಜೀವನದಲ್ಲಿ ಮರೆಯಲಾಗದಂತ ಒಂದು ಸುಂದರ ರೋಚಕ ಅನುಭವ ನನ್ನದಾಯ್ತು. ಕೆಲವು ಕಾಡು ಪ್ರಾಣಿಗಳ ಕೂಗು ಹಾಗೂ ಪೊದೆಯಲ್ಲಿ ಎನೋ ಸರಿದಾಡಿದಂತ ವಿಚಿತ್ರ ಶಬ್ದಗಳು ಆಗಾಗ ಕೇಳಿಬರುತ್ತಿತ್ತು, ವಿಪರೀತ ಗಾಳಿ ಮತ್ತು ಚಳಿ ನಡುವೆ ನಿದ್ದೆ ಬರದೇ ಹೊರಳಾಟದ ನಡುವೆಯೊ ಎಚ್ಚರವಾದಾಗ ಬೆಳಿಗ್ಗೆ ೬:೩೦. ಅಬ್ಬಾ! ಅದ್ಭುತ ರಮಣೀಯ ದೃಶ್ಯ ಹಿಮದ ಹೊದಿಕೆಯನ್ನೆ ಹೊದ್ದುಕೊಂಡಿರುವ ಪರ್ವತಗಳು ಒಂದೆಡೆಯಾದರೇ, ಪುಷ್ಪಗಿರಿ ಬೆನ್ನಿನ ಹಿಂದೆ ಆಗಸದಲ್ಲಿ ಬಣ್ಣದ ಚಿತ್ತಾರ ಮೊಡಿಸಲು ಬೆಂಕಿಯ ಚೆಂಡಿನಂತೆ ಮೇಲೇರುತ್ತಿದ್ದ ಸೂರ್ಯನ ನೋಟ ಇನ್ನೊಂದೆಡೆ. ಎಲ್ಲರೂ ಮೂಕವಿಶ್ಮಿತರಾಗಿ ನೋಡುತ್ತಿದ್ದರು,
ನಂತರ ನಾವು ಶಿಭಿರಾಗ್ನಿ ಹೊತ್ತಿಸಿ ಎಲ್ರೂ ಸುತ್ತಲೂ ಕುಳಿತು ವಿಪರೀತ ಚಳಿಯಿಂದ ಮರಗಟ್ಟಿ ಹೋಗಿದ್ದ ನಮ್ಮ ದೇಹವನ್ನು ಬಿಸಿ ಮಾಡಿದ ನಂತರ ಸ್ವಲ್ಪ ಆರಾಮೆನಿಸಿತು,
ಬಳಿಕ ಗಜೇಂದ್ರ ಮತ್ತು ಅವರ ಇನ್ಫೊಸಿಸ್ ಗೆಳೆಯರು ಇದೇ ದಾರಿಯಲ್ಲಿ ಕುಕ್ಕೆಗೆ ವಾಪಾಸ್ ತೆರಳುವುದರಿಂದ ಟೆಂಟ್ ಮತ್ತು ಬ್ಯಾಗ್ ಗಳನ್ನು ಅಲ್ಲೇ ಬಿಟ್ಟು ಕುಮಾರಪರ್ವತದ ಕಡೆಗೆ ಹೊರಟರು ಸ್ವಲ್ಪ ಸಮಯದ ಬಳಿಕ ಲಗ್ಗೇಜು ಪ್ಯಾಕ್ ಮಾಡಿಕೊಂಡು ನಾವು ಕೂಡ ಹೊರಟೆವು ಮುಂದಿನ ದಾರಿಯೆಲ್ಲ ಮಳೆಕಾಡು
ದಾರಿಯ ಪಕ್ಕದಲ್ಲೆ ನೀರು ಹರಿವಿನ ಜುಳು ಜುಳು ಶಬ್ದ ಕೇಳಿಸಿತು, ಪೊದೆಯಲ್ಲಿ ಹೇಗೋ ದಾರಿ ಮಾಡಿಕೊಂಡು ಇಳಿದು ಹೋದಾಗ ಸಣ್ಣ ಝರಿಯೊಂದು ಕಣ್ಣಿಗೆ ಕಾಣಿಸಿತು ಅಲ್ಲೇ ಬಾಯಾರಿಕೆ ನೀಗಿಸಿಕೊಂಡು ಖಾಲಿಯಾಗಿದ್ದ ಬಾಟೆಲ್ ಗಳಲ್ಲಿ ನೀರು ತುಂಬಿಕೊಂಡು ಹೊರಟಾಗ ಅನತಿ ದೂರದಲ್ಲೆ ಇಬ್ಬರು ಬೆಂಕಿ ಕಾಯುತ್ತಾ ಕುಳಿತಿದ್ದರು, ವಿಚಾರಿಸಲಾಗಿ ಬೆಂಗಳೂರಿನವರೆಂದು ಒಬ್ಬರ ಹೆಸರು ಭಂಡಾರಿ ಅಂತಲೂ, ಆ ರಾತ್ರಿ ಇಬ್ಬರೇ ಕಾಡಿನಲ್ಲಿದ್ದರಂತೆ, ಬಳಿಕ ಮುಂದುವರೆಯಿತು ನಮ್ಮ ಚಾರಣ ಸ್ವಲ್ಪ ದೂರದಲ್ಲೆ ದೊಡ್ಡ ಹೆಬ್ಬಂಡೆಯೊಂದು ಎದುರಾಯಿತು ಈ ಬಂಡೆ ದಾಟಿದರೆ ಸ್ವಲ್ಪ ಹೊತ್ತಿನಲ್ಲೆ ಕುಮಾರಪರ್ವತದ ತುದಿ ತಲುಪಬಹುದು, ಯಾರ‍ೋ ಮೊವರು ಬಂಡೆಯ ಇಳಿಜಾರಿನ ಮೇಲೆ ಕುಳಿತು ಕೆಳಗಿಳಿಯಲು ಹರಸಾಹಸಪಡುತಿದ್ದರು ನಾವು ಅವರನ್ನ ಕೇಳಲಾಗಿ ನಾವು ಸುಮಾರು ಅರ್ದ ಗಂಟೆಯಿಂದ ಪ್ರಯತ್ನಪಡ್ತಾಯಿದ್ದೀವಿ ಅಂತ ತಿಳಿಸಿದ್ರು, ಬಂಡೆಯ ಇಳಿಜಾರಿನ ಮೇಲೆ ನೀರು ಜಿನುಗಿತ್ತಿದ್ದರಿಂದ ಏರಲು ಬಹಳ ಕಷ್ಟನೇ, ಬಹುಶ: ಇದು ಮಳೆಗಾಲದಲ್ಲಿ ಜಲಪಾತವಾಗಿ ಮಾರ್ಪಡುತ್ತದ್ದೆ, ಹೇಗೋ ಪ್ರಯಾಸಪಟ್ಟು ಏರಿ ಸ್ವಲ್ಪ್ಪ
ಸಮಯದಲ್ಲೇ ಕುಮಾರಪರ್ವತದ ತುದಿ ತಲುಪಿದೆವು, ಅಷ್ಟರಲ್ಲಿ ಗಜೇಂದ್ರ ಮತ್ತು ಅವರ ತಂಡ ವಾಪಾಸ್ ಹೋಗುವುದರಲ್ಲಿತ್ತು.
ಕುಮಾರಪರ್ವತದ ತುದಿಯಲ್ಲಿ ನಮ್ಮ ತಂಡ
ಬೆಟ್ಟದ ತುದಿಯಲ್ಲಿ ಕಲ್ಲಿಂದ ಜೋಡಿಸಿದ್ದ ೩ ಚಿಕ್ಕ ದೇವಸ್ಥಾನಗಳಿದ್ದು ಒಳಗೆ ಶಿವಲಿಂಗ ಇಟ್ತಿದ್ದಾರೆ ಸ್ವಲ್ಪ್ಪ ಹೊತ್ತು ಕುಳಿತು ಅಲ್ಲೆಲ್ಲಾ ಸುತ್ತಾಡಿ ಉತ್ತರಕ್ಕೆ ಬಿಸಿಲೆ ಕಾಡು, ದಕ್ಷಿಣಕ್ಕೆ ಕೊಡಗಿನ ಪರ್ವತ ಶ್ರೇಣಿಗಳು ಇನ್ನೂ ಪಶ್ಚಿಮಕ್ಕೆ ಮಾರಿಗುಂಡಿ, ಶೇಷಪರ್ವತದ ಮನಮೋಹಕ ದೃಶ್ಯಗಳನ್ನು ಕಣ್ತುಂಬಿಕ್ಕೊಂಡು ಕೊನೆಗೆ ಬೀದಳ್ಳಿ ಮಾರ್ಗವಾಗಿ ಹೋಗಲು ನಿರ್ಧರಿಸಿ ಬೆಳಗಿನ ಉಪಹಾರಕ್ಕಾಗಿ ನಮ್ಮ ಬಳಿ ಉಳಿದಿದ್ದ ಚಪಾತಿ ಮತ್ತು ಉಪ್ಪಿನಕಾಯಿ ತಿಂದು ಮುಗಿಸುವಷ್ಟರಲ್ಲಿ ಭಂಡಾರಿ ಮತ್ತು ಅವರ ಸ್ನೇಹಿತರು ಬಂದು ನಾವು ಹೊರಡುತ್ತಾ ಇದ್ದೀವಿ ನೀವು ಬರುವದಾದರೇ ಬನ್ನಿ ಬೀದಳ್ಳಿಯಿಂದ ಸೋಮವಾರಪೇಟೆತನಕ ನಮ್ಮ ಕಾರಿನಲ್ಲೇ ಬಿಡ್ತೇವೆ ಅಂತಾ ಹೇಳಿದ್ರು, ಸರಿ ಎಲ್ಲರೂ ಜೊತೆಗೆ ಹೋಗೋಣ ಆಂತ ತೀರ್ಮಾನಿಸಿ ಎಲ್ಲಾ ಪ್ಯಾಕ್ ಮಾಡಿಕೋಂಡು ಜೊತೆಗೆ ಹೊರಟೆವು,
ಮುಂದಿನದೆಲ್ಲ ಮಳೆಕಾಡಾದ್ದರಿಂದ ಬಿಸಿಲಿನ ಜಳವಿಲ್ಲದೆ ಆರಾಮವಾಗಿ ನಮ್ಮ ಚಾರಣ ಮುಂದುವರಿಯುತ್ತ ಇತ್ತು, ದಾರಿಯಲ್ಲಿ ಎರಡು ಇಳಿಜಾರಿನ ಬಂಡೆಗಲ್ಲನ್ನ ಬಹಳ ಹುಷಾರಾಗಿ ಇಳಿದು ಮುಂದೆ ಬಂದಾಗ ಎಡಗಡೆಗೆ ಮಂಟಪ ಗಿರಿಗದ್ದೆಗೆ ಹೋಗುವ ಬೈಪಾಸ್ ದಾರಿ ಸಿಕ್ತು ಇದು ಶೇಷಪರ್ವತ - ಮಂಟಪ ನಡುವೆ ಬಂದು ಸೇರುತ್ತೆ, ಇದರ ಸನಿಹದಲ್ಲೇ ವ್ಯೂ ಪಾಯಿಂಟ್ ಇದೆ ,
ಅಲ್ಲಲ್ಲಿ ಕಾಡೆಮ್ಮೆಗಳ ಗೊರಸಿನ ಗುರುತು ಕಂಡುಬಂದ್ದುದರಿಂದ ಒಳೊಳಗೆ ಭಯ ಆವರಿಸುತ್ತಾ ಇತ್ತು.
ಪಯಣದ ಹಾದಿಯಲ್ಲಿ ನಾನು
ಭಂಡಾರಿಯವರಿಗೆ ೫೨ ವಯಸ್ಸಂತೆ ಆದರೂ ಅವರು ನಮಗಿಂತ ಬಹಳ ವೇಗವಾಗಿ ಕೆಳಗಿಳಿಯುತ್ತಿದ್ದರು, ಅದೂ ಅಲ್ಲದೇ ಈ ವಾರದಲ್ಲೇ ಅವರು ಎರಡನೇ ಭಾರಿ ಕುಮಾರಪರ್ವತಕ್ಕೆ ಚಾರಣ ಮಾಡುತ್ತಿರುವುದು ತಿಳಿದು ಆಶ್ಚರ್ಯವಾಯ್ತು, ತುಂಬಾ ಬಳಲಿದ್ದ ಕಾರಣ ಅವ್ರೂ ನಮಗೆಲ್ಲ ೧೦ ನಿಮಿಷಗಳ ಕಾಲ ಶವಾಸನ ಮಾಡಿಸಿದರು ಬಳಿಕ ಬಳಲಿದ್ದ ನಮ್ಮ ಮೈಮನವೆಲ್ಲ ಹಗುರಾಗಿ ಉತ್ಸುಕರಾಗಿ ಮತ್ತೆ ಚಾರಣ ಮುಂದುವರೆಸಿದೆವು,
ಒಳಗೆ ಹೋದಂತೆಲ್ಲಾ ಕಾಡು ದಟ್ಟವಾಗಿ ಹಸಿರು ವನಸಿರಿಯನ್ನು ಆಸ್ವಾದಿಸುತ್ತಾ ಬಾನೆತ್ತರಕ್ಕೆ ಬೆಳೆದು ನಿಂತ ದೈತ್ಯ ಮರಗಳು, ಜೀರುಂಡೆ ಸದ್ದು, ಹಕ್ಕಿಗಳ ಇಂಪಾದ ಕೂಗು ಒಮ್ಮೆ ನೆನೆಸಿಕೊಂಡ್ರೆ ನಾನೇ ಅದೃಷ್ಟವಂತನೇನೊ ಅಂತಾ ಅನ್ನಿಸ್ತಾಯಿತ್ತು , ಈ ದಾರಿಯಲ್ಲಿ ಝರಿ,ತೊರೆಗಳು ಆಗಾಗ ಸಿಕ್ಕುವುದರಿಂದ ನೀರಿನ ಕೊರತೆ ಅಷ್ಟಾಗಿ ಕಾಣಬರುವುದಿಲ್ಲ, ಅರಣ್ಯ ಇಲಾಖೆ ಇನ್ನೊಂದು ಫರ್ಲಾಂಗು ದೂರ ಇದೆ ಅನ್ನುವಷ್ಟರಲ್ಲಿ ಕಾಡಿನ ಒಳಗೆ ಜಲಪಾತದ ಸದ್ದು ಕೇಳಿಬರುತ್ತಿತ್ತು ಸಮಯದ ಅಭಾವದಿಂದ ಅದರ ಪಾಡಿಗೆ ಅದನ್ನು ಬಿಟ್ಟು ಮುನ್ನಡೆದೊ ಸ್ವಲ್ಪ ದೂರ ಕ್ರಮಿಸುವಷ್ಟರಲ್ಲಿ ಒಂದು ನದಿಯೊಂದು ಅಡ್ಡಲಾಯಿತು ಅದಕ್ಕೆ ಅರಣ್ಯ ಇಲಾಖೆಯವರು ತೂಗು ಸೇತುವೆಯೊಂದನ್ನು ನಿರ್ಮಿಸಿದಾರೆ, ಸೇತುವೆ ದಾಟಿ ಮುಂದೆ ಬಂದಾಗ ಬಲಕ್ಕೆ ಇರುವ ಅರಣ್ಯ ಇಲಾಖೆ ಎದುರಾಯ್ತು, ಅಲ್ಲೇ ಸ್ವಲ್ಪ ಹೊತ್ತು ಕುಳಿತು ವಿಶ್ರಾಂತಿ ಪಡೆದು ಹೊರಡುವಾಗ ಇಲಾಖೆ ಸಿಬ್ಬಂದಿಗೆ ನಮ್ಮ ಬ್ಯಾಗ್ ನಲ್ಲಿ ಇದ್ದ ಕಡಲೆ ಮಿಠಾಯಿ,ಅವಲಕ್ಕಿ ಪೊಟ್ಟಣಗಳನ್ನು ಕೊಟ್ಟು ಹೊರಟೆವು. ಸುಮಾರು ೨ ಕಿ.ಮೀ ದೂರ ನಡೆದು ಮಲ್ಲಿಕಾರ್ಜುನ ದೇವಸ್ತಾನ ಬಳಿ ಬಂದು ಅಲ್ಲಿಂದ ಭಂಡಾರಿಯವರು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಸೋಮವಾರಪೇಟೆಯಲ್ಲಿ ತಂದು ಬಿಟ್ಟು ನಮ್ಮ ಜೊತೆ ಒಂದು ಪೋಟೊ ತೆಗೆಸಿಕ್ಕೊಂಡು ಟಾಟಾ ಮಾಡಿ ಅವರ ಸ್ನೇಹಿತರೊಂದಿಗೆ ಹೊರಟರು.
ಭಂಡಾರಿ ಮತ್ತು ಅವರ ಸ್ನೇಹಿತರೊಂದಿಗೆ ನಮ್ಮ ತಂಡ
ನಾವು ಅಲ್ಲೇ ಇದ್ದ ಹೋಟೆಲೊಂದರಲ್ಲಿ ಊಟ ಮುಗಿಸಿ ಕೆ.ಎಸ್.ಅರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಬಂದು ಮೈಸೂರು ಕಡೆಗೆ ಹೋಗುವ ಬಸ್ ಗಾಗಿ ಕಾಯುತ್ತಾ ಕುಳಿತೊ, ಸುಮಾರು ೬:೧೦ ರ ಹೊತ್ತಿಗೆ ಕುಂದಾಪುರದಿಂದ ಬಂದು ಮೈಸೂರಿಗೆ ಹೋಗುವ ಬಸ್ ಬಂದೇ ಬಿಡ್ತು ಅಲ್ಲಿಂದ ಮೈಸೂರಿಗೆ ಬಂದು, ತದನಂತರ ನರೇಂದ್ರ, ಗೋವಿಂದ ರಾಜಹಂಸ ಬಸ್ನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ರು, ನಾನು ಮತ್ತು ವೀರ ಕೆಂಪು ಬಸ್ಸಿನಲ್ಲಿ ಪ್ರಯಾಣಿಸಿ ಚನ್ನಪಟ್ಟಣ್ಣದಲ್ಲಿ ಇಳ್ಕೊಂಡು ಅಲ್ಲಿಂದ ರೈಲ್ವೆ ಸ್ತೇಷನ್ ಗೆ ಹೋಗಿ ಅಲ್ಲಿ ಪಾರ್ಕ್ ಮಾಡಿದ್ದ ಬೈಕ್ ತಗೊಂಡು ನನ್ನೂರಾದ ಬೈರಾಪಟ್ಟಣ್ಣದಲ್ಲಿ ಇಳಿಸಿ ಅವನು ಶೆಟ್ಟಿಹಳ್ಳಿಗೆ ತೆರಳಿದ. ಇದಕ್ಕೂ ಮೊದಲೂ ನಾನು ಎರಡು ಬಾರಿ ಕೊಡಚಾದ್ರಿ ಚಾರಣ, ಹೆಬ್ಬೆ ಜಲಪಾತ ಚಾರಣ, ತಡಿಯಂಡಮೊಳ್ ಚಾರಣ ಮಾಡಿದ್ರೂ ಕೂಡ ಕುಮಾರಪರ್ವತ ಚಾರಣ ನನ್ನ ಜೀವನದಲ್ಲಿ ಮರೆಯಲಾಗದಂತ ಅವಿಸ್ಮರಣೀಯ ಚಾರಣವಾಗಿ ಉಳಿಯಿತು.
* ಶುಭಂ *

ಸೋಮವಾರ, ಮೇ 3, 2010

ತಡಿಯಂಡಮೊಳ್ ಚಾರಣ

೧೮.೧೦.೨೦೦೯, ಶನಿವಾರ

ಎತ್ತರ : ಸಮುದ್ರ ಮಟ್ಟದಿಂದ ಸುಮಾರು ೫೭೨೭ ಅಡಿಗಳು
ಕೊಡಗಿನಲ್ಲೇ ಅತಿ ಎತ್ತರವಾದ ಪರ್ವತ


ಜಿಲ್ಲೆ : ಕೊಡಗು


ಒಟ್ಟು ಕ್ರಮಿಸಿದ ದೂರ : ೧೧ + ೧೧ ಕಿ.ಮೀ


ಮಾರ್ಗ : ಬೆಂಗಳೂರು-ಮೈಸೂರು-ಹುಣಸೂರು-ಗೋಣಿಕೊಪ್ಪ-ವೀರಾಜಪೇಟೆ-ಕೈಕಂಬ


ತಂಡ : ವೀರಭದ್ರ , ನರೇಂದ್ರ , ಮತ್ತು ನಾನು ( ಮೋಹನ್ )


ಶುಕ್ರವಾರ ರಾತ್ರಿ ದೀಪಾವಳಿ ಪೂಜೆ ಮುಗಿಸಿಕೊಂಡು ಆಫೀಸಿನಿಂದ ಹೊರಟಾಗ ಸಮಯ ರಾತ್ರಿ ೯:೩೦, ನಾನು, ನರೇಂದ್ರ , ಮತ್ತು ವೀರ ಮೊವರು ಮೆಜೆಸ್ಟಿಕ್ ನ ಹೋಟೆಲೊಂದರಲ್ಲಿ ಊಟ ಮುಗಿಸಿ ಆಟೋದಲ್ಲಿ ಸಾಟಲೈಟ್ ಬಸ್ ನಿಲ್ದಾಣಕ್ಕೆ ಬಸ್ ಹೊರಡುವುದಕ್ಕಿಂತ ೧೦ ನಿಮಿಷ ಮುಂಚಿತವಾಗಿ ಬಂದು ಬಸ್ ನಲ್ಲಿ ಕುಳಿತುಕೊಂಡೊ, ರಾಜಹಂಸ ಸರಿಯಾಗಿ ರಾತ್ರಿ ೧೨:೦೦ ಗಂಟೆಗೆ ಬಿಟ್ಟು ಶರವೇಗದಲ್ಲಿ ಮೈಸೂರು ಮಾರ್ಗವಾಗಿ ವಿರಾಜಪೇಟೆ ತಲುಪಿದಾಗ ಬೆಳಗಿನ ಜಾವ ೫:೪೫.

ವಿರಾಜಪೇಟೆ ಕೆ.ಎಸ್.ಅರ್.ಟಿ.ಸಿ ಬಸ್ ನಿಲ್ದಾಣದಿಂದ ಖಾಸಗಿ ಬಸ್ ನಿಲ್ದಾಣಕ್ಕೆ ಹೋಗಿ ಚಹಾ ಕುಡಿದು ನಾಪೋಕ್ಲು ಮಾರ್ಗವಾಗಿ ಮಡಿಕೇರಿ ಕಡೆಗೆ ಹೋಗುವ ಅನುರಾಧ ಬಸ್ ಗಾಗಿ ಕಾಯುತ್ತಾ ಕುಳಿತೊ, ಅಂತು ಇಂತು ೬:೪೫ ಕ್ಕೆ ಪ್ರತ್ಯಕ್ಷವಾದಳು ಅನುರಾಧ ದಡದಡನೆ ಹತ್ತಿ ಆಸೀನರಾದೆವು, ಸುಮಾರು ಮುಕ್ಕಾಲು ಗಂಟೆಯ ಬಳಿಕ ಕೈಕಂಬದಲ್ಲಿ ಕೆಡವಿ ಕುಲುಕುತ್ತಾ ಬಳುಕುತ್ತಾ ಕೊಡಗಿನ ಕಾಫಿ ತೋಟಗಳ ನಡುವೆ ಅನುರಾಧ ಮಿಂಚಿ ಮರೆಯಾದಳು, ಬಸ್ ನಿಲ್ದಾಣದಲ್ಲಿ ಕೆಲವು ಛಾಯಚಿತ್ರಗಳನ್ನು ನನ್ನ ಸೋನಿ D765 ನಲ್ಲಿ ತುಂಬಿಕೊಂಡು ೭:೪೫ ಕ್ಕೆ ಚಾರಣವನ್ನು ಶುರು ಮಾಡಿದೊ.


ಚಾರಣ ಆರಂಬಿಸಿದ ಸ್ಥಳದಲ್ಲಿ ನಾನು ಮತ್ತು ನರೇಂದ್ರ


ದಾರಿಮದ್ಯದಲ್ಲಿ ಸಿಕ್ಕ ಕೆಲವು ಹೋಂಸ್ಟೇಯಲ್ಲಿ ಬೆಳಗಿನ ಉಪಹಾರಕ್ಕಾಗಿ ಏನಾದರು ಸಿಗುತ್ತೇನೊ ಅಂತ ಹೋಗಿ ಕೇಳಿ ತಲೆ ಮೇಲೆ ಕರ್ಚೀಪ್ ಇಟ್ಕೊಂಡು ವಾಪಾಸ್ ಬಂದ್ದದ್ದಾಯಿತು, ಮುಖ್ಯರಸ್ತೆಯಿಂದ ೩ ಕಿ.ಮೀ ದೂರ ಇರುವ ನಾಲ್ಕ್ನಾಡ್ ಅರಮನೆಯನ್ನು ಮಾರ್ಗದರ್ಶಿ ನೆರವಿನಿಂದ ಸಂಪೂರ್ಣವಾಗಿ ವೀಕ್ಷಿಸಿ ಹೊರಟಿದೆವು ಇಲ್ಲಿಂದ ಸುಮಾರು ೮ ಕಿ.ಮೀ.ಇರುವ ತಡಿಯಂಡಮೊಳ್ ಪರ್ವತ್ತಕ್ಕೆ...

ನಾಲ್ಕ್ನಾಡು ಅರಮನೆ

ಕೊಡಗಿನ ಮಹಾರಾಜ ಚಿಕ್ಕವೀರರಾಜೇಂದ್ರರು ಶತ್ರುಗಳಿಂದ ತಪ್ಪಿಸಿಕೊಳ್ಳಲು ೧೭೯೨ ನೇ ಇಸವಿಯಲ್ಲಿ ಕಟ್ಟಿಸಿದ್ದರಂತೆ ಅಂದರೆ ಸುಮಾರು ೨೧೬ ವರ್ಷ ಹಳೇಯದು, ಅರಮನೆಯ ಮುಂದೆ ತನ್ನ ತಂಗಿಯ ಮದುವೆಗೋಸ್ಕರ ಒಂದು ಮಂಟಪವನ್ನು ಕೂಡ ನಿರ್ಮಿಸಿದ್ದಾರೆ, ಅರಮನೆಯಲ್ಲಿ ಕೆಲವು ರಹಸ್ಯ ಮಾರ್ಗಗಳಿವೆ, ಒಳಗಡೆ ಒಂದು ಕಿಟಗಿ ಇದ್ದು ಒಳಗಿನಿಂದ ಕಿಟಕಿಯ ಮುಖಾಂತರ ಹೊರಗಿನಿಂದ ಯಾರು ಬರುತ್ತಾರೆ ಹೋಗುತ್ತಾರೆ ಅಂತ ತಿಳಿಯಬಹುದು ಆದ್ರೆ ಹೊರಗಿನಿಂದ ಆ ಕಿಟಕಿ ಎಲ್ಲಿದೆ ಅಂತ ಅಷ್ಟು ಸುಲಭವಾಗಿ ಗೊತ್ತಾಗಲ್ಲ, ಮತ್ತೊಂದು ವಿಶೇಷ ಅಂದರೆ ಕತ್ತಲೆ ಕೋಣೆಗಳಿದ್ದು ಕೋಣೆಯ ಹೊರಗಿನಿಂದ ನಿಂತು ಒಳಗೆ ಕಣ್ಣಾಯಿಸಿದಾಗ ಏನು ಕಾಣಲ್ಲ ಆದರೆ ಒಳಗೆ ನಿಂತು ನೋಡಿದರೆ ಹೊರಗಿನದನ್ನು ಸಂಪೂರ್ಣವಾಗಿ ವೀಕ್ಷಿಸಬಹುದು, ವೈರಿಗಳು ಆಕ್ರಮಣ ಮಾಡಿದಾಗ ಮಹಾರಾಜರು ಒಳಗೆ ನಿಂತು ವೈರಿ ಹೊಳ ಹೊಕ್ಕ ತಕ್ಷಣ ವೈರಿ ಕಡೆಗೆ ಖಡ್ಗ ಬೀಸುತ್ತಿದ್ದರಂತೆ.ಇನ್ನೂ ಹಲವಾರು ರಹಸ್ಯ ವಿಷಯಗಳಿವೆಯಂತೆ.


ನಾಲ್ಕ್ನಾಡು ಅರಮನೆ

ಅರಮನೆಯ ಒಳಾಂಗಣ ನೋಟ

ಸ್ವಲ್ಪ ದೂರ ನಡೆಯುವಷ್ಟರಲ್ಲಿ ಹಾದಿಯ ಪಕ್ಕದಲ್ಲೆ ಸಣ್ಣ ಜಲಪಾತವೊಂದು ಸಿಕ್ತು ಅಲ್ಲಿಯೇ ನಮ್ಮ ನಿತ್ಯಕರ್ಮಗಳನ್ನು ಮುಗಿಸಿ ಜೊತೆಗೆ ತಂದಿದ ನಾಷ್ಟ (ತಲಾ ಒಂದು ಬಾಳೆಹಣ್ಣು ಮತ್ತು ನಿಪ್ಪಟ್ಟು, ಚಕ್ಲಿ ) ತಿಂದು ಹೊರಟಾಗ ೯:೩೦,ಸ್ವಲ್ಪ ದೂರ ಚಾರಣ ಸವೆಸಿದ ಮೇಲೆ ಕವಲು ದಾರಿ ಎದುರಾಯ್ತು ಬಲಕ್ಕೆ ಹೋಗುವ ಹಾದಿ ವೀಕ್ಷಣ ಸ್ಠಳಕ್ಕೆ ಹೋಗುತ್ತಂತೆ, ಅರಮನೆ ಮಾರ್ಗದರ್ಶಿ ಮೊದಲೆ ತಿಳಿಸಿದ್ದರಿಂದ ಎಡಕ್ಕೆ ಹೋಗುವ ಹಾದಿಯನ್ನು ಆಯ್ಕೆಮಾಡಿಕೊಂಡು ದಾರಿಯಲ್ಲಿ ಸಿಕ್ಕ ಕೆಲವು ಝರಿಗಳಲ್ಲಿ ಬಾಯಾರಿಕೆ ನೀಗಿಸಿಕೊಂಡು ಚಾರಣವನ್ನು ಮುಂದುವರಿಸುತ್ತಿದ್ದೆವು, ತಂಗಾಳಿಯಲ್ಲಿ ತೇಲಿಬರುತಿದ್ದ ಜೀರುಂಡೆ ಸದ್ದು, ಪಕ್ಷಿಗಳ ಚಿಲಿಪಿಲಿ ಕೂಗು ದಾರಿಯುದ್ದಕ್ಕೂ ನಮಗೆ ಖುಷಿ ನೀಡುತಿತ್ತು, ಹೀಗೆ ಅರ್ದ ದಾರಿ ಸವೆಸಿದ ಮೇಲೆ ಅರಣ್ಯ ಇಲಾಖೆ ತಪಾಸಣ ಕೇಂದ್ರ ಎದುರಾಯ್ತು, ಆದರೆ ಅಲ್ಲಿ ಯಾರೂ ಕಂಡು ಬರಲಿಲ್ಲ, ಅಲ್ಲಿ ಸ್ವಲ್ಪ ವಿಶ್ರಾಂತಿ ತಗೊಂಡು ಸಂಜೆಯಷ್ಟರಲ್ಲಿ ವಾಪಾಸು ಬಂದು ಮಡಿಕೇರಿಯಲ್ಲಿ ಉಳಿದುಕೊಳ್ಳುವ ಇರಾದೆ ಇದ್ದುದ್ದರಿಂದ ಚಾರಣದ ವೇಗವನ್ನು ಹೆಚ್ಹಿಸಿ ಹೆಜ್ಜೆಹಾಕತೊಡಗಿದೊ.


ಪಯಣದ ಹಾದಿಯಲ್ಲಿ ನಾನು.


ಅಲ್ಲೆಲ್ಲೊ ಮಂಜು ಮುಸುಕಿದ ಗಿರಿಶ್ರೇಣಿಗಳ ನಡುವೆ ದೊಡ್ಡಣ್ಣನಂತೆ ಇಣುಕುತಿದ್ದ ತಡಿಯಂಡಮೊಳ್ ಬೆಟ್ಟದ ದರ್ಶನವಾಯ್ತು ಸುಮಾರು ಹೊತ್ತು ನಡೆದ ಮೇಲೆ ಹಾದಿಯ ಎಡಕ್ಕೆ ದೊಡ್ಡ ಬಂಡೆ ಪಕ್ಕದಲ್ಲೆ ಎಡಕ್ಕೆ ಕವಲಾದ ಹಾದಿ ದಟ್ಟಕಾಡಿನೊಳಕ್ಕೆ ನುಗ್ಗಿ ಮರೆಯಾದಂತಿತ್ತು, ನೀರಿನ ಜುಳುಜುಳು ಸದ್ದು ಕೇಳಿಸಿದ್ದರಿಂದ ಚಾರಣಿಗರಿಗೆ ನೀರು ಸಿಗುವ ಜಾಗ ಇದೇ ಕೊನೆ ಇರಬಹುದು ಅನ್ನಿಸ್ತು, ಎದುರಿಗೆ ಕಾಣುತಿದ್ದ ದೊಡ್ಡ ಬೆಟ್ಟ ಜೊತೆಗೆ ಕಡಿದಾದ ಹಾದಿ ಏರತ್ತಾ ಏರುತ್ತಾ ಮತ್ತೆ ಎಡಕ್ಕೆ ತಿರುಗಿ ಸಣ್ಣ ಗುಡ್ಡ ಹತ್ತಿ ಸ್ವಲ್ಪ ದೂರ ನಡೆದ ಮೇಲೆ ನರೇಂದ್ರ ನನ್ನ ಕೈಲಿ ಆಗಲ್ಲ ನಾನು ಬರೊಲ್ಲ ನೀವು ಹೋಗಿಬನ್ನಿ ಅಂತ ಕುಳಿತುಬಿಟ್ಟ, ಸರಿಯಾದ ಅಸಾಮಿ ಕೊಟ್ನಲಪ್ಪ ಕೈಯ ಅಂದುಕೊಂಡು ಮಗುವಿಗೆ ಚಂದಮಾಮ ತೋರಿಸಿ ಸಮಾಧಾನ ಮಾಡುವ ಹಾಗೆ ಮುಂದೆ ಕಾಣುತಿದ್ದ ಸಣ್ಣ ಬೆಟ್ಟವನ್ನು ತೋರಿಸಿ ಅದೇ ತಡಿತಂಡಮೊಳ್ ಬೆಟ್ಟದ ತುದಿ ಕಣೋ ಬಾರೊ ಅಂತ ಹೇಳಿ ಅವನ ಬ್ಯಾಗನ್ನು ನಾನೇ ಎತ್ತುಕೊಂಡು ಹೆಜ್ಜೆಹಾಕಿದೆ, ಮುಂದೆ ಸಾಗುತ್ತ ಸಾಗುತ್ತ ಆ ದಾರಿ ನಮ್ಮನ್ನು ದಟ್ಟಕಾಡಿನೊಳಕ್ಕೆ ಕರೆದೋಯ್ದ ಕೂಡಲೇ ಭಯ ಆವರಿಸಿತು ಎಕೆಂದರೆ ಯಾವುದೇ ಪ್ರಾಣಿ ಬಂದ್ರು ತಪ್ಪಿಸಿಕೂಳ್ಳೊಕ್ಕೆ ಅವಕಾಶನೇ ಇರಲಿಲ್ಲ ಅಷ್ಟು ಇಕ್ಕಟ್ಟಾದ ಹಾದಿ ಅದೂ ಅಲ್ಲದೇ ನರೇಂದ್ರನ ಮಡಿಕೇರಿಯ ಸ್ನೇಹಿತರೊಬ್ಬರು ಅಲ್ಲಿ ಹುಲಿಗಳಿವೆ ಎಂದು ಮೊದಲೇ ಒಂದು ಡೋಸ್ ಕೊಟ್ಟಿದ್ರು,



ನಡೆದು ನಡೆದು ತುಂಬಾ ಆಯಾಸವಾದ್ದರಿಂದ ಅಲ್ಲಲ್ಲಿ ಕುಳಿತು ವಿಶ್ರಾಂತಿ ಪಡೆದು ಮುಂದೆ ಸಾಗುತ್ತ ದಟ್ಟ ಕಾಡಿನಿಂದ ಹೊರಗೆ ಬಂದೊ ಮತ್ತೆ ಏರು ದಾರಿ ಇತ್ತ ನೀರು ಬೇರೆ ಖಾಲಿಯಾಗುತ್ತಾ ಬಂತು, ಇನ್ನೇನು ನಾವು ತುದಿ ತಲುಪಿದವೇನೊ ಅನ್ನುವಷ್ಟರಲ್ಲಿ ಮತ್ತೆ ಏರು ದಾರಿ, ನರೇಂದ್ರ ಒಂದೆ ಸಮನೆ ಕಿರುಚಾಡುತಿದ್ದ ಎಲ್ಲಿಗ್ರೋ ಇಲ್ಲೇ ಇದೆ ಅಂತಾ ಅವಾಗಿನಿಂದ ಕರ್ಕೊಂಡು ಹೋಗ್ತಾನೇ ಇದ್ದಿರಲ್ಲ, ಅದೇ ಕಣೋ ಅಂತಾ ಸಮಾದಾನಪಡಿಸಿ ಹೇಗೋ ತೆವಳುತ್ತಾ ತುದಿ ತಲುಪಿಬಿಟ್ಟೆವು, ಆಗಲೇ ಮದ್ಯಾಹ್ನ ಒಂದಾಗಿತ್ತು.


ತುಂಬಾ ಹೊತ್ತು ನಡೆದು ಆಯಾಸವಾಗಿದ್ದರೂ ಕೂಡ ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ ಸುತ್ತ ಮುತ್ತಲೂ ಹಸಿರು ಸೀರೆ ಹೊದ್ದಿಕೊಂಡತಹ ಸುಂದರ ಪರ್ವತಗಳ ಸಾಲುಗಳು, ಅಬ್ಬಾ ನೋಡಲು ಎರಡು ಕಣ್ಣು ಸಾಲದು, ಅಕಾಶವನ್ನೇ ದಿಟ್ಟಿಸುತ್ತ ಒಂದರ್ಧ ಗಂಟೆ ಹಾಗೇ ನೆಲಕ್ಕೊರಗಿ ವಿಶ್ರಾಂತಿ ಪಡೆದು ನಂತರ ೧ ಬಾಳೆಹಣ್ಣು, ಕೋಡ್ ಬಳೆ ತಿಂದು ಜೂಸ್ ಕುಡಿದ ಮೇಲೆ ಆನೆ ಬಲ ಬಂದತಾಯ್ತು, ಅಷ್ಟೊತ್ತಿಗೆ ಯಾವುದೊ ಒಂದು ಚಾರಣಿಗರ ಗುಂಪು ಬಂತು ಅವರೊಲೊಬ್ಬ ಬಾಯಾರಿಕೆ ತಡೆಯಲಾಗದೇ ವಾಟರ್ ಪ್ಲೀಸ್ ಎಂದಾಗ ನಾವು ಒಬ್ಬರ ಮುಖ ಒಬ್ಬರು ನೋಡಿಕೊಂಡೊ ಏಕೆಂದರೆ ನಮ್ಮ ಬಳಿ ನೀರು ಯಾವಾಗಲೋ ಖಾಲಿಯಗಿತ್ತು, ಆಗ ನಮ್ಮ ಬಳಿಯಿದ್ದ ೧ ಬಾಳೆಹಣ್ಣು, ಸ್ವಲ್ಪ್ಪ ಜೂಸ್ ಕೊಟ್ಟಾಗ ಅವನ ಮುಖದಲ್ಲಿ ನಗು ಅರಳಿತು ಜೊತೆಗೇ ಪ್ಲಾಸ್ಟಿಕ್ ಬಿಸಾಡಬಾರದು ಅಂತಾ ಸಲಹೆ ಕೂಡ ಕೊಟ್ಟು, ಅಲ್ಲಲ್ಲಿ ಸುತ್ತಾಡಿ ನಿಸರ್ಗ ಸೌಂದರ್ಯವನ್ನ ನನ್ನ ಸೋನಿ ಡಿ ೭೬೫ ದಾಖಲು ಮಾಡಿ ಗಡಿಯಾರದ ಕಡೆಗೆ ಕಣ್ಣಾಯಿಸಿದಾಗ ಗಂಟೆ ಎರಡಾಗಿತ್ತು,


ಸರಿ ಅಂತಾ ಹೊರಡಲು ನಿರ್ದಾರ ಮಾಡಿ ಮತ್ತೆ ಅದೇ ಬೆಟ್ಟ ಅದೇ ಅಡವಿ ನುಸುಳಿ ಇಳಿಯೊಕ್ಕೆ ಶುರುಮಾಡಿದೊ, ನನ್ನ ಕಾಲು ಮೊದಲೆ ಉಳುಕಿದ್ದರಿಂದ ನೋವು ಜಾಸ್ತಿಯಾಗತೊಡಗಿತು ಒಂದೊಂದು ಹೆಜ್ಜೆಯನ್ನು ಬಹಳ ಪ್ರಯಾಸಪಟ್ಟು ಇಳಿಯತೊಡಗಿದೆ, ನರೇಂದ್ರ ಮಾತ್ರ ದೊಡ್ಡ ಹೀರೋನಂತೆ ಪೋಸ್ ಕೊಟ್ಕೊಂಡು ಎಲ್ಲರಿಗಿಂತ ಮೊದಲಿದ್ದ,
ಅವನ ಹಿಂದೆ ವೀರ, ವೀರನ ಹಿಂದೆ ನಾನು ಹೀಗೆ ನಮ್ಮ ಚಾರಣ ಮುಂದುವರಿಯುತಿತ್ತು,


ಅಲ್ಲಲ್ಲಿ ಸಿಕ್ಕ ಝರಿಗಳಲ್ಲಿ ನಮ್ಮ ಬಾಯಾರಿಕೆ ನೀಗಿಸಿಕೊಂಡು ಕೈಕಂಬ ಬಸ್ ನಿಲ್ದಾಣಕ್ಕೆ ಬಂದಾಗ ಸಂಜೆ ೫:೨೦,


ಸುಮಾರು ಅರ್ದ ಗಂಟೆ ಕಾಯುತ್ತ ಕುಳಿತೊ ಅಂತೂ ಸುಮಾರು ೫:೫೦ ಕ್ಕೆ ಬಂದ ಶ್ಯಾಮ್ express ನಲ್ಲಿ ಕುಳಿತು ನಾಪೋಕ್ಲು ಮಾರ್ಗವಾಗಿ ರಾತ್ರಿ ೭:೩೦ ಕ್ಕೆ ಮಡಿಕೇರಿಗೆ ಬಂದು ನರೇಂದ್ರನ ಸ್ನೇಹಿತರಾದ ಶಿವರಾಂ ( ಪ್ರಜಾವಾಣಿ ಪತ್ರಿಕೆಯ ವರದಿಗಾರರು ) ಮನೆಗೆ ಹೋಗಿ ಊಟ ಮುಗಿಸಿ ಅವರ ಸಹಾಯದಿಂದ ಪುಕ್ಕಟೆಯಾಗಿ ಐ.ಬಿ. ಯಲ್ಲಿ ರೂಮೊಂದನ್ನು ಪಡೆದು ಬಿತ್ಕೊಂಡೊ, ಬೆಳಿಗ್ಗೆ ಐ.ಬಿ ಯಲ್ಲೇ ಸ್ನಾನ ಮುಗಿಸಿ ಪುನ: ಶಿವರಾಂ ರವರ ಮನೆಗೆ ಹೋಗಿ ಬೆಳಗಿನ ಉಪಹಾರ ಮುಗಿಸಿಕೊಂಡು ಅವರ ಪ್ರೀತಿಯ ಸತ್ಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳನ್ನರ್ಪಿಸಿ ಹೊರಟೆವು, ಮಡಿಕೇರಿಯ ಕೆ,ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಬಂದು ಮದ್ಯಾಹ್ನ ೧೨:೪೫ ರ ರಾಜಹಂಸ ಬಸ್ನಲ್ಲಿ ಪ್ರಯಾಣ ಬೆಳೆಸಿ ಚನ್ನಪಟ್ಟಣ್ಣ ತಲುಪಿದಾಗ ಸಂಜೆ ಆರಾಗಿತ್ತು, ನಾನು ಮತ್ತು ವೀರ ಬಸ್ಸಿಳಿದು ರೈಲ್ವೆ ಸ್ಟೇಷನಲ್ಲಿ ಪಾರ್ಕ್ ಮಾಡಿದ ಬೈಕ್ ಹತ್ತಿ ಊರು ಸೇರಿಕೊಂಡೆವು, ನರೇಂದ್ರ ಹಾಗೇ ಬೆಂಗಳೂರಿಗೆ ಪ್ರಯಾಣ ಮುಂದುವರಿಸಿದ.

*ಶುಭಂ*